ನರ್ತನಕ್ಕೆ ಹೇಳಿ ಮಾಡಿಸಿದ ಭಾಮಾವಿಲಾಸದ ವಯ್ಯಾರದ ನಡೆ, ಹಸನ್ಮುಖದ ನರ್ತನದಿಂದ,ನೆರೆದ ಕಲಾಸಕ್ತರನ್ನು ಮೋಡಿ ಮಾಡಿದವರು ಕೂಚುಪುಡಿ ನೃತ್ಯ ಕಲಾವಿದೆ ನಂದ್ಯಾಲ ಚಂದ್ರಿಕಾ. ಇತ್ತೀಚೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ ಈ ಕಲಾವಿದೆ ವೈವಿಧ್ಯಪೂರ್ಣ ಕೃತಿಗಳಿಂದ ರಂಜಿಸಿದರು.
ಶ್ರೀ ಯತಿ ನಾರಾಯಣತೀರ್ಥರು ನಾಟರಾಗ, ಆದಿತಾಳದಲ್ಲಿ ರಚಿಸಿದ ಹರಿದ್ರಾ ಗಣಪತಿಯ ಸ್ತುತಿಯನ್ನು ಸಕಲ ಸಿದ್ಧಿ -ಯಶಸ್ಸುಗಳಿಗೆ ಪ್ರಾರ್ಥಿಸುತ್ತ, ಗಣಪನ ಸುಂದರ ವರ್ಣನೆಗಳಿಗೆ ತನ್ನ ಸುಂದರ ಅಭಿನಯದಿಂದ ಪ್ರತಿಮಾರೂಪವನ್ನು ಕಡೆದಿರಿಸಿದಳು ಚಂದ್ರಿಕಾ.

ರಾಗಮಾಲಿಕೆಯ `ಜಯ ಜಯ ಸ್ವಾಮಿ ಜಯ ಜಯ’ ಎಂಬ ಶ್ರೀ ಭುಜಂಗರಾಯ ಶರ್ಮ ವಿರಚಿತ `ಪೂರ್ವರಂಗ’ದಲ್ಲಿ ಶಿವ-ಪಾರ್ವತಿಯರನ್ನು ವಂದಿಸಿ, ಸಕಲರಿಗೂ ಶುಭವಾಗಲೆಂದು ಹಾರೈಸುವ ಈ ಮಧುರ ಪ್ರಬಂಧದಲ್ಲಿ ರಸಾನುಭವ ಸಾಕ್ಷಾತ್ಕಾರವಾಯಿತು. ಶಿವಸ್ತುತಿಯು (ರಾಗ-ಸಿಂಹೇಂದ್ರ ಮಧ್ಯಮ )`ಕುಲವೈ ನಾಡೆ ದೇವ ದೇವುಡು’ ಎಂಬ ಶಿವಧ್ಯಾನ ಶ್ಲೋಕದಿಂದ ಆರಂಭವಾಗಿ ಭಕ್ತಿಯಪಾರಮ್ಯದಲ್ಲಿ ಕಲಾವಿದೆ ತನ್ಮಯತೆಯಿಂದ ಶೋಭಾಯಮಾನವಾಗಿ ನರ್ತಿಸಿದಳು.
ಮೋಹನರಾಗ ಆದಿತಾಳದಲ್ಲಿ `ಕೃಷ್ಣ ಶಬ್ದ’ವನ್ನು ಲಾಸ್ಯ ಭಾವ-ಭಂಗಿಗಳಿಂದ ಆಕರ್ಷಣೆ ಮೂಡಿಸಿದ ಕಲಾವಿದೆ ಶ್ರೀ ಕೃಷ್ಣನಲ್ಲಿ ತನಗಿದ್ದ ಗಾಢ ಅನುರಾಗವನ್ನು ಅವನ ರೂಪ-ಶೌರ್ಯಗಳನ್ನು ವಿಧವಿಧವಾಗಿ ಬಣ್ಣಿಸುತ್ತಾ, ಹುಬ್ಬಿನ ಬಳುಕಾಟ, ಒನಪು-ವಯ್ಯಾರದ ನಡೆ, ಮೋಹಕ ಬಾಗು-ಬಳುಕುಗಳಿಂದ ಶೃಂಗಾರರಸವನ್ನು ಚಿಮ್ಮಿಸಿದರು. ಭಗವಂತನಲ್ಲಿ ತನ್ನ ಆತ್ಮನಿವೇದನೆಯ ಕಾತುರತೆಯನ್ನು ಅಭಿವ್ಯಕ್ತಿಸುವ ನಾಟ್ಯದಲ್ಲಿ ದೈವಿಕಪ್ರೇಮ ತೀವ್ರವಾಗಿ ತಟ್ಟಿತು.

ಇವರ ನೃತ್ಯದ ಇನ್ನೊಂದು ವಿಶೇಷ ಅಂಶವೆಂದರೆ, ಪ್ರತಿ ಕೃತಿ ಸಾಕಾರಗೊಳಿಸಿದ ನಂತರ ರಂಗದಿಂದ ನಿಷ್ಕ್ರಮಣ, ಹಾಗೆಯೇ ಆಗಮನ ಕೂಡ ರಂಗಾಕ್ರಮಣದಿಂದಲೇ ಎಂಬುದು ಗಮನಾರ್ಹ ಸುಂದರ ಅಂಶವಾಗಿತ್ತು. ಇದು ನೃತ್ಯದ ಆಕೃತಿಗೊಂದು ಕಲಾಪೂರ್ಣ ಆಯಾಮ ನೀಡಿತೆಂದರೆ ಅತಿಶಯೋಕ್ತಿಯಲ್ಲ.
ಮುಂದಿನ ಪ್ರಸ್ತುತಿ `ರುಕ್ಮಿಣಿ ಪ್ರವೇಶಂ ‘(ರಾಗಮಾಲಿಕೆ, ತಾಳಮಾಲಿಕೆಯ ಸಂಯೋಜನೆ) ಹರಿವಂಶ ಪುರಾಣದಲ್ಲಿ ಬರುವ ಶ್ರೀಕೃಷ್ಣ ಪಾರಿಜಾತದಿಂದ ಆಯ್ದಭಾಗಗಳು. ಸತ್ಯಭಾಮೆ ಮತ್ತು ರುಕ್ಮಿಣಿಯರ ನಡುವೆ ನಾರದರು ಜಗಳ ತಂದಿಟ್ಟ ಪ್ರಸಂಗ. `ನಾದ ಚಂಚಲ ಲೋಲ’ ಎಂದು ಮನಸಾರೆ ತನ್ನ ಪ್ರೀತಿ ಸಮರ್ಪಣೆ ಮಾಡಿಕೊಳ್ಳುವ ರುಕ್ಮಿಣಿ, ತನ್ನ ಕುಲಗೋತ್ರಗಳ ಬಗ್ಗೆ ಹೇಳಿಕೊಳ್ಳುತ್ತಾ ಕೃಷ್ಣನಲ್ಲಿ ಪ್ರೀತಿ ಮತ್ತು ಭಕ್ತಿಯನ್ನು ನಿವೇದಿಸಿಕೊಳ್ಳುವ ಭಾವವನ್ನು ಕಲಾವಿದೆ ತನ್ನ ಚಂಚಲ ಮಿನುಗು ಕಣ್ಣೋಟದಿಂದ, ಆಕರ್ಷಕ ಜತಿಗಳಿಂದ, ನೃತ್ಯದ ಬೆಡಗಿನಿಂದ ಸುಂದರವಾಗಿ ಅಭಿವ್ಯಕ್ತಿಸಿದರು.
ಭಾವಾಶ್ರಯವಾದ ನೃತ್ಯ ಹಾಗೂ ತಾಳ-ಲಯಾಶ್ರಯವಾದ ನೃತ್ತಗಳ ಸ್ಮಮಿಳಿತವೇ ಈ ವಿಶಿಷ್ಟವಾದ `ತರಂಗ’. ಶೃಂಗಾರ ಮತ್ತು ಭಕ್ತಿಪ್ರಧಾನವಾದ ಮಧ್ಯಮಕಾಲದ ನಡೆಗಳಿಂದಲೂ ಸುಮಧುರ ಸಂಗೀತದಿಂದಲೂ, ಸಂಸ್ಕೃತ ಸಾಹಿತ್ಯದಿಂದಲೂ ಕೂಡಿದ ವಿಶೇಷ ನೃತ್ಯಬಂಧವೇ ಈ `ತರಂಗ’.
ತಲೆಯ ಮೇಲೆ ನೀರುತುಂಬಿದ ಕುಂಭವನ್ನು ಇಟ್ಟುಕೊಂಡು,ಪಾದದ ಕೆಳಗೆ ಹಿತ್ತಾಳೆಯ ತಟ್ಟೆಯನ್ನಿಟ್ಟು , ತಲೆಯಮೇಲಿನ ತಂಬಿಗೆಯಿಂದ ನೀರು ತುಳುಕದಂತೆ, ತಟ್ಟೆಯ ಮೇಲಿನ ಪಾದಗಳನ್ನು ತೆಗೆಯದೆ, ತಾಳ ಲಯಬದ್ಧವಾಗಿ . ಸಂಗೀತ-ಸಾಹಿತ್ಯಕ್ಕೆ ತಕ್ಕಂತೆ ನರ್ತಿಸುವ ಬಗೆಗೆ `ನಾಟ್ಯ ಯೋಗ’ವೆಂದು ಹೆಸರು. ಇದು ಕೂಚಿಪುಡಿ ನಾಟ್ಯದ ವಿಶೇಷ ಕಲಾ ಸಂಪತ್ತು ಕೂಡ. ಈ ಕಸರತ್ತಿನ ನೃತ್ಯದಲ್ಲಿ ಕಲಾವಿದೆ ತನ್ನ ಎಂದಿನ ಬಾಗು-ಬಳುಕುಗಳನ್ನು ಮೋಹಕವಾಗಿ ತೋರುತ್ತ , ತನ್ನ ಸ್ಥಿತಪ್ರಜ್ಞತೆಯನ್ನು, ಮನೋದೃಢತೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿ ಕಲಾರಸಿಕರ ಮೆಚ್ಚುಗೆ ಪಡೆದಳು.

ಇದರ ನಂತರದ ಜತಿಗಳು, ವೇಗದ ಪದಚಲನೆಗಳು ಗಮನ ಸೆಳೆದವು.ದುಷ್ಟ ಪೂತನಿಯ ಸಂಹಾರದ ಅಭಿನಯದಲ್ಲಿ ಚಂದ್ರಿಕಳ ಅಭಿನಯ ಮನೋಜ್ಞವಾಗಿತ್ತು. ಪೂತನಿ ಹೆಣ್ಣಾಗಿ ಪರಿವರ್ತಿತಳಾದ ನಂತರ, ಅವಳ ಅಲಂಕಾರ,ಗಂಡುನಡಿಗೆ-ವರ್ತನೆಗಳನ್ನು ಕಲಾವಿದೆ ತುಂಬ ಸೊಗಸಾಗಿ ಅಭಿನಯಿಸಿದರು. ಇದರಲ್ಲಿನ ನಾಟಕೀಯ ಅಂಶಗಳು ಮನಮುಟ್ಟಿದವು. ಈ ಪ್ರಸಂಗದಲ್ಲಿ ಕಂಡ ಹುಸಿ ಅಡವುಗಳು, ಮಂಡಿ ಅಡವು-ಭ್ರಮರಿಗಳು ನೋಡಲು ಅಂದವಾಗಿದ್ದವು.
ಮುಂದೆ ಕ್ಲಿಷ್ಟ ಪದಚಲನೆಯ `ತಿಲ್ಲಾನ’ ಪ್ರಮುಖ ನೃತ್ತಪ್ರಧಾನ ಬಂಧವಾಗಿ ಮನಸೆಳೆಯಿತು. ಚಂದ್ರಿಕಳ ಈ ಸುಂದರ ನೃತ್ಯಗಳನ್ನು ವಿಶಿಷ್ಟವಾಗಿ ಸಂಯೋಜಿಸಿದವರು ನೃತ್ಯಗುರು ಧರಣಿ ಕಶ್ಯಪ್, ನಟುವಾಂಗವನ್ನೂ ಸಮರ್ಥವಾಗಿ ನಿಭಾಯಿಸಿದರು. ಸಂಗೀತಾ-ರಮಾ ಜಗನ್ನಾಥ್,ಮೃದಂಗ-ಪುರುಷೋತ್ತಮ್,ಕೊಳಲು- ಭಾಸ್ಕರ್ ಮತ್ತು ವಯೊಲಿನ್- ಗಣೇಶ್ ಕುಮಾರ್.