Image default
Dance Reviews

ವಿಶಿಷ್ಟ ಸೊಬಗಿನ ನಾಟ್ಯಾರಾಧನೆ

ದೆಹಲಿಯಲ್ಲಿ ನೆಲೆಸಿರುವ ಸುಪ್ರಸಿದ್ಧ ನೃತ್ಯ ಕಲಾವಿದೆ ರಮಾ ವೈದ್ಯನಾಥನ್ ಭರತನಾಟ್ಯ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರು ಅಂತರಾಷ್ಟ್ರೀಯ ಕಲಾಮಹೋತ್ಸವದ ಸಂದರ್ಭದಲ್ಲಿ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ನೃತ್ಯಕ್ಷೇತ್ರದಲ್ಲಿ ಪ್ರಖ್ಯಾತರಾದ ಈ ಕಲಾವಿದೆಯ ನೃತ್ಯ ವೀಕ್ಷಿಸಲು ನಗರದ ಅನೇಕ ಹೆಸರಾಂತ ನೃತ್ಯಪಟುಗಳೂ  ಕುತೂಹಲ-ಆಸಕ್ತಿಗಳಿಂದ ಆಗಮಿಸಿದ್ದರು. ತುಂಬಿದ ಕಲಾಮಂದಿರದಲ್ಲಿ ರಸಿಕರು ತದೇಕಚಿತ್ತದಿಂದ ನಾಟ್ಯವನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದರು.

ಸಾಮಾನ್ಯವಾಗಿ ರಂಗದಮೇಲೆ ಝಗ ಝಗಿಸುವ ಆಭರಣಗಳು, ಆಕರ್ಷಕ ಬಣ್ಣ-ವಿನ್ಯಾಸಗಳ ವಸ್ತ್ರ ಧರಿಸಿ ಕಣ್ಮನ ಸೆಳೆವ ವೇಷಭೂಷಣ-ಪ್ರಸಾಧನಗಳಿಂದ ನೃತ್ಯಗಾರ್ತಿಯರು ಎಲ್ಲರ ದೃಷ್ಟಿಯ ಕೇಂದ್ರವಾಗಿರಲು ಬಯಸುವವರೇ ಬಹುತೇಕ. ಆದರೆ ಇಂದಿನ ದೃಶ್ಯ ಬದಲಾಗಿತ್ತು. ಹದವಾದ ಅಳತೆಯ, ನಾಜೂಕು ಮೈಕಟ್ಟಿನ, ದೂರದಿಂದ ಪುಟ್ಟದಾಗಿ ಕಾಣುತ್ತಿದ್ದ ನೃತ್ಯಕಲಾವಿದೆ ರಮಾ, ರಂಗದ ತುಂಬ ಲೀಲಾಜಾಲವಾಗಿ ನರ್ತಿಸುವ ವೈಖರಿ ಅವರ ದೈತ್ಯಪ್ರತಿಭೆಯನ್ನು ಪಸರಿಸಿತ್ತು. ಬಹು ಸರಳ ಅಲಂಕಾರ. ಆದಷ್ಟೂ ಕಡಮೆ ಆಭರಣಗಳು, ಸಾಧಾರಣ ಉಡು ಗೆಯನ್ನು ಬಹುಶಃ ಉದ್ದೇಶಪೂರ್ವಕವಾಗಿಯೇ ತೊಟ್ಟಿದ್ದರೆನಿಸುತ್ತದೆ. ಅವುಗಳ ಥಳಥಳದಲ್ಲಿ ಆಕೆಯ ನಿಜಪ್ರತಿಭೆ ಮಂಕಾಗಬಾರದಲ್ಲ, ಅದಕ್ಕೆ. ಬಾಹ್ಯಾಲಂಕಾರದತ್ತ ಗಮನವೀಯದೆ ನೋಡುಗರು ಕಲಾವಿದೆಯ ನೃತ್ಯ ಪ್ರೌಢಿಮೆಯನ್ನು ಇಡಿಯಾಗಿ ಅನುಭವಿಸಿ, ನರ್ತನದ ರಸಾಸ್ವಾದವನ್ನು ಮನಸಾರೆ ಆನಂದಿಸಿದರು.

ಆಕೆ ಒಟ್ಟು ಪ್ರದರ್ಶಿಸಿದ ಕೃತಿಗಳು ಮೂರು. ಎಲ್ಲವೂ ರಾಗಮಾಲಿಕೆ ಮತ್ತು ಆದಿತಾಳದಲ್ಲಿದ್ದವು. ಶುಭಾರಂಭದ ಅಲ್ಲರಿಪು `ಸನ್ನಿಧಾನಂ’ ಹಿಂದೂ ದೇವಾಲಯಗಳ ವಾಸ್ತುಶಿಲ್ಪವನ್ನು ನೃತ್ಯದ ವರ್ಣನೆಯಲ್ಲಿ , ಕಣ್ಮುಂದೆ ಕಟ್ಟಿಕೊಟ್ಟಿತು. ಅಚ್ಚುಕಟ್ಟಾಗಿ ದೇವಾಲಯದ ಹೊರಗಿನ ಪ್ರಾಕಾರದ ಕಟ್ಟಡದಿಂದ ಹಿಡಿದು, ಹಂತಹಂತವಾಗಿ ಅದರ ಒಳರಚನೆಗಳು, ಧ್ವಜಸ್ತಂಭ,ಎತ್ತರದ ಸಾಲು ಕಂಭಗಳು, ವಿಶಾಲವಾದ ಹಜಾರದ ಆವರಣದಿಂದ ಒಳಪ್ರವೇಶಿಸಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವಿಯ ಸನ್ನಿಧಾನದವರೆಗೂ, ಅಚ್ಚುಕಟ್ಟಾಗಿ, ಅಡವುಗಳ-ಹೆಜ್ಜೆ ಗೆಜ್ಜೆಗಳ ಜತಿಗಳ ಮೋಡಿಯಿಂದ ಒಂದು ಸುಂದರವಾದ ದೇವಾಲಯವನ್ನೇ ನಿರ್ಮಿಸಿ ತೋರಿದರು ಕಲಾವಿದೆ . ನಿಖರ ಪದಗತಿ, ಖಚಿತ ಹಸ್ತಮುದ್ರಿಕೆ, ಚಲನೆ, ಭಾವ-ಭಂಗಿಗಳಲ್ಲಿ ಶುದ್ಧ ನೃತ್ಯದ ಸೊಬಗು ಕಂಗೊಳಿಸಿತು. ದೇವಿಯ ವರ್ಣನೆಗೆ  `ನಮಸ್ತೆ ರುದ್ರ ರೂಪಿಣಿ’- ದೇವಿಮಹಾತ್ಮ್ಯಂ ಶ್ಲೋಕಗಳನ್ನು ಬಳಸಲಾಗಿತ್ತು. ದೇವಿಯ ಸಾತ್ವಿಕ ಸೌಂದರ್ಯದೊಡನೆ ರೌದ್ರಾವತಾರವನ್ನು ಕಲಾವಿದೆ ಭಕ್ತಿಯ ತಾದಾತ್ಮ್ಯತೆಯೊಂದಿಗೆ ಶರಣಾಗತಿಯನ್ನು ಅಮೋಘವಾಗಿ ನಿರೂಪಿಸಿದರು.

ಮುಂದಿನ ಭಾಗದಲ್ಲಿ `ನವರಸ ಮೋಹನ’- ಭಾಗವತದ ಶ್ಲೋಕಗಳಿಗೆ ಅದ್ಭುತ ನಾಟಕೀಯ ದೃಶ್ಯಗಳನ್ನು ಅರಳಿಸುತ್ತಾ ಕಲಾವಿದೆ, ಏಕಪಾತ್ರಾಭಿನಯದಲ್ಲಿ ನವರಸ ಅಂಕಗಳನ್ನು ವೇದಿಕೆಯ ಮೇಲೆ ಕಟ್ಟಿಕೊಟ್ಟರು. ಕಂಸನನ್ನು ಕೊಲ್ಲಲು, ಹದಿನಾಲ್ಕು ವರ್ಷದ ಬಾಲಕ ಶ್ರೀಕೃಷ್ಣ ಮೊದಲಬಾರಿಗೆ ಮಥುರೆಯನ್ನು ಪ್ರವೇಶಿಸಿದಾಗ ನಡೆಯುವ ವಿದ್ಯಮಾನಗಳನ್ನು ನೃತ್ಯಗಾರ್ತಿ, ನವ ಬಗೆಯ ಜನಗಳ ಭಾವನೆ, ನಡವಳಿಕೆಗಳನ್ನು ನವರಸಗಳ ಅಭಿವ್ಯಕ್ತಿಯಲ್ಲಿ   ಪರಿಣಾಮಕಾರಿಯಾಗಿ, ನಾಟಕೀಯ  ಆಂಗಿಕಾಭಿನಯದೊಂದಿಗೆ ಅಭಿನಯಿಸಿ, ಕಣ್ಮುಂದೆ ದೃಶ್ಯವನ್ನು ಕಡೆದು ನಿಲ್ಲಿಸಿದರು. ಕೃಷ್ಣನ ಧೈರ್ಯಕಂಡು ಪುರಜನರು ಅಚ್ಚರಿಗೊಂಡು ಅವನಿಗೇನಾಗುವುದೋ ಎಂದು `ಭಯ’ಗೊಂಡರೆ, ನವಯುವತಿಯರಿಗೆ ಅವನಲ್ಲಿ ಅನುರಾಗದ `ಶೃಂಗಾರ’, ಜೊತೆಗಾರ ಸ್ನೇಹಿತರಿಗೆ ನಗು-`ಹಾಸ್ಯ’ ,ಹಿರಿಯರಿಗೆ ಅವನ ಬಗ್ಗೆ `ಕರುಣಾ’, ಕಂಸನ `ರೌದ್ರ’, ಕಡೆಗೆ ಈ ಮುರಾರಿ ಸಾಮಾನ್ಯನಲ್ಲ ಎಂಬ ನೆಮ್ಮದಿಯಲ್ಲಿ ಎಲ್ಲರಲ್ಲೂ `ಶಾಂತ’ ರಸ- ಹೀಗೆ ನವರಸಗಳ ಆಗರವಾದ ಈ ಕೃತಿಯಲ್ಲಿ ರಮಾ, ತಮ್ಮಲ್ಲಿನ ನಟನಾ ಪ್ರತಿಭೆಯೊಂದಿಗೆ, ಶಾಸ್ತ್ರಿಯ ನೃತ್ಯ ಪ್ರತಿಭೆಯನ್ನು ಅದ್ಭುತವಾಗಿ ಪ್ರದರ್ಶಿಸಿದರು.

ಕಡೆಯ ಪ್ರಸ್ತುತಿ, ಮಧ್ಯಕಾಲೀನ ಹಿಂದಿಯ ಕವಿ `ದೇವ್’ ಅವರು ರಚಿಸಿದ `ತುಮರಿ’. ರಾಧಾ-ಕೃಷ್ಣರ ನಡುವಿನ ಅನುರಾಗವನ್ನು ವಿಶಿಷ್ಟ ರೀತಿಯಲ್ಲಿ ಚಿತ್ರಿಸಲಾಗಿತ್ತು. ಕೃಷ್ಣನ ಸಮಾಗಮದ ಸುಖಾನುಭವ  ಅಮರಪ್ರೇಮಿ ರಾಧಳ ಕನಸು, ಸುಂದರ ಕಲ್ಪನೆಯ ಆ ರಮ್ಯಕ್ಷಣಗಳನ್ನು ಕಲಾವಿದೆ ರಮಾ ,ನವಿರಾದ ಅಭಿನಯದೊಂದಿಗೆ ಧ್ಯಾನಮುಖಿಯಾಗಿ ನೋಡುಗರ ಅಂತರಂಗಕ್ಕೆ ತಲುಪಿಸಿದ್ದು ಒಂದು ಆತ್ಮೀಯ ಅನುಭವವೇ ಸರಿ. ಮಳೆಗಾಲದ ಆ ಬೆಳಗಿನ ಕನಸಿನಿಂದ ಎಚ್ಚೆತ್ತು ಬಾಹ್ಯಪ್ರಪಂಚಕ್ಕೆ ಬಂದ ರಾಧೆ, ಭ್ರಮನಿರಸನದಿಂದ ಪ್ರಲಪಿಸುತ್ತ ವಿರಹಭಾವದಿಂದ ದಗ್ಧಳಾಗುತ್ತಾಳೆ. ಅವನ ಸ್ಮರಣೆಯಲ್ಲೇ ನಿಮಗ್ನಳಾದವಳು ಕೃಷ್ಣನೇ ತಾನಾಗಿ ಬಿಡುವ ಸುಂದರ ರೂಪಕ ಕಣ್ಣೆದುರಿಗೆ ಅರಳುತ್ತದೆ. ಅವನಾಗಿ, ತನಗೆ ತಾನೇ ಒಲವಿನ ಓಲೆಗಳನ್ನು ಬರೆದುಕೊಳ್ಳುವ ದ್ವಂದ್ವ ವ್ಯಕ್ತಿತ್ವದ ಅಭಿನಯದಲ್ಲಿ ರಾಧೆಯ ಸಂತೃಪ್ತ ಅನುಭವಗಳನ್ನು ರಮಾ, ಹೃದಯಸ್ಪರ್ಶೀ ಆಪ್ತ ಅಭಿನಯಧಾರೆಯಲ್ಲಿ ಎರಕ ಹುಯ್ಯುತ್ತಾರೆ. ಮೃದು ಮಧುರ, ರೋಮಾಂಚ-ಕಂಪನಗಳ ಅಲೆಯನ್ನುಕ್ಕಿಸುತ್ತ ರಾಧಾ-ಕೃಷ್ಣ ಅಭೇದ್ಯರು ಎಂಬ ಭಾವದಲ್ಲಿ ಪ್ರಸ್ತುತಿಯನ್ನು ಸಂಪನ್ನಗೊಳಿಸುತ್ತಾರೆ. ಶಾಸ್ತ್ರಿಯ ಚೌಕಟ್ಟಿನಲ್ಲಿ ಆಧುನಿಕತೆಯ ಸ್ಪರ್ಶದ ಮಿನುಗಿನಿಂದ ಸಮರಸ ಭಾವ ಸೃಷ್ಟಿಸಿದ ಈ ಅಪೂರ್ವ ಕಲಾವಿದೆಯ ನೃತ್ಯದೌತಣ ನಿಜಕ್ಕೂ ಸ್ಮರಣಿಯ. ವಾದ್ಯ ಸಹಕಾರದಲ್ಲಿ, ನಟುವಾಂಗ-ಡಾ.ಎಸ್.ವಾಸುದೇವನ್, ಗಾಯನ-ಕೆ.ವೆಂಕಟೇಶ್ವರನ್, ಮೃದಂಗ-   ಸುಮೋದ್ ಶ್ರೀಧರನ್ ಮತ್ತು ಪಿಟೀಲು-ವಿಜು ಶಿವಾನಂದ್.

Related posts

ರಸಾನುಭವದ ರಸಸಂಜೆ- ನೀಲಾ ಮಾಧವ ನೃತ್ಯರೂಪಕ

YK Sandhya Sharma

ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ

YK Sandhya Sharma

ಅಪೂರ್ವ ಭಂಗಿಗಳ ಚೇತೋಹಾರಿ ನೃತ್ತಾಭಿನಯ

YK Sandhya Sharma

Leave a Comment

This site uses Akismet to reduce spam. Learn how your comment data is processed.