ಬಡಕಲು ಎದೆಯ ಮೇಲೆ ನಿಲ್ಲದ ಸೆರಗು ಜಾರಿ ಜಾರಿ ಕೆಳಗೆ ಬೀಳುತ್ತಿದ್ದುದನ್ನು ಕಂಡು ಬೇಸರಿಸುತ್ತಲೇ ಹನುಮವ್ವ ಸೆಗಣಿ ಮೆತ್ತಿದ ಕೈಯಿನಿಂದಲೇ ಅದನ್ನು ಎದೆಯ ಮೇಲೆಸೆದುಕೊಳ್ಳುತ್ತ ಗೋಡೆಯ ಮೇಲೆ ಬೆರಣಿ ತಟ್ಟುತ್ತ ನಿಂತಿದ್ದಳು. ನಡುನೆತ್ತಿಯ ಮೇಲೆ ಉರಿಕಾರುತ್ತ ಕಟುಕನಂತೆ ಬುರುಡೆ ಕಾಯಿಸುತ್ತಿದ್ದ ಸೂರ್ಯನ ಝಳಕ್ಕೆ ನಿಡುಸುಯ್ದು, ಹಣೆಯ ಇಕ್ಕೆಲದಲ್ಲಿ ಇಳಿಯುತ್ತಿದ್ದ ಬೆವರಕಾಲುವೆಯನ್ನು ಮತ್ತೆ ಸೆಗಣಿ ಬೆರಳುಗಳಿಂದಲೇ ತೀಡಿಕೊಂಡಳು.
ಕಾಲಬುಡದಲ್ಲಿ ನೆರಿಗೆ ಜಗ್ಗುತ್ತ-
`ಅವ್ವಾ, ಹಸಿವಾಯ್ತದೆ…ರೊಟ್ಟಿ ಕೊಡವ್ವ’ ಎಂದು, ಸುರಿಯುತ್ತಿದ್ದ ಸಿಂಬಳವನ್ನು ಅವಳ ಸೀರೆಗೆ ಮೂಗು ತಿಕ್ಕುತ್ತ ಅಳತೊಡಗಿದ ಅವಳ ಕಿರಿಯ ಮಗ ಮೂರುವರ್ಷದ ಯಂಕ್ಟ.
ಅವಳಿಗ್ಯಾಕೋ ತುಂಬಾ ರೇಗಿ ಹೋಯ್ತು- `ಇಕಾ ರೊಟ್ಟಿ, ತಿನ್ನು’ ಎನ್ನುತ್ತ ಪಕ್ಕದಲ್ಲಿ ಪೇರಿಸಿಟ್ಟ ಒಣಗಿದ ಬೆರಣಿಯೊಂದನ್ನೆತ್ತಿ ಅವನ ಬಾಯಿಗೆ ತುರುಕಿದವಳೇ, ಒಮ್ಮೆಲೆ ಉಮ್ಮಳಿಸಿ ಬಂದ ದುಃಖವನ್ನು ತಡೆಯಲಾರದೆ ಸೆರಗನ್ನು ಬಾಯಿಗೆ ತುರುಕಿಕೊಂಡು ಸಣ್ಣಗೆ ಬಿಕ್ಕಿದಳು.
ಸೂರ್ಯ ನೆತ್ತಿಯಿಂದ ಜಾರಿ, ಚುರುಗುಡುತ್ತಿದ್ದ ಹೊಟ್ಟೆ ಕಿಬ್ಬೊಟ್ಟೆಯ ಸುತ್ತ ಕಿವುಚುತ್ತಿತ್ತು. ಒತ್ತಿನ ಗೋಡೆಯ ಅತ್ತ ಕಡೆಯಿದ್ದ ಅಡುಗೆಯ ಕೋಣೆಯಿಂದ ಅಂಬಲಿಯ ಘಮಘಮ ವಾಸನೆ ತೂರಿ ಬರುವ ಬದಲು, ಸುತ್ತಣ ಸೆಗಣಿ, ಗಂಜಲದ ಘಾಟು ನಾಥ ಇಡುಗಿ ಉಸಿರು ಹೊಳ್ಳೆಯೊಳಗೆ ಸಿಕ್ಕಿ ಹಾಕಿಕೊಂಡಿತು. ಬುಡಕ್ಕನೆ ಕೈಲಿದ್ದ ಮಂಕರಿಯನ್ನು ಒದರಿ, ಹಸಿದು ಕಂಗೆಟ್ಟ ಮಗುವನ್ನು ಎದೆಗವುಚಿಕೊಂಡು ಸದ್ದಿಲ್ಲದೆ ಮತ್ತೆ ಬಿಕ್ಕಳಿಸಿದಳು.
ಕಸುವು ಕಳೆದುಕೊಂಡ ತನ್ನ ಕಾಲುಗಳನ್ನೆಳೆಯುತ್ತ ಹಟ್ಟಿಯೊಳಗೆ ಬಂದವಳ ದಿಟ್ಟಿ, ಆರಿಹೋದ , ಬೂದಿ ಮುಕುರಿದ ಒಲೆಯತ್ತ ಹರಿದು ಎದೆಯೊಳಗೆ ಧಗ್ಗನೆ ದುಃಖದ ಉರಿ ಹೊತ್ತಿಕೊಂಡಿತು.
ಅಷ್ಟರಲ್ಲಿ ಹೊರಗಿನಿಂದ ಯಾರೋ ಬೊಬ್ಬೆ ಹೊಡೆಯುವುದು ಕೇಳಿತು. ಹೌದು…ಅದು ನಾಗಿಯ ಕೀರಲುದನಿಯೇ. ಗಾಬರಿಯಿಂದ ಹೊರಗೋಡಿ ಬಂದವಳ ಎದೆಹಾರಿತು.
ಜಗುಲಿಯ ಒರಟು ಚಪ್ಪಡಿಕಲ್ಲಿನ ಬಳಿ ಕುಸಿದವಳೇ ನಾಗಿ- `ಅವ್ವಾ, ಅಪ್ಪಾ ಹೊಲದ ಬೇಲಿ ತಾವ ಮಕಾಡೆ ಬಿದ್ದವ್ನೆ, ಇಸ ಕುಡಿದವನಂತೆ…’ ಎಂದು ಮಾತು ಮುಗಿಸುವಷ್ಟರಲ್ಲಿ ಹನುಮವ್ವ, `ಅಯ್ಯೋ ಕೆಟ್ನಲ್ಲಪ್ಪೋ ಸಿವನೇ’ ಎಂದು ಕಂಕುಳ ಮಗೀನ ಸಮೇತ ಬೀದಿಗುಂಟ ಓಡಿದಳು.
ಅರ್ಧಗಂಟೆಯಲ್ಲಿ ಹಳ್ಳಿಯ ಉದ್ದಗಲಕ್ಕೂ ರಾಮಪ್ಪನ ಸಾವಿನ ಸುದ್ದಿ ಬಿರುಗಾಳಿಯಂತೆ ಹರಡಿ ಹೊಲದ ಹುಣಸೇಮರದ ಬಳಿ ಜನ ಜಮಾಯಿಸತೊಡಗಿದರು. ಹನುಮವ್ವ ದಿಕ್ಕುತೋಚದೆ, ಹಣೆ ಹಣೆ ಚಚ್ಚಿಕೊಳ್ಳುತ್ತ ರೋಧಿಸತೊಡಗಿದಳು.
ರಾಮಪ್ಪ ಮಾಡಿದ ಒಂದು ಲಕ್ಷ ರೂಪಾಯಿಗಳ ಸಾಲ ತೀರಿಸಲಾರದೆ, ಹುಳು ಹೊಡೆಯೋ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಾಲ್ಲೂಕಿನ ಹೆಡ್‍ಕ್ವಾಟರ್ಸ್ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯನ್ನೂ ತಲುಪಲು ತಡವಾಗಲಿಲ್ಲ. ಇದು ಈ ಹಳ್ಳಿಯ ಐದನೇ ರೈತನ ಸಾವು.!!… ಆದರೆ ಇದುವರೆಗೂ ಒಂದು ನರಪಿಳ್ಳೆಯೂ ಮಗ್ಗುಲ ಜಿಲ್ಲೆಯಿಂದಿರಲಿ ಉಳಿದ್ಯಾವ ತಾಲೂಕಾ ಸ್ಥಳಗಳಿಂದಲೂ ಅಧಿಕಾರಿಗಲಾಗಲಿ , ರಾಜಕಾರಣಿಗಲಾಗಲಿ ಯಾವೊಬ್ಬನೂ ಇತ್ತ ತಲೆಹಾಕಿರಲಿಲ್ಲ. ಅನಾಮತ್ತು ಐದು ಸಂಸಾರಗಳು ಅನಾಥವಾಗಿ ಬೀದಿಗೆ ಬಂದಿದ್ದರೂ ಜಿಲ್ಲಾಧಿಕಾರಿಗಳ ಕಛೇರಿಯವರಾಗಲಿ, ಸರ್ಕಾರವಾಗಲಿ ಕಮಕ್ ಕಿಮಕ್ ಎಂದಿರಲಿಲ್ಲ.
ಆದರೆ….ಅದೇನು ಈ ಸಲ ರಾಮಪ್ಪನ ಅದೃಷ್ಟವೋ, ಈ ಗ್ರಾಮದ ನಸೀಬೋ, ಗ್ರಾಮಪಂಚಾಯ್ತಿ ಅಧ್ಯಕ್ಷರಿಂದ ಹಿಡಿದು ಹಳ್ಳಿಯ ಸಾಹುಕಾರ ಶಂಕರೇಗೌಡರವರೆಗೂ ಆ ತತ್‍ಕ್ಷಣ ಎಲ್ಲರೂ ಅವನು ಆತ್ಮಹತ್ಯೆ ಮಾಡಿಕೊಂಡ ಸ್ಪಾಟಿಗೆ ದುಬುದುಬು ಬಂದಿಳಿದಿದ್ದರು. ಹಿಂದೆಯೇ ಜಿಲ್ಲಾ ಪರಿಷತ್ತಿನ ಅಧ್ಯಕ್ಷರ ಸವಾರಿಯೂ. ಅವರ ಹಿಂದೆ ದೊಡ್ಡ ದಂಡು. ಕಡಮೆಯೆಂದರೂ ಹೆಣ ಬಿದ್ದಿದ್ದ ಹೊಲದ ದಾರಿಗುಂಟ ಏಳೆಂಟು ಕಾರುಗಳು ಉದ್ದೋ ಉದ್ದಕ್ಕೆ ನಿಂತಿದ್ದವು.
ಹನುಮವ್ವ ಮತ್ತು ಮಕ್ಕಳು ಅಳುವುದನ್ನೂ ಮರೆತು ಗರಬಡಿದು ನೆರೆದಿದ್ದ ದೊಡ್ಡ ಮನುಷ್ಯರನ್ನು ಕಕ್ಕಾಬಿಕ್ಕಿ ದಿಟ್ಟಿಸುತ್ತ ಕುಕ್ಕುರುಗಾಲಲ್ಲಿ ಕುಂತಿದ್ದರು.
ಹೊತ್ತು ಕಂತುತ್ತ ಬಂದಿತ್ತು. ಜೆಡ್.ಪಿ. ಪ್ರೆಸಿಡೆಂಟರ ಮೊಬೈಲ್ ರಿಂಗಣಿಸುತ್ತಲೇ ಇತ್ತು.
`ಎಸ್ ಸಾ…ಪಾಯಸನ್ ಕುಡಿದು ಸೂಯಿಸೈಡು….ಸಾಲ…ರೈತನ ಆತ್ಮಹತ್ಯೆ’ -ಮೆಸೆಜ್ ಎಲ್ಲಕಡೆ ಬಳಬಳನೆ ಹರಿದಾಡಿದವು. ಗಂಟೆ ಕಳೆಯುವುದರಲ್ಲಿ ಆ ಜಮೀನಿನಲ್ಲಿ ಯಾರ್ಯಾರೋ ತುಂಬಿಹೋಗಿದ್ದರು. ದೊಡ್ಡ ಜನಜಂಗುಳಿ!!..ಎಲ್ಲರೂ ಅವರವರಲ್ಲೇ ಗುಸುಪಿಸು, ಮಾತುಕತೆಯಲ್ಲಿ ಬಿಜಿಯೋ ಬಿಜಿ. ಇಡೀ ವಾತಾವರಣವನ್ನು ಮೊಬೈಲ್ ಕರೆಗಳ ಟಿಣಿ ಟಿಣಿ ಸದ್ದು ಆವರಿಸಿತು. ಯಾರೊಬ್ಬರೂ ಹನುಮವ್ವಳ ಕಡೆ ಹಣಕೂ ಹಾಕಲಿಲ್ಲ. ಜೊತೆಗೆ ಆ ಜಾಗವನ್ನು ಪೋಲಿಸಿನವರು ಸುತ್ತುವರಿದರು.
`ಹೂಂ…ಎಲ್ಲ ದೂರ ಸರೀರಿ’ ಎಂದು ಗರ್ಜಿಸುತ್ತ ನೆರೆದ ಹಳ್ಳಿಗರನ್ನು ದೂರಕ್ಕೆ ಅಟ್ಟತೊಡಗಿದರು. ಹನುಮವ್ವ ಗಂಡನ ಶವದ ಮೇಲೆ ಬಿದ್ದು ಭೋರೆಂದು ಅಳತೊಡಗಿದಾಗ-`ಷು ಷ್….ಷು …ಸುಮ್ಕಿರವ್ವ…ಮಿನಿಸ್ಟ್ರು ಬರ್ತಾವ್ರೇ…ಗಲಾಟೆ ಮಾಡಬೇಡ’ ಎಂದು ಯಾರೋ ಗದರಿದರು.
ಹನುಮವ್ವ ಬೆಪ್ಪಾಗಿ ಕುಂತಳು ಅಳುವುದನ್ನೂ ಮರೆತು. ಮುಂದೆ ನಡೆದದ್ದೆಲ್ಲ ನಾಟಕದ ಅಂಕದಂತೆಯೇ ಸಿನ್ ಬೈ ಸೀನ್ ಸಾಗಿತು.
ಪೋಲಿಸ್ ಮಹಜರ್ ಮುಗಿದೊಡನೆ ಹೊಲದೊಳಗೇ ನುಗ್ಗಿಬಂತು ದೊಡ್ಡದೊಂದು ಬಿಳಿಯ ಆಂಬುಲೆನ್ಸ್. ಅನಾಮತ್ತು ಇಬ್ಬರು ಸಮವಸ್ತ್ರಧಾರಿಗಳು ಹೆಣವನ್ನೆತ್ತಿ ಸ್ಟ್ರೆಚರ್ ಮೇಲೆ ಎಳೆದು ಮಲಗಿಸಿ ವಾಹನದೊಳಗೆ ಎಳೆದುಕೊಂಡಾಗ , ಹನುಮವ್ವ ಗಾಬರಿಯಾಗಿ ಅದರ ಹಿಂದೆಯೇ ಧಾವಿಸಿ ನುಗ್ಗಿ- ` ಯಪ್ಪೋ..ಎತ್ಲಾಗ್ ತಗೊಂಡೋಯ್ತಿದ್ದೀರಪ್ಪ ನನ್ ಗಂಡನ್ನ’ ಎಂದವಳ ಕುಸಿಗೊರಲು ನಡುಗುತ್ತಿತ್ತು. ಕಣ್ಣಲ್ಲಿ ಅವ್ಯಾಹತ ಬಳಬಳ ನೀರು. ಮಕ್ಕಳಿಬ್ಬರು ಹೆದರಿ ಅವಳನ್ನವುಸಿ ಹಿಡಿದಿದ್ದವು. ವಾಹನದ ಬಾಗಿಲು ಮುಚ್ಚದಂತೆ ಅವಳ ಕೈ ಹಿಡಿಕೆಯನ್ನು ಗಟ್ಟಿಯಾಗಿ ಹಿಡಿದದುಕೊಂಡಿದ್ದವು.
`ಏಯ್ ಸರಿಯಮ್ಮ ಅತ್ತ…ಬಾಡಿ ಪೋಸ್ಟ್ ಮಾರ್ಟಂ ಆಗ್ಬೇಕು’ ಎಂದೊಬ್ಬ ಅವಳನ್ನು ಹಿಂದೆ ದಬ್ಬಿದ ಅವಳು ಕೆಳಗೆ ಬೀಳುವುದನ್ನೂ ಲೆಕ್ಕಿಸದೆ. ಹನುಮವ್ವಳ ಗೊಳೋ ಎಂಬ ಕರುಳಿರಿವ ಕೂಗು ಬಹು ದೂರದವರೆಗೂ ಆಂಬುಲೆನ್ಸನ್ನು ಅಟ್ಟಿಸಿಕೊಂಡು ಹೋಯಿತು.
ನೆರೆದ ಜನವೆಲ್ಲ ಮೆಲ್ಲನೆ ಕರಗತೊಡಗಿತು. ಆಚೀಚೆಯ ಹಟ್ಟಿಯವರು ಕುಸಿದು ಕೂತ ಹನುಮವ್ವನಿಗೆ ಸಮಾಧಾನ ಹೇಳುತ್ತ ಮೆಲ್ಲನೆ ಅಲ್ಲಿಂದ ಕದಲಿದರು. ಸುತ್ತ ಬಿಕೋ ಎನ್ನುತ್ತಿತ್ತು. ಹನುಮವ್ವ , ಕೂತಲ್ಲೇ ಶಿಲೆಯಾಗಿ ಹೋಗಿದ್ದಳು. ಅವಳು ಕನಸು ಮನಸಿನಲ್ಲೂ ನೆನೆಸದ ಈ ಕೆಟ್ಟಘಟನೆ ನಡೆದುಹೋಗಿತ್ತು. ಇಲ್ಲ..ಎಂದೂ ಇಲ್ಲ…ಒಮ್ಮೆಯೂ ರಾಮಪ್ಪ ಅವಳ ಬಳಿ ಸಾವಿನ ಮಾತನ್ನು ಆಡಿರಲಿಲ್ಲ. ಇದ್ದೊಂದು ಎಕರೆ ಹೊಲವನ್ನು ತಂಗಿಯ ಮದುವೆಗಾಗಿ ಅಡವಿಟ್ಟು ಕಷ್ಟಪಟ್ಟು ಸಾಲ ತಂದಿದ್ದ. ಗಂಟಲೊಣಗಿದ ಭೂತಾಯಿ ಸತತ ಮೂರುವರ್ಷಗಳಿಂದ ಗುಟುಕು ನೀರುಗಾಣದೆ ಚಕ್ಕಳ ಮೈ ಬಿಟ್ಟುಕೊಂಡು ನಿರ್ಜೀವವಾಗಿ ಬಿದ್ದಿದ್ದನ್ನು ನೋಡಲಾರದೆ ಬೋರ್ ವೆಲ್ ಹಾಕಿಸುತ್ತೇನೆಂದು ಮತ್ತೆ ಸಾಲಗಾರನಾಗಿದ್ದ. ಕೊರೆದ ಕೊಳವೆ ಬಾವಿ ಬರೀ ಒಣಮಣ್ಣು ಉಗುಳಿತ್ತು. ಹನಿ ನೀರಿರಲಿ, ಮಣ್ಣಿಗಂಟಿದ ನೀರ ಪಸೆಯೂ ಕಾಣಲಿಲ್ಲ. ಸುತ್ತ ಹರಡಿಕೊಂಡ ಕೆಂಧೂಳ ಚಿಲುಮೆ..!!..ಬಾಣಂತಿಯಂತೆ ಬಿಳಿಚಿಕೊಂಡಿದ್ದ ಆಕಾಶವನ್ನು ಒಂದೇಸವನೆ ದಿನವಿಡೀ ದಿಟ್ಟಿಸುತ್ತ ಕುಂತು ಹತಾಶನಾದವನ ತಲೆಯಲ್ಲದೇನು ಬಂತೋ…ರಾತ್ರಿ ಹಿಟ್ಟೂ ಉಣ್ಣದೆ, ತುಂಬ ಸೆಖೆಯಾಯ್ತದೆ, ಹೊಲದಲ್ಲೇ ಮನಗ್ತೀನಿ ಎಂದು ಲಗುಬಗು ಮನೆಯಾಚೆ ಕಾಲು ಕಿತ್ತವನು ಹೆಂಡತಿಗೆ ವಿದಾಯವನ್ನೂ ಹೇಳದೆ, ಕಡೆಯ ಬಾರಿ ಮಕ್ಕಳನ್ನು ಎತ್ತಿ ಮುದ್ದಿಸದೆ ತನ್ನ ಹೃದಯವನ್ನು ಕಲ್ಲು ಮಾಡಿಕೊಂಡು ಹೋಗೇಹೋದ. ಸಾಲದ ಗಾಳದಿಂದ ನುಣುಚಿಕೊಳ್ಳಲು ಸಾವಿಗೆ ಶರಣಾಗಿಬಿಟ್ಟಿದ್ದ ರಾಮಪ್ಪ!!.
ಮುಚ್ಚಂಜೆ ಕಳೆದು ಇನ್ನೇನು ಕತ್ತಲು ಬೋರಲಾಗುವ ಹೊತ್ತಲ್ಲಿ ಯಾರೋ-` ಇಕಾ, ಪಾಪ ಮಕ್ಕಳ್ಗೆ ಉಣಿಸು’ ಎಂದು ಅವಳ ಮಗ್ಗುಲಲ್ಲಿ ಕುಡಿಕೆಯೊಂದರ ತುಂಬ ರಾಗಿ ಗಂಜಿಯನ್ನು ಇರಿಸಿ ಜೊತೆಗೊಂದಿಷ್ಟು ಕರುಣೆಯ ಮಾತನ್ನು ಸಿಂಪಡಿಸಿ ಮರೆಯಾದರು. ಅದುವರೆಗೂ ಮಣ್ಣ ಆ ಓಣಿಯಲ್ಲಿ ಅವಳ ಜೊತೆ ಶಾನೆ ಹೊತ್ತು ಕುಂತವರು ಕೂಡ ಲೊಚಗುಡುತ್ತ ಜಾಗ ಖಾಲಿಮಾಡಿದರು. ಹನುಮವ್ವನಿಗೆ ದಿಕ್ಕೇ ತೋಚದಂತಾಗಿತ್ತು. ಕಣ್ಣಲ್ಲಿ ನೀರ ಕೋಡಿ. ಗಂಟಲ ಪಸೆಯಾರಿತ್ತು. ಅವಳು ಸಣ್ಣದಾಗಿ ಗಂಟಲಲ್ಲೇ ಬಿಕ್ಕುತ್ತಿದ್ದ ಸದ್ದು ಓಣಿಯ ಉದ್ದಗಲಕ್ಕೂ ಮಾರ್ದನಿಸಿತು. ಮಗ್ಗುಲಲ್ಲಿ ಮಕ್ಕಳು ಹಾಗೆ ಕುಸುಗುಡುತ್ತ ಕಣ್ಣುಮುಚ್ಚಿ ತೂಕಡಿಸುವುದರಲ್ಲಿ ರಾತ್ರಿ ಕಂತು ಬೆಳಗಾಗಿ ಹೋಯಿತು.
ಸೂರ್ಯ ತನ್ನ ನಿದ್ದೆಗಣ್ಣ ಹೊಸಕಿ ಏಳುವಷ್ಟರಲ್ಲಿಯೇ ಓಣಿಯುದ್ದಕ್ಕೂ ದಡ ಬಡ ಓಡಾಟದ ಸದ್ದು…ಇದ್ದಕ್ಕಿದ್ದ ಹಾಗೆ ಓಣಿ ಉದ್ದಗಲ ಜನರ ಓಡಾಟದ ಭರಾಟೆ. ಸ್ವಲ್ಪ ಹೊತ್ತಿನಲ್ಲೇ ಧಡಬಡ ಸದ್ದು ಮಾಡುತ್ತ , ಅಲ್ಲಲ್ಲಿ ಬಿಳಿಯ ಬಣ್ಣ ಕೆತ್ತಿಹೋದ ನೆಗ್ಗಿದ ಆಂಬುಲೆನ್ಸ್ ವಾಹನ ಹಟ್ಟಿಯ ಮುಂದೆ ಬಂದು ನಿಂತಿತು. ಧುಡುಮ್ಮನೆ ಅದರಿಂದ ಜಿಗಿದ ಇಬ್ಬರು ಬಾಗಿಲು ತೆರೆದು ಅದರೊಳಗೆ ದೊಡ್ಡ ಗಾಜಿನ ಡಬ್ಬದೊಳಗೆ ಮಲಗಿದ್ದ ರಾಮಪ್ಪನನ್ನು ಕೆಳಗಿಳಿಸಿ, ಬಾಗಿಲ ಮುಂದಿನ ಮುರುಕು ಚಪ್ಪಡಿ ಕಲ್ಲಿನ ಮೇಲೆ ತಂದಿಳಿಸಿದರು.
ಹನುಮವ್ವನ ಜೀವವೇ ಬಾಯಿಗೆ ಬಂದಂತಾಗಿ ಅವಳು ಗಾಬರಿಯಿಂದ ದಡಬಡಿಸಿ ಮೇಲೆದ್ದಳು. ಎದೆ ಒಂದೇ ಸಮನೆ ಜಾಗಟೆಯಾಗಿತ್ತು. ಒಳಗೆ ಸಿಕ್ಕಿಹಾಕಿಕೊಂಡಿದ್ದ ಬಿಕ್ಕಳಿಕೆ ಸಶಬ್ದವಾಗಿ ಹೊರಗೆ ಮುಗ್ಗರಿಸಿತು.
`ಅಯ್ಯೋ ಸಿವನೇ…ಇನ್ನೆಂಗಪ್ಪ ನಮ್ಗತಿ..!’
-ಎನ್ನುತ್ತ ಅವಳು ಉಮ್ಮಳಿಸಿ ಬಂದ ದುಃಖದಿಂದ ಗಂಡನ ಮುಖ ನೋಡಲು ಆತುರದಿಂದ ಮುಂಬಾಗಿದಳು. ಗಾಜಿನಡಬ್ಬದ ಮೇಲಿನ ಹಾಳೆ ಹಣೆಗೆ ಬಡಿಯಿತು.` ಹ್ಞಾ…’ ಎಂದು ಹಣೆಯನ್ನು ಉಜ್ಜಿಕೊಳ್ಳುತ್ತಾ ಡಬ್ಬದೊಳಗೆ ಹಣಕಿ ನೋಡಿದಳು. ಗಂಡನ ಮುಖ ಮಾತ್ರ ಕಂಡಿತು. ಕುತ್ತಿಗೆಯ ಕೆಳಗೆ ಉದ್ದಕ್ಕೆ ಬಿಳಿ ಬಟ್ಟೆಯ ಸುರುಳಿ. ಹೌಹಾರಿದಳು.!!…ಗುರುತೇ ಸಿಗದಂಥ ಸ್ಥಿತಿಯಲ್ಲಿ ಕಣ್ಮುಚ್ಚಿ ಮಲಗಿದ್ದ ಗಂಡ… ಕರುಳಿರಿದಂತಾಯಿತು. ಮನಸೋ ಇಚ್ಛೆ ಅವಳು, ಅಳಲು ಆಸ್ಪದವಿಲ್ಲದಂತೆ, ಗೌಡನ ಚೇಲಾಗಳು ನುಗ್ಗಿಬಂದವರೆ , `ದಾರಿ ದಾರಿ….ಮಿನಿಸ್ಟ್ರು ಬತ್ತಾವ್ರೇ..’ ಎಂದು ಅವಳನ್ನು ಪಕ್ಕಕ್ಕೆ ದೂಡಿದರು.
ಐಷಾರಾಮಿ ಕಾರಿನಿಂದಿಳಿದ ಕೊಕ್ಕರೆ ಬಿಳುಪಿನ ಪಂಚೆ, ಜುಬ್ಬಾ ಧರಿಸಿದ್ದ ಕಪ್ಪು ಕನ್ನಡಕಧಾರಿ, ಹೆಣವನ್ನು ಸರಿಯಾಗಿ ನೋಡುವ ಗೋಜಿಗೆ ಹೋಗದೆ, ಮೇಲ್ಜೋಬಿನಿಂದ ಮೊಬೈಲ್ ತೆಗೆದು -`ಅಲೋ…ಮೇಡಂ ಅವ್ರಾ?….ಮಿನಿಟ್ರು ಮಾತಾಡ್ತೀವ್ನಿ…ಎಣದ ಪಿಎಮ್ಮು, ಬಾಮ್ಮು ಎಲ್ಲಾ ಆಗೈತೆ,…ಬಿರ್ನೆ ಬರ್ಬೇಕು, ಸಂದರ್ಭ ಒಸಿ ಸೂಕ್ಸ್ಮವಾಗೈತೆ….’ ಎನ್ನುತ್ತ ಅಕ್ಕಪಕ್ಕ ತಿರುಗಿ ನೋಡುತ್ತಾ, `ಎಲ್ಲಿ ತತಾರ್ಲಾ’ ಎಂದು ಮಗ್ಗುಲಲ್ಲಿ ನಿಂತವನ ಕಂಕುಳು ತಿವಿದ. ಕೈಗೆ ಬಂದ ಹೂಗುಚ್ಛವನ್ನು ಗ್ಲಾಸ್‍ಬಾಕ್ಸ್ ಮೇಲಿರಿಸುತ್ತ, ಪಕ್ಕದಲ್ಲಿದ್ದವನ ಕಿವಿಯಲ್ಲೇನೋ ಉಸುರಲು ಹೋಗಿ ಹಿಂದೆ ನಿಂತವರನ್ನು ಗಮನಿಸಿ ಮುಖವರಳಿಸಿ, ಅಷ್ಟೇಬೇಗ ಮುಖವನ್ನು ಬಾಡಿಸಿ, ಕರ್ಚೀಪನ್ನು ಕಣ್ಣಿಗೊತ್ತಿಕೊಂಡು ಟಿವಿ ಕ್ಯಾಮರಾಗಳಿಗೆ ಪೋಸುಕೊಟ್ಟರು.
ಕಳೆದ ಬಾರಿ ಚುನಾವಣೆಯಲ್ಲಿ ಸೋತು, ಈದೀಗ ಬರುತ್ತಿರುವ `ಬೈ ಎಲೆಕ್ಷನ್ ‘ಗೆ ಕುದುರಿಕೊಂಡಿದ್ದ ತಿಮ್ಮಪ್ಪ, ತನ್ನ ಶಿಷ್ಯರ ಪಡೆಯೊಂದಿಗೆ ತರಾತುರಿಯಲ್ಲಿ ಬರುತ್ತ, `ಎಲ್ಲಿ ಆಯಮ್ಮಾ?’ ಎನ್ನುತ್ತ ಹಡಗಿನಂಥ ತನ್ನ ಧಡೂತಿ ಶರೀರವನ್ನು ತೂಗಾಡಿಸಿ, ಆಚೀಚೆ ನೋಡಿ, ಜಗುಲೀಕಟ್ಟೆಯ ಮೇಲೆ ಮುದುರಿಕುಂತಿದ್ದ ಹನುಮವ್ವಳ ಸಮೀಪಕ್ಕೆ ಹೋಗಿ ಬಾಗಿ ನಿಂತು , ಮುಖದಲ್ಲಿ ದುಃಖ ಹನಿಸಿಕೊಂಡು, `ಪಾಪ…ರಾಮಪ್ಪ ಹಸಾನಂಥ ಮನುಷ್ಯ…ಸಿವನೇ ಇಂಗ್ಯಾಕ್ ಮಾಡ್ಕೊಂಡ್ನೋ, ನಿನ್ನೀ ಪುಟ್‍ಮಕ್ಕಳ ಮುಖಗೋಳ್ನ ನೋಡ್ತಿದ್ರೆ ಕಳ್ಳು ಕಿವುಚ್‍ದಂಗಾಯ್ತದೆ, ..ಏನ್ಮಾಡೋದು..ನೀನೇನೂ ಏಸ್ನೆ ಮಾಡಬೇಡವ್ವ, ನಾವಿದ್ದೀವಿ’ ಅಂತ ಸಮಾಧಾನ ಮಾತುಗಳನ್ನು ಗಟ್ಟು ಹೊಡೆದಂತೆ ಬಡಬಡನೆ ಒದರಿ, ಪಕ್ಕಕ್ಕೆ ತಿರುಗಿ ` ಲೇ ಸಿದ್ಧ , ಈ ಮಕ್ಕಳ ಒಟ್ಟೆಗೇನಾರ ರವಷ್ಟು ವ್ಯವಸ್ಥೆ ಮಾಡ್ರಲಾ’ ಎನ್ನುತ್ತ ರಾಮಪ್ಪನ ಪಾರ್ಥಿವ ಶರೀರದ ಮೇಲೆ ದೊಡ್ಡ ಗುಲಾಬಿಹಾರವಿಟ್ಟು, ಬಂದಷ್ಟೇ ತರಾತುರಿಯಿಂದ ನಿರ್ಗಮಿಸಿದ.
ಸ್ವಲ್ಪವೇ ಹೊತ್ತಿನಲ್ಲಿ ಖಾದಿ ಸೀರೆಯುಟ್ಟ ವಿಜಯಕುಮಾರಿ, ಹನುಮವ್ವಳನ್ನು ಹುಡುಕಿಕೊಂಡು ಸೀದಾ ಅಲ್ಲಿಗೆ ಅವಳ ಬೆನ್ನಸುತ್ತ ಕೈಬಳಸಿ, ಕಣ್ಣಲ್ಲೇ ಸಾಂತ್ವನ ಹೇಳಲು ಮುಂದಕ್ಕೆ ಬಾಗಿದವಳು, ಸೆಗಣಿಯ ವಾಸನೆಗೆ ತಟ್ಟನೆ ಮುಖ ಕಿವುಚಿದಳು.ತತಕ್ಷಣ ಸುತ್ತ ನಿಂತವರನ್ನು ಗಮನಿಸಿ, ಮುಖವನ್ನು ಸಮಸ್ಥಿತಿಗೆ ತಂದುಕೊಂಡು ` ಅಳಬೇಡಮ್ಮ, ನೀವು ಅನಾಥರಾಗಲು ನಾ ಬಿಡೋದಿಲ್ಲ, ಸರ್ಕಾರದ ಕಡೆಯಿಂದ ನಿಂಗೆ ಕೆಲಸ ಕೊಡಿಸ್ತೀನಿ’ ಎಂದು ಭರವಸೆಯಿತ್ತಳು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸರ್ಕಾರದಲ್ಲಿ ಮಂತ್ರಿ ಪದವಿ ಗಳಿಸಿದ್ದ ಗೋವಿಂದಯ್ಯ ನೆಟ್ಟಗೆ ಆರುತಿಂಗಳೂ ಅಧಿಕಾರ ಅನುಭವಿಸದೆ ಶಿವನ ಪಾದ ಸೇರಿಕೊಂಡಿದ್ದ. ಅವನ ಮಗಳು ಈ ವಿಜಯಕುಮಾರಿಗೆ ಈಗ `ಬೈ ಎಲೆಕ್ಷನ್’ನಲ್ಲಿ ಟಿಕೇಟು ಸಿಕ್ಕಿತ್ತು.
ಹನುಮವ್ವನಿಗೆ ಯಾರ ಪರಿವೆಯೂ ಇರಲಿಲ್ಲ. ಮನಸ್ಸು ಕೊತಕೊತ ಕುದಿಯುತ್ತಿತ್ತು. ದುಃಖ ಒಳಗೇ ಕಡೆ ಯುತ್ತಿತ್ತು. ಮನೆಯ ಮುಂಭಾಗಕ್ಕೆ ಸರಿಯಾಗಿ ಎದುರಿಗಿಟ್ಟಿದ್ದ ಗಾಜಿನಡಬ್ಬದ ಮೇಲೆ ನೋಡುನೋಡುತ್ತಿದ್ದ ಹಾಗೆ ಹೂವಿನ ದೊಡ್ಡ ಬಣವೆಯೇ ಎದ್ದಿತ್ತು. ಕ್ಯಾಮರಾ ಕಣ್ಣುಗಳು ಪಟಪಟನೆ ಕಣ್ಣುಹೊಡೆಯುತ್ತಿದ್ದವು…ನಗರದಿಂದ ಬರುತ್ತಿದ್ದ ಮಂದಿಯ ಭರಾಟೆಯಲ್ಲಿ ಗ್ರಾಮಸ್ಥರೆಲ್ಲೋ ದೂರದಲ್ಲಿ ಮರೆಯಲ್ಲಿ ನಿಂತಿದ್ದರು. ಯಾರಿಗೂ ಬಂದವರ ಪರಿಚಯವಿರಲಿಲ್ಲ. ಎಂದೂ ವಾಹನಗಳು ಓಡಾಡದ ಆ ಮಣ್ಣ ಬೀದಿ, ರಾಜಕಾರಣಿಗಳ ವಾಹನಗಳ ಘಾತದಿಂದ ಮೈ ಕೊಡವಿಕೊಂಡಿತ್ತು. ಪಾದಚಾರಿಗಳ ಓಡಾಟ ಬೇರೆ. ನೆಲದ ಮಣ್ಣ ಧೂಳು ಆಗಸದವರೆಗೂ ಉದ್ದೋ ಉದ್ದಕ್ಕೆ ಪರದೆ ಹರವಿತ್ತು.
ಶಿಲೆಯಾಗಿ ಮೂಲೆಗೆ ಒತ್ತರಿಸಿ ಕುಂತಿದ್ದಳು ಹನುಮವ್ವ. ಕಣ್ಣುಗಳಲ್ಲಿ ವಿಸ್ಮಯ ಕೆನೆಗಟ್ಟಿತ್ತು. ಎದುರಿಗೆ ಬಿಚ್ಚಿಕೊಂಡಿದ್ದ ನಾಟಕದ ದೃಶ್ಯಗಳ್ಯಾವುವೂ ಅವಳ ಮಡ್ಡಿ ತಲೆಗೆ ಅರ್ಥವಾಗಲಿಲ್ಲ. ಒಂದು-ಎರಡು-ಮೂರು ದಿನಗಳು ಕಳೆದರೂ ಮನೆಯ ಮುಂದೆ ಹೂ ಪಲ್ಲಕ್ಕಿಯಂತೆ ದಿವಿನಾಗಿ ಮೈಯೂರಿದ್ದ ಗಾಜಿನ ಡಬ್ಬಿ ಕದಲಲಿಲ್ಲ. ಹಳ್ಳಿಗೌಡರ ಹಿಂಬಾಲಕರು ಯಾರ ಹುಕುಂಗಾಗಿ ಕಾದಿದ್ದರೋ ಏನೋ?!.. ಯಾರಿಗೂ ತಿಳಿಯಲಿಲ್ಲ.
ಹನುಮಕ್ಕ ಅಸಹಾಯಕ ಮೂಕಪ್ರೇಕ್ಷಕಳಾಗಿದ್ದಳು. ಗಂಡನ ಹೆಣ ಕೊಳೆಯುವ ಆತಂಕ ಅವಳನ್ನು ಕೊರೆಯುತ್ತಿತ್ತು. ಅವಳ ತುಟಿಗಳು ತೇವವಿಲ್ಲದೆ ಮೆತ್ತಿಕೊಂಡಿದ್ದರೆ, ಗಂಟಲು ಶಬುದವಿಲ್ಲದೆ ಸ್ತಬ್ಧವಾಗಿತ್ತು.
ಇದ್ದಕ್ಕಿದ್ದ ಹಾಗೆ ಹಳ್ಳಿಯ ಹೊರಭಾಗದಲ್ಲಿ ಕಲರವ ಗುಂಗೆದ್ದಿತು . ಯಾರ ಆಗಮನವೋ….ಇಡೀ ಹಳ್ಳಿಗೆ ಹಳ್ಳಿಯೇ ಮದುಮಗಳಂತೆ ಸಿಂಗರಗೊಂಡಿತ್ತು. ಉಬ್ಬು ತಗ್ಗು, ಕುಣಿಗಳಿಂದ ಗಾಯಗೊಂಡಿದ್ದ ರಸ್ತೆಗೆ ಮುಲಾಮು ಸವರಿದಂತೆ ನುಣ್ಣನೆಯ ಡಾಂಬರು. ಆ ಗ್ರಾಮದಲ್ಲಿ ಬಂದವರು ತಂಗಲು ಪ್ರವಾಸಿಮಂದಿರ ಇರಲಿಲ್ಲವಾದ್ದರಿಂದ ಬರುವ ಅತಿಥಿಯ ಮೊಕ್ಕಂಗಾಗಿ ಗೌಡರ ಹದಿನಾರಂಕಣದ ಮನೆ ರೆಡಿಯಾಯಿತು. ಕೂಡಲೇ ಲೋಕೋಪಯೋಗಿ ಇಲಾಖೆಯವರು ಖರ್ಚುವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳದೆ ಧಾರಾಳವಾಗಿ ವ್ಯಯಿಸಿ ಅವರ ಮನೆಯನ್ನು ಐಷಾರಾಮಿಯಾಗಿ ಸಜ್ಜುಗೊಳಿಸಿದರು. ಎಲ್ಲವೂ ತರಾತುರಿಯಲ್ಲಿ ಫಟಾಫಟ್ ನಿರ್ಮಿಸಬೇಕಾಗಿ ಬಂದುದರಿಂದ , ಸರಕಾರದ ಹಣಕಾಸು ವಿಭಾಗದ ಯಾವ ಕೊಕ್ಕುಗಳೂ ಕುಟುಕಲು ಹೋಗಲಿಲ್ಲ. ಕಡೆಗೂ ಆಗಮಿಸಿದ ವಿಶೇಷ ಅತಿಥಿಯ ಬರೋಣವಾಗಿ, ಸುತ್ತ ರಾಜಕಾರಣಿ- ಕಾರ್ಯಕರ್ತರ ಭದ್ರಕೋಟೆಯೊಳಗೆ ಅವರು ಸತ್ತ ರೈತನ ದರ್ಶನ ಪಡೆಯುವ ಶಾಸ್ತ್ರವೂ ನೆರವೇರಿತು.
`ಎಂಗೂ ನೀವು ಬಂದಿದ್ದೀರ, ನಮ್ಮವರೆಲ್ಲ ಸೇರವ್ರೇ, ಅಂಗೆ ಒಂದು ಮೀಟಿಂಗು ಮಾಡೋವಾಂತ…..’ ಎಂದು ಪಕ್ಷದ ಅಧ್ಯಕ್ಷ ಅವರಿಗೆ ನಿವೇದಿಸಿದ. ಬಂದ ವಿಶೇಷ ಅತಿಥಿ, ಶವದಮೇಲೆ ಹೂಗುಚ್ಛವಿಟ್ಟು ಬಂದ ಕೆಲಸ ಮುಗಿಸಿ ಹಿಂತಿರುಗಿದವರು, ಟಿವಿಯವರ ಬೇಡಿಕೆಗಾಗಿ ಮತ್ತೊಮ್ಮೆ ಹೂವುಗಳನ್ನು ಇಡುವ ಆಕ್ಷನ್ ಕಟ್ ಹೇಳಲಾಯಿತು. ಆನಂತರ ಆತ, ನೆನೆಪಿಸಿಕೊಂಡಂತೆ ಆಚೀಚೆ ಗೋಣಾಡಿಸಿ, ಪೆಚ್ಚಾಗಿ ಕುಂತಿದ್ದ ಹನುಮಕ್ಕನ ಬಳಿಸಾಗಿ ತುಟಿ ಬಿರಿ ಯದೆ, ಕೆನ್ನೆಯಲ್ಲಿ ಗುಳಿಮೂಡಿಸಿ, ಅವಳ ಬೆನ್ನಮೇಲೆ ಕೈಯಿರಿಸಿ ಸಾಂತ್ವನ ಹೇಳಿದರು ನಿರ್ಭಾವುಕ ಸ್ವರದಲ್ಲಿ. ಪಕ್ಕದಲ್ಲಿದ್ದ ಯಾರೋ ಮುಂಚಾಚಿದ ಐದುಲಕ್ಷ ರೂಗಳ ಚೆಕ್ಕನ್ನು ಇಸ್ಕೊಂಡು ಅವಳ ಕೈಯಲ್ಲಿರಿಸಿ, ಬಂದ ಲಹರಿಯಲ್ಲಿಯೇ ಮಾಯವಾದರು .
ಹನುಮಕ್ಕನ ಕೈ ಮರಗಟ್ಟಿತ್ತು. ಕಣ್ಣುಗಳು ಚೆಕ್ಕನ್ನು ಮಿಕಮಿಕ ದಿಟ್ಟಿಸಿದವು.
`ಒಂದಲ್ಲ, ಎರಡಲ್ಲ, ಐದು ಲಕ್ಷ ರೂಪಾಯಿ ಕಣಮ್ಮ, ಭದ್ರವಾಗಿ ಮಡೀಕಾ’ ಎಂದರು ಗೌಡರು. ಅವಳ ಕಣ್ಣುಗಳು ಮಂಜಾದವು…ಕೈ ನಡುಗಿತು… `ಬ್ಯಾಡ ಬುದ್ಧಿ…ಇದರಲ್ಲಿ ಒಂದೇ ಒಂದು ಲಕ್ಷ ಕೊಟ್ಟಿದ್ರೂ ನನ್ನ ಬಾಳು ಕತ್ಲಾಗ್ತಿರ್ಲಿಲ್ಲ’ ಎಂಬ ಅವಳ ಮನದ ಮಾತುಗಳು ಗಂಟಲೊಳಗೇ ಅಡಗಿಕೊಂಡವು.
ಕ್ಷಣಮಾತ್ರದಲ್ಲಿ ಓಣಿಯ ಗದ್ದಲವೆಲ್ಲ ರೊಯ್ಯನೆ ಕರಗಿ ಮೌನ ಬಿಮ್ಮನೆ ಆವರಿಸಿತ್ತು…ಕ್ಷಣಾರ್ಧದಲ್ಲಿ ಎಲ್ಲವೂ ಮಟಾ ಮಾಯ!…ಒಂದು ಕಾರೂ ಇಲ್ಲ, ನರಪಿಳ್ಳೆಯೂ ಇಲ್ಲ..!…..ಯಾರೋ ಸರಸರನೆ ಬಂದು ಗಾಜಿನಡಬ್ಬಿಯ ಮುಚ್ಚಳವನ್ನು ತೆಗೆದು ಹೆಣವನ್ನು ರಸ್ತೆ ಮಗ್ಗುಲಿಗಿಳಿಸಿ, ಬಾಕ್ಸ್ ಎತ್ತಿಕೊಂಡು ಹೊರಟೇ ಹೋದರು….ಹನುಮಕ್ಕ ಅವಾಕ್ಕಾಗಿದ್ದಳು!!…
`ಸಮಾಧಾನ ಮಾಡ್ಕೊಳವ್ವ ….ಮುಂದಿನ ಕೆಲಸ ನೋಡುಮ ‘ ಎನ್ನುತ್ತ ಅವಳ ಪಕ್ಕ ಕೂತಿದ್ದ ನೆರೆಮನೆಯ ರೈತಸಂಘದ ಈರಣ್ಣ `ಎಲ್ಲಿ ಆ ಚೆಕ್ ತತ್ತಾ’ ಎನ್ನುತ್ತ, ಅವಳ ಕೈಯಿಂದ ಜಾರಿ ಕೆಳಗೆ ಬಿದ್ದಿದ್ದ ಚೆಕ್ಕನ್ನೆತ್ತಿಕೊಂಡು ಕಣ್ಣು ಚೂಪು ಮಾಡಿ ನೋಡಿದವನೆ, ಗಾಬರಿಬಿದ್ದು-
`ಅರೇ, ಇದಕ್ಕೆ ಸಹೀನೇ ಮಾಡಿಲ್ವಲ್ಲವ್ವ…!…..ಅಯ್ಯೋ.. ಇನ್ನು, ಈ ದುಡ್ಡು ನಿನ್ನ ಕೈ ಸೇರಿದಂಗೆ’ ಎಂದು ನುಡಿದಾಗ, ಅವಳ ಶೂನ್ಯನೋಟದ -ಹತಾಶೆಯ ಮುಖಭಾವನೆಗಳ ವಿಷಾದ ದೃಶ್ಯವನ್ನು ಸೆರೆಹಿಡಿಯಲು ಅಲ್ಲಿ ಯಾವ ಟಿವಿಯವರೂ ಇರಲಿಲ್ಲ!..
***********************
6 comments
ಮನ ಮಿಡಿಯುವ ಕತೆ. ಇದರಲ್ಲಿ ಒಂದು ಲಕ್ಷ ಕೊಟ್ಟಿದ್ದರೆ ನನ್ನ ಬದುಕು ಕತ್ತಲಾಗುತ್ತಿರಲಿಲ್ಲ ಎಂಬ ಮಾತು ಕಂಬನಿ ಮಿಡಿಯುವಂತೆ ಮಾಡುತ್ತದೆ.ಒಬ್ಬ ಹೆಣ್ಣಿನ ಅಸಹಾಯಕ ಪರಿಸ್ಥಿತಿ ಯಲ್ಲಿ ಎಲ್ಲರೂ ತಮ್ಮ ಸ್ವಾರ್ಥ ದ ಬೇಳೆ ಬೇಯಿಸುವ ಪರಿಗೆ ಕನ್ನಡಿ ಹಿಡಿದಿರುವ ಉತ್ತಮ ಕತೆ.ಅಭಿನಂದನೆಗಳು
ಧನ್ಯವಾದಗಳು ಶ್ರೀಪ್ರಕಾಶ್. ನಿಮ್ಮ ಸಹೃದಯ ಮನೋಧರ್ಮಕ್ಕೆ ವಂದನೆಗಳು
katu vaastavakke kamati hoda Hanumavva . Kathe Kannumundene nadeda haaganisitu. Nimma baraha da shakitge sharanu.
ಕಥೆಯನ್ನು ಮೆಚ್ಚಿಕೊಂಡಿದ್ದಕ್ಕೆ ಅಪಾರ ಧನ್ಯವಾದಗಳು. ನನ್ನ ನಿರೂಪಣೆ ಸಹೃದಯರನ್ನು ಸಂಚಲನಗೊಳಿಸಿದರೆ ನನ್ನ ಬರವಣಿಗೆ ಸಾರ್ಥಕ. ನಿಮ್ಮ ಪ್ರೋತ್ಸಾಹ ಹೀಗೆಯೇ ನಿರಂತರವಾಗಿರಲಿ. ನನ್ನ ಇತರ ಕಥೆಗಳನ್ನೂ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಪ್ರಸ್ತುತ ಸಮಾಜದ ಬಡವರ ಜೀವನದಕರಾಳ ಸತ್ಯವಿದು . ಕರುಣೆಯೇ ಇಲ್ಲದ ಕಠೋರ ಮನಸಿನ ಕಪಟ ಜನರದೇ ದರ್ಬಾರು ಇಲ್ಲಿ. ಈ ಸಂದರ್ಭವನ್ನು ಸಂಧ್ಯಾ ಶರ್ಮ ಅವರು ಕಥೆಯ / ಘಟನೆಯ ರೂಪದಲ್ಲಿ ಚೆನ್ನಾಗಿ ಮನಸೆಳೆವಂತೆ ಹೆಣಿದುಕೊಟ್ಟಿದ್ದಾರೆ 👌
ನಿಮ್ಮ ಅರ್ಥಪೂರ್ಣ ವಿಶ್ಲೇಷಣೆಗೆ ಹಾಗೂ ಮೆಚ್ಚುಗೆಗೆ ತುಂಬು ಮನದ ಧನ್ಯವಾದಗಳು ಸರ್ವಮಂಗಳಾ ಅವರೇ.