ರಂಗದ ಮೇಲೆ ಲವಲವಿಕೆಯಿಂದ ನರ್ತಿಸುತ್ತಿದ್ದ ಬಾಲೆಯ ಪರಿಪಕ್ವ ಅಭಿನಯ ನೆರೆದ ರಸಿಕರ ಗಮನವನ್ನು ವಿಶೇಷವಾಗಿ ಆಕರ್ಷಿಸಿತ್ತು. ಅದು ಇತ್ತೀಚೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಭೂಮಿಕಾ ಗೌಡ `ರಂಗಪ್ರವೇಶ’ದ ಸಂದರ್ಭ. `ಅಭಿವ್ಯಕ್ತಿ ಡ್ಯಾನ್ಸ್ ಸೆಂಟರಿ’ನ ನೃತ್ಯಗುರು ಎಸ್.ರಘುನಂದನ್ ಅವರಲ್ಲಿ ನಿಷ್ಠೆಯಿಂದ ಅಭ್ಯಾಸ ಮಾಡಿ, ಅವಳು ತನ್ನೆಲ್ಲ ಪ್ರತಿಭೆಯನ್ನೂ ಧಾರೆಯೆರೆದು ತನ್ಮಯತೆಯಿಂದ ಸುಮನೋಹರವಾಗಿ ನರ್ತಿಸಿದ ನೃತ್ಯಾರ್ಪಣೆ ಅದಾಗಿತ್ತು. ಸತತ ಮೂರು ಗಂಟೆಗಳ ಕಾಲ ಹಸನ್ಮುಖವನ್ನು ಕಾಪಾಡಿಕೊಂಡೇ ಮನೋಜ್ಞವಾಗಿ, ಅಭಿನಯಪ್ರಧಾನ ನೃತ್ಯವನ್ನು ಪ್ರಸ್ತುತಪಡಿಸಿದ್ದು ಭೂಮಿಕಾಳ ವೈಶಿಷ್ಟ್ಯವಾಗಿತ್ತು.
ಸಾಂಪ್ರದಾಯಕ `ಪುಷ್ಪಾಂಜಲಿ (ಬಹುಧಾರಿ ರಾಗ- ಆದಿತಾಳ)ಯಲ್ಲಿ ನೆರೆದ ಪ್ರೇಕ್ಷಕ ಗಡಣದೊಂದಿಗೆ, ದೇವ ನಟರಾಜ-ಅಷ್ಟದಿಕ್ಪಾಲಕರಿಗೆ ಹಾಗೂ ಗುರು ಹಿರಿಯರು, ವಾದ್ಯಗೋಷ್ಟಿಯವರಿಗೆ ನಮನ ಸಲ್ಲಿಸಿ ಶುಭಾಶೀರ್ವಾದ ಬೇಡುವ ಕೃತಿಯಲ್ಲಿ ಭೂಮಿಕಾ ಭಕ್ತಿಭಾವವನ್ನು ವಿನೀತಳಾಗಿ ಪ್ರದರ್ಶಿಸಿದಳು. ಅನಂತರ ಪ್ರಥಮ ಪೂಜಿತ ಗಣಪತಿಗೆ, ರಘುನಂದನ್ ವಿರಚಿತ `ತುಳಸಿವನಂ ಭಜಮಾನಸ ವಿಘ್ನೇಶ್ವರಂ ಅನಿಷಂ’ ಸಮರ್ಪಿಸುತ್ತ ಕಲಾವಿದೆ, ಭಾವಪ್ರದ ಅಭಿವ್ಯಕ್ತಿಯೊಂದಿಗೆ, ಹೊಸವಿನ್ಯಾಸದ ಜತಿಗಳನ್ನು ಸುಂದರವಾಗಿ ನಿರ್ವಹಿಸಿದಳು. ಲಯ-ಲಾಸ್ಯಗಳಿಂದ ಕೂಡಿದ ಸುಂದರಭಂಗಿಗಳು, ಖಚಿತ ಹಸ್ತಮುದ್ರಿಕೆಗಳು, ವಿಶಿಷ್ಟ ಅಡವುಗಳ ಬೆಡಗು ಅವಳು ಮಾಡಿದ ಕಠಿಣ ಅಭ್ಯಾಸವನ್ನು ನುಡಿಯುತ್ತಿದ್ದವು.
ವಿಲಂಬಿತ ಕಾಲದಿಂದ ಆರಂಭವಾದ ೭ ಅಕ್ಷರಗಳ ವೃತ್ತದ ಮಿಶ್ರಜಾತಿಯ `ಅಲ್ಲರಿಪು’ ವಿನ ಜತಿಗಳಲ್ಲಿ ಹೊಸ ಹೊಳಪಿತ್ತು. ಶಾಸ್ತ್ರಿಯ ಚೌಕಟ್ಟಿನೊಳಗೆ ನರ್ತಿಸಿದರೂ ಕಲಾವಿದೆ ತನ್ನ ನೃತ್ಯಕ್ಕೆ ಮೆರುಗು ತುಂಬಿಸಿದಳು. ಲಾಸ್ಯ-ತಾಂಡವಗಳ ವಿಶೇಷ ನೃತ್ತ ಸಂಯೋಜನೆ ಉತ್ತಮವೆನಿಸಿತ್ತು. `ಜತಿಸ್ವರಂ’ -ಶುದ್ಧ ನೃತ್ತಗಳ ಒಂದು ಸಂಕೀರ್ಣ ಬಂಧ. ಸ್ವರವಿನ್ಯಾಸಗಳಿಂದ ಕೂಡಿದ ಈ ಸಂಯೋಜನೆಯಲ್ಲಿ ನೃತ್ತಗಳು ಆಭರಣೋಪಾದಿಯಲ್ಲಿ ಆಲಂಕಾರಿಕವಾಗಿದ್ದವು. ಭೂಮಿಕಾಳ ಶಿಲ್ಪ ಸದೃಶ ಸುಂದರಭಂಗಿಗಳು, ಖಚಿತ ನಿಲುವು, ಕರಾರುವಾಕ್ಕಾದ ಹೆಜ್ಜೆಯ ಗತಿ, ಚಾರಿ-ಕರಣಗಳು ಗಮನಾರ್ಹವಾಗಿದ್ದವು.
ಮುಂದಿನ ಪ್ರಸ್ತುತಿ ರಾಗಮಾಲಿಕೆ-ಮಿಶ್ರಛಾಪು ತಾಳದ `ಶಬ್ದಂ’ -`ರಾಘವಾಂ ಜಾನಕಿಪ್ರಿಯ ಕೋಟಿ ಸುಂದರಂ’ ಶುದ್ಧ ನೃತ್ತ-ನೃತ್ಯ ಮತ್ತು ಅಭಿನಯಗಳಿಂದ ಮಿಳಿತವಾಗಿದ್ದು, ಕಲಾವಿದೆ, ಇದರ ಅಭಿವ್ಯಕ್ತಿಯಲ್ಲಿ ತನ್ನ ಪ್ರತಿಭಾ ಕೌಶಲ್ಯವನ್ನು ಸಮರ್ಥವಾಗಿ ಪ್ರದರ್ಶಿಸಿದಳು. ಮರ್ಯಾದಾ ಪುರುಷೋತ್ತಮನ ಗಾಂಭೀರ್ಯ ,ಶೌರ್ಯ-ಪರಾಕ್ರಮ, ಸತ್ಯ,ನಿಷ್ಠೆಗಳ ವರ್ಚಸ್ಸನ್ನು ಆಂಗಿಕಾಭಿನಯದಲ್ಲಿ ಪರಿಪೂರ್ಣವಾಗಿ ಬಿಂಬಿಸಿದ ಕಲಾವಿದೆ, ಸಂಚಾರಿಭಾಗದಲ್ಲಿ, ಸೀತಾ ಸ್ವಯಂವರ, ರಾಮ, ಶಿವಧನಸ್ಸನ್ನು ಛೇಧಿಸಿ, ಸೀತೆಯನ್ನು ಪಾಣಿಗ್ರಹಣ ಮಾಡಿಕೊಳ್ಳುವ ದೃಶ್ಯಗಳನ್ನು ನಾಟಕೀಯ ಶೈಲಿಯಲ್ಲಿ ಸುಂದರವಾಗಿ ಅಭಿವ್ಯಕ್ತಿಸಲಾಯಿತು.
ಸಕಲ ಸದ್ಗುಣಿ ಶ್ರೀ ರಾಮಚಂದ್ರನ ಸಾತ್ವಿಕ-ಗಂಭೀರ ರೂಪ ಹಾಗೂ ಸುಮನೋಹರ ಭಂಗಿಗಳನ್ನು ಭೂಮಿಕಾ ಮನಮುಟ್ಟುವಂತೆ ಕಣ್ಮುಂದೆ ತಂದು ನಿಲ್ಲಿಸಿದಳು. ಅಂತ್ಯದಲ್ಲಿ ಹನುಮನ ಸಖ್ಯ ಭಾಗದಲ್ಲಿ ರಾಮ, ಮಾನವ-ಪ್ರಾಣಿಗಳೆಂಬ ಭೇದವಿಲ್ಲದ `ವಿಶ್ವ ಮೈತ್ರಿ ಸ್ಥಾಪಕ’ ಗುಣ ಮೆರೆಯುವ ಘಟ್ಟದಲ್ಲಿ ಕಲಾವಿದೆ, ಅನುಪಮವಾಗಿ ಅಭಿನಯಿಸಿದಳು. ಇವಳ ರಂಗಪ್ರವೇಶಕ್ಕಾಗಿಯೇ ವಿದ್ವಾನ್ ರಘುನಂದನ್ ವಿಶೇಷವಾಗಿ ಸಂಯೋಜಿಸಿದ ಈ ಕೃತಿ ಸೊಗಸಾಗಿ ಮೂಡಿಬಂತು.
ಪಾಪನಾಶಂ ಶಿವಂ, ನಾಟ ಕುರಂಜಿ ರಾಗದಲ್ಲಿ ರಚಿಸಿದ `ಸ್ವಾಮಿ ನಾನ್ ಉನ್ದನ್ ಅಡಿಮೈ’ – `ವರ್ಣ’, ಪ್ರಸ್ತುತಿಯ ಕೇಂದ್ರ ಆಕರ್ಷಣೆಯಾಗಿ ಪ್ರಾಮುಖ್ಯತೆ ಪಡೆದಿತ್ತು. ನಾಟಕೀಯಾಂಶದ ಈ ಸುದೀರ್ಘ ಬಂಧದಲ್ಲಿ ಶಿವನಿಗೆ ಭಕ್ತಿ ಸಮರ್ಪಣೆಯಾಗಿ ಅವನ ಸದ್ಗುಣ-ಮಹಿಮೆಗಳ ವರ್ಣನೆಯನ್ನು ಭಕ್ತಿರಸದಲ್ಲಿ ಭೂಮಿಕಾ ಪರಾಕಾಷ್ಟೆಗೊಯ್ದಳು. ಸಂಚಾರಿಭಾಗದಲ್ಲಿ ಬರುವ ಭಕ್ತ ಮಾರ್ಕಾಂಡೇಯ ಪ್ರಸಂಗವನ್ನು ಭಕ್ತಿರಸ ಪ್ರಧಾನವಾಗಿ ಪ್ರಸ್ತುತಿಗೊಳಿಸಿದಳು. ವಿಶೇಷ ಜತಿಸ್ವರದ ನಿರ್ವಹಣೆಯಲ್ಲಿ ಭೂಮಿಕಳ ಅಗಾಧ ನೆನಪಿನ ಶಕ್ತಿ ಹಾಗೂ ಲಯಜ್ಞಾನ ವ್ಯಕ್ತವಾಯಿತು.
ಪುರಂದರದಾಸರ ಕೃತಿ `ಪಾಲಿಸೆಮ್ಮ ಮುದ್ದು ಶಾರದೆ’ (ರಾಗ-ಕಲ್ಯಾಣಿ, ಆದಿತಾಳ), ಸರಸ್ವತಿಯ ದಿವ್ಯ ಸಾಕ್ಷಾತ್ಕಾರವನ್ನು ನರ್ತಕಿ, ತನ್ನ ಚೇತೋಹಾರಿ ಅಭಿನಯದಿಂದ ರಸೋತ್ಕರ್ಷಗೊಳಿಸಿದಳು. ಮುಂದೆ ರುಕ್ಮಿಣಿ ಅರುಂಡೆಲ್ ನೃತ್ಯ ಸಂಯೋಜಿಸಿದ `ದಾರಿ ಜೂಚು`, ಶಂಕರಾಭರಣ ರಾಗದ `ಪದಂ’- ವಿರಹೋತ್ಕಂಠಿತ ನಾಯಕಿಯ ವಿರಹವೇದನೆಯ ಪರಿಸ್ಥಿತಿಯ ಬಗ್ಗೆ ಅವಳ ಸಖಿ ಗೋಪಾಲನಲ್ಲಿ ನಿವೇದಿಸುವ ಪ್ರಸಂಗದ ನಿರೂಪಣೆಯಲ್ಲಿ ಕಲಾವಿದೆ ರಸಾನುಭವ ಮೂಡಿಸಿದಳು.
ಜಯದೇವನ `ಗೀತಗೋವಿಂದ’ ದ `ಅಷ್ಟಪದಿ’- `ಲಲಿತ ಲವಂಗ ಲತಾ ಪರಿಶೀಲನ ಕೋಮಲ ಸಮೀರೆ’ –ಕೃಷ್ಣನಲ್ಲಿ ಅನುರಕ್ತಳಾದ ವಿರಹಿ ರಾಧೆಯ ಅಗಲಿಕೆಯ ಸಂಕಟವನ್ನು ಸಖಿ ದಯನೀಯವಾಗಿ ಅವನಲ್ಲಿ ಬಿನ್ನವಿಸುತ್ತಾಳೆ. ವಿರಹ ಹೆಚ್ಚಿಸುತ್ತಿರುವ ವಸಂತ ವೈಭವದ ಪೂರಕ ವಾತಾವರಣದ ವರ್ಣನೆ,ವಿರಹತಾಪಗಳ ಪರಿಣಾಮಕಾರಿ ಅಭಿನಯವನ್ನು ಭೂಮಿಕಾ ತನ್ನ ಕಮನೀಯ ನೃತ್ಯದಿಂದ ಬೇರೆಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದಳು. ಹಿನ್ನಲೆಯ ಇಂಪಾದ ಕೊಳಲಗಾನ ಈ ಉತ್ಕಂಠತೆಯನ್ನು ಮತ್ತಷ್ಟು ವೃದ್ಧಿಸಿತು. ಜೊತೆಗೆ ಹೊಸವಿನ್ಯಾಸದ ನೃತ್ಯ ಸಂಯೋಜನೆ ಹೃದಯಸ್ಪರ್ಶಿಸಿ ಮುದನೀಡಿತು. ವೇಗಗತಿಯ, ಸಂಕೀರ್ಣ ನೃತ್ತಚಲನೆಯ ಜತಿ-ಅಡವುಗಳಿಂದ ಕೂಡಿದ ನಟರಾಜ ಸಮರ್ಪಿತ `ತಿಲ್ಲಾನ’ದಿಂದ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು. ವಾದ್ಯಸಹಕಾರ – ನಟುವಾಂಗಂ ಎಸ್. ರಘುನಂದನ್, ಗಾಯನ- ತ್ಯಾಗರಾಜನ್, ಮೃದಂಗ- ಜನಾರ್ಧನ್ ರಾವ್, ಕೊಳಲು-ಮಹೇಶಸ್ವಾಮಿ, ವಯೊಲಿನ್- ನಟರಾಜಮೂರ್ತಿ .