ಸ್ವರ್ಗಲೋಕದ ಭ್ರಮೆ ಹುಟ್ಟಿಸುವ ಮಂಜು ಮುಸುಕಿದ ವಾತಾವರಣ ನಿರ್ಮಿತ ವೇದಿಕೆಯ ಮೇಲೆ ಎರಡು ಸುಂದರ ನೃತ್ಯ ಜೋಡಿಗಳು ಮೈಮರೆತು ನರ್ತಿಸುತ್ತಿದ್ದವು . ಹಾಲು ಜೇನು ಸಮ್ಮಿಳಿತವಾದಂತಿದ್ದ ಭರತನಾಟ್ಯ ಮತ್ತು ಕಥಕ್ ಶೈಲಿಗಳು ಒಂದರೊಳಗೊಂದು ಸಂಗಮಿಸಿ ಹೊಮ್ಮಿಸಿದ ರಸಾನುಭವ ನಿಜಕ್ಕೂ ಅನ್ಯಾದೃಶವಾಗಿತ್ತು. ಸತತ ಒಂದೂವರೆ ಗಂಟೆಗಳ ಕಾಲ ನೃತ್ಯಪ್ರೇಮಿಗಳಿಗೆ ಎರಡು ವಿಭಿನ್ನ ಶೈಲಿಗಳ, ಅವುಗಳದೇ ಆದ ಮನಮೋಹಕತೆಯುಳ್ಳ ನೃತ್ಯಪ್ರಕಾರಗಳ ರಸದೌತಣ!
ಬೆಂಗಳೂರು ಅಂತರಾಷ್ಟ್ರೀಯ ಕಲಾ ಮಹೋತ್ಸವದ ಸಂದರ್ಭದಲ್ಲಿ `ಚೌಡಯ್ಯ ಮೆಮೋರಿಯಲ್ ಹಾಲ್ ‘ ನಲ್ಲಿ ಆಯೋಜಿಸಲಾಗಿದ್ದ `ಅಭಿಜಾತ’ ನೃತ್ಯಸಂಸ್ಥೆಯ ನಾಲ್ಕುಜನ ಪ್ರತಿಭಾನ್ವಿತ ಹಿರಿಯ ಕಲಾವಿದರು ನಡೆಸಿಕೊಟ್ಟ `ಹರಿ-ಹರ’ ನೃತ್ಯರೂಪಕ ಅನನ್ಯವಾಗಿತ್ತು. ಪ್ರಸಿದ್ಧ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರ ಪರಿಕಲ್ಪನೆ, ಸಂಯೋಜನೆ, ದಿಗ್ದರ್ಶನದಲ್ಲಿ ಅವರ ಶಿಷ್ಯರಾದ ಅಶ್ವಿನ್ ಪ್ರಭಾತ್, ರೋಹಿಣಿ ಪ್ರಭಾತ್, ನೇಹಾ ಶೇಷಾದ್ರಿನಾಥ್ ಮತ್ತು ನವೀನ್ ಹೆಗ್ಡೆ ನೃತ್ಯ ಪ್ರಸ್ತುತಿಗೊಳಿಸಿದರು.
ಎರಡು ಸುಂದರ ನೃತ್ಯಶೈಲಿಗಳಾದ ಕಥಕ್ ಮತ್ತು ಭರತನಾಟ್ಯದ ಜುಗಲ್ ಬಂದಿಯಲ್ಲಿ `ಹರಿ -ಹರ’ ರ ವೈರುಧ್ಯ-ವೈಶಿಷ್ಟ್ಯಗಳನ್ನು ನಾಲ್ಕುಭಾಗಗಳಲ್ಲಿ ಚಿತ್ರಿಸಲಾಯಿತು. ಪ್ರತಿಯೊಂದು ನವನವೋ ನ್ಮೇಷ ಶಾಲಿನಿಯಾಗಿ ರೂಹುತಳೆದದ್ದು ವಿಶೇಷ. ಹೊಸಪರಿಕಲ್ಪನೆಯ ಪ್ರಸ್ತುತಿ ಸುಂದರ ಕಾವ್ಯ,ಸಂಗೀತ ಮತ್ತು ಸಂಯೋಜನೆಗಳಿಂದ ಕೂಡಿತ್ತು.
ಅಪ್ಪಯ್ಯ ದೀಕ್ಷಿತರ ಸಂಸ್ಕೃತ ಶ್ಲೋಕ `ಮಾ ರಮಣಮ್ ಉಮಾ ರಮಣಮ್ ‘ -ಶಿವ ಮತ್ತು ವಿಷ್ಣುವಿನ ಬಾಹ್ಯಸ್ವರೂಪಗಳ ಅಲಂಕಾರ-ವರ್ಣನೆಯನ್ನು ಕಲಾವಿದರು, ಆಲಂಕಾರಿಕ ಚಲನೆಯುಳ್ಳ ಭರತನಾಟ್ಯ ಶಾಸ್ತ್ರದ ಕರಣಗಳನ್ನು ಬಳಸಿ, ಸುಂದರವಾಗಿ ಅಭಿನಯಿಸಿ ತೋರಿದರು. ರತಿ-ಮನ್ಮಥರು ಶಿವನನ್ನು ಕಾಮೋದ್ದೀಪನಗೊಳಿಸಲು ಶರಬಾಣ ಹೂಡಿದಾಗ, ಅದು ಅವನನ್ನು ಆವರಿಸಿದ್ದ ಸರ್ಪಗಳಿಗೆ ತಗುಲಿ, ಅವು ಸಮ್ಮೋಹಿತವಾಗಿ ಸರಸವಾಡತೊಡಗಿದಾಗ, ಶಿವನ ತಪೋಭಂಗವಾಗಿ, ಅವನ ಮೂರನೇಕಣ್ಣು ತೆರೆದು, ಮನ್ಮಥ ಭಸ್ಮನಾಗುವ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತೆ ಪರಿಣಾಮಕಾರಿಯಾಗಿ ಸಾಕಾರಗೊಳಿಸಿದರು. ಪ್ರವೀಣ್ ಡಿ.ರಾವ್ ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತವನ್ನು ದರ್ಭಾರಿ ಮತ್ತು ಷಣ್ಮುಖಪ್ರಿಯ ರಾಗಗಳಲ್ಲಿ ಹದವಾಗಿ ಬೆರೆಸಿ, ಆದಿತಾಳ ಹಾಗೂ ತೀನ್ ತಾಳಗಳಲ್ಲಿ ಸಂಯೋಜಿಸಿದ್ದರು.
ಮುಂದಿನಭಾಗದಲ್ಲಿ ಲಕ್ಷ್ಮೀ ಮತ್ತು ಪಾರ್ವತಿಯರು ತಂತಮ್ಮ ಗಂಡಂದಿರ ಬಗ್ಗೆ ತಮಾಷೆಯಾಗಿ, ಮಾರ್ಮಿಕ ಸಂಭಾಷಣೆಗಳಿಂದ, ಅವರ ಗುಣಾವಗುಣಗಳನ್ನು ಚರ್ಚಿಸುತ್ತ ,ಕಡೆಗೆ ಹರಿಹರರ ಶ್ರೇಷ್ಠತೆಯನ್ನು ಒಪ್ಪಿಕೊಂಡು ಸ್ತುತಿಸುತ್ತಾರೆ. ಕಲಾವಿದೆಯರಾದ ನೇಹಾ ಮತ್ತು ರೋಹಿಣಿ ತಮ್ಮ ಭಾವಸ್ಫುರಿತ ಕಣ್ಣೋಟ, ಮಿಂಚಿನ ಚಲನೆ,ಭಾವ-ಭಂಗಿಗಳ ಸುಂದರ ನೃತ್ಯದಿಂದ ಮನಸೂರೆಗೊಂಡರು.
ಮೂರನೆಯ ಭಾಗ ಡಾ.ಶತಾವಧಾನಿ ಆರ್. ಗಣೇಶ್ ಅವರ ಅಪೂರ್ವ ಪರಿಕಲ್ಪನೆ. ನಾಟಕೀಯದೃಶ್ಯಗಳಿಂದ ಕಂಗೊಳಿಸಿದ ಶಿವ ಮತ್ತು ರಾಮನ ಅಪರೂಪದ ನಡವಳಿಕೆ, ವರ್ತನೆಗಳು ಕಲಾರಸಿಕರಿಗೆ ಹೊಸ ಅನುಭವವನ್ನು ನೀಡುತ್ತವೆ. ಇಲ್ಲಿ ಸಂಚಾರಿಭಾಗವೇ ಪ್ರಧಾನ. ವಿಷ್ಣು, ಕೈಲಾಸಕ್ಕೆ ಶಿವನನ್ನು ಭೇಟಿಯಾಗಲು ಬಂದಾಗ, ಶಿವ ರಾಮನಾಮ ಜಪದಲ್ಲಿ ತಲ್ಲೀನ. ಹರಿಯನ್ನು ಕಂಡೊಡನೆ ತನ್ನ ಶಿರದಲ್ಲಿದ್ದ ಗಂಗೆಯಿಂದ ಅವನ ಪಾದತೊಳೆದು ಹಾರ್ದಿಕ ಸ್ವಾಗತ ನೀಡುವಾಗ ಮತ್ತು ಕೊಳಲಗಾನ ಆಲಿಸುವುದರಲ್ಲಿ ನಿಮಗ್ನನಾದ ಭಾವನಿಮೀಲಿತ ಅಭಿನಯದಲ್ಲಿ, ಅಶ್ವಿನ್ ಅನುಪಮಭಾವ ಮೂಡಿಸಿದರು. ತಮ್ಮ ಕಥಕ್ ಶೈಲಿಯ ನಯವಾದ ಹಸ್ತಚಲನೆ, ಮೃದುವಾದ ಭಾವ-ಭಂಗಿ, ತಾಳ -ಲಯಬಧ್ಧವಾದ ವೇಗದ `ತತ್ಕಾರ್’ ಗಳಲ್ಲಿ ಆಕರ್ಷಿಸಿದರು.
ಹರಿಯಾಗಿ ನವೀನ್, ಶಿವನಿಗೆ ರಾವಣ ಸಂಹಾರದ ದೃಶ್ಯ ಅನುಕರಿಸಿ ತೋರಿಸುವಲ್ಲಿ, ಧನಸ್ಸಿಗೆ ಹೆದೆಯೇರಿಸುವ ಸನ್ನಿವೇಶದಲ್ಲಿ ತೋರಿದ ಸೂಕ್ಶ್ಮಾತಿಸೂಕ್ಶ್ಮದ ಆಂಗಿಕ ಚಲನೆ, ಭಾವಪೂರ್ಣ ಮುಖಾಭಿವ್ಯಕ್ತಿ, ಪುರುಷೋತ್ತಮನ ಭಂಗಿಗಳನ್ನು ತಮ್ಮ ಖಚಿತ ನಿಲುವು, ಹಸ್ತಚಲನೆ, ಅಡವುಗಳಲ್ಲಿ ಪ್ರದರ್ಶಿದರು. ಶಿವನ ಢಮರುಗದ ನಾದಕ್ಕೆ ಲಯಬಧ್ಧ ಹೆಜ್ಜೆಯಿಡುವ ಚೆಲುವು ಚೆಂದಿತ್ತು.
ಪರಸ್ಪರ ಶ್ಲಾಘಿಸುವ, ಶೌರ್ಯದ ಘಟನೆಗಳನ್ನು ನೆನಪಿಸಿಕೊಳ್ಳುವ ಮಾರ್ಮಿಕ ಮಾತುಕತೆಗಳಿಗೆ ಅನುಗುಣವಾಗಿದ್ದ ಆಕರ್ಷಕ ನೃತ್ಯದ ಚೌಕಟ್ಟು, ನೆರೆದ ರಸಿಕರ ಕಣ್ಮನ ಸೂರೆ ಗೊಂಡಿತ್ತು. ರಾಗಮಾಲಿಕೆ ಮತ್ತು ತಾಳಮಾಲಿಕೆಯಲ್ಲಿದ್ದ ಹಿನ್ನಲೆಯ ಸಂಗೀತ ಕರ್ಣಾನಂದ ಕರವಾಗಿದ್ದರೆ, ರಾಮನ ಭರತನಾಟ್ಯ, ಶಿವನ ಕಥಕ್ ನೃತ್ಯ ರೋಮಾಂಚನಗೊಳಿಸಿತ್ತು.
ಕಡೆಯ ಭಾಗದಲ್ಲಿ ಶಿವ ಮತ್ತು ರಾಮನ ಮಧ್ಯೆದ ಅಭೇದ್ಯಭಾವವನ್ನು ಕೆನೆಗಟ್ಟಿಸುವಂತೆ, ಅವರೊಂದಿಗೆ ರಮಾ-ಉಮೆಯರ ಸಂಭ್ರಮದ ಹೆಜ್ಜೆ-ಗೆಜ್ಜೆಗಳ ಉತ್ಸಾಹದ ನರ್ತನ ಜೋರು ಕರತಾಡನದ ಮೆಚ್ಚುಗೆ ಪಡೆಯಿತು. ಶುದ್ಧನೃತ್ಯದ ಹರಿಹರ ಸ್ತುತಿ ಎರಡೂ ಶೈಲಿಗಳ ಅಸ್ಮಿತೆ ಉಳಿಸಿಕೊಂಡೂ, ಒಂದಾಗಿ ಹಾಲು-ಜೇನಿನಂತೆ ಬೆರೆತು ಆಹ್ಲಾದ ನೀಡಿತು. ಫಯಾಜ್ ಖಾನರ ಹೃದಯಸ್ಪರ್ಶಿ ಸಂಗೀತ ಸಂಯೋಜನೆ, ಮಧುಕೌನ್ಸ್ ಮತ್ತು ಸುಮನೇಷ ರಂಜಿನಿ ರಾಗಗಳಲ್ಲಿ ಹದವಾಗಿ ಹೊಂದಿಕೊಂಡಿತ್ತು. ನಡುವೆ ಬಂದ `ತನಿ ಆವರ್ತನ’ ಅಮೋಘವಾಗಿತ್ತು. ಕಥಕ್ ನಲ್ಲಿ ಮೂಡಿಬಂದ ಆಕಾಶಚಾರಿಗಳು, ತತ್ಕಾರ್ ಮತ್ತು ಚಕ್ಕರ್ ಗಳು ರೋಮಾಂಚನಗೊಳಿಸಿದರೆ, ಭರತನಾಟ್ಯದ ಹಸ್ತಮುದ್ರಿಕೆ, ಆಂಗಿಕಾಭಿನಯ, ಪರಿಣಾಮಕಾರಿ ಭಾವ-ಭಂಗಿಗಳು ಆಕರ್ಷಿಸಿದವು. ಒಟ್ಟಾರೆ, ಕಾರ್ಯಕ್ರಮದಲ್ಲಿ, ಎರಡೂ ಜೋಡಿಗಳು ತಮ್ಮ ಕಲಾಪರಿಣತಿಯನ್ನು ಅತ್ಯಂತ ಸುಂದರ -ವರ್ಣರಂಜಿತ ನೃತ್ಯದಿಂದ ಸಾಬೀತುಗೊಳಿಸಿದವು.