ಪ್ರಸಿದ್ಧ ನೃತ್ಯಗುರು ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆ ಪವಿತ್ರ ಪ್ರಿಯ, ಇತ್ತೀಚಿಗೆ `ರಂಗಪ್ರವೇಶ’ ಮಾಡಿ ಗುರುಗಳು ಹೇಳಿಕೊಟ್ಟ ‘ಮಾರ್ಗಂ’ ನ ಆದ್ಯಂತ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿ ನೋಡುಗರಲ್ಲಿ ಭಾವಸ್ಪಂದನೆಯನ್ನುಂಟು ಮಾಡಿದ್ದು ವಿಶೇಷ. ದೇವಸ್ಮರಣೆಯೊಂದಿಗೆ ಆರಂಭಿಸಿದ ಧ್ಯಾನಶ್ಲೋಕ (ಕಮಲ ಮನೋಹರಿ ರಾಗ) ಸುಂದರ ನೃತ್ತಮಂಜರಿಯೊಂದಿಗೆ, ಶಿಲ್ಪದಂಥ ಭಂಗಿಗಳ ಸಮರ್ಥ ನಿರ್ವಹಣೆಯೊಂದಿಗೆ ಸುಮನೋಹರವಾಗಿ ಮೂಡಿಬಂತು. ಶುದ್ಧ ಧನ್ಯಾಸಿ ರಾಗದ `ಜತಿಸ್ವರ’ ಯಾವುದೇ ಆರ್ಭಟವಿಲ್ಲದ ಸೌಮ್ಯ ನೃತ್ತಗಳ ಪ್ರಸ್ತುತಿಯಲ್ಲಿ ಮನಸೆಳೆಯಿತು. ಯಾಂತ್ರಿಕವೆನಿಸದ ನೃತ್ತಗಳಲ್ಲಿ ತಾಜಾತನವಿದ್ದದ್ದು ಗುರುಗಳ ವೈಶಿಷ್ಟ್ಯವನ್ನು ಎತ್ತಿ ಹಿಡಿದಿತ್ತು. ಗಣಪನ ಭವ್ಯ ಚಿತ್ರಣವನ್ನು ಕಟ್ಟಿಕೊಡುವ ಭಾಗದಲ್ಲಿ ಕಲಾವಿದೆಯ ನಗುಮುಖದ ಲಾಸ್ಯ, ಲೀಲಾಜಾಲವಾಗಿ ಬಾಗಿ-ಬಳುಕುವ ತನು, ಕ್ಷಿಪ್ರಗತಿಯ ಪದಚಲನೆ, ಖಚಿತ ಹಸ್ತ-ಅಡವುಗಳ ಅಂಗಶುದ್ಧಿ ಅಭಿನಯಕ್ಕೊಂದು ಸುಂದರ ಆಯಾಮವನ್ನು ನೀಡಿತ್ತು. ವಿಶಿಷ್ಟ ನುಡಿಕಾರಕಗಳು, ಹಿಮ್ಮೇಳ ಮತ್ತು ನರ್ತನದ ಅನುಪಮ ಸಾಮರಸ್ಯ ಮುದ ತಂದಿತ್ತು. ಜೊತೆಗೆ ಮೊದಲಬಾರಿಗೆ ನಟುವಾಂಗ ಮಾಡಿದ ಗುರು ಸಾಧನಶ್ರೀ ಅವರ ಆತ್ಮವಿಶ್ವಾಸ ಮೆಚ್ಚುವಂತಿತ್ತು.
ಶ್ರೀಕೃಷ್ಣನ ವರ್ಣರಂಜಿತ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ‘ಕೃತಿ’ (ರಚನೆ -ಊತಕಾಡು ಸುಬ್ಬರಾಮ ಅಯ್ಯರ್ ) ಯಲ್ಲಿ, ಪವಿತ್ರ, ಭಾವಸಾಂದ್ರತೆಯನ್ನು, ಅಭಿನಯ ಸಾಮರ್ಥ್ಯವನ್ನು ಪರಿಪೂರ್ಣವಾಗಿ ಅಭಿವ್ಯಕ್ತಿಸಿದಳು. `ಅತೀ ನಿರುಪಮ ಸುಂದರಾಂಗ’ ಎಂಬ ಬಾಲಸುಬ್ರಹ್ಮಣ್ಯ ಶರ್ಮರ ಕಂಚಿನಕಂಠದಲ್ಲಿ ಸಾಗಿದ, ಶ್ರೀಕೃಷ್ಣನ ಬಾಲಲೀಲೆಗಳು, ಪ್ರಣಯ ಪ್ರಸಂಗಗಳಿಂದ ಆವೃತವಾದ ಶೃಂಗಾರ ರಸಾಭಿನಯದ ಕೂಡಿದ ನರ್ತನ ರಾಗರಂಜಿತವಾಗಿ ರಮ್ಯಾನುಭವ ನೀಡಿತು.
ಅನಂತರ, ದ್ವಾರಕೀ ಕೃಷ್ಣಸ್ವಾಮಿ ಕಾಮವರ್ಧಿನಿ ರಾಗದಲ್ಲಿ ರಚಿಸಿದ ಕನ್ನಡ `ವರ್ಣ’ ಭರತನಾಟ್ಯ ಪ್ರಸ್ತುತಿಯ ಹೃದಯಭಾಗವಾಗಿ ಅತ್ಯಂತ ಹೃದ್ಯವಾಗಿ ಮೂಡಿಬಂತು. ಸಾಮಾನ್ಯವಾಗಿ ವರ್ಣದಲ್ಲಿ ಕ್ಲಿಷ್ಟವಾದ ಜತಿಗಳು, ಲಯಪ್ರಾವೀಣ್ಯ, ಅಭಿನಯ ಪ್ರೌಢಿಮೆಯನ್ನು ನಿರೀಕ್ಷಿಸುವುದು ಸಹಜ. ಕಲಾವಿದೆ ಪವಿತ್ರ ಅದನ್ನು ಹುಸಿಗೊಳಿಸಲಿಲ್ಲ. ‘ಎನ್ನೊಡೆಯನ ಕರೆ ತಾರೆಯಾ?’ ಎಂದು ತನ್ನ ಸಖಿಯನ್ನು ಬೇಡುವ, ನಂಜನಗೂಡಿನ ನಂಜುಂಡೇಶ್ವರನಲ್ಲಿ ಅನುರಕ್ತಳಾದ ನಾಯಕಿಯ ಒಳಗುದಿ, ವಿರಹದ ಭಾವನೆಗಳನ್ನು ಪವಿತ್ರ, ‘ಪಾತ್ರದಲ್ಲಿ ಪರಕಾಯ ಪ್ರವೇಶ’ ಮಾಡಿ ಮನೋಜ್ಞವಾಗಿ ಅರ್ಪಿಸಿದಳು. ಶಿವನಲ್ಲಿರುವ ತನ್ನ ಅತಿಶಯವಾದ ಪ್ರೇಮವನ್ನು ಸಖಿಗೆ ನಿವೇದಿಸುತ್ತ ತನ್ನ ಅಂತರಂಗದ ಪದರಗಳನ್ನು ಅವಳ ಮುಂದೆ ಅನಾವರಣಗೊಳಿಸುತ್ತಾಳೆ. ಶಿವನ ಮಹಿಮೆ ಸಾರುವ ಸಂಚಾರಿಗಳಲ್ಲಿ ಅವಳ ಸುಂದರ ಆಂಗಿಕ, ಅಭಿನಯ ಗಮನಾರ್ಹವಾಗಿತ್ತು.
ಡಿವಿಜಿ ಅವರ ಸುಂದರ ಕಾವ್ಯಕಲ್ಪನೆ `ಅಂತಃಪುರ ಗೀತೆ’ ಯಲ್ಲಿ ಅಪೂರ್ವಶಿಲ್ಪ ಸಾಲಭಂಜಿಕೆಗಳನ್ನು ಕಂಡು, ಕವಿಹೃದಯ ‘ ಡಂಗೂರ ಪೊಯ್ವುವರೆನೇ‘ ಎಂಬ ಗೀತೆಯಲ್ಲಿ, ಶೃಂಗಾರರಸದ ಲಾಸ್ಯಪೂರ್ಣತೆ ಮಿಂಚಿ ರಸಾಭಿಜ್ಞತೆಯನ್ನು ಸ್ಫುರಿಸಿತು.
ಮುಂದೆ, ಗುರುಮೂರ್ತಿ ಅವರ ಮೃದಂಗ, ವಿವೇಕಕೃಷ್ಣ ಕೊಳಲು, ಪ್ರಾದೇಶಚಾರ್ ಪಿಟೀಲು ಮತ್ತು ಪ್ರಸನ್ನಕುಮಾರ್ ಮೋರ್ಚಿಂಗ್ ಅವರ ಮನಮುಟ್ಟುವ ಹಿಮ್ಮೇಳದಲ್ಲಿ ‘ಕಣಿ ಹೇಳಿ ಕರೆತಾರೆ ಕಮಲವದನನ’ ಎಂಬ ‘ಜಾವಳಿ’ಯ ಉಲ್ಲಾಸಕರ ಚಲನೆಗಳ ಆಹ್ಲಾದಕರ ಸೂಕ್ಷ್ಮಾಭಿನಯ ಆನಂದ ನೀಡಿತು. ರಂಗಪ್ರವೇಶದ ಸಂದರ್ಭದಲ್ಲಿ ಪ್ರಸ್ತುತಿಗೊಂಡ ಸಂಪೂರ್ಣ ಕನ್ನಡ ಕೃತಿಗಳ ಸಾಕ್ಷಾತ್ಕಾರದಲ್ಲಿ ಗುರು ಜ್ಯೋತಿಯವರ ‘ಕನ್ನಡ ಪ್ರೀತಿ’ ಸುವ್ಯಕ್ತವಾಯಿತು. ಅಂತ್ಯದ ‘ತಿಲ್ಲಾನ’ ರಸಿಕರಿಗೆ ರೋಚಕ ಅನುಭವ ನೀಡಿತು.