Image default
Dance Reviews

ಮೀನಳ ಭಾವಪೂರ್ಣ ಅಭಿನಯದ ವರ್ಚಸ್ವೀ ನೃತ್ಯ

ನೃತ್ಯಕ್ಕೆ ಹೇಳಿಮಾಡಿಸಿದ ಎತ್ತರದ ನಿಲುವು, ಬಳುಕುವ ನಡು, ಕಾಂತಿಯುಕ್ತ ಕಣ್ಣುಗಳು ಮೀನಳ ಸೊಗಸಾದ ನೃತ್ಯಕ್ಕೆ ವರ್ಚಸ್ವೀ ಪ್ರಭಾವಳಿ ನೀಡಿತ್ತು. ಅಮೇರಿಕಾದಲ್ಲಿ ಗುರು ಸುಮಾ ವಿಟ್ಟ ಅವರ ತರಬೇತಿಯಲ್ಲಿ ರೂಪುಗೊಂಡ ಕಲಾವಿದೆ ಮೀನಾ ವಾರಂಬಳ್ಳಿ ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಯಶಸ್ವಿಯಾಗಿ ರಂಗಪ್ರವೇಶ ಮಾಡಿದಳು.

ಶುಭಾರಂಭದಲ್ಲಿ ಡಾ.ಸಂಜಯ್ ಶಾಂತಾರಾಂ ರಚನೆ-ನೃತ್ಯಸಂಯೋಜನೆಯ ಹಂಸನಾದ ರಾಗದ ‘ಪುಷ್ಪಾಂಜಲಿ’ ಅಚ್ಚುಕಟ್ಟಾಗಿ ಮೂಡಿಬಂತು. ಬದ್ಧತೆಯಿಂದ ಕಲಿತ ಭರತನಾಟ್ಯಾಭ್ಯಾಸ ಕಲಾವಿದೆಯ ಆತ್ಮವಿಶ್ವಾಸದ ಪ್ರಫುಲ್ಲತೆಯಲ್ಲಿ ಅಭಿವ್ಯಕ್ತವಾಯಿತು. ಮನೋಹರ ನೃತ್ಯಸಂಯೋಜನೆಯ ಚೆಲುವು ಆಕೆಯ ಅಂಗಶುದ್ಧಿಯ ಸುಂದರ ನರ್ತನದಿಂದ ಎದ್ದುಕಂಡಿತು. ನಟರಾಜನ ದಿವ್ಯತೆಯನ್ನು, ಸರಸ್ವತಿ ಭಗವತಿಯ ರೂಪ-ಲಾವಣ್ಯಗಳನ್ನು ತನ್ನ ಸಾತ್ವಿಕಾಭಿನಯದಿಂದ ಸಾಕ್ಷಾತ್ಕರಿಸಿ ದೈವೀಕತೆಯನ್ನು ಮೆರೆದ ನೃತ್ತಗಳ ವಿನ್ಯಾಸವೂ ಮನಸೆಳೆಯಿತು. ಸಾಂಪ್ರದಾಯಕ ‘ಅಲ್ಲರಿಪು’ ಖಚಿತ ಅಡವುಗಳು, ಹಸ್ತಮುದ್ರೆಯ ಶುದ್ಧ ಆಂಗಿಕ ಚಲನೆಗಳಲ್ಲಿ ಅಭಿವ್ಯಕ್ತವಾದವು.

ಮುಂದೆ, ಪುರಂದರದಾಸರ ‘ ಸಖಿಯೇ ಏಕೆ ಗೋಪಾಲ ಎನ್ನ ಕರೆಯುವ’ ಎಂಬ ಮಿಶ್ರಛಾಪು ತಾಳದ ‘ಶಬ್ದಂ’-ಮೀನಳ ಮುದವಾದ ಅಭಿನಯ- ಹೆಂಗೆಳೆಯರೊಡನೆ ಕೃಷ್ಣನಾಡಿದ ತುಂಟಾಟಗಳನ್ನು ಪಕಳೆ ಪಕಳೆಯಾಗಿ ಬಿಚ್ಚಿಟ್ಟವು. ಕೃಷ್ಣಾ, ವಿವಾಹಿತ ಗೋಪಿಯರ ಅಂದ-ಚೆಂದವನ್ನು ಹೊಗಳುತ್ತ, ಕಣ್ಸನ್ನೆ ಮಾಡಿ ಕರೆದು ಅವರನ್ನು ಚಂಚಲತೆಗೆ ಈಡುಮಾಡುವನು. ತಮ್ಮ ಗಂಡಂದಿರು ಇದನ್ನು ಕಂಡರೆ ಏನನ್ನುವರೋ ಎಂದು ಭೀತಗೊಳ್ಳುವ ಅವರು, ಅವನ ರಂಗಿನಾಟಗಳನ್ನು ತಾಳಲಾರದೆ, ಹುಸಿಗೋಪ ತೋರಿದರೂ ಅವನ ಸಾಮೀಪ್ಯ ಸುಖಾನುಭವದಲ್ಲಿ ಮೈಮರೆವಂತೆ ತೋರಿಸುವ ಕಲಾವಿದೆಯ ಭಾವಪೂರ್ಣ ಅಭಿನಯ ಹದವಾಗಿತ್ತು.

ಪ್ರಸ್ತುತಿಯ ಹೃದಯಭಾಗ ‘ವರ್ಣ’-‘ವನಜಾಕ್ಷಿ ಅಂಬಾ ಜಗಜ್ಜನನಿ’ (ರಚನೆ-ಡಾ. ಸಂಜಯ್ ) ಮೀನಾಳ ಸುಂದರ ಅಭಿನಯಕ್ಕೆ ಸಾಕ್ಷಿಯಾಯಿತು. ಪಾರ್ವತಿಯ ಮನೋಹರ ರೂಪ-ಗುಣ-ಮಹಿಮೆಗಳನ್ನು ಕೊಂಡಾಡುವ ಕೃತಿ. ದಕ್ಷಯಜ್ಞ ಘಟನೆಯ ಸಂಚಾರಿಯಲ್ಲಿ ದಾಕ್ಷಾಯಿಣಿ ಅವಮಾನವನ್ನು ತಾಳಲಾರದೆ ಅಗ್ನಿಗೆ ಆತ್ಮಾಹುತಿಯಾಗುವ ದೃಶ್ಯವನ್ನು ಕಲಾವಿದೆ, ಪರಿಣಾಮಕಾರಿಯಾಗಿ ಚಿತ್ರಿಸಿದಳು. ನಡುನಡುವೆ ಅಭಿನಯದ ತೀವ್ರತೆಯನ್ನು ಹೆಚ್ಚಿಸುವಂತೆ ನೃತ್ತಗಳ ಲಾಸ್ಯವೈಭವ. ಪಾರ್ವತಿಯ ಪ್ರೇಮಪರೀಕ್ಷೆಗೆ ಮುಂದಾಗುವ ಶಿವ, ಅವಳ ಆರಾಧ್ಯದೈವ ಹರನನ್ನು ಛೇಡಿಸಿದಾಗ ಅಸಹನೆಗೊಂಡ ಅವಳು ಮುದುಕನ ರೂಪದಲ್ಲಿದ್ದವನನ್ನು ಹೊಡೆಯಲು ಹೋಗುವಳು. ಆಗ ನಿಜರೂಪದಲ್ಲಿ ಕಾಣಿಸಿಕೊಳ್ಳುವ ಶಿವನಿಗೆ ಅವಳು ಒಲಿವ ದೃಶ್ಯವನ್ನು ರಮ್ಯವಾಗಿ ಕಟ್ಟಿಕೊಟ್ಟಳು ಕಲಾವಿದೆ. ದೈವೀಕ ಮಜಲಿನಲ್ಲಿ ಹಾಡಿದ ರೋಹಿತ್ ಭಟ್ಟರ ಭಾವಪೂರ್ಣ ಗಾಯನ ರಸೋತ್ಕರ್ಷವಾಗಿತ್ತು. ಗುರು ಜಯಂತಿ ಈಶ್ವರಪುತಿ ಅವರ ಶಕ್ತ ನಟುವಾಂಗ ಜತಿಯ ನಡೆಯನ್ನು ಪುಷ್ಟೀಕರಿಸಿತು.

ಶ್ರೀಪುರಂದರದಾಸರ ‘ಆಡಿದನೋ ರಂಗ ಅದ್ಭುತದಿಂದಲಿ….’ ಮೀನಳ ತಾದಾತ್ಮ್ಯ ಅಭಿನಯ ಕುತೂಹಲ ಹುಟ್ಟಿಸಿತು. ಕಾಳಿಂಗನ ಹೆಡೆಯ ಮೇಲೆ ಕುಣಿದ ಕೃಷ್ಣನಾಗಿ ಕಲಾವಿದೆ, ನಾಗನೃತ್ಯದ ವಿವಿಧ ಆಯಾಮಗಳಲ್ಲಿ ಅನುಪಮವಾಗಿ ನರ್ತಿಸಿ, ಬೆರಗುಂಟು ಮಾಡಿದಳು. ಸ್ವಾಮಿ ದಯಾನಂದ ಸರಸ್ವತಿ ರಚಿಸಿದ ‘ಭೋ ಶಂಭೋ’ ಕೀರ್ತನೆ-ನಟರಾಜನ ದಿವ್ಯರೂಪ-ಗುಣಾವಳಿಗಳ ವರ್ಣನೆಯನ್ನು ಒಳಗೊಂಡಿತ್ತು. ಮನೋಜ್ಞ ಅಭಿನಯ-ಭಂಗಿಗಳಿಂದ ಮೀನಾ ಆಕರ್ಷಿಸಿದಳು. ರಂಜಿನಿರಾಗದ ‘ತಿಲ್ಲಾನ’ದಲ್ಲಿ ಪ್ರಸ್ತುತಪಡಿಸಲಾದ ಸಂಕೀರ್ಣ ಜತಿಗಳ ಸೌಂದರ್ಯ, ಮಿಂಚಿನವೇಗದ ಆಂಗಿಕಗಳು ಗಮನಾರ್ಹವಾಗಿದ್ದವು.  

Related posts

‘ಶ್ರೀರಾಮಾಯಣ ದರ್ಶನ’ದ ದಿವ್ಯಾನುಭೂತಿಯ ಸುಂದರ ದೃಶ್ಯಕಾವ್ಯ

YK Sandhya Sharma

ನಾಟ್ಯ-ಯೋಗ ಚತುರೆ ನವ್ಯಾ ದೇಸಾಯಿ

YK Sandhya Sharma

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

YK Sandhya Sharma

Leave a Comment

This site uses Akismet to reduce spam. Learn how your comment data is processed.