ಕೆಸರು ನೆಲದಲ್ಲಿ ಹವಾಯಿ ಚಪ್ಪಲಿಯ ಕಚಪಚ ಸದ್ದು. ಅದೇತಾನೆ ಮಳೆ ಬಂದು ನಿಂತಿತ್ತು. ಬೆಳಗಿನಿಂದ ಒಂದೇಸಮನೆ ಸಣ್ಣಗೆ ಜಿಟಿಜಿಟಿ ಸುರಿಯುತ್ತಿದ್ದ ಮಳೆಯನ್ನು ಕಂಡು ಸ್ಮಿತಾ ಅದೆಷ್ಟು ಬಾರಿ ಶಪಿಸಿದ್ದಳೋ. ಕಿಟಕಿಯಿಂದ ಬಗ್ಗಿ ನೋಡಿ `ಥತ್ ದರಿದ್ರ ಮಳೆ, ಈ ಬೆಂಗಳೂರ್ನಲ್ಲಿ ಏನಿದೆ ಅಂತ ಹೀಗ್ ಸುರಿಯತ್ತೋ ನಾಕಾಣೆ… ಅತ್ಲಾಗೆ ಯಾವುದಾದ್ರೂ ಹಳ್ಳೀಲಿ ಸುರ್ಕೊಂಡು ಹೋಗಿದ್ರೂ ಸಾರ್ಥಕವಾಗ್ತಿತ್ತು ‘ ಎಂದವಳು ಗೊಣಗುತ್ತ ಬೆಡ್‍ರೂಂ ಹೊಕ್ಕು ಕನ್ನಡಿಯ ಮುಂದೆ ನಿಂತು ಅಡಿಯಿಂದ ಮುಡಿಯವರೆಗೂ ನೋಡಿಕೊಂಡಳು. ಒಂದು ಗಂಟೆಗೂ ಮಿಕ್ಕು ಕನ್ನಡಿಯ ಮುಂದೆ ನಿಂತು ಶ್ರದ್ಧೆಯಿಂದ ನೀಟಾಗಿ ಅಲಂಕರಿಸಿಕೊಂಡಿದ್ದಳು.
ಇವತ್ತು ಅವಳ ಸೋದರಮಾವನ ಮನೆಯಲ್ಲಿ ಅವರ ಮೊಮ್ಮಗುವಿನ ನಾಮಕರಣದ ಸಮಾರಂಭವಿತ್ತು. ಮೂರುದಿನಗಳಿಂದಲೇ ಅವಳು ಚಂದನನ ತಲೆತಿಂದಿದ್ದಳು ಕಾರ್ಯಕ್ರಮದ ಮಿನಿಟ್ಟು ಮಿನಿಟ್ ಪ್ರೋಗ್ರಾಂ ರೂಪಿಸಿ. `ರೀ, ನಾನ್ ರೆಡಿ’ ಎಂದು ಜೋರಾಗಿ ಕೂಗಿ ಹೇಳಿದವಳಿಗೆ, ನಡುಮನೆಯಲ್ಲಿ ಪೇಪರ್ ಓದುತ್ತಕೂತಿದ್ದ ಚಂದನ್ `ನೀನು ರೆಡಿಯಾಗಿಬಿಟ್ರೆ ಆಯ್ತೇ…ನಿನ್ನ ಹೊರಗೆ ಬಿಡಲು ಈ ಮಳೆ ರೆಡಿಯಾಗಬೇಕಲ್ಲಾ? ಎಂದವನು ಪೇಪರಿನಿಂದ ತಲೆಯೆತ್ತದೆ ನುಡಿದ ಕೂಲಾಗಿ.
ಸ್ಮಿತಳ ಕೋಪ ಭಗ್ಗೆಂದು ಸಿಡಿಯಿತು. `ಮೊದ್ಲೇ ನಿಮಗೆ ಬರಕ್ಕೆ ಇಷ್ಟಇಲ್ಲ, ಜೊತೆಗೆ ಸೋಮಾರೀಗೆ ಹಾಸಿಗೆ ಹಾಸಿಕೊಟ್ಟಂತಾಯಿತು ಈ ಮಳೆಯ ನೆಪ… ಅದೇ ನಿಮ್ಮ ಮನೆಯೋರ ಅಥ್ವಾ ನಿಮ್‍ಫ್ರೆಂಡ್ಸ್ ಮನೆಗಳ ಫಂಕ್ಷನ್ ಆಗಿದ್ರೆ ಕುಣಿತಾ ಓಡ್ತಿದ್ರಿ…ನನ್ನ ಬಳಗ ಅಂದ್ರೆ ನಿಮಗೆ ಅಲಕ್ಷ್ಯ…’-ಎಂದು ಮುಖ ಊದಿಸಿಕೊಂಡಳು.
`ಹಾಳುಮಳೆ…..ಥೂ ಶನಿ!!…’ ಎಂದು ಮನಸಾರೆ ಮಳೆಗೆ ಶಾಪಹಾಕುತ್ತಿದ್ದ ವರಸೆಕಂಡು ಚಂದನ್-`ಇದೊಳ್ಳೆ ಚೆನ್ನಾಯ್ತಲ್ಲ, ನಿನ್ನ ಅಗತ್ಯಕ್ಕೆ ತಕ್ಕಂತೆ ಬಂದುಹೋಗೋ ಅಷ್ಟು ಅಗ್ಗ ಮಾಡ್ಕೋಬೇಡ ನಮ್ಮ ಮಳೆರಾಯನ್ನ… ಮಳೆಯಿಲ್ಲದೆ ಇಳೆಯುಂಟೇ?….ಅವನು ತರೋ ಹೊಸ ಸೃಷ್ಟಿ, ವಿಸ್ಮಯಗಳ ಬೆಲೆ ಗೊತ್ತೇನು ನಿಂಗೆ?…ಅವನ ಕೃಪೆ ಇಲ್ಲದ ನಾನು ನೀನು ಎಲ್ಲಿ?….ಅವನು ತರೋ ಮುದ, ಹದದಿಂದಲೇ ಈ ಜೀವದ್ರವ್ಯದ ಜಗತ್ತು, ಭಾವದ್ರವ್ಯದ ಜೀವನ, ಸೌಂದರ್ಯ ಎಲ್ಲಾ…ಇದೂ ಪ್ರಕೃತಿಯ ಒಂದು ಭಾಗ…ಮಳೇನ ಸ್ವಾಗತಿಸಬೇಕೇ ಹೊರತು ಹೀಗೆ ಹಳಿಯಬಾರದು’- ಗಂಭೀರವಾಗಿ ಉಪನ್ಯಾಸ ನೀಡಲಾರಂಭಿಸಿದ.
`ಇದೇನ್ರೀ ಇದ್ದಕ್ಕಿದ್ದ ಹಾಗೆ ಕವಿ ಥರ ಮಾತಾಡ್ತಿದ್ದೀರಾ… ಓ ಮೈ ಗಾಡ್!.. ನೀವೇನೇ ಅನ್ನಿ, ಸದ್ಯದ ಪರಿಸ್ಥಿತೀಲಿ ಈ ಮಳೆ ನನ್ನ ಎನಿಮಿ’-ಎಂದು ಗುಡುಗಿದಳು.
ಕೊಂಚ ಸಮಾಧಾನದ ದನಿಯಿಂದ- `ನೋಡೋಣ ತಡಿ, ನಿಲ್ಲಬಹುದು’ ಎಂದು ಪುಟ ತಿರುವಿದ. ಅವನ ಬಾಯ ಹಾರೈಕೆಯೆಂಬಂತೆ ಹೊರಗೆ ಮಳೆಹನಿಯ ಪಟಪಟ ಸದ್ದು ಕೊಂಚ ಕ್ಷೀಣವಾದಂತೆನಿಸಿ ಸ್ಮಿತಾ ಖುಷಿಯಿಂದ ಮೇಲೇಳಕ್ಕೂ ಹೊರಗಿನಿಂದ ಜೋರಾಗಿ ಕಾಲಿಂಗ್‍ಬೆಲ್ ರಿಂಗಣಿಸೋದಕ್ಕೂ ಸಮವಾಯಿತು. `ಯಾರೂ?’ ಎಂದು ಅಸಮಾಧಾನದ ದನಿಯಲ್ಲಿ ಮುಂಬಾಗಿಲತ್ತ ಧಾವಿಸಿದಳು. ಗೊಣಗುತ್ತಲೇ ಬಾಗಿಲು ತೆರೆದಳು. ಮುಂಬಾಗಿಲ ಮೆಟ್ಟಿಲಮೇಲೆ ಮಳೆಯಿಂದ ತೊಯ್ದ ಅಪರಿಚಿತ ವ್ಯಕ್ತಿ!
`ಯಾರು ಬೇಕಿತ್ತು?’ ಅವಳ ಹುಬ್ಬುಗಳು ತಟ್ಟನೆ ಬೆಸೆದುಕೊಂಡವು. ಸೇಲ್ಸ್‍ನವರಂತೂ ಅಲ್ಲ. ಯಾರೋ ಹಳ್ಳಿಗಮಾರನಂತಿದ್ದಾನೆ… ಹಣಸಹಾಯ ಕೇಳಲು ಬಂದವನೋ …ತಿಳಿಯಲಿಲ್ಲ. ಸಾಧಾರಣ ನೂಲಿನಪಂಚೆ, ಬಣ್ಣಗೆಟ್ಟ ಕಂದುಬಣ್ಣದ ಷರಟು, ನಯವಾಗಿ ಬಾಚಿಲ್ಲದ ದಟ್ಟಗೂದಲು. ಸುಮಾರು ಮೂವತ್ತರ ಆಸುಪಾಸಿನಾತ. ಅಷ್ಟೂ ಹಲ್ಲುಬಿಚ್ಚಿ ಹಲ್ಕಿರಿದಃ
`ಅವ್ರಾ?…’
`ಯಾರು?!’ ಒರಟಾಗಿತ್ತು ಅವಳ ದನಿ. ಮುಖಗಂಟಾಗಿತ್ತು. `ಇದ್ಯಾವ ಪೀಡೆ ಬೆಳಬೆಳಗ್ಗೆ…ಭಿಕ್ಷುಕನಾ?’ ಎಂದುಕೊಂಡು ಅವನ ಮುಖವನ್ನೇ ಕೋಪದಿಂದ ದುರದುರನೆ ದಿಟ್ಟಿಸಿದಳು.
`ಚಂದಪ್ಪ ಇಲ್ವ್ರಾ’
`ಯಾರು…ಶಂಕರನ ದನಿ ಇದ್ದ ಹಾಗಿದೆಯಲ್ಲ?!’ ಎನ್ನುತ್ತ ಒಳಗಿನಿಂದ ಬಂದ ಚಂದನ್, ಹೊರಗೆ ಮೆಟ್ಟಿಲ ಮೇಲೆ ನಿಂತಿದ್ದ ತನ್ನ ಬಾಲ್ಯಸ್ನೇಹಿತ ಶಂಕರನನ್ನು ಕಂಡು ಅಪರಿಮಿತ ಖುಷಿಯಿಂದ `ಓ…ಶಂಕ್ರೂ….ಬಾರಯ್ಯ ಬಾ…ಬಾ…’ ಎನ್ನುತ್ತ ಅವನು ಚಪ್ಪಲಿಯನ್ನು ಹೊರಗೆ ಕಳಚಲೂ ಅವಕಾಶ ಕೊಡದೆ ಸೀದಾ ಅವನನ್ನು ಹಾಲಿಗೆ ಕರೆತಂದು ಬಿಳಿಕವರ್ ಹಾಸಿದ್ದ ಸೋಫದ ಮೇಲೆ ಕೂರಿಸಿದ. ಶುಭ್ರವಾಗಿದ್ದ ವರಾಂಡದ ಬಿಳೀಟೈಲ್ಸಿನ ಮೇಲೆ ಕೆಸರಿನಹೆಜ್ಜೆಗಳನ್ನು ಕಂಡು ಸ್ಮಿತಳಿಗೆ ರೇಗಿಹೋಯ್ತು. ಹಾಲಿನ ರತ್ನಗಂಬಳಿಯ ಮೇಲೂ ಒಂದೆರಡು ಹೆಜ್ಜೆಗಳು ಮೂಡಿದ್ದವು. ಅವಳ ಕೆಂಗಣ್ಣಿನ ದೃಷ್ಟಿಯನ್ನನುಸರಿಸಿದ ಶಂಕರನ ಕಣ್ಣುಗಳು ಸಂಕೋಚದಿಂದ ಕಿರಿದುಗೊಂಡು, `ಬುಡು, ಚಂದಪ್ಪ, ಚಪ್ಲಿಗೆಲ್ಲ ಕೆಸರು ಮೆತ್ಕೊಂಡಾವೆ, ಒರಗ್ ಬುಟ್ಟುಬರ್ತೀನಿ’ ಎನ್ನುತ್ತ ಮೇಲೆದ್ದು, ಬಾಗಿಲ ಹೊರಗೆ ಎಕ್ಕಡ ಕಳಚಿ, ಫುಟ್‍ರಗ್ಗಿಗೆ ಕಾಲನ್ನು ಚೆನ್ನಾಗಿ ಉಜ್ಜಿ, ಮುದುರಿಕೊಂಡು ಸೋಫದ ಮೇಲೆ ಬಂದುಕುಳಿತ. ಆದರೂ ಅವಳ ದೃಷ್ಟಿಯೆಲ್ಲ ಅವನ ಒಡೆದ ಹಿಮ್ಮಡಿಯ ಕೊಳೆಯಕಾಲುಗಳ ಮೇಲೆಯೇಇತ್ತು.
ಹಳ್ಳಿಯ ಗೆಳೆಯನನ್ನು ಕಂಡು ಚಂದನನ ಮುಖವರಳಿತು. `ಶಂಕ್ರೂ, ಹೇಗಿದ್ದೀಯೋ ಮಾರಾಯಾ…ಹಳ್ಳೀಲಿ ನಿಮ್ಮಪ್ಪ ಅಮ್ಮ ಎಲ್ಲ ಚೆನ್ನಾಗಿದ್ದಾರೇನೋ…..ನಿನ್ನಣ್ಣ ಸೀನಪ್ಪನಿಗೆ ಎಷ್ಟು ಮಕ್ಳು…ಮಳೆ,ಬೆಳೆ ಎಲ್ಲ ಹೇಗಿದೆ’ ಎನ್ನುತ್ತ ಉದ್ದಕ್ಕೆ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿದ. ಚಂದನ್ ಮಳೆ ಎನ್ನುತ್ತಿದ್ದ ಹಾಗೆ ಸ್ಮಿತಳಿಗೆ ತಟ್ಟನೆ ಮಳೆಯ ನೆನಪಾಗಿ, ಕಿಟಕಿಯ ಹೊರಗೆ ದೃಷ್ಟಿತೂರಿಸಿ `ರೀ, ಮಳೆ ನಿಂತಿದೆ’ ಎಂದಳು ಸಂಭ್ರಮದಿಂದ.
ಚಂದನ್, ಆರಾಮವಾಗಿ ಗೆಳೆಯನೊಡನೆ ಹರಟುತ್ತ-` ಅಂದ್ಹಾಗೆ ಸ್ಮಿತಾ, ಇವನು ನನ್ ಚಡ್ಡಿದೋಸ್ತ್ ಶಂಕ್ರೂಂತ…ನಮ್ತಂದೆಗೆ ಊರೂರಿಗೆ ಟ್ರಾನ್ಸ್‍ಫರ್ ಆಗ್ತಿದ್ದಾಗ ನಾನು ಹಳ್ಳೀಲಿ ನಮ್ಮಜ್ಜಿ ಮನೇಲಿದ್ದೆ ಅಂತ ಹೇಳಿದ್ನಲ್ಲ, ಅಲ್ಲಿ ನಾವಿಬ್ರು ಒಬ್ಬರನ್ನೊಬ್ರು ಬಿಟ್ಟಿರ್ತಲೇ ಇರ್ಲಿಲ್ಲ ಅಷ್ಟು ಜಿಗ್ರಿದೋಸ್ತ…’ ಎಂದು ಬಾಲ್ಯದದಿನಗಳನ್ನು ನೆನೆಸಿಕೊಳ್ತಾ, ತತ್‍ಕ್ಷಣ-` ಸ್ಮಿತಾ ಒಂದ್ಲೋಟ ಸ್ಟ್ರಾಂಗ್ ಕಾಫಿ ಮಾಡ್ಕೊಂಡು ಬಾಹೋಗು…ಅಪರೂಪಕ್ಕೆ ಗೆಳೆಯ ಬಂದಿದ್ದಾನೆ..’ ಎಂದು ನುಡಿದು, ಅವನತ್ತ ಹೊರಳಿ `ಮತ್ತೇನಯ್ಯ ಸಮಾಚಾರ?’ ಎಂದು ಲಹರಿಯಿಂದ ಅವನೊಡನೆ ಹರಟೆಗೆ ತೊಡಗಿದ.
ಸ್ಮಿತಳ ಮುಖ ಗಡಿಗೆಯಾಯಿತು. ಮಳೆನಿಂತ ಸಂತೋಷ ಮಾಯವಾಗಿತ್ತು. ಅಡುಗೆಮನೆಯತ್ತ ದಾಪುಗಾಲಿಕ್ಕಿ, ಈಗಾಗಲೇ ಒಮ್ಮೆ ಇಳಿದಿದ್ದ ಕಾಫೀಪುಡಿಯ ಮೇಲೆ ಮತ್ತಷ್ಟು ನೀರು ಫಿಲ್ಟರಿಗೆ ಸುರಿದು ಸ್ವಿಚ್‍ಹಾಕಿದಳು. ಎರಡನೇಸಲ ಇಳಿದ ನೀರು ಡಿಕಾಕ್ಷನ್‍ಗೆ ಹಾಲುಬೆರೆಸಿ `ಈ ಹಳ್ಳಿಜನಕ್ಕೆ ಸಕ್ಕರೆ ಜಾಸ್ತಿಹಾಕ್ಬಿಟ್ರೆ ಏನೂ ತಿಳಿಯಲ್ಲ’ ಎಂದು ಗುನುಗಿಕೊಂಡು ಕಾಫಿಕಾಯಿಸಿ ದೊಡ್ಡಲೋಟಕ್ಕೆ ಸುರಿದು ಶಂಕರನ ಮುಂದೆ ತಂದಿಟ್ಟಳು.
ಶಂಕ್ರೂ ಸಂಕೋಚದ ಯಾವ ನುಡಿಗಳನ್ನೂ ಆಡದೆ ಲೋಟವನ್ನು ಮೇಲೆತ್ತಿ ಗಟಗಟನೆ ಗಂಟಲಿಗೆ ಬಸಿದುಕೊಂಡು ಕೆಳಗಿಟ್ಟ….ಹೀಗೇ ಅರ್ಧಗಂಟೆ ಕಳೆಯಿತು. ಅವನು ಕದಲುವ ಸೂಚನೆಯೇ ಕಾಣದಾದಾಗ ಸ್ಮಿತಾ, ಗಂಡನ ಮುಂದೆ ಎರಡು ಮೂರು ಬಾರಿ ಹಾದುಹೋಗುತ್ತ ಗೋಡೆ ಗಡಿಯಾರದತ್ತ ಅವನ ಗಮನಸೆಳೆದಳು.
ಮಳೆ ಸಂಪೂರ್ಣ ನಿಂತಿತ್ತು. ಅವಳ ಚಡಪಡಿಕೆಯನ್ನು ಅರ್ಥಮಾಡಿಕೊಂಡರೂ ಚಂದನ್ ನಿರೂಪಾಯನಾಗಿ ಸೋಫದ ಮೇಲೆ ಮಗ್ಗುಲು ಬದಲಿಸಿದ. ಆದರೆ ಶಂಕ್ರೂ ಮಾತ್ರ ವಿರಾಮವಾಗಿ ಹರಟುತ್ತಲೇ ಕುಳಿತಿದ್ದ.
ಚಂದನ ಹೈಸ್ಕೂಲ್ ಮೊದಲವರ್ಷದಲ್ಲಿದ್ದಾಗಲೇ ಅವನ ಅಪ್ಪನಿಗೆ ಬೆಂಗಳೂರಿಗೆ ವರ್ಗವಾಗಿ, ತಾತನ ಮನೆಯಲ್ಲಿದ್ದ ಅವನನ್ನು ಕರ್ಕೊಂಡುಬಂದು ಪಟ್ಟಣದ ಶಾಲೆಗೆ ಸೇರಿಸಿದಲಾಗಾಯ್ತು ಇವರಿಬ್ಬರ ಗೆಳೆತನ ಕಡಿದುಹೋಗಿತ್ತು. ಆಮೇಲಿನ ದಿನಗಳಲ್ಲಿ ಚಂದನ್ ಡಿಗ್ರಿ ಮುಗಿಸಿ, ಮುಂದಕ್ಕೆ ಇನ್ನೂ ಓದಿ ಕೆಲಸಕ್ಕೆ ಸೇರಿ ಬಿಜಿಯಾಗಿಬಿಟ್ಟಿದ್ದ. ಆದರೆ ಶಂಕ್ರೂ ಮಾತ್ರ ಹತ್ತನೇಕ್ಲಾಸಿನವರೆಗೂ ಬರಲೇಇಲ್ಲ. ಅಪ್ಪನ ಜಮೀನಿನಲ್ಲಿ ಗೇಯುತ್ತ, ವ್ಯವಸಾಯದ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡ. ಅದೇ ಅವನ ಬದುಕಾಯ್ತು. ಬಹಳ ಆಸಕ್ತಿ-ಶ್ರದ್ಧೆಯಿಂದ ದುಡಿಯುತ್ತ, ವ್ಯವಸಾಯದ ಹೊಸ ವಿಧಾನ, ಮಾದರಿಗಳ ಬಗ್ಗೆ ಅನ್ವೇಷಣೆ, ಇಲಾಖೆಯ ಪ್ರವಾಸ, ಆಧ್ಯಯನವೆಂದು ಬೇರೆ ಬೇರೆ ಊರುಗಳಿಗೆ ಸುತ್ತಾಡುತ್ತಿದ್ದ ಕಾರಣ ಗೆಳೆಯರಿಬ್ಬರ ಭೇಟಿ ಅಲ್ಲೊಂದು ಇಲ್ಲೊಂದು ಸಲವಷ್ಟೇ. ಅದೂ ಅಜ್ಜಿ-ತಾತ ಕಾಲವಾದ ಮೇಲಂತೂ ಚಂದನ್, ಹಳ್ಳಿಗೆ ಹೋಗುವುದನ್ನೇ ಬಿಟ್ಟಿದ್ದ. ಆದರೂ ತನ್ನ ಮದುವೆಯ ಕರೆಯೋಲೆಯನ್ನು ಶಂಕ್ರೂಗೆ ಪೋಸ್ಟ್ನಲ್ಲಿ ಕಳಿಸೋದನ್ನ ಮರೆತಿರಲಿಲ್ಲ. ಆದರೆ ಶಂಕ್ರೂ ಮದುವೆಗೆ ಬರಲಿಲ್ಲ…..ಈಗ ವರ್ಷ ಕಳೆದಮೇಲೆ ಮನೆ ಹುಡುಕ್ಕೊಂಡು ಬಂದಿದ್ದಾನೆ…!
ಅವನನ್ನು ಕಂಡು ಚಂದನನಿಗೆ ಖುಷಿಯಾಗಿದ್ದರೂ, ಆ ಗಳಿಗೆಗೆ ಅವನು ಬೇಡದ ಅತಿಥಿ. ಗಂಟೆಕಾಲ ಅವನೊಡನೆ ಹರಟಿದ್ದಾಯ್ತು. `ಯಾವಾಗ ಬಂದ್ಯೋ ಹಳ್ಳಿಯಿಂದ, ತಿಂಡಿ ಆಯ್ತಾ’ ಎಂದುಬಿಟ್ಟ ಬಾಯಿತಪ್ಪಿ. ಅದಕ್ಕೆ ಶಂಕ್ರೂ `ಇಲ್ಲಪ್ಪ…ದಿನ ಏನಾರ ಒಂದಲ್ಲ ಒಂದ್ಕೆಲಸ ಇದ್ದೇಇರತ್ತೆ, ಅದಕ್ಕೆ ನಿನ್ನ ಮದುವೆಗಂತೂ ಬರ್ನಿಲ್ಲ, ಆದಿತ್ಯವಾರ ಮನೇಲಿ ಇದ್ದೇ ಇರ್ತೀಯಾಂತ ಒತ್ತಾರೇನೆ ಎದ್ದು ಸೀದಾ ಇಲ್ಲಿಗೆ ಬಂದ್ನಿ’ ಎಂದುಬಿಡೋದೇ.
ಸ್ಮಿತಾಗೆ ಎದೆ ಒಡೆದಹಾಗಾಯ್ತು!…ಬೇರೆ ದಾರಿಇಲ್ಲದೆ ಚಂದನ್, ತಗ್ಗಿದಸ್ವರದಲ್ಲಿ- `ಸ್ಮಿತಾ…ನಂಗೂ ಹೊಟ್ಟೆ ಹಸೀತಿದೆ, ಅಲ್ಲಿಗೆ ಹೋಗೋದು ಲೇಟಾಗಬೋದು, ಸ್ವಲ್ಪ ಏನಾದ್ರೂ ತಿಂಡಿಮಾಡ್ಬಿಡು’ ಎಂದು ಫರ್ಮಾನು ಹೊರಡಿಸಿದ.
ಸ್ಮಿತಾ ಒಲ್ಲದಮನಸ್ಸಿನಿಂದ ಅಡುಗೆಮನೆಗೆ ನಡೆದಳು.ಒಲೆಯಮೇಲೆ ಬಾಣಲೆಯಿಟ್ಟು ರವೆಹುರಿದು ಒಂದು ಉಪ್ಪಿಟ್ಟೂಂತ ಕೆದಕಿ, ಹೊರಗೆ ಕುಳಿತ ಮಹಾಶಯನ ಮಂದೆ ತೊಗೊಂಡುಹೋಗಿ ಬಡಿದಳು.
` ಕಾಲ್ಗೆಲ್ಲ ಕೆಸರು ಮೆತ್ತದೆ, ಒಸಿ ಕಾಲು ತ್ವಳ್ಕಾತೀನಿ, ನೀರ್ಮನೆ ಎಲ್ಲದೆ ಚಂದಪ್ಪ?’ ಎಂದವನಿಗೆ ಚಂದನ್ ಮೌನವಾಗಿ ಬಾತ್‍ರೂಂ ತೋರಿಸಿದ. ನಡುಮನೆಯಿಂದ ಬಚ್ಚಲಮನೆವರೆಗೂ ಕೆಸರಹೆಜ್ಜೆಯ ರಂಗೋಲಿ!…ಒಳಗಿಂದ ಧಬಧಬೆ ನೀರು ಹುಯ್ದ ಸಪ್ಪುಳ. ಹೊಸ್ತಿಲಿಲ್ಲದ ಬಾತ್‍ರೂಮಿನಿಂದಾಚೆ ತಂಬಿಗೆಯಷ್ಟು ನೀರು ಪ್ಯಾಸೇಜಿನುದ್ದ ಹರಿದುಬಂದುದನ್ನು ಕಂಡು ಅವಳ ಕೋಪ ತಾರಕ್ಕೇರಿತು.
ತಿಂಡಿ ಆಯಿತು. ಊಟದ ಸಮಯವೂ ಸಮೀಪಿಸುತ್ತಿತ್ತು. ಜಪ್ಪಯ್ಯ ಅಂದ್ರೂ ಮತ್ತೆ ಅಡುಗೆಮನೆಗೆ ಹೋಗಲ್ಲಾಂತ ಶಪಥಮಾಡಿ ಸ್ಮಿತಾ, ರೂಂ ಬಾಗಿಲುಹಾಕಿಕೊಂಡು ಮಲಗಿಬಿಟ್ಟಳು.
`ನಿನ್ ಲಗ್ನಕ್ಕಂತೂ ಬರ್ನಿಲ್ಲ….ಲಗ್ಣದಾಗೆ ಊಟ ಬಲು ಜೋರಿತ್ತಾ?…ಸರಿ, ಇವತ್ತೇನ್ ಸ್ಪೆಸಲ್ಲು ನಿಮ್ಮನ್ಯಾಗೆ ?’ ಎಂದು ಶಂಕ್ರೂ ನೇರವಾಗೇ ಕೇಳಿದಾಗ ಚಂದನ್ ಮೆಟ್ಟಿಬಿದ್ದ ಗಾಬರಿಯಿಂದ. ಕ್ಷಣಕಾಲ ಸಾವರಿಸಿಕೊಂಡು-` ಅಂಥ ಸ್ಪೆಷಲೆಲ್ಲ ಏನಿಲ್ಲಪ್ಪ…ಆದರೂ ಸಿಂಪಲ್ಲಾಗಿ ಒಂದು ಅನ್ನ-ಸಾರು, ಪಲ್ಯ ಮಾಡಿಸ್ತೀನಿಬಿಡು’ ಎಂದ ಅಳುಕುತ್ತಲೇ. ಶಂಕ್ರೂವಿನ ಮೊಗದಲ್ಲಿ ಸಣ್ಣನಗೆ ಮಿನುಗಿತು. ಮೆಲ್ಲನೆ ಮೇಲೇಳುತ್ತ, `ಅವೆಲ್ಲ ಏನು ಬೇಡಬುಡು ಚೆಂದಪ್ಪ….ಈಗ ನಂಗೊಸಿ ಕೆಲ್ಸೈತೆ ಪ್ಯಾಟೇಗೆ…’ ಎನ್ನುತ್ತ ದೇಶಾವರಿ ನಗೆಬೀರಿದಾಗ, ಚಂದನನಿಗೆ ಖಚಿತವಾಯ್ತು ಅವನಿಗೇನೋ ಹಣ ಕಡಮೆ ಬಿದ್ದಿದೆ, ಅದಕ್ಕೆ ದುಡ್ಡು ಕೇಳೋಕ್ಕೆ ಇಲ್ಲಿಗೆ ಬಂದಿದ್ದಾನೇಂತ.
`ಸರಿಕಣ್ ಚಂದಪ್ಪ, ನಿನ್ ಲಗ್ಣಕ್ಕೆ ಬರಕ್ಕಾಗ್ಲಿಲ್ಲ, ಬ್ಯಾಸರ ಮಾಡ್ಕೋಬ್ಯಾಡ… ‘ ಎನ್ನುತ್ತ ತನ್ನ ಪಂಚೆ ಮೇಲೆತ್ತಿ ಚೆಡ್ಡಿಯ ಒಳಜೇಬಿಗೆ ಕೈಹಾಕಿ ಒಂದು ಕಾಗದದ ಸಣ್ಣ ಪೊಟ್ಟಣವನ್ನು ಹೊರತೆಗೆದು ಅವನ ಕೈಲಿಡುತ್ತ,-`ಬತ್ತೀನಪ್ಪ…ನಿನ್ ಎಂಡ್ರುಗೂ ಏಳ್ಬುಡು…’ ಎಂದು ಮುಂಬಾಗಿಲು ದಾಟಿ ಗೇಟುತೆರೆದ. ಅಷ್ಟರಲ್ಲೇ ಚಂದನ್, ಅವನಿತ್ತ ಪೊಟ್ಟಣವನ್ನು ಬಿಚ್ಚಿನೋಡಿದವನೆ ಗಾಬರಿಯಾಗಿ-` ಏಯ್ ಶಂಕ್ರೂ, ಏನೋ ಇದೆಲ್ಲ?’ ಎಂದವನ ಮೊಗದಲ್ಲಿ ನಾಚಿಕೆ ಒಸರಿತ್ತು. ಕೈಲಿದ್ದ ಕಾಗದದ ಪೊಟ್ಟಣದಲ್ಲಿ ಥಳಥಳನೆ ಹೊಳೆವ ಬಂಗಾರದ ಚೈನು!!….ಹಳ್ಳಿಗೆಳೆಯನ ನಿವ್ರ್ಯಾಜ ಪ್ರೀತಿ-ಅಂತಃಕರಣದ ಮಳೆಯನ್ನು ಕಂಡು ವಿಸ್ಮಿತನಾಗಿದ್ದ!!!
`ಏನಿಲ್ಲ ಮಡೀಕೋ ಚೆಂದಪ್ಪ…ಮದುವೆಗೆ ನನ್ನದೊಂದು ಸಣ್ಣ ಮುಯ್ಯಿ ಅಷ್ಟೇಯ’ ಎಂದ ಶಂಕ್ರೂವಿನ ಅಕ್ಕರೆ ತುಂಬಿದ ಮಾತುಗಳನ್ನು ಕೇಳಿ ಅವನು ನಿಜಕ್ಕೂ ಮೂಕನಾಗಿದ್ದ. ಹೊರಬಾಗಿಲು ತೆರೆದಸದ್ದು ಕೇಳಿ, ತಟ್ಟನೆ ರೂಮಿನಿಂದ ಹೊರಬಂದ ಸ್ಮಿತಾ, ಶಂಕ್ರೂ ಹೊರಟಿದ್ದನ್ನು ಕಂಡು ನಿಟ್ಟುಸಿರು ಕಕ್ಕಿದಳು….ಸಂತಸವರಳಿದ ಅವಳ ಮೊಗದಲ್ಲಿ ಹೊಳೆವ ಮಳೆಬಿಲ್ಲು!!..
`ಊಟದ ಹೊತ್ತಾಯ್ತು…ಊಟ ಮಾಡ್ಕೊಂಡು ಹೋಗೋ ಶಂಕ್ರೂ’ ಎಂದ ಚಂದನ್ ಕುಗ್ಗಿದದನಿಯಲ್ಲಿ.
`ಪರವಾಗಿಲ್ಲ ಬುಡುಚಂದಪ್ಪ, ಈಗ ನಂಗೆ ಟೇಮಿಲ್ಲ…’ ಎನ್ನುತ್ತ ಹಿಂತಿರುಗಿ ಕೈಬೀಸಿದವನು, ಬಾಗಿಲಬಳಿ ಸ್ಮಿತಳನ್ನು ಕಂಡ -`ಬತ್ತೀನ್ರವ್ವ…ಕಾಫೀ, ಉಪ್ಪಿಟ್ಟು ಸಾನೇ ಸೆಂದಾಕಿತ್ತು…’ ಎಂದು ಗೇಟುದಾಟಿದವನನ್ನೇ ಗರಬಡಿದಂತೆ ನೋಡುತ್ತನಿಂತ ಚಂದನ್ ನಾಚಿಕೆಯಿಂದ ಕುಬ್ಜನಾದರೆ, ಗಂಡನ ಕೈಯಲ್ಲಿ ಹೊಳೆಯುತ್ತಿದ್ದ ಸರವನ್ನು ಕಂಡು ಸ್ಮಿತಾ ದಂಗಾಗಿಹೋಗಿದ್ದಳು!….
ಆಗಸದಿಂದ ಪಟಪಟನೆ ಹನಿಗಳುದುರುತ್ತ ಮತ್ತೆ ಮಳೆ ಜೋರಾಗಿ ಹುಯ್ಯಲಾರಂಭಿಸಿತು.