Image default
Dance Reviews

ಪ್ರತಿಷ್ಠಳ ಮನಮೋಹಕ ನೃತ್ಯಲಾಸ್ಯ

ರಂಗದ ಮೇಲೆ ಮಿಂಚಿನಬಳ್ಳಿಯೊಂದು ಝಳಪಿಸಿದಂಥ ಅನುಭವ ನೀಡಿದ, ಮನಮೋಹಕ ಭಂಗಿಗಳ ಮನೋಜ್ಞ ನೃತ್ಯ ಪ್ರಸ್ತುತಪಡಿಸಿದ ಕಲಾವಿದೆ ಪ್ರತಿಷ್ಠಾ ವೆಂಕಟೇಶ್ ನೆರೆದ ರಸಿಕರ ಗಮನವನ್ನು ಹಿಡಿದಿಟ್ಟುಕೊಂಡಳು. ಸಂದರ್ಭ- ಆಕೆಯ ಮೊದಲ ಹೆಜ್ಜೆಗಳ ಕಲಾನೈಪುಣ್ಯದ ಪ್ರದರ್ಶನ ‘ರಂಗಪ್ರವೇಶ’. ಆದರೆ ಆಕೆಯ ಲೀಲಾಜಾಲ ಆಂಗಿಕಚಲನೆಯ ಚೆಲುವನ್ನು ಕಂಡವರಿಗೆ ಅದವಳ ಪ್ರಥಮ ಪ್ರವೇಶವೆನಿಸಲಿಲ್ಲ. ಪ್ರಖ್ಯಾತ ‘’ಶ್ರದ್ಧಾ’’ ನೃತ್ಯಸಂಸ್ಥೆಯ ಅಂತರರಾಷ್ಟ್ರೀಯ ನೃತ್ಯ ಕಲಾವಿದೆ-ಗುರು ಶಮಾ ಕೃಷ್ಣರ ತರಬೇತಿ ಅವಳ ನೃತ್ಯಪಾಕವನ್ನು ಹದಗೊಳಿಸಿತ್ತು, ಪಕ್ವಾಭಿನಯವನ್ನು ಚೆಂದಗೊಳಿಸಿತ್ತು. ನುರಿತ ನರ್ತಕಿಯಂತೆ ಲೀಲಾಜಾಲವಾಗಿ ನರ್ತಿಸಿ ರಸಿಕರನ್ನು ಬೆರಗುಗೊಳಿಸಿದಳು ಪ್ರತಿಷ್ಠಾ .

ಸಾಂಪ್ರದಾಯಕ ‘ಪುಷ್ಪಾಂಜಲಿ’ ಯೇ ವಿಶಿಷ್ಟವಾಗಿತ್ತು. ಮೃದಂಗದ ಕೊನ್ನಕೊಲುಗಳಿಗೆ ಕಲಾವಿದೆ ಹೆಜ್ಜೆ ಹಾಕಿದ ನಿಖರತೆ, ಸುಂದರ ಭಂಗಿಗಳು, ಲಾಸ್ಯದ ಬಾಗು-ಬಳುಕುಗಳು ಅವಳ ಆಂಗಿಕ ಕಲಾನೈಪುಣ್ಯದ ಬೆಡಗು ಸೂಸಿತು. ನಂತರ, ಬ್ರಹ್ಮ ‘ನಾಟ್ಯಶಾಸ್ತ್ರ’ ಬರೆಯುವಾಗ ಉಲ್ಲೇಖಿಸಿದ ಎರಡು ಶ್ಲೋಕಗಳು ಸಾಕಾರವಾದವು. ಕಂಠದಲ್ಲಿ ಗೀತೆಯನ್ನು, ಹಸ್ತಮುದ್ರೆಗಳ ಮೂಲಕ ಅರ್ಥವನ್ನು ಪ್ರದರ್ಶಿಸುತ್ತ , ಕಣ್ಣುಗಳಿಂದ ನವರಸ ಭಾವವನ್ನು, ಕಾಲುಗಳಿಂದ ತಾಳವನ್ನು ಹಾಕುತ್ತ ಅಭಿನಯಿಸಬೇಕು ಎಂಬ ಅರ್ಥದ ಶ್ಲೋಕವನ್ನು ಪರಿಪೂರ್ಣವಾಗಿ ಸಾಕ್ಷಾತ್ಕರಿಸಿದಳು. ಸರ್ವಶಾಸ್ತ್ರಾರ್ಥಸಂಪನ್ನ, ಸರ್ವಶಿಲ್ಪಪ್ರವರ್ತಂ ಪಂಚಮವೇದವಾದ ನಾಟ್ಯದ ಸೃಷ್ಟಿಯ ಬಗ್ಗೆ ನಿರೂಪಿಸುವ ಶ್ಲೋಕದ ಅಂತಃಸಾರವನ್ನು ಶಿಲ್ಪಸದೃಶ ನಾಟ್ಯದಿಂದ ಸಮರ್ಪಿಸಿದಳು.

ಮುಂದೆ, ‘ಗಣಪತಿ ಸ್ತುತಿ’ –‘ಪ್ರಣಮಾಹ್ಯಂ ಗೌರೀಸುತಂ’- ಪರಿಣಾಮಕಾರಿ ಸಂಚಾರಿ ಕಥಾನಕಗಳ ಮೂಲಕ ಮನಮುಟ್ಟಿತು. ಪ್ರಥಮಪೂಜಿತನ ವರ್ಣನೆಯ ಪ್ರತಿಸಾಲಿನ ಅರ್ಥವೂ ಸ್ಫುಟವಾದ ಆಂಗಿಕಾಭಿನಯದಲ್ಲಿ ಬಿಂಬಿತವಾಯಿತು. ‘ಜತಿಸ್ವರ’ಗಳ ಜಟಿಲನೃತ್ತಗಳ ನೈಪುಣ್ಯದ ವರ್ಚಸ್ಸು ಗಮನಾರ್ಹವಾಗಿತ್ತು. ಗುರು ಶಮಾ, ನಾಟ್ಯಶಾಸ್ತ್ರದ ಚಾರಿ, ಕರಣಗಳನ್ನು ಬಹು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದು ಶ್ಲಾಘ್ಯಾರ್ಹ. ಭಂಗಿಗಳಲ್ಲಿ ನೃತ್ತಗಳ ಹೆಣಿಗೆ ಪ್ರಯೋಗಶೀಲವಾಗಿತ್ತು.

ಸುದೀರ್ಘ ಬಂಧ ‘ವರ್ಣ’-ಸಂಕೀರ್ಣ ಜತಿಗಳು ಮತ್ತು ಪಕ್ವಾಭಿನಯದ ಸಮಾಗಮವಾಗಿತ್ತು. ವಿರಹೋತ್ಖಂಠಿತ ನಾಯಕಿ ತ್ಯಾಗರಾಜಸ್ವಾಮಿಯ ದಿವ್ಯಚೆಲುವನ್ನು ಕಂಡು ಅವನಲ್ಲಿ ಅನುರಾಗ ನಿವೇದಿಸಿಕೊಳ್ಳುವ ಸಮ್ಮಿಶ್ರಭಾವಗಳ ರಸಾರ್ಪಣೆ ಅತ್ಯಂತ ಪರಿಣಾಮಕಾರಿಯಾಗಿತ್ತು. ‘ರೂಪಮು ಚೂಚಿ…’-ಶೃಂಗಾರ-ಭಕ್ತಿಮಿಳಿತವಾದ ಈ ವರ್ಣದಲ್ಲಿ ಮಾರ್ಕಂಡೇಯ, ಮನ್ಮಥ ದಹನ ಪ್ರಕರಣಗಳ ಕಥಾನಕದ ನಿರೂಪಣೆ ಸೊಗಸಾಗಿ ಮೂಡಿಬಂದವು. ಪ್ರತಿಷ್ಠಳ ನುರಿತ ಆಂಗಿಕ ಚೆಲುವಿನ ನೃತ್ತಗಳ ಚಿತ್ತಾರ ಹೊಸಬೆಳಕು ಮೂಡಿಸಿತ್ತು. ಶಮಾ ಅವರ ಅಸ್ಖಲಿತ ನಟುವಾಂಗದ ಝರಿ ಕಲಾವಿದೆಯ ಮನೋಜ್ಞ ನೃತ್ಯಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿತ್ತು. ‘ಮಾರಕೋಟಿ ಸುಂದರ..’ ಸಾಲಿನ ವಿಸ್ತಾರದಲ್ಲಿ ಸ್ಫುರಣಗೊಂಡ ಪಕ್ವಾಭಿನಯ ಕಣ್ಣಿಗೆ ಹಬ್ಬವಾಯಿತು.

‘ ಅರಿವೇನಯ್ಯ ಉನ್ನಂತರಂಗಂ’- ಊತುಕಾಡು ಸುಬ್ಬರಾಮಯ್ಯರ್ ರಚಿತ ‘ಪದಂ ’ನ  ಖಂಡಿತಾನಾಯಕಿಯ ಆತ್ಮಾಭಿಮಾನವನ್ನು ಕಲಾವಿದೆ ಬಹು ನಾಟಕೀಯವಾಗಿ ಅಭಿನಯಿಸಿದಳು. ಪರಸ್ತ್ರೀ ಸಂಗ ಮಾಡಿಬಂದ ಗಂಡನನ್ನು ಹಂಗಿಸುವ ಪರಿಯನ್ನು ಖಂಡಿಸುವ ಅವಳ ಕಾಠಿಣ್ಯ, ನೈಜಬನಿಯಲ್ಲಿತ್ತು. ಹೃದಯಸ್ಪರ್ಶಿ ಅಭಿನಯದ ನವಿರು, ಸೂಕ್ಷ್ಮತೆ ಇದರಲ್ಲಿ ಅನಾವರಣಗೊಂಡಿತ್ತು.

ಮುಂದೆ ವ್ಯಾಸರಾಜರ ಜನಪ್ರಿಯ ಕೃತಿ ‘ಕೃಷ್ಣ ನೀ ಬೇಗನೆ ಬಾರೋ’ ವಾತ್ಸಲ್ಯ ಶೃಂಗಾರದ ಉತ್ತುಂಗದ ರಸಪಾಕದಲ್ಲಿ ಅರಳಿದ ಅನುಪಮ-ಆಹ್ಲಾದತೆಯ ಕಾರಂಜಿಯಾಗಿತ್ತು. ಯಶೋದೆಯ ವಾತ್ಸಲ್ಯದ ಅಭಿವ್ಯಕ್ತಿ ರೋಮಾಂಚಕರವಾಗಿತ್ತು. ಬಾಲಕೃಷ್ಣನ ಬಾಯಲ್ಲಿ ಮೂಜಗವನ್ನು ಕಂಡು ಬವಳಿ ಬಂದುಬೀಳುವ ಯಶೋದೆಯ ಪಾತ್ರದಲ್ಲಿ ಕಲಾವಿದೆಯ ಪರಕಾಯ ಪ್ರವೇಶದ ಅಭಿನಯ ಸುಮನೋಹರ. ಮುಕ್ತಾಯ ಬಂಧ ಸ್ವಾತಿತಿರುನಾಳರ ಧನಶ್ರೀರಾಗದ ‘ತಿಲ್ಲಾನ’- ವಿಭಿನ್ನ ಬಗೆಯ ಲಯವಿನ್ಯಾಸ, ಶೊಲ್ಲುಕಟ್ಟುಗಳ ವಿಶಿಷ್ಟ ಸಂಯೋಜನೆಯಲ್ಲಿ ಪರಿಪೂರ್ಣತೆಯಿಂದ ವಿಜ್ರುಂಭಿಸಿ ಮನೋಲ್ಲಾಸ ನೀಡಿತ್ತು. ಪ್ರತಿಷ್ಟಾಳ ರಮ್ಯತೆ ಮಡುಗಟ್ಟಿದ್ದ ಮುದವಾದ ಚೇತೋಹಾರಿ ನೃತ್ಯಾಭಿನಯ ಶ್ಲಾಘನೀಯ.

Related posts

ಉದಯೋನ್ಮುಖ ಉತ್ಸಾಹೀ ಪ್ರತಿಭೆಗಳ ಗೆಜ್ಜೆನಾದ

YK Sandhya Sharma

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

YK Sandhya Sharma

ಮುದಗೊಳಿಸಿದ ವಿಶ್ರುತಿ ಆಚಾರ್ಯಳ ಆಹ್ಲಾದಕರ ಕಥಕ್ ನೃತ್ಯ

YK Sandhya Sharma

2 comments

raghuram October 13, 2019 at 6:23 pm

good effort- go ahead

Reply
YK Sandhya Sharma October 14, 2019 at 1:29 pm

ಅಪಾರ ಧನ್ಯವಾದಗಳು ರಘುರಾಮ್ ಅವರೇ. ಆಗಿಂದ್ದಾಗ್ಗೆ ಪತ್ರಿಕೆ ನೋಡಿ ಸಲಹೆಗಳನ್ನು ಕೊಡಬೇಕಾಗಿ ಕೋರುತ್ತೇನೆ.

Reply

Leave a Comment

This site uses Akismet to reduce spam. Learn how your comment data is processed.