ಅವನೊಂದು ವಿಸ್ಮಯ. ವಯಸ್ಸು ಕೇವಲ ಹದಿಮೂರು. ಅವನದು ಈಗ ಎರಡನೆಯ ರಂಗಪ್ರವೇಶ. ಭರತನಾಟ್ಯ ಗುರು ರೇಖಾ ಜಗದೀಶರ ಪುತ್ರನಾದ ಮನು, ಹತ್ತರ ಬಾಲಕನಾಗಿದ್ದಾಗ ತನ್ನ ಮೊದಲ ರಂಗಪ್ರವೇಶವನ್ನು ಭರತನಾಟ್ಯ ಶೈಲಿಯಲ್ಲಿ ಮಾಡಿದ್ದ. ಇದೀಗ ಕಥಕ್ ರಂಗಾರೋಹಣ. ಅತ್ಯಂತ ಸೂಕ್ಷ್ಮಗ್ರಾಹಿಯಾದ ಮನು, ಕಥಕ್ ನಾಟ್ಯಗುರು ಹರಿ ಚೇತನ್ ಅವರಲ್ಲಿ ಕಳೆದ ಒಂದು ವರ್ಷದಿಂದಷ್ಟೇ ಕಥಕ್ ನೃತ್ಯ ಕಲಿತು, ರಂಗಪ್ರವೇಶಿಸುವಷ್ಟು ಆತ್ಮಸ್ಥೈರ್ಯ, ನೈಪುಣ್ಯ ಗಳಿಸಿಕೊಂಡಿದ್ದು ಸ್ತುತ್ಯಾರ್ಹ. ಮನು ಇತ್ತೀಚಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ‘ಕಥಕ್’ ರಂಗಪ್ರವೇಶವನ್ನು ನೆರವೇರಿಸಿಕೊಂಡಿದ್ದಾನೆ. ಮೂರು ವರುಷದ ಮಗುವಾಗಿದ್ದಾಗಿನಿಂದ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವ ನೀಡಲಾರಂಭಿಸಿದ ಈ ಬಾಲಕನದು ಇದು ಸಾವಿರದ ಒಂದನೆಯ ಪ್ರದರ್ಶನವೆಂದರೆ ದೊಡ್ಡ ದಾಖಲೆಯೇ ಸರಿ !
ಶುಭಾರಂಭದ ‘ ಗಣಪತಿ ಮುರತ್…’ ಎಂದು ಆರಂಭವಾದ ಮಿಯಾ ಮಲಾರ್ ರಾಗದ ಗಣೇಶ ವಂದನೆ ( ರಚನೆ-ಇಬ್ರಾಹಿಂ ಆದಿಲ್ ಷಾ) ಯಲ್ಲಿ ಪ್ರಸ್ತುತಪಡಿಸಿದ ಸಲೀಸಾದ ಚಕ್ಕರ್ ಗಳು ಅವನ ಆತ್ಮವಿಶ್ವಾಸವನ್ನು ಎತ್ತಿಹಿಡಿಯಿತು. ಪ್ರತಿಚಲನೆಗೂ ಕುತ್ತಿಗೆ ತಿರುಗಿಸುತ್ತಾ ನಗುಮುಖದಲ್ಲಿ ಸಮ್ಮೋಹಕ ಭಾವ ಚಿಮ್ಮಿಸುತ್ತಾ , ವೇಗದ ಪದಗತಿಯಲ್ಲಿ ತನ್ನ ನೃತ್ಯ ನೈಪುಣ್ಯವನ್ನು ಪ್ರದರ್ಶಿಸಿದ. ಮುಂದಿನ ಜುಗಲ್ ಬಂದಿಯ ಪ್ರಶ್ನೋತ್ತರಗಳಲ್ಲಿ ಮೂಡಿಬಂದ ತತ್ಕಾರಗಳು ಆಹ್ಲಾದಕರವಾಗಿದ್ದವು. ತೀನ್ ತಾಳದಲ್ಲಿ ಪ್ರಸ್ತುತವಾದ ಸಾಂಪ್ರದಾಯಕ ರಚನೆ, ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸ್ತುತಿಯಲ್ಲಿ ತನ್ನ ಮುಂದಿನ ನಾಟ್ಯ ತಯಾರಿಯನ್ನು ಬಿಂಬಿಸಿದ. ಇದರಲ್ಲಿ ಬೆಡಗು ತುಂಬಿದ ಥಾಟ್ , ಅಮದ್, ತುಕಡಗಳು, ಥಿಹಾಯ್, ಲಡಿ ಮುಂತಾದ ತಾಂತ್ರಿಕ ಅಂಶಗಳು ಮೇಳೈವಿಸಿದ್ದವು.
ಕಥಕ್ ನೃತ್ಯಶೈಲಿಯಲ್ಲಿ ಅಣ್ಣಮಾಚಾರ್ಯರ ‘ಭಾವಮುಲೊ …’ ವೆಂಕಟೇಶ್ವರನ ಸ್ತುತಿ ಪ್ರಯೋಗಾತ್ಮಕವಾಗಿ ಅಳವಡಿಸಲಾಗಿತ್ತು. ನೃತ್ತಭಾಗದಲ್ಲಿ ಲೀಲಾಜಾಲವಾಗಿ ತತ್ಕಾರಗಳನ್ನು, ಅತಿ ವೇಗದ ಚಕ್ಕರ್ ಗಳನ್ನು ಪ್ರದರ್ಶಿಸಿದ ಬಾಲ ಕಲಾವಿದ ಮನು. ರೌದ್ರ, ವೀರ ಹಾಗೂ ಆರ್ದ್ರಭಾವಗಳ ಅಭಿನಯ ಮೆಚ್ಚುಗೆ ತಂದಿತು. ಭಕ್ತಿಭಾವಕ್ಕೆ ಬಳಸಲಾದ ಈ ಕೃತಿಯ ಸಾಕಾರದ ಹೊಸಪ್ರಯತ್ನ ಅಚ್ಚುಕಟ್ಟಾಗಿ ಮೂಡಿಬಂತು. ನೃತ್ತ ಸೌಂದರ್ಯದ ಭಾಗಗಳು ಆಕರ್ಷಕವೆನಿಸಿದ್ದು, ಕಲಾವಿದನ ಚುರುಕುಗತಿಯ ಹಸ್ತಚಲನೆ, ಕರಾರುವಾಕ್ಕಾದ ಪದಗತಿಯ ಲಾಲಿತ್ಯದಿಂದ. ‘ತಾಳಮಾಲ’-ಕೂಡ ಮನುವಿನ ಪಾದರಸದ ಲಯಾತ್ಮಕ ನೃತ್ತಲಾಸ್ಯದಿಂದ ಆಸಕ್ತಿ ಕೆರಳಿಸಿತು. ‘ಪೆರಿನಿ’ ಸಂಪ್ರದಾಯದಿಂದ ಕುಚಿಪುಡಿ ಶೈಲಿಯಿಂದ ಪ್ರೇರಣೆಗೊಂಡು ‘ಮಡಕೆ’ಯ ಮೇಲೆ ನಿಂತು ಕಲಾವಿದ ಪ್ರದರ್ಶಿಸಿದ ರಭಸದ ತತ್ಕಾರಗಳು, ಹಾಗೇ ಅಷ್ಟೇ ಸೂಕ್ಷ್ಮಗತಿಯ ಪದಗತಿಗಳು ಬಾಲಕನ ಕಾಲುಗಳ ಕಸುವನ್ನು , ಮೈಮರೆತು ತನ್ಮಯತೆಯಿಂದ ನರ್ತಿಸಿದ ಅವನ ಸಾಮರ್ಥ್ಯವನ್ನು ಪ್ರದರ್ಶಿಸಿತು. ಹುಸಿಹೆಜ್ಜೆಯ ಸೊಗಸೂ ಅಭಿವ್ಯಕ್ತವಾಯಿತು.
ಮುಂದೆ ಮನು, ರಾಧಾ-ಕೃಷ್ಣರ ಅನುರಾಗದ ಚಿತ್ರಣ ನೀಡುವ ‘ರಾಸಲೀಲೆ’ಯನ್ನು ತನ್ನ ವಯಸ್ಸಿಗೂ ಮೀರಿದ ಶೃಂಗಾರಭಾವಗಳನ್ನು ಚೆಂದವಾಗಿ ಮನಗಾಣಿಸಲು ಪ್ರಯತ್ನಿಸಿದನಾದರೂ ಅದು, ಅವನ ವಯಸ್ಸಿಗೆ, ಅಳವಿಗೆ ಮೀರಿದ್ದೆಂದು ಅನಿಸದೇ ಇರಲಿಲ್ಲ. ಇಂಥ ಕೃತಿಗಳನ್ನು ಪುಟ್ಟ ಬಾಲಕನ ಪ್ರಸ್ತುತಿಯಲ್ಲಿ ಅಳವಡಿಸುವ ವಿಷಯದಲ್ಲಿ ಗುರುಗಳು ಆಲೋಚಿಸುವುದು ಒಳಿತು.
ಅಂತ್ಯದ ‘ತರಾನ’ ( ರಾಗ-ಮಾಲಕೌನ್ಸ್) ಅತ್ಯಂತ ಲವಲವಿಕೆಯಿಂದ ಸಾಗಿ, ಶಿರೋಭೇದಗಳಿಂದ ಮುದಗೊಳಿಸಿ, ಮನು ತನ್ನ ಅಂಗಿಯ ಚುಂಗು ಹಿಡಿದು ನವಿರಾಗಿ ಹೆಜ್ಜೆ ಹಾಕಿ, ರಂಗದ ತುಂಬಾ ಹಂಸದಂತೆ ತೇಲಾಡಿ ಕಲಾರಸಿಕರ ಕಣ್ಮನ ತುಂಬಿ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದ.