Image default
Short Stories

ಚಿತ್ರವಿಲ್ಲದ ಚೌಕಟ್ಟು

ನರ್ಸಿಂಗ್‍ಹೋಂನ ಮೂವತ್ತು ಅಡಿ ಉದ್ದ, ಹದಿನಾರಡಿ ಅಗಲದ ಕಾರಿಡಾರಿನ ತುತ್ತ ತುದಿಯ ಮೆಟಲ್ ಮೌಲ್ಡ್‍ಛೇರ್‍ನಲ್ಲಿ ಮಂಕಾಗಿ ಕುಳಿತಿದ್ದ ವಿಭಾಳ ಮನದೊಳಗೆ ಭಾರಿ ತುಫಾನು!…ಮನಸ್ಸಿನಲ್ಲಿ ಕವಿದಿದ್ದ ಮೋಡದ ನೆರಳು ಮುಖವನ್ನು ಆವರಿಸಿತ್ತು. ದಟ್ಟ ಕಾರ್ಮೋಡಗಳು ಅಂಡಲೆಯುತ್ತ ಒಂದಕ್ಕೊಂದು ಢೀ ಕೊಟ್ಟಾಗ ಎದೆಯಲ್ಲೇನೋ ಭಾರಿ ಸದ್ದು. ಸಿಡಿಲಿನಂಥ ಭೀಕರ ಇರಿತ…ಹಿಂದೆಯೇ ಗುಡುಗಿನ ಮರ್ಮರ….ಒಮ್ಮೆಲೆ ಮೈ ಕೊಡವಿದ ವಿಭಾ ಭೀತಿಯಿಂದ ಕಣ್ಮುಚ್ಚಿಕೊಂಡಳು. ರೆಪ್ಪೆಯನ್ನು ತಡವಿಕೊಂಡು ಸುರಿದ ಮಳೆ ಕೆನ್ನೆಯ ಮೇಲೆ ಗೆರೆಯ ಚಿತ್ತಾರ ಬಿಡಿಸಿ, ಕದಪಿನಿಂದ ಗಂಟಲ ಕಾಲುವೆಗುಂಟ ಹನಿ ತೊಟ್ಟಿಕ್ಕಿ ರವಿಕೆಯ ಕಣಿವೆಯೊಳಗೆ ಇಳಿಯುತ್ತ ಅಂಟಂಟಾಯಿತು.

                ವಿಭಳ ಎದೆಯಂಗಳ ಪೂರ ತೊಯ್ದಿತ್ತು. ಮೆಲ್ಲನವಳು ಅತ್ತಿತ್ತ ತನ್ನ ಕಳ್ಳದೃಷ್ಟಿಯನ್ನು ಹಾಯಿಸಿ, ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂಬುದನ್ನು ಖಾತ್ರಿಗೊಳಿಸಿಕೊಂಡು ನಿಡುಸುಯ್ದು, ವ್ಯಾನಿಟಿಬ್ಯಾಗಿನಿಂದ ಕರವಸ್ತ್ರವನ್ನು ತೆಗೆದು ಅದನ್ನು ಕಣ್ಣಿಗೊತ್ತಿಕೊಂಡಳು. ಮನಸ್ಸು ಇನ್ನೂ ಹುಳ್ಳಗೇ ಇತ್ತು. ಬೇಡದ ನೆನಪುಗಳು ಅಂಥ ಕಹಿ, ಅಷ್ಟೇ ಭಾರ. ಎದೆಯಂಗಳದಲಿ ಮಳೆ ನಿಂತರೂ ಇನ್ನೂ ಹನಿ ತೊಟ್ಟಿಕ್ಕುತ್ತಲೇ ಇತ್ತಾದ್ದರಿಂದ ಕೂತಲ್ಲಿಂದ ಅವಳು ಮಿಸುಕಾಡಲಿಲ್ಲ. 

`ಓ ಈ ಬದುಕೆಷ್ಟು ದುರ್ಭರ…ನೀರಸ..’-ಎಂದು ಮನಸು ಕನಲಿತು. 

                ಅನಾಮತ್ತು ಜೋರಾದ ನಗೆ ಪಕ್ಕಕ್ಕೇ ಬಂದು ನಿಂತ ಹಾಗಾಗಿ ಮೆಲ್ಲನೆ ತಲೆಯೆತ್ತಿ ನೋಡಿದಳು. ನೆಲಮಹಡಿಯ ಮೆಟ್ಟಿಲುಗಳನ್ನು ಹತ್ತಿಕೊಂಡು ಬಂದ ಅವರಿಬ್ಬರ ನಗು ಮುಖ, ತುಂಟಾಟದ ಕಣ್ಣೋಟ ಗಮನಿಸಿ ಅವಳೆದೆಯೊಳಗೆ ಮುಳ್ಳು ಚುಚ್ಚಿದಂತಾಯ್ತು. ಅಂಥ ತುಂಬು ಯೌವ್ವನಿಗರೇನಲ್ಲ. ಸುಮಾರು ಅವನಿಗೆ ನಲವತ್ತು ದಾಟಿರಬಹುದು, ಅವಳದೂ ಆಚೀಚೆಯಿರಬಹುದು. ಒಂದೆರಡು ಹೆತ್ತು ಕೊಂಚ ಗುಂಡಗಾದ ಶರೀರ. ಅವನು ಎತ್ತರಕ್ಕೆ ಸ್ಲಿಮ್ ಆಗಿದ್ದ. ಅಷ್ಟಕ್ಕೂ ಅವರಿಬ್ಬರು ಗಂಡ-ಹೆಂಡತಿ ಎಂದು ತನಗೇನು ಗೊತ್ತು?…ಆಸ್ಪತ್ರೆಗೆ ಯಾರೋ ನೆಂಟರನ್ನು ಕಾಣಲು ಬಂದವರ ಬಗ್ಗೆ ತನಗೇಕೀ ಆಲೋಚನೆ?!….ಛೇ ಅವರಿಬ್ಬರು ಯಾರಾದರೇನಂತೆ…ಅಣ್ಣ ತಂಗಿಯರಿರಬಹುದು…..ತನ್ನ ಅನಗತ್ಯ  ಕುತೂಹಲ ಭಾವಕ್ಕೆ ನಾಚಿಕೆಯೆನಿಸಿ ದೃಷ್ಟಿಯನ್ನು ಕದಲಿಸಿದಳು.

                ಆದರೂ ಕುತೂಹಲ ಸಾಯಲಿಲ್ಲ. ಇದೀಗತಾನೆ ಮಳೆಯಲ್ಲಿ ನೆನೆದ ಮನಸ್ಸು ಬಿಸಿಲಿಗೆ ಬಿದ್ದ ಹೊಳಪಿನ ಭಾವದಿಂದ, ತುಸು ಜಾಸ್ತಿಯಾದ ಆಸಕ್ತಿಯಿಂದಲೇ ದೂರ ಸಾಗುತ್ತಿದ್ದ ಆ ಜೋಡಿಯನ್ನು ನಿರುಕಿಸಿತು. ಇಬ್ಬರೂ ಮೈಗೆ ಮೈ ತಗುಲಿಸಿಕೊಂಡು ನಡೆಯುತ್ತಿದ್ದರೆ ಅವರ ನಗುವಿನ ಗುಂಗುರು ಅವಳವರೆಗೂ ವ್ಯಾಪಿಸಿ ಉರುಳಿಕೊಂಡು ಬಂದಂತೆ ಭಾಸವಾಗಿತ್ತು. ತತ್‍ಕ್ಷಣ ಹೊಟ್ಟೆಯೊಳಗೆ ಹುಣಸೇಹಣ್ಣು ಕಲೆಸಿದ ಹಾಗಾಗಿ ಮೈ ಕೊಡವಿ ಎದ್ದುನಿಂತಳು. ಮನಸ್ಸು ಚೆದುರಿತ್ತು. ತನ್ನೊಳಗಿನ ವ್ಯಾಕುಲತೆಯನ್ನು ಹತ್ತಿಕ್ಕಲು ನಾಲ್ಕುಹೆಜ್ಜೆ ಅತ್ತಇತ್ತ ಸರಿದು, ನೀಳ ಕಿಟಕಿಯ ಚೌಕಟ್ಟಿಗೊರಗಿ ಹೊರಗೆ ಇಣುಕುತ್ತ ನಿಂತಳು.

                 ನರ್ಸಿಂಗ್‍ಹೋಂನ ಹೊರದ್ವಾರದ ಗೇಟಿನಲ್ಲಿ ಯೂನಿಫಾರಂ ಧರಿಸಿ ನಿಂತಿದ್ದ ಸೆಕ್ಯೂರಿಟಿ, ತನಗೆ ಬೇಕು ಬೇಕಾದವರಿಗೆ ಮಾತ್ರ ಕಾರ್ ಪಾರ್ಕಿಂಗ್‍ಗೆ ಒಳದಾರಿ ತೋರುತ್ತ, ಉಳಿದವರಿಗೆ ಕೈಸನ್ನೆಯಿಂದ ಹೊರಗೆ ನಿಲ್ಲಿಸಲು ಸೂಚಿಸುತ್ತಿದ್ದ. ಜನಗಳು ಗೊತ್ತು ಗುರಿಯಿಲ್ಲದವರಂತೆ ಒಂದೇಸಮನೆ ಒಳಗೂ ಹೊರಗೂ ಓಡಾಡುತ್ತಿದ್ದರು. ವಿಭಾ ಅವರ ಮುಖಗಳನ್ನೆಲ್ಲ ದಿಟ್ಟಿಸಿ ನೋಡಿದಳು. ಅವರ ಮೊಗಗಳು ತನ್ನಂತೆ ನೋವಿನ ಗೆರೆಗಳನ್ನು ಮುದ್ರಿಸಿಕೊಂಡಿವೆಯೇ ಎಂದು ಕಾತರದಿಂದ ಅರಸಿದಳು. ಗಂಡಸರ ಜೊತೆಜೊತೆಯಾಗಿ ಹೆಜ್ಜೆಹಾಕುತ್ತಿದ್ದ ಯಾವ ಹೆಂಗಸಿನ ಮೊಗವೂ ಕಪ್ಪಿಟ್ಟಂತೆ ಕಾಣಲಿಲ್ಲ, ಬಿಸಿಲಿಗೂ ಬಾಡಿದ ಲಕ್ಷಣವಿರಲಿಲ್ಲ. 

                ಅಯಾಚಿತ ನಿಟ್ಟುಸಿರು ಹೊರಬಿತ್ತು. `ಹೋ ಈ ಜಗತ್ತಿನ ಸರ್ವರೂ ತುಂಬ ಸಂತೋಷವಾಗೇ ಇದ್ದಾರೆ!…’ ಗಾಢವಾದ ಮೇಕಪ್ಪು,ಸಿಂಗಾರ,ಬಂಗಾರಗಳಲ್ಲಿ ಕಂಗೊಳಿಸುತ್ತಿದ್ದ ಅವರನ್ನು ಕಾಣುತ್ತ ವಿಭಾ ತನ್ನರಿವಿಲ್ಲದೆ ಮತ್ತಷ್ಟು ಮಂಕಾದಳು. ವಿಷಾದ ಅವಳೊಳಗೆ ತಿರುಗಣಿಯಾಗಿತ್ತು. ತನ್ನೊಬ್ಬಳನ್ನು ಬಿಟ್ಟು ಈ ವಿಶ್ವದ ಸಮಸ್ತರೂ ಸುಖಿಗಳಾಗಿದ್ದಾರೆ, ಅವರೆಲ್ಲ ತಮ್ಮೊಳಗಿನ ಸಂತೋಷವನ್ನು ಹೊರಗಣ್ಗಳಿಂದ ಹೊರಹಾಕುತ್ತಿದ್ದಾರೆ!…ಹೌದು, ಎಲ್ಲರ ಮುಖಗಳಲ್ಲೂ ಉತ್ಸಾಹ ಪಸರಿಸಿದೆ!….ಆದರೆ ತನ್ನ ಬದುಕಿಗೆ ಮಾತ್ರವೇಕೆ ಗರ ಬಡಿದಿದೆ?!…..

                ಪೇರುಸಿರು ತಾನೇ ತಾನಾಗಿ ಹೊರ ಚಿಮ್ಮಿ ಕೆಳದುಟಿ ಕಚ್ಚಿಕೊಂಡಳು.

                ತಟ್ಟನೆ, ಬೆನ್ನಹಿಂದೆ ಸಾಲಾಗಿ ಹಾಕಲಾಗಿದ್ದ ಆಸನದತ್ತಣಿಂದ ಜೋರಾಗಿ ನಗುವ ಶಬ್ದ ಕೇಳಿ ಸರ್ರನೆ ಹಿಂತಿರುಗಿ ನೋಡಿದಳು. ಹೋ…ಅದೇ ಜೋಡಿ!…ಪೇಷೆಂಟ್ ನೋಡಿಕೊಂಡು ಬಂದವರು ಇಲ್ಲಿ ಯಾರಿಗೋ ಕಾಯುತ್ತ ಕುಳಿತಿರಬಹುದೇ?…ಬಹುಶಃ ಇಬ್ಬರಿಗೂ ಮನೆ ಕಡೆಯ ಯೋಚನೆ-ಜವಾಬ್ದಾರಿಗಳಿಲ್ಲವೇನೋ. ನಿರಾಳವಾಗಿ ಹರಟುತ್ತಿದ್ದಾರೆ. ಎಷ್ಟು ನಿಶ್ಚಿಂತರು. ಕಣ್ಣು ಅಪ್ರಯತ್ನವಾಗಿ ಅತ್ತಲೇ ನಾಟಿತು. ಅವರ ಸಂತೋಷ ಕಾಣುತ್ತ ದುಃಖ ತುಂಬಿಕೊಳ್ಳುವುದು ತನಗೆ ಬೇಕಿತ್ತೇ?…ಮಾತು ಮಾತಿಗೂ ಅವನು ಅವಳ ತೋಳು ಹಿಡಿದೋ ಇಲ್ಲವೇ ಅವಳ ಭುಜ ಅಲುಗಿಸುತ್ತಲೋ ಏನೋ ಹೇಳುತ್ತಿದ್ದಾನೆ. ಕೇಳುತ್ತಿಲ್ಲ, ಪಿಸು ಮಾತು. ಇಬ್ಬರಿಗೂ ಆಚೀಚೆ ಗಮನವಿಲ್ಲ. ಅಬ್ಬ ಅವನಿಗೆ ಅದೆಂಥ ತಾದಾತ್ಮ್ಯ! ಅವನ ದೃಷ್ಟಿಯೆಲ್ಲ ಅವಳನ್ನೇ ಆವರಿಸಿಕೊಂಡಿದೆ..ಅವಳ ಮುಖವನ್ನು ಎಂದೂ ನೋಡೇ ಇಲ್ಲವೇ? ಹಾಗೆ ದಿಟ್ಟಿಸುತ್ತಿದ್ದಾನೆ. ಎಂಥ ಕ್ರೇಜಿ ಫೇಲೋ…ಅವನಿಗೆ ನಗದೆ ಮಾತನಾಡಲೇ ಬರುವುದಿಲ್ಲವೇನೋ, ದನಿಗೂಡಿಸಿ ನಗುವ ಅವನ ವೈಖರಿಯನ್ನೇ ವಿಭಾ ತದೇಕದೃಷ್ಟಿಯಿಂದ ನೋಡಿದಳು. ಅವನ ಮಾತಿನ ಚರ್ಯೆ, ಅವಳನ್ನು ಆವರಿಸುವಂತೆ ನೋಡುವ ನೆಟ್ಟನೋಟ. ಅವನ ಕಣ್ಣಪಾಪೆಯಿಂದ ಹೊರಚೆಲ್ಲುವ ನಗೆಯ ಹನಿಗಳಂಥ ಹೊಳಪನ್ನು ಅನುಭವಿಸುತ್ತ ಆಕೆ ಪುಲಕಗೊಳ್ಳುತ್ತಿರುವಳು. ಮಧ್ಯೆ ಮಧ್ಯೆ ಅವನ ಬಲಿಷ್ಠ ಕೈಬೆರಳುಗಳು ಅವಳ ಹಸ್ತವನ್ನು ಸೋಕಿದರೆ, ಇಲ್ಲಿ ವಿಭಳ ಮೈ ಜುಮ್ಮೆಂದು ಕಣ್ಣುಗಳು ಅಮಲಿನಿಂದ ಜೂಗರಿಸುವುವು. ಅವರಿಬ್ಬರದು ಗಾಢವಾದ ಮಾತೂಕತೆ. ಸುತ್ತಲ ಪರಿವೆಯಿಲ್ಲದೆ, ಇಬ್ಬರ ನೋಟಗಳೂ ಒಂದಾಗಿ ಬೆಸೆದು, ಕಿರುದನಿಯಲ್ಲಿ ಪಿಸುಗುಡುತ್ತ ತಮ್ಮ ಲೋಕದಲ್ಲಿ ಮುಳುಗಿಹೋಗಿದ್ದರು.

                 ವಿಭಳಿಗೆ ಇನ್ನವರ ಅನ್ಯೋನ್ಯತೆಯನ್ನು ವೀಕ್ಷಿಸಲಾಗದೆ ಕಣ್ಣಂಚು ತೇವವಾಗತೊಡಗಿತು….ಓ ನಾನೇನು ಪಾಪ ಮಾಡಿದ್ದೆ ಎಂದು ಉಮ್ಮಳಿಸಿದಳು ನಿಶಬ್ದವಾಗಿ.  

                ಇನ್ನು ಕೂರಲಾಗಲಿಲ್ಲ. ತಟ್ಟನೆ ಅಲ್ಲಿಂದ ಹೆಜ್ಜೆಯನ್ನು ಕದಲಿಸಿ ಮಹಡಿಯ ಮೆಟ್ಟಿಲುಗಳತ್ತ ನಡೆದಳು. ದೂರದಲ್ಲಿ ಕುಪ್ಪಳಿಸಿಕೊಂಡು, ವಯ್ಯಾರದ ನಡಿಗೆಯಲ್ಲಿ ತನ್ನ ಕಡೆಯೇ ಬರುತ್ತಿದ್ದ ಆ ನಗೆಮೊಗದ ಪರಿಚಿತ ಚೆಲುವೆಯನ್ನು ಕಂಡವಳು, ತಟ್ಟನೆ ತನ್ನ ಹೆಜ್ಜೆಯನ್ನು ಅಲ್ಲೇ ಕೀಲಿಸಿದಳು. ಶ್ವೇತವಸ್ತ್ರಧಾರಿಣಿಯಾದ ಅವಳು ಉತ್ಸಾಹದ ಚಿಲುಮೆಯಾಗಿ ವೇಗದ ಹೆಜ್ಜೆಗಳನ್ನಿರಿಸುತ್ತ ಇವಳ ಮುಂದೆಯೇ ಚಿಗರೆಯಂತೆ ಒನೆಯುತ್ತ ಹಾದುಹೋದಳು. ವಿಭಾ ಪ್ರತಿಮೆಯಾದಳು ಒಂದು ಕ್ಷಣ. ಆ ಚೆಲುವೆ ನರ್ಸ್ ಪ್ರವೇಶಿಸಿದ ಕೋಣೆಯ ಸಂಖ್ಯೆಯನ್ನು ಕಂಡು ದಡಬಡಾಯಿಸಿ ಅವಳನ್ನೇ ಹಿಂಬಾಲಿಸಿದಳು ಸರಸರನೆ.

                ವಿಭಳ ಹೃದಯ ಅರಿವಿಲ್ಲದೆ ಧಡಗುಟ್ಟುತ್ತಿತ್ತು. ಅವಳ ಆಗಮನ ಅಸಂತೋಷ ತಂದಿತ್ತು. ಕಾರಣ ಅದು ಅವನಿಗೆ ಸಂತೋಷ ತರುವುದೆಂದು. ತಮ್ಮ ಸ್ಪೆಷಲ್ ವಾರ್ಡಿನ ಬಾಗಿಲವರೆಗೂ ಬಂದ ವಿಭಾ, ಸದ್ದಿಲ್ಲದೆ ಕದಗಳ ಹಿಂದೆಯೇ ನಿಂತಳು ಕಿವಿಯಾನಿಸಿ.

                ` ಹಲೋ ಮಿ.ವಿವೇಕ್, ಹೌ ಆರ್ ಯೂ?…ಓಕೆ…ಗೆಲುವಾಗಿ ಕಾಣ್ತಿದ್ದೀರಾ..ಗುಡ್ ಗುಡ್…’ ಎಂದು ಮುಖವರಳಿಸಿ ನಕ್ಕು, ತನ್ನ ನಳಿದಾದ ತೋಳುಗಳನ್ನು ಅವನತ್ತ ಚಾಚಿದಳು. ವಿಭಳ ಕಾತರದ ಕಣ್ಣುಗಳು ಅಪ್ರಯತ್ನವಾಗಿ ಬಾಗಿಲ ಓರೆಯಿಂದ ಒಳಗಿನ ದೃಶ್ಯವನ್ನು ವೀಕ್ಷಿಸಲು ಪ್ರಯತ್ನಿಸಿದವು.

                ಆ ಸುರಸುಂದರಾಂಗ ವಿವೇಕನಿಗೇನು ಬಂತು ಧಾಡಿ, ಚೆನ್ನಾಗೇ ಇದ್ದಾನೆ, ಮುಖದಲ್ಲಿ ನೂರು ವೋಲ್ಟ್ಸ್ ಕಾಂತಿ!…ಅವಳನ್ನು ಕಂಡೊಡನೆ ಅವನ ಮುಖದ ತುಂಬ ಹಾಸಿದ ನಗು. ಅವನ ಚೆಲುವಾದ ಬಿಳುಪು ಮುಖ ಕೆಂಪಿನ ಓಕುಳಿಯಾಗಿದೆ!…ಕೆದರಿಹೋದ ಕೂದಲನ್ನು ಹಿಂದಕ್ಕೆ ಸವರಿಕೊಳ್ಳುತ್ತ `ಓ..ಬನ್ನಿ ಮೇಡಂ…ಬನ್ನಿ, ನೀವೇ ಪರೀಕ್ಷೆ ಮಾಡಿನೋಡಿ ನನ್ನ ಹೃದಯದ ಬಡಿತ ಹೇಗಿದೇಂತ’- ಎಂದು ಕಿರುನಗು ಬೀರುತ್ತ ಅನ್ನೋದೇ ಲೋಫರ್! ವಿಭಾಳ ಹೊಳ್ಳೆಗಳೆರಡೂ ಕೋಪದಿಂದ ಅರಳಿಕೊಂಡವು. ಎಂಥ ಫಟಿಂಗ ಇವನು, ಎಲ್ಲರೂ ನರ್ಸ್‍ಗಳನ್ನು ಸಿಸ್ಟರ್ ಅಂತ ಕರೆಯೋದು ಗೊತ್ತು, ಇದ್ಯಾವ ಸೀಮೆ ಸಂಭೋದನೆ ಇವನದು?!…ನರ್ಸ್ ಇವನಿಗೆ ಮೇಡಂ ಹೇಗಾದಾಳು?…ಸರಿ, ಬಿಟ್ಟರೆ, ಇವನು   ಅವಳನ್ನು `ಲಿಲ್ಲಿ’ ಅಂತಾನೂ ಕರೆದಾನು…ಹೂಂ…ಸಲುಗೇನಾ ತಾನೇ ಹಾರಿ ಕಸಿಯೋ ಕದೀಮ ಆಸಾಮಿ…

                ವಿವೇಕನ ಬಿಪಿ ಚೆಕ್‍ಮಾಡುವುದಕ್ಕಾಗಿ, ಅವನ ತೋಳ ಸುತ್ತ ಕಫ್ ಕಟ್ಟಲು ಮುಂಬಾಗಿದ ಅವಳ ಬಿಸಿಯುಸುರಿನ ಕಾವಿಗೆ ಉನ್ಮತ್ತನಾಗಿ ಅವನದಾವ ಲೋಕಕ್ಕೆ ಪಯಣಿಸಿದನೋ ಎಂಬಂತೆ ಅವನ ಕಣ್ಣುಗಳು ಅರ್ಧ ನಿಮೀಲಿತವಾಗಿದ್ದವು. ಅವಳ ಸಾನಿಧ್ಯದ ಸುಖ ಅನುಭವಿಸುತ್ತ ಭಾವುಕನಾಗಿದ್ದ. ಅಷ್ಟರಲ್ಲವಳು ತನ್ನ ಕೆಲಸ ಮುಗಿಸಿ `ಓಕೆ ‘ ಎನ್ನುತ್ತ ಹೊರಡಲನುವಾದಾಗ, ಅವನು ಚಡಪಡಿಸುತ್ತ, ಅಲ್ಲಿಂದ ಅವಳನ್ನು ಹೋಗಗೊಡದೆ `ಮೇಡಂ, ಒನ್ ಮಿನಿಟ್’ ಎಂದು ಸುಮ್ಮಸುಮ್ಮನೆ ಏನೇನೋ ಪ್ರಶ್ನೆಗಳನ್ನು ಒಂದರ ಮೇಲೊಂದು ಕೇಳುತ್ತ ಅವಳನ್ನಲ್ಲೇ ನಿಲ್ಲಿಸಿಕೊಳ್ಳಲೆತ್ನಿಸಿದ. ಅವನ್ನೆಲ್ಲ ಪ್ರಶ್ನೆಗಳಿಗೂ ಆ ಸುಂದರಿ ಬಹು ಸಹನೆಯಿಂದ ನಗುನಗುತ್ತಲೇ ಉತ್ತರಿಸುತ್ತಿದ್ದುದನ್ನು ಕಂಡು ವಿಭಳ ಮೈ ಉರಿದು ಹೋಯಿತು. ಒಳಗಿನ ನಾಟಕೀಯ ದೃಶ್ಯ ಕಂಡು ಹುಬ್ಬು ಗಂಟಿಕ್ಕಿದಳು-

                `ಛೇ ಇವನಿಗಂತೂ ಹೊತ್ತು ಹೋಗಲ್ಲ ಅಂದ್ರೆ, ಇವಳಿಗಾದರೂ ಕರ್ತವ್ಯಪ್ರಜ್ಞೆ ಬೇಡವೇ?…

                ನರ್ಸ್ ಹೊರಡಲುದ್ಯುಕ್ತಳಾದಂತೆ ವಿವೇಕನ ಮೊಗ ಪೆಚ್ಚಾಗಿತ್ತು. – `ನಿಮ್ಮ ಡ್ಯೂಟಿ ಅವರ್ಸ್ ಇನ್ನೇನು ಮುಗೀತಾ ಬಂತಲ್ವಾ ಮೇಡಂ…ಇನ್ನು ನಿಮ್ಮ ಮುಖದರ್ಶನ ನಾಳೆಯೇ…ರಾತ್ರಿ ನನಗೇನಾದ್ರೂ ಪ್ರಾಬ್ಲಂ ಆದರೆ ಯಾರು ಅಟೆಂಡ್ ಮಾಡ್ತಾರೆ……ಐ ಫೀಲ್ ಲೋನ್ಲೀ….ಅದೂ ಅಲ್ದೆ ರಾತ್ರಿ ಸರ್ಯಾಗಿ ನಿದ್ದೇನೇ ಬರಲ್ಲ’- ವಿವೇಕ್ ಸಪ್ಪಗಿನ    ದನಿಯಲ್ಲಿ ನುಡಿದ.

                `ಡೋಂಟ್ ವರಿ, ರಾತ್ರಿ ಸಿಸ್ಟರ್ ಬರ್ತಾರೆ, ನಿದ್ದೆ ಮಾತ್ರೆ ಕೇಳಿ ಬೇಕಾದ್ರೆ ಅವರನ್ನ,…ಷೀ ವಿಲ್ ಟೇಕ್ ಕೇರ್’ -ಎಂದು ಸಿಹಿಯಾಗಿ ನಕ್ಕವಳು, ಅವನ ರಾತ್ರಿಯ ಮಾತ್ರೆಗಳನ್ನು ತೆಗೆದಿಡುತ್ತ, `ಅಲ್ಲಾರೀ, ನಿಮ್ಮನ್ನ ಅಷ್ಟು ಚೆನ್ನಾಗಿ ನೋಡ್ಕೊಳ್ತಿರೋ ಹೆಂಡ್ತೀನಿಟ್ಕೊಂಡು ಯಾಕಷ್ಟು ಚಿಂತೆ ಮಾಡ್ತೀರಿ, ಹಾಯಾಗಿ ಮಲಗಿ, ಗುಡ್ ನೈಟ್ ‘ ಎನ್ನುತ್ತ ಬಾಗಿಲನ್ನು ದಾಟಿದ ನರ್ಸ್, ಹೊರಗೆ ನಿಂತಿದ್ದ ವಿಭಳ ಮುಖ ನೋಡಿ `ಓಹ್, ನೀವಿಲ್ಲೇ ಇದ್ದೀರಾ…ಒಳಗೆ ಹೋಗಿ, ನಿಮ್ಮವರು ಕೇಳ್ತಾ ಇದ್ರು…’ ಎಂದು ಸ್ನೇಹದ ಮುಗುಳ್ನಗು ಸೂಸಿ ಕೈಬೀಸಿ ಅಲ್ಲಿಂದ ಮುಂದೆ ಸಾಗಿದಳು.

                ಆದರೆ ವಿಭಾ ನಗಲಿಲ್ಲ. ಅವಳ ಮುಖಭಾವ ಕ್ರುದ್ಧವಾಗಿತ್ತು. ಭುಸುಗುಟ್ಟುತ್ತ ಒಳಬಂದವಳು,ಮಂಚದ ಮೇಲೆ ಕುಳಿತಿದ್ದ ಗಂಡನತ್ತ ಕಡೆಗಣ್ಣೂ ಹಾಯಿಸದೆ, ಮೇಜಿನ  ಮೇಲಿದ್ದ ಪತ್ರಿಕೆಯನ್ನು ಸಶಬ್ದವಾಗಿ ಕೈಗೆಳೆದುಕೊಂಡು, ಅವನಿಗೆ ಬೆನ್ನು ಹಾಕಿ, ಅದರಲ್ಲಿ ಮುಖ ಹುದುಗಿಸಿ ಕೂತಳು. ಅಸಮಾಧಾನದಿಂದ ಕುದಿಯುತ್ತ ಕುಳಿತವಳಿಗೆ, ನೆಟ್ಟಗೆ ಒಂದು ಸಾಲನ್ನೂ ಓದಲಾಗಲಿಲ್ಲ. ಮನಸ್ಸು ತಳಮಳಿಸುತ್ತಿತ್ತು. ಗಂಡನ ಬಗ್ಗೆ ಕುದಿತ ಆರಂಭವಾಗಿತ್ತು. ಕೈಹಿಡಿದ ಹೆಂಡತಿಯನ್ನು ನೆಟ್ಟಗೆ ಒಮ್ಮೆಯೂ ಈ ಪರಿ ದಿಟ್ಟಿಸಿ ನೋಡದವನು, ಈ ಆಸ್ಪತ್ರೆಗೆ ಸೇರಿದಾಗಿನಿಂದ ಈ ಲಿಲ್ಲಿ ಸಿಸ್ಟರ್ ಬಗ್ಗೆ ಇವನಿಗದೆಷ್ಟು ಆಸಕ್ತಿ?!…ಅವಳ ಬರವನ್ನೇ ಚಾತಕಪಕ್ಷಿಯಂತೆ ಕಾಯುತ್ತಾನೆ. ಕೊಂಚ ತಡವಾದರೂ ಚಡಪಡಿಸುತ್ತಾನೆ. ಹೆಂಗಸರೆಂದರೆ ಜೊಲ್ಲು ಸುರಿಸುವ ಜಾತಿಯವನಲ್ಲದಿದ್ದರೂ, ಅದೇನು ಅವಳಲ್ಲಿ ಅಂಥ ವಿಶೇಷ ಕಂಡ ನನ್ನಲ್ಲಿಲ್ಲದ್ದು?!…

                ಕೈಲಿದ್ದ ಪತ್ರಿಕೆ ಧಡಕ್ಕನೆ ಕೆಳಜಾರಿತು, ಜೊತೆಗೆ ಕಣ್ಣಹನಿಯೂ.

                ಯೋಚಿಸುತ್ತ ತಳಮಳಗೊಂಡ ವಿಭಳ ಮನಸ್ಸು ಅಂತರ್ಮುಖವಾಗಿ ಬಿಕ್ಕಳಿಸತೊಡಗಿತು. ನಾನೇನು ಅಂಥ ತಪ್ಪು ಮಾಡಿದೆ?…ನನ್ನನೇಕೆ ಇವನು ಇಷ್ಟು ಮಾನಸಿಕವಾಗಿ         ಹಿಂಸಿಸಬೇಕು? ಏಕಾಂತದಲ್ಲಿ ಒಂದು ಸುಂದರ ಹೆಣ್ಣು, ಅದೂ ಶಾಸ್ತ್ರೋಕ್ತವಾಗಿ ಕೈಹಿಡಿದ ಹೆಂಡತಿ ಬಳಿಯಿದ್ದರೂ ಈ ಅನಾಸಕ್ತಿ, ಅರಸಿಕತೆ ಅಥವಾ ಯಾವ ಪೂರ್ವಾಗ್ರಹ    ಭಾವನೆ ಇವನನ್ನು ಕಾಡುತ್ತಿದೆ? ಬಾಯಿ ಬಿಟ್ಟು ಹೇಳಿದರೆ ತಾನೆ ಅರ್ಥವಾಗಲು?..ಯಾಕಿಂಥ ನಿಗೂಢ ವ್ಯಕ್ತಿತ್ವ! ಗಂಡನೆನಿಸಿಕೊಂಡವನು ಇಷ್ಟು ಹಟ ಸಾಧಿಸಿ ನೋಯಿಸುವುದು ತರವೇ ಎಂದು ಯೋಚಿಸುತ್ತ, ಕಣ್ಣಂಚಿನ ಹನಿಯನ್ನು ತೊಡೆದುಕೊಂಡವಳು, ಮೆಲ್ಲನೆ ಅವನತ್ತ ಕಳ್ಳನೋಟ ಹರಿಸಿದಳು.

                ನಿದ್ದೆ ಬಂದವನಂತೆ ಕಣ್ಮುಚ್ಚಿ ಮಲಗಿದ್ದನವನು. ಅವನಿಗೆ ನಿದ್ದೆ ಬಂದಿಲ್ಲವೆಂದು ಅವಳಿಗೆ ಚೆನ್ನಾಗಿ ಗೊತ್ತು. ಅವನ ಕಣ್ಣ ಪರದೆಯ ತುಂಬ ಆ ಸುಂದರ ನರ್ಸಿನ ಚಿತ್ರವೇ ಪಸರಿಸಿಕೊಂಡಿದೆಯೆಂಬುದನ್ನು ಬಲ್ಲಳವಳು. ಹಾಗೆಂದು ಯೋಚಿಸುತ್ತಿದ್ದಂತೆ ಒಮ್ಮೆಲೆ ವಿಭಳ ಉಚ್ವಾಸ-ನಿಶ್ವಾಸವೇರಿತು…ಎದೆಬಡಿತ ಜೋರಾಯಿತು. ಕೋಪದಿಂದ ಮೂಗಿನ ಹೊಳ್ಳೆಗಳು ಅರಳಿದವು. ತನ್ನ ಪಾಲಿಗೆ ಹರಳೆಣ್ಣೆಯಾದ ಅವನ ಮುಖ, ಆವಳ ಮುಖ ನೋಡುತ್ತಿದ್ದ ಹಾಗೆ ಅದ್ಹೇಗೆ ತಟ್ಟನೆ ಬದಲಾಗಿ, ನಳನಳಿಸುವ ಹೂವಿನಂತೆ ಬಿರಿಯುತ್ತದಲ್ಲ ಎಂಬ ಭಾವ ಹಾದು ಕಡುಗೋಪದಿಂದ ಕಂಪಿಸಿದಳು….ಹತ್ತಾರು ನಿಮಿಷ, ವಿಭಾ ಅದೇ ಭಾವನೆಯಲ್ಲಿ ಹರಳುಗಟ್ಟಿ ಹೋಗಿದ್ದಳು.

                ಹೊರಗಿನಿಂದ ತೂರಿಬಂದ ಯಾವುದೋ ನರಳಾಟ ಕೋಣೆಯ ತುಂಬ ಗರ್ಭಕಟ್ಟಿದ್ದ ಮೌನವನ್ನು ಧುತ್ತೆಂದು ಕಡಿದೊಗೆದಾಗ ವಿಭಾ ಎಚ್ಚರಗೊಂಡಳು.

 ಮತ್ತೆ ಉಸಿರುಗಟ್ಟಿಸುವ ಮೌನ!!…ಹೊಟ್ಟೆ ತೊಳೆಸಿದಂತಾಗಿ ವಿಭಾ ಬಾತ್‍ರೂಮಿಗೆ ಧಾವಿಸಿದಳು. ಮನದಧಗೆ ಹೊರಗುಕ್ಕಿ ಮೊಗದ ತುಂಬ ಬೆವರ ತುಂತುರು. ತಣ್ಣನೆಯ ನೀರನ್ನು ಮುಖಕ್ಕೆರಚಿಕೊಂಡಾಗ ಕೊಂಚ ಹಾಯೆನಿಸಿತವಳಿಗೆ….ಹೊರಗೆ ಬರುವ ಮನಸ್ಸಾಗದೆ ಅಲ್ಲೇ ಕ್ಷಣಕಾಲ ಮುಖ ಹಿಂಡಿಯೇ ನಿಂತುಕೊಂಡಿದ್ದಳು. ಅವನು ತನ್ನತ್ತ ಒಮ್ಮೆಯೂ ತಿರುಗಿ ನೋಡದಿದ್ದರೂ ಅವನ ತೀಕ್ಷ್ಣ ಕಣ್ಣೋಟ ತನ್ನನ್ನೇ ತಿವಿಯುತ್ತಿರುವಂತೆ ಭಾಸ. ತನ್ನತ್ತ ಹೇವರಿಕೆಯಿಂದ ನೋಡಲೂ ಬಯಸದ ಅವನ ನಿಷ್ಪಂದಭಾವ ಅವಳನ್ನು ಕುಟುಕಿತು. ಛೇ….ಕನಸಗುದುರೆಯೇರಿ ನಾಗಾಲೋಟದಿಂದ ಕ್ರಮಿಸಿ ಬಂದವಳ ಕುದುರೆಯ ಕಾಲು ಅನಾಮತ್ತು ಕುಂಟಾಗಿ ಮುಗ್ಗರಿಸಿಬಿದ್ದಂತೆ, ತಲೆತಿರುಗಿ ಮುಂದಕ್ಕೆ ಬಾಗಿದವಳು, ಗೋಡೆಗಾತು ಹೇಗೋ ನಿಂದಳು. ಪೇರುಸಿರು ಚೆಲ್ಲುತ್ತ ನಿಂತ ವಿಭಾ ತನ್ನ ದುರಾದೃಷ್ಟವನ್ನು ಹಳಿದುಕೊಳ್ಳುತ್ತ ಕೋಪದಿಂದ ತನ್ನ ಕೈ ಹಿಸುಕಿಕೊಂಡಳು.

                 ಐದ್ಹತ್ತು ನಿಮಿಷ…ಎಷ್ಟು ಹೊತ್ತುತಾನೇ ಇಲ್ಲೇ ಬಚ್ಚಿಟ್ಟುಕೊಂಡಿರಲು ಸಾಧ್ಯ ಎಂದುಕೊಂಡವಳು, ಹೊರಗೆ ಬಂದು ಒಲ್ಲದ ಅವನ ಮುಂದೆ ಸುಳಿದಾಡುವುದು ಕೂಡ ಅಸಹ್ಯವೇ ಎನಿಸಿತು. ಹೀಗೆ ದಿಕ್ಕುಗಾಣದೆ ಅಲ್ಲೇ ಹೆಜ್ಜೆ ತಡೆದು ನಿಂತವಳು, ಏನಾದರಾಗಲಿ ತಡರಾತ್ರಿಯವರೆಗೂ ಹೊರಗೆ ಕಾರಿಡಾರಿನಲ್ಲೇ ಕಾಲ ಕಳೆದರಾಯ್ತೆಂದು ನಿರ್ಧರಿಸಿ ಬಾಗಿಲು ತೆರೆಯಲು ಅಗಳಿಗೆ ಕೈಹಾಕಿದವಳು ಷಾಕ್ ಹೊಡೆದವಳಂತೆ ಅಲ್ಲೇ ನಿಂತಳು. 

                ರೂಮಿನೊಳಗಿಂದ ಕೇಳಿಬಂದ ಪ್ರಿಯದನಿಗೆ ಮೈಜುಮ್ಮೆಂದಿತು. ಮೈಯಲ್ಲಿ ಖುಷಿಯ ಸಂಚಾರ!

                ಕಣ್ರೆಪ್ಪೆಗಳನ್ನು ರೆಕ್ಕೆಯಂತೆ ಪಟಪಟನೆ ಬಡಿದು, ಕನ್ನಡಿಯತ್ತ ತಿರುಗಿ ನೋಡಿದವಳು, ನಾಲಗೆ ಕಚ್ಚಿಕೊಂಡು, ಕೆದರಿದ ಕುರುಳನ್ನು ಒಪ್ಪ ಮಾಡಿಕೊಂಡು, ಸೀರೆಯ ನೆರಿಗೆಗಳನ್ನು ಸರಸರನೆ ಸರಿಪಡಿಸಿಕೊಂಡು ನವವಧುವಿನಂತೆ ಮೆಲ್ಲನೆ ಹೆಜ್ಜೆಕಿತ್ತಿಡುತ್ತ ಬಾಗಿಲ ಚಿಲಕವನ್ನು ನಿಶ್ಶಬ್ದವಾಗಿ ಸಡಿಲಿಸಿದಳು.

                 ಓಹ್!! ಎದುರಿಗೆ ನಿಂತಿದ್ದ ಮನ್ಮಥಮೂರ್ತಿಯನ್ನು ಕಂಡವಳ ಎದೆ ಸ್ತಬ್ಧವಾಯಿತು. ಮೈಯಲ್ಲಿ ಕಾಣದ ಪುಳಕ…ಸಣ್ಣ ನಡುಕ…ಸಂತಸದಿಂದ ಮುಖದ ಸ್ನಾಯುಗಳು ಕಂಪಿಸಿದವು!!!…

                `ಏನ್ ಮೇಡಂ, ಏನ್ ಅನ್ತಾರೆ ಯಜಮಾನ್ರು…ನಿಜ ಹೇಳಬೇಕೂಂದ್ರೆ ನಾವಲ್ಲ ಡಾಕ್ಟ್ರು, ನೀವು…ನಿಮ್ಮ ಪ್ರೀತಿಯ ಆರೈಕೆಗೆ ಇವರ ಜ್ವರ ಹಾರಿಹೋಗಿದೆ ನೋಡಿ…ಇವತ್ತಂತೂ ತುಂಬಾ ಗೆಲುವಾಗಿದ್ದಾರೆ…ನಾಳೆ, ನಾಡಿದ್ರಲ್ಲಿ ಡಿಸ್‍ಛಾರ್ಜ್ ಮಾಡಬಹುದು’

                ಎದುರಿಗೆ ನಿಂತಿದ್ದ ಚೆಲುವನ ಮಾತುಗಳು ಅವಳ ಕಿವಿಯೊಳಗೆ ಹೋಗುವ ಬದಲು, ಅವಳ ಕಂಗಳು ಎವೆಯಿಕ್ಕದೆ ಅವನ ಅರಳುವ ಸುಳಿದುಟಿಗಳನ್ನೇ ದಿಟ್ಟಿಸುತ್ತಿದ್ದವು ಮೈಮರೆತು. ಅವನ ಮುಖದತುಂಬ ಚೆಲ್ಲಿದ್ದ ನಗುವನ್ನು ಎದೆಗೊತ್ತಿಕೊಳ್ಳುತ್ತ ಅವಳು ತೊದಲಿದಳು-` ಇವರು ಪೂರ್ತಿ ಗುಣವಾಗೋವರೆಗೂ ನಾವು ಇಲ್ಲಿಂದ ಕದಲೋದಿಲ್ಲ ಡಾಕ್ಟರ್…ನಿಮ್ಮ ಕೇರ್ ನಮಗೆ ತುಂಬ ಮುಖ್ಯ…’ ಎಂದ ವಿಭಾ ಯುವವೈದ್ಯನ ಮೊಗವನ್ನೇ ತನ್ಮಯಳಾಗಿ ದಿಟ್ಟಿಸಿದಳು ತನ್ನ ಮಾತಿನ ಅರ್ಥವರಿಯದೆ.

                ವಿವೇಕನೂ ತಟ್ಟನೆ ಅವಳ ನುಡಿಗೆ ದನಿಗೂಡಿಸುತ್ತ-`ಎಸ್ ಡಾಕ್ಟರ್, ಮನೆಗ್ಹೋಗಿ ಮತ್ತೆ ರಿಲ್ಯಾಪ್ಸ್ ಆದರೇನು ಗತಿ, ಹಣ ಖರ್ಚಾದರೂ ಚಿಂತೆಯಿಲ್ಲ, ನಾನು ಈಗಲೇ   ಮನೆಗೆ ಹೋಗಕ್ಕೆ ತಯಾರಿಲ್ಲ, ಇನ್ನು ಸ್ವಲ್ಪ ದಿನ ಇಲ್ಲೇ ಇರ್ತೀನಿ’ ಎಂದು ಖಡಾಖಂಡಿತವಾಗಿ ನುಡಿದಾಗ ಅವಳಿಗೆ ಹಿಗ್ಗೋ ಹಿಗ್ಗು. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಖುಷಿ ಇಬ್ಬರಿಗೂ. ಯಾವ ವಿಷಯದಲ್ಲಿ ಒಮ್ಮತವಿಲ್ಲದಿದ್ದರೂ ಈ ದಿನ ಎರಡು ವಿರುದ್ಧ ಧೃವಗಳು ಒಂದಾಗಿದ್ದವು. 

                ಡಾ. ಸುದೀಪ್ ಬರಿದೇ ನಕ್ಕ ಸುಳಿಗಲ್ಲದ ಮೇಲೆ ಗುಳಿ ಬೀಳುವಂತೆ. ವಿಭಾಳಿಗಂತೂ ಪ್ರಜ್ಞೆಯೇ ತಪ್ಪಿಹೋದಂತಾಯಿತು. ಇನ್ನೇನು ಅವನು ಕೋಣೆಯಿಂದ ನಿಷ್ಕ್ರಮಿಸುತ್ತಾನೆನ್ನುವಷ್ಟರಲ್ಲಿ ನಿರಾಶಳಾದ ಅವಳು ಬವಳಿಬಂದಂತಾಗಿ ಜೂಗರಿಸಿದಳು. ತಟ್ಟನೆ ಸುದೀಪ್, ತನ್ನ ಸದೃಢ ಬಾಹುಗಳಿಂದ ಅವಳನ್ನು ಬಳಸಿ, ಎದುರಿಗಿದ್ದ ಬೆಡ್ಡಿನ ಮೇಲೆ ಕೂಡಿಸುತ್ತ-`ಮೇಡಂ, ಆರ್ ಯೂ ಆಲ್ ರೈಟ್?’ ಎಂದು ಅವಳ ಕೈಹಿಡಿದು ನಾಡಿ ಪರೀಕ್ಷಿಸತೊಡಗಿದ. ಸ್ಟೆತಾಸ್ಕೋಪನ್ನೆತ್ತಿ ಅವನು ಅವಳೆದೆಯ ಮೇಲಿಟ್ಟಾಗ, ವಿಭಳಿಗೆ ಮೈಜುಮ್ಮೆಂದು ಓ..ಈಗಲೇ ತನ್ನ ಪ್ರಾಣ ಹಾರಿಹೋಗಬಾರದೇ ಎಂಬ ಕನವರಿಕೆ. ಅವನ ಬಿಸುಪಿನ ಹಸ್ತಸ್ಪರ್ಶಕ್ಕೆ ಜೋಂಪಿಡಿದು ಅವಳ ಉಸಿರಾಟ ಜೋರಾಯಿತು. ಜ್ವರವಿದೆಯೇ ಎಂದವನು  ಪರೀಕ್ಷಿಸಲು ಅವಳ ಹಣೆಯಮೇಲೆ ಕೈಯೊತ್ತಿದಾಗ ಅವಳು ಸುಖದಿಂದ ಉಲಿದಳು. ಆದರವನು ಅವಳ ಅಂತರಂಗದೊಳಗಿನ ಮಿಡಿತವನ್ನು ಗುರುತಿಸಲಾರದೆ, ಗಂಭೀರವಾಗಿ       `ಸ್ವಲ್ಪ ರೆಸ್ಟ್ ತೊಗೊಳ್ಳಿ ನೀವು’ ಎಂದವಳ ಭುಜಗಳನ್ನು ಹಿಂದಕ್ಕೆ ಮೆಲ್ಲನ್ನೊತ್ತಿ, ಬಾಗಿ ಅವಳನ್ನು ಹಾಸಿಗೆಯ ಮೇಲೊರಗಿಸಿದ. 

                ಅವನ ಹಸ್ತಸ್ಪರ್ಶದ ಬಿಸುಪಿನಲ್ಲಿ ಮೀಯುತ್ತ ಅವಳ ಕಣ್ಣುಗಳು ತನಗೆ ತಾನೇ ಮುಚ್ಚಿಕೊಂಡವು, ಸುತ್ತಲ ಪ್ರಪಂಚ ಮರೆತು ಕನಸಿನಲೋಕಕ್ಕೆ ಹಾರಿಹೋದಳು ವಿಭಾ!…ಕಲ್ಪನೆಗಳು ಗರಿಗೆದರಿ ಹಾರಾಡಿದವು…..ತಾನೆಂದರೆ ಜೀವಬಿಡುವ, ತನ್ನ ಹಿಂದೆ ಮುಂದೆಯೇ ಸದಾ ಸುಳಿದಾಡುವ ಪ್ರಿಯಕರ, ತನ್ನನ್ನೊಂದರಗಳಿಗೆಯೂ ಅಗಲಿರಲಾರ. ತನ್ನ ಬೇಕು ಬೇಡಗಳನ್ನು ಚೆನ್ನಾಗಿ ಬಲ್ಲವನು. ಮನಸ್ಸಿನೊಳಗಿನ ಪಲುಕುಗಳಲ್ಲೇ ತನ್ನ ಭಾವನೆಗಳನ್ನರಿತು ಅದರಂತೆ ನಡೆಯುವವನು. ತಮಾಷೆಗೂ ತನ್ನ ಮನಸ್ಸನ್ನು ನೋಯಿಸದವ, ಮನಸ್ಸಿನ ಪದರ ಪದರವನ್ನೂ ಅರ್ಥ ಮಾಡಿಕೊಂಡ ಆಪ್ತಸಖ….ತನ್ನ ಭೀಮಬಲದ ತೋಳುಗಳಲ್ಲಪ್ಪಿ ಅಪರಿಮಿತ ನಿಷ್ಕಳಂಕ ಪ್ರೀತಿಸೂಸಿ, ಸುಖಧಾರೆಗೈವ ಮನ್ಮಥ!….ಯಾವ ಅರೆ ಕೊರೆಯೂ ಇಲ್ಲದಂತೆ ನೋಡಿಕೊಳ್ಳುವ ಒಲವಿನ ಪತಿಯೊಡನಾಟದ ವರ್ಣರಂಜಿತ ಚಿತ್ರಗಳನ್ನು ತನ್ನೆದೆಯ ಗೂಡಲ್ಲಿ ಭದ್ರವಾಗಿರಿಸಿಕೊಂಡು ನೆಮ್ಮದಿಯಿಂದ ನಿದ್ದೆ ಹೋದವಳನ್ನು,  ಯಾರೋ ಒರಟಾಗಿ ಹಿಡಿದಲುಗಿಸಿದಂತಾಗಿ ಬೆಚ್ಚಿಬಿದ್ದೆದ್ದು ಕೂತಳು ವಿಭಾ.

                ನೈಟ್‍ಡ್ಯೂಟಿಯ ಧಡೂತಿ ಹೆಂಗಸು-`ನಿನ್ನ ಗಂಡನಿಗೆ ಏನಾಗಿದೆಯಮ್ಮಾ…ಹೇಳಿದ ಮಾತು ಕೇಳೋದೇ ಇಲ್ಲ..ಅಲ್ನೋಡು ಹಿಮ ಸುರಿಯೋ ಈ ರಾತ್ರೀಲಿ ಹೊರಗೆ ಹೇಗೆ ವರಾಂಡದಲ್ಲಿ ನಿಂತಿದ್ದಾನೆ ಆಕಾಶ ನೋಡ್ತಾ…ಏನು ಕನಸು ಕಾಣ್ತಾ ಬೆಳಗ್ಗೆವರೆಗೂ ಹಾಗೇ ಅಲ್ಲೇ ನಿಂತಿರ್ತಾನೋ ಹೇಗೆ? ನೀನಾದ್ರೂ ಸ್ವಲ್ಪ ಹೇಳು, ಇಲ್ಲದಿದ್ರೆ ರಿಲ್ಯಾಪ್ಸ್ ಆಗೋದಂತೂ ಖಂಡಿತಾ…ಹೂಂ…ನನ್ನ ಮುಖ ಕಂಡರೆ, ತನ್ನ ಮುಖಾನಾ ಆ ಕಡೆ ತಿರುಗಿಸ್ತಾನೆ ಮಾರಾಯಾ…ಇಲ್ಲಪ್ಪ, ನನ್ನ ಕಂಡ್ರೆ ಆಗಕ್ಕಿಲ್ಲ ಆಯಪ್ಪನಿಗೆ’-ಎಂದು ದೊಡ್ಡ ದೂರಿನ ಪಟ್ಟಿಯನ್ನೇ ಅವಳ ಮುಂದೆ ಒಪ್ಪಿಸತೊಡಗಿದಳು.

                ಕನಸಿನರಮನೆಯ ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದವಳನ್ನು ಒಮ್ಮೆಲೆ ಧುಡುಮ್ಮನೆ ಕೆಳಗೆ ನೂಕಿದಂತೆ ರಸಭಂಗವಾಯ್ತು ವಿಭಳಿಗೆ. ಆ ಹೆಂಗಸಿನ ಮಾತುಗಳನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಹೊತ್ತೇ ಬೇಕಾಯ್ತವಳಿಗೆ. ಗಂಡನ ಹಟದ ಮೊಂಡುಸ್ವಭಾವ ಬಲ್ಲ ಅವಳಿಗೆ ಅದೇನಂಥ ವಿಚಿತ್ರವೆನಿಸಲಿಲ್ಲ. ಅವನನ್ನು ಓಲೈಸಿ ಒಳಗೆ ಕರೆತರುವುದಂತೂ ತಾನೊಲ್ಲದ ದೂರದ ಮಾತು. ಏತಿ ಎಂದರೆ ಪ್ರೇತಿ ಎನ್ನುವ ಅವನ ಚಂಡಿಗುಣ ತನಗೇನು ಹೊಸದೇ?…ಮುತ್ತಿನಂಥ ಹೆಂಡತಿ ಎದುರಿಗಿದ್ದರೂ ಕುರುಡನಂತಿರುವ ಅವನದು ಮೂರ್ಖತನವೋ, ಅಹಂಕಾರವೋ, ಅರಸಿಕತನವೋ ತನಗಂತೂ ಈ ಒಗಟು ಇನ್ನೂ ಅರ್ಥವಾಗಿಲ್ಲ. ಹಿರಿಯರು ಹಾಕಿದ ಗಂಟು, ಒಪ್ಪಿಕೊಂಡೇ ಅವನು ಮದುವೆಯಾಗಿದ್ದು. ನೋಡಲು ಸುಂದರ, ವಿದ್ಯಾವಂತ, ಒಳ್ಳೆಯ ಉದ್ಯೋಗ ಎಲ್ಲ ಇದ್ದರೂ ಸುಖವಾಗಿರೋದು ಅವನ ಹಣೆಯಲ್ಲಿ ಬರೆದಿಲ್ಲವೋ ಅಥವಾ ಅವನಿಗೇ ಅದು ಬೇಕಿಲ್ಲವೋ.

                 ಗಂಡನ ವಿಕ್ಷಿಪ್ತ ಸ್ವಭಾವದ ಬಗ್ಗೆ ವಿಶ್ಲೇಷಣೆಗೆ ತೊಡಗಿತ್ತು ಅವಳ ಮನಸ್ಸು. ಅವನ ಸ್ವಭಾವವೇ ವಿಚಿತ್ರ. ಮೇಲ್ನೋಟಕ್ಕೆ ಯಾರೂ ಅವನು ಹೀಗೆ ಎಂದರೆ ನಂಬರು. ಬಹು ಸಭ್ಯಸ್ಥನಾಗಿ,ವಿನೀತನಾಗಿ ಕಾಣುವ ಅವನ ಒರಟುತನ, ಮೃಗತ್ವ ಬಲ್ಲವಳು ಅವಳು ಮಾತ್ರ. ಹುಟ್ಟು ಅರಸಿಕನಿರಬೇಕು, ಗಂಡಸಿಗಿರಬೇಕಾದ ಯಾವ ಸಹಜ ಆಸೆ-ಆಕಾಂಕ್ಷೆಗಳೂ ಅವನಿಗಿಲ್ಲವೆಂದು ತನಗೆ ಭಾಸವಾದರೂ ಅಥವಾ ಗುಪ್ತಗಾಮಿನಿಯಂತೆ ಇರಬಹುದಾದರೂ, ಪ್ರೀತಿಯನ್ನು ನಿರುಮ್ಮಳವಾಗಿ ವ್ಯಕ್ತಪಡಿಸಲಾರದಷ್ಟು ಕೃಪಣನವನು. ಹೆಂಡತಿಯ ಬಳಿಸಾರಿದರೆ, ಅದನ್ನವಳು ತನ್ನ ದೌರ್ಬಲ್ಯವೆಂದು ತಿಳಿದು, ನಂತರ ತನ್ನ ಮೇಲೆ ಸವಾರಿಗೈದರೇ ಎಂಬ ಭಯವೋ, ಅಳುಕೋ ಎಂಬುದವಳಿಗೆ ಅಸ್ಪಷ್ಟ.

                 ಸರಸಕ್ಕೆ ಸಂಕೋಚಪಡುವ ಅವನು, ಹೆಂಡತಿಯೊಂದಿಗಿನ ಪ್ರೀತಿಯ ಕ್ಷಣಗಳಲ್ಲಿ ತಾನವಳಿಗೆ ಶರಣಾದಂತೆ,ಸೋಲೊಪ್ಪಿಕೊಡಂತೆ ಎಂಬ ಸಂಕೀರ್ಣ ಭಾವ. ಆದ ಕಾರಣ ಅವಳಿಗಷ್ಟು ಸಲುಗೆ ಕೊಡಬಾರದು, ಬಿಗಿಯಾಗೇ ಇರಬೇಕೆಂಬ ಪೂರ್ವನಿರ್ಧರಿತ ನೂರೆಂಟು ಊಹಾಪೋಹಗಳು ಅವನನ್ನು ಬಿಟ್ಟೂ ಬಿಡದೆ ಕಾಡುತ್ತಿದ್ದವು. ಜೊತೆಗೆ ಸರಳವಾಗಿ, ಸಹಜವಾಗಿ ಇರಗೊಡದ ಅವನ ಒಣಜಂಭ, ಅಹಂಭಾವಗಳು ಅವನನ್ನು ಕಟ್ಟಿಹಾಕಿದ್ದವು ಕೂಡ. ಹೀಗಾಗಿ ಅವನವಳ ಮುಂದೆ ಮುಕ್ತವಾಗಿ ನಡೆದುಕೊಳ್ಳದೆ ಬಿಂಕದಿಂದ ಬಿಗಿದುಕೊಂಡೇ ಇದ್ದನೆಂಬುದು ಅವಳಿಗೆ ಗೊತ್ತಿಲ್ಲ. ಗಂಡನ ವಿಚಿತ್ರ ಸ್ವಭಾವದ ಬಗ್ಗೆ ತಲೆಕೆಡಿಸಿಕೊಂಡಿದ್ದಳು. 

                ಹಾಗೆ ನೋಡಿದರೆ ಮದುವೆಯಾದ ಹೊಸತರಲ್ಲಿ ಎಲ್ಲವೂ ಸರಿಯಾಗೇ ಇದ್ದವು. ಮಿತಭಾಷಿಯಾದ ವಿವೇಕ ಹೊಸಹೆಂಡತಿಯ ಬಳಿ ಕೊಂಚ ಸಂಕೋಚವಾಗೇ ವರ್ತಿಸಿದ್ದ. ಅಷ್ಟು ಸುಲಭವಾಗಿ ಬಿಚ್ಚಿಕೊಳ್ಳದ ಅವನ ಮನಸ್ಸು ಕ್ರಮೇಣ ಅರಳಿಕೊಳ್ಳುವುದೆಂಬ ಅವಳ ನಿರೀಕ್ಷೆ ಹುಸಿಯಾಗಿತ್ತು. ಅವರೀರ್ವರ ನಡುವೆ ಹೊಂದಾಣಿಕೆ ಸ್ಥಾಪಿತವಾಗಲು ಕೊಂಚ ಕಾಲ ಬೇಕಿತ್ತು. ಆದರೆ ಆ ಶುಭಗಳಿಗೆ ಅವಳ ಪಾಲಿಗೆ ಬರಲೇಇಲ್ಲ. ಅವಳನ್ನು ಅರ್ಥಮಾಡಿಕೊಳ್ಳುವ ಮುನ್ನವೇ ಅಪಾರ್ಥ ನಿರ್ಮಾಣದ ಸನ್ನಿವೇಶ ಎದುರಾಗಿತ್ತು. ಅವರೀರ್ವರ ನಡುವೆ ದೊಡ್ಡ ಗೋಡೆಯಾಗಿ ನಿಂತವರು ಅವನ ತಾಯಿ ಮತ್ತು ತಂಗಿ. ಹೊಸಹೆಂಡತಿಯ ಮಗ್ಗುಲಿಗೆ ನಿಂತ ಮಗನನ್ನು ಕಂಡು ಆಕೆ, ಎಂದೂ ಅನುಭವಿಸಿರದ ಈರ್ಷೆಯ  ಭಾವದಿಂದ ತಳಮಳಿಸಿದರೆ, ಅವನ ಪ್ರೀತಿಯ ತಂಗಿಗೆ ಅವರನ್ನು ಜೊತೆಯಲ್ಲಿ ಕಂಡಾಗ ಏನೋ ಅರೆಕೊರೆಯ ಸಂಕಟ,ಅವ್ಯಕ್ತ ಮುನಿಸು ಕಾಡಲಾರಂಭಿಸಿತ್ತು. ಇದುವರೆಗೂ ತಾಯಿ-ತಂಗಿಯನ್ನೇ ಸರ್ವಸ್ವವೆಂದು ಭಾವಿಸಿದ್ದ ಅವನ ಪ್ರೀತಿ, ಈಗ ಪಾಲಾಗುವುದನ್ನು ಇಬ್ಬರೂ ಸಹಿಸದಾದರು. ದಿನಾ ಮನೆಗೆ ಬರುತ್ತಿದ್ದ ಹಾಗೆ ತಾಯಿ ವಿಭಳ ಮೇಲೆ ಇಲ್ಲದ ದೂರು        ಸಲ್ಲಿಸುತ್ತಿದ್ದರೆ, ತಂಗಿ ಮುಖ ಊದಿಸಿಕೊಂಡು-`ತಾನೇ ತುಂಬ ಓದಿದ್ದೀನೀಂತ ಜಂಭ ಕಣೋ….ಅವಳಾಯ್ತು, ಅವಳ ರೂಮಾಯ್ತು, ನಮ್ಮಗಳ ಜೋತೆ ಬೆರಯೋದೇ ಇಲ್ಲ,  ಅಮ್ಮನ್ನೂ ಕೇಳು ನೋಡು ಬೇಕಾದ್ರೆ’ ಎಂದು ಚಾಡಿಕೊರೆದಾಗ, ವಿವೇಕನ ವಿವೇಕವೆಲ್ಲಿ ಜಾರಿಹೋಗಿರುತ್ತಿತ್ತೋ, ಈ ಬಗ್ಗೆ ವಿಭಳಲ್ಲಿ ಏನೂ ವಿಚಾರಿಸದೆ, ಮೌನವಾಗಿ ಗೋಡೆ ಕಡೆ ತಿರುಗಿ ಮಲಗಿ ಬಿಡುತ್ತಿದ್ದ. ಆಗೆಲ್ಲ ಅವಳಿಗೂ ಅಷ್ಟೇ ಬಿಂಕ ಅಡ್ಡ ಬರುತ್ತಿತ್ತು. ಗಂಡಸಾದವನು ತನ್ನತ್ತ ಹೊರಳಿ ಮುಂದುವರಿಯಬೇಕೋ ಅಥವಾ ನಾಚಿಕೆ ಬಿಟ್ಟು ತಾನೇ ಅವನ ಮೇಲೆ ಬೀಳಬೇಕೋ ಎಂಬ ಜಿಜ್ಞಾಸೆ. ಅವನು ಗೇಣು ಬಿಟ್ಟರೆ ಇವಳು ಮಾರು ಬಿಡುವಷ್ಟು ಸ್ವಾಭಿಮಾನಿ…..ದೂರ, ದೂರವೇ ಆಯಿತು. ತಾತ್ಕಾಲಿಕ ದೂರ ಸರಿಯತೊಡಗಿದ್ದು  ಬರುಬರುತ್ತ ಅದು ಗಂಭೀರ ಸ್ವರೂಪ ತಳೆದು, ಅವರಿಬ್ಬರೂ ಒಂದೇ ಹಾಸಿಗೆಯ ಮೇಲಿದ್ದರೂ ಅಪರಿಚಿತರಾಗೇ ಉಳಿದುಬಿಟ್ಟರು. ಇಬ್ಬರೂ ಸೋಲಲಿಲ್ಲ. ಅವರನ್ನು ಒಂದು ಮಾಡುವುದು ಮನೆಯವರಿಗೂ ಬೇಕಿರಲಿಲ್ಲ.

                ಈ ಮಧ್ಯೆ ಅನಿರೀಕ್ಷಿತ ಘಟನೆಗಳು ನಡೆದವು. ತಂಗಿ ಕೆಲವೇ ತಿಂಗಳಲ್ಲಿ ಮದುವೆಯಾಗಿ ಗಂಡನ ಮನೆ ಸೇರಿದ್ದಳು. ತಾಯಿ ಒಂದೆರಡು ವರ್ಷಗಳಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಮರಣಿಸಿದ್ದರು. ಮನೆಯಲ್ಲೀಗ ಅವರಿಬ್ಬರನ್ನು ಬೇರ್ಪಡಿಸುವವರಾರೂ ಇಲ್ಲದಿದ್ದರೂ ಹಳೆಯ ಅಭ್ಯಾಸವೇ ಮುಂದುವರಿದಿತ್ತು. ಅವರೀರ್ವರ ನಡುವೆ ಯೋಜನ ದೂರದ ಅಂತರ ಬೆಳೆದಿತ್ತು. ಅವನ ಕಠೋರನಡೆ ಅವಳಿಗೆ ಬೇಸರ,ನಿರುತ್ಸಾಹ ತರಿಸಿದ್ದರೆ, ಅವಳ ಕಡುಗೋಪದ ಮೊಗ ಅವನಿಗೆ ದರ್ಪದ ದಬ್ಬಾಳಿಕೆಯ ಮುಖವಾಡವಾಗಿ ಭಾಸವಾಗುತ್ತ ಅವಳನ್ನು ದೂರವಿರಿಸಿಯೇ ನೋಯಿಸಿ, ಕಣ್ಣೀರು ಹಾಕಿಸಬೇಕೆಂಬ ಛಲ-ಹಟ ಬೆಳೆದಿತ್ತು. ಇಬ್ಬರೂ ಸವ್ವಾಸೇರಾಗಿ ವಿಮುಖರಾಗಿದ್ದರು. ದಿನಗಳೆದಂತೆ ಗಂಡ-ಹೆಂಡಿರ ಮಧ್ಯೆ ವಿನಾಕಾರಣ ಮನಸ್ತಾಪ ಬೆಳೆದು, ದೂರ ದೂರವೇ ಉಳಿದರು. 

                ಅವನ ಸಂಕೀರ್ಣ, ಅಂತರ್ಮುಖೀ ಸ್ವಭಾವದ ಎಳೆಗಳನ್ನು ಬಿಡಿಸಲಾರದೆ ವಿಭಾ ಸೋತಿದ್ದಳು. ಆದರೆ ಅವನಿಗೆ ಅವಳೇ ಹಟಮಾರಿ ಎನಿಸಿದ್ದಳು. ಆದರೆ ಸಂಜೆ-     ರಾತ್ರಿಗಳಲ್ಲಿ ನಿಶ್ಶಬ್ದ ತೊಟ್ಟಿಡುವ ಹೊತ್ತಿನಲ್ಲಿ ಇಬ್ಬರೂ ಮೇಣದಬತ್ತಿಯಂತೆ ಕರಕರಗುತ್ತ, ಅವರರಿವಿಲ್ಲದೆ ಅವ್ಯಕ್ತ ಪ್ರೀತಿಯ ಹಂಬಲದಲ್ಲಿ ತೊಯ್ಯುತ್ತಿದ್ದರು. 

                ಇದೇ ದಿನಚರಿಯ ಈ ಆರು ವರ್ಷಗಳ ದಾಂಪತ್ಯದಲ್ಲಿ ಪರಸ್ಪರ ಅಸಹನೆಯ ಹೊಗೆ ಕಡಮೆಯಾಗಿರಲಿಲ್ಲ. ಪ್ರತ್ಯೇಕ ಸಂಸಾರ ನಡೆಸುತ್ತಿದ್ದುದರಿಂದ ಯಾರಿಗೂ ಅವರ ನಡುವಣ ಹಳಸಿದ ಸಂಬಂಧ ಗೊತ್ತಾಗುವಂತಿರಲಿಲ್ಲ. ಮಾನಕ್ಕೆ ಅಂಜಿ ವಿಭಾ ತೌರಿನವರಿಗೂ ಈ ಗುಟ್ಟು ಬಿಟ್ಟುಕೊಡದಿದ್ದರೂ ಒಳಗೊಳಗೇ ಕನಲಿ ಕೆಂಡವಾಗಿದ್ದಳು. ತನ್ನನ್ನು ನೋಯಿಸುವುದರಲ್ಲೇ ಸುಖಕಾಣುವ ಇವನಿಗೆ ಡೈವೋರ್ಸ್ ಕೊಟ್ಟು ತೌರಿನಲ್ಲಿ ನೆಲೆಸಿಬಿಡಲೇ ಎಂದವಳಿಗೆ ಸಾವಿರಬಾರಿ ಅನಿಸಿತ್ತು. ಆದರೆ ಮುಂದಡಿಯಿಡಲು ಮಾತ್ರ ಧೈರ್ಯ, ಕಸುವು ಇಲ್ಲದೆ ಅವನಿಗೆ ಇಂದಲ್ಲ ನಾಳೆ ಬುದ್ಧಿ ಬರಬಹುದೆಂಬ ದೂರದಾಸೆಯಿಂದ ದಾಂಪತ್ಯದ ಗಂಟನ್ನು ಸಡಿಲಿಸಿರಲಿಲ್ಲ ಅಷ್ಟೇ . 

                ವಿವೇಕ ಬುದ್ಧಿಪೂರ್ವಕವಾಗಿ ತನ್ನ ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸಿಕೊಂಡಿದ್ದನಾದರೂ ಅಷ್ಟು ಸುಲಭಕ್ಕೆ ಬಗ್ಗುವ ಆಸಾಮಿ ಅವನಾಗಿರಲಿಲ್ಲ. ಎಂದೋ ಅವಳಾಡಿದ ಒಂದು ಮಾತು, ಹಿಡಿಸದ ಒಂದು ನಡವಳಿಕೆಯ ಬಗ್ಗೆ ಮುಳಿದು. ಅವಳನ್ನು ಕಾಡುವ ಭರದಲ್ಲಿ ತನಗೆ ದಕ್ಕಬೇಕಾದ ಸುಖದಿಂದಲೇ ವಂಚಿತನಾಗಿಬಿಟ್ಟಿದ್ದ. ಉದ್ಯೋಗದಲ್ಲಿದ್ದ ವಿಭಾ ತನ್ನ ಸುಪ್ತ ಬಯಕೆಗಳನ್ನೆಲ್ಲ ಒತ್ತಾಯವಾಗಿ ಅದುಮಿಟ್ಟು ಹೊರಗೆ ಸ್ಥಿತಪ್ರಜ್ಞಳಂತೆ ಪೋಸು ಕೊಡುತ್ತಿದ್ದಳು ಗೆಳತಿಯರೊಂದಿಗೆ. ತನಗೊಬ್ಬ ಗಂಡನಿದ್ದಾನೆಂಬುದನ್ನು ಪ್ರಯತ್ನಪೂರ್ವಕ ಮರೆಯಲೆತ್ನಿಸುತ್ತ ಅವಳು, ತನ್ನ ಕಲ್ಪನಾಜಗತ್ತಿನ ದೃಶ್ಯಗಳನ್ನು ದೊಡ್ಡ ಕ್ಯಾನ್‍ವಾಸಿನ ಮೇಲೆ ಹರವಿ, ತನಗೆ ಬೇಕಾದ ಬಣ್ಣಗಳನ್ನು ಚೆಲ್ಲಿ ಸುಖದನಗರಿಯನ್ನು ಸೃಷ್ಟಿಸಿಕೊಂಡಿದ್ದಳು. ಅವಳ ಕಲ್ಪನಾರಾಜ್ಯದಲ್ಲಿ ಅವಳನ್ನು ಕಡು ಪ್ರೀತಿಸುವ ಸುಂದರ ರಾಜಕುಮಾರನ ಪ್ರಣಯದಾಟಗಳು ನೂರೆಂಟು. ಅದರಲ್ಲೇ ಅಸೀಮ ಸಂತೃಪ್ತಿ ಅವಳಿಗೆ. ಅದು ಬಿಟ್ಟು ವಾಸ್ತವ ಜಗತ್ತಿನ ಯಾವ ರಾಜಕುವರನೂ ಅವಳನ್ನು ಕಾಡಿರಲಿಲ್ಲ.

                ವಿವೇಕನದೂ ಅದೇ ಕಥೆಯೇ. ಮಗ್ಗುಲಲ್ಲಿ ಹೆಂಡತಿಯಿದ್ದರೂ ಕುಣಿವ ಆಸೆಗಳನ್ನು ಹತ್ತಿಕ್ಕಲಾರದೆ, ಬರೀ ಕನಸಿನ ಕನ್ಯೆಯರೊಡನೆ ಒಲವಿನ ಒಸಗೆ. ಸದಾ ಕನಸು ಕಾಣುತ್ತ ಸಡಗರಿಸುವ ಬೆಸುಗೆ. ಗಂಡ-ಹೆಂಡಿರಿಬ್ಬರದೂ ಅವರವರದೇ ಆದ ಅದ್ಭುತ ಸೃಷ್ಟಿಲೋಕ!

                ಲೋಕದ ಕಣ್ಣಿಗೆ ಗಂಡ-ಹೆಂಡತಿಯರಾದ ಅವರಿಬ್ಬರು ಹೀಗೆ ಒಟ್ಟಾಗಿ ಆತ್ಮೀಯರಂತೆ ವ್ಯವಹರಿಸಬೇಕಾದ ಸನ್ನಿವೇಶ ಒದಗಿದ್ದೇ ಈಗ, ಅದೂ ವಿವೇಕನಿಗೆ ಇದ್ದಕ್ಕಿದ್ದ ಹಾಗೆ ಟೈಫಾಯ್ಡ್ ಜ್ವರ ಕಾಣಿಸಿಕೊಂಡು ನರಳಲಾರಂಭಿಸಿದಾಗ, ಅವಳು ಪ್ರೀತಿಯಿಂದಲ್ಲದಿದ್ದರೂ ಮಾನವೀಯತೆಯಿಂದ ತತ್‍ಕ್ಷಣ ಅವನನ್ನು ನರ್ಸಿಂಗ್‍ಹೋಂಗೆ ಅಡ್ಮಿಟ್ ಮಾಡಿ ಹದಿನೈದು ಇಪ್ಪತ್ತು ದಿನಗಳೇ ಉರುಳಿದ್ದವು. ಅನಿವಾರ್ಯವಾಗಿ ಕೆಲಸಕ್ಕೆ ರಜ ಹಾಕಿ ಅವನನ್ನು ನೋಡಿಕೊಳ್ಳುವ ಹೊಣೆ ಹೊತ್ತಿದ್ದಳು. ಆದರೆ ಇಲ್ಲೂ ಅವರೀರ್ವರ ನಡುವೆ ಅದೇ ರಾಗ-ಅದೇ ಹಾಡಿನ ಕಣ್ಣಾಮುಚ್ಚಾಲೆಯಾಟ ಮುಂದುವರಿದಿತ್ತು. ಅವನ ಮುಖ ಅತ್ತ, ಇವಳದು ಇತ್ತ. 

                 ಅವಳರಿವಿಲ್ಲದೆ ಅವಳ ಮನ, ಇಲ್ಲಿಗೆ ಬಂದಾರಾಭ್ಯ ಡಾ.ಸುದೀಪನನ್ನು ಕಂಡರೆ ಬೆಣ್ಣೆಯಂತೆ ಕರಗುತ್ತಿದೆ, ಆಸೆ ಚಿಗುರುತ್ತಿದೆ…ಚಿತ್ತ ಚಂಚಲತೆಯಿಂದ ಓಲಾಡುತ್ತಿದೆ.     ಕನಸುಗಳ ಚಿತ್ರಕ್ಕೆ ಮೆರುಗು ತುಂಬಲು ಬಣ್ಣಗಳಿಗಾಗಿ ತಡಕಾಡುವಂತಾಗಿದೆ…ಕನಸಿನ ರಾಜಕುವರನನ್ನು ಚಿತ್ರಿಸಲು ಕ್ಯಾನ್‍ವಾಸ್ ಹರಡಿ ಕುಳಿತಾಗಿದೆ. ಕುಂಚ ಕೈಯಲ್ಲಿ. ಸುತ್ತ ವಿವಿಧ ವರ್ಣದ ಕುಡಿಕೆಗಳು!

                ವಿವೇಕನ ಮೈಯಲ್ಲೂ ಬಿಸುಪು ಕಾಣಿಸಿಕೊಂಡಿದೆ. ಯಾವುದೋ ಹಟದಿಂದ ಹೆಂಡತಿಯನ್ನು ದೂರ ಮಾಡಿಕೊಂಡ ಬಗ್ಗೆ ಪಶ್ಚಾತ್ತಾಪ ಆವರಿಸಿದ್ದರೂ ಅವಳ ಓಲೈಕೆಗೆ ಮನ ಸಂಕೋಚದಿಂದ ಹಿಂಜರಿಯುತ್ತಿದೆ. ಈಚಿನ ದಿನಗಳಲ್ಲಿ ಅವಳ ಬಗ್ಗೆ ಮನಸ್ಸು ಮೃದುವಾಗುತ್ತಿದ್ದು ಮನಸ್ಸು ಡೋಲಾಯಮಾನವಾಗಿದೆ. ಸಿಸ್ಟರ್ ಲಿಲ್ಲಿ ಹತ್ತಿರ ಸುಳಿದಾಗೆಲ್ಲ ಅವ್ಯಕ್ತ ಬಯಕೆ ಹೆಡೆಯಾಡಿಸುತ್ತ, ಮನಸ್ಸಿಗೆ ಮುದನೀಡುವ ಅವಳ ನೋಟ, ಸನಿಹಕ್ಕೆ ಹಾತೊರೆಯುತ್ತಿದೆ. ಲಿಲ್ಲಿಗೂ ತನ್ನಂತೆಯೇ ತನ್ನ ಬಗ್ಗೆ ಸೆಳೆತದ ಭಾವ ಅಂಕುರಿಸಿರಬಹುದೇ ಎಂಬ ಮಧುರಭಾವದೋಕುಳಿಯಲ್ಲಿ ಮೀಯತೊಡಗಿದ್ದ.

                ಗಂಡ-ಹೆಂಡಿರಿಬ್ಬರೂ ತಮ್ಮದೇ ಕಲ್ಪನಾಲೋಕದ ಗುಂಗಿನಲ್ಲಿ ಮುಳುಗಿಹೋಗಿದ್ದರು!

                ಎಂದೂ ಪರಪುರುಷನನ್ನು ಕಣ್ಣೆತ್ತಿಯೂ ನೋಡದ ವಿಭಳ ಮನಸ್ಸು ಹೊಯ್ದಾಡುತ್ತಿತ್ತು. ಗಂಡಿನಾಸರೆ, ಸಹವಾಸದ ತುಡಿತದಿಂದ ಕಂಗೆಟ್ಟಿದ್ದ ಅವಳ ತಲ್ಲಣದ ಮನ, ಇದೇ ತಾನೆ ಬಂದುಹೋದ ಡಾ. ಸುದೀಪನ ನೆನಪಲ್ಲಿ ತೊಯ್ಯುತ್ತ ಮೆಲ್ಲನೆ ಕಣ್ತೆರೆದು, ಮಲಗಿದ್ದ ಗಂಡನತ್ತ ಹೊರಳಿ ನೋಡಿದಳು. ವಿವೇಕನಿಗೆ ಪ್ರಶಾಂತ ನಿದ್ದೆ. ಸದ್ಯ, ಮಲಗಿರುವಾಗಲಾದರೂ ಅವನ ಮೊಗಭಾವ ಪ್ರಶಾಂತವಾಗಿರುವುದನ್ನು ಕಂಡು ಪೇರುಸಿರು ಚೆಲ್ಲಿದಳು.

                 ಕಳೆದ ಇಪ್ಪತ್ತು ದಿನಗಳಿಂದ ಅವನು ತುಂಬಾ ಕಂಗೆಟ್ಟುಹೋಗಿದ್ದಾನೆಂದೆನಿಸಿ, ವೀಕಾಗಿ ಕಾಣುತ್ತಿದ್ದ ಅವನ ಬಗ್ಗೆ ಕನಿಕರಭಾವ ಜಿನುಗಿ ಮನಸ್ಸು ಅಳ್ಳಕವಾಗತೊಡಗಿತು. ಆಜಾನುಬಾಹುವಾಗಿ ಚೆಲ್ಲಿದ್ದ ಅವನ ಹರವಾದ ಎದೆಯ ಮೇಲೆ ತಲೆಯಿಟ್ಟು ಹಾಯಾಗಿ ಮಲಗಬೇಕೆನ್ನುವ ಭಾವ ತುಡಿಯುತ್ತ ಚಡಪಡಿಸಿದಳು.

                 ಬೆಳಗಿನ ಸುಮಾರು ಒಂಭತ್ತು-ಒಂಭತ್ತೂವರೆ ಗಂಟೆಯಿರಬಹುದು. ಇನ್ನೂ ಡಾಕ್ಟರ್ ರೌಂಡ್ಸ್‍ಗೆ ಬಂದಿರಲಿಲ್ಲ. ವಿವೇಕ್ ಇಲ್ಲಿಗೆ ಬಂದು ಅನೇಕ ದಿನಗಳೇ ಕಳೆದಿದ್ದು ಈಗೀಗ ಕೊಂಚ ಗೆಲುವಾಗಿದ್ದಾನೆ. ಇಂದು, ಲಿಲ್ಲಿಯ ದರ್ಶನಕ್ಕಾಗಿ ಹಾತೊರೆದು ನೀಟಾಗಿ ಕ್ರಾಪ್ ಬಾಚಿಕೊಂಡು ನೀಟಾಗಿ ಸಿದ್ಧವಾಗಿ ಅವಳ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ. ಹೊರಗೆ ಕಾರಿಡಾರಿನಲ್ಲಿ ಯಾರೋ ಜೋರಾಗಿ ನಕ್ಕಂತೆ ಕೇಳಿತು. ಅದು ತನ್ನ ಸುದೀಪನ ಕಂಚಿನಕಂಠವೇ ಎಂದವಳಿಗೆ ಸ್ಪಷ್ಟವಾಗುತ್ತಿದ್ದಂತೆ ವಿಭಳ ಎದೆಯಲ್ಲಿ ಲಬ್ ಡಬ್ ರಿಂಗಣಗುಣಿತ…!….ಅವನ ನಗುವಿನೊಡನೆ ಮಂಜುಳ ಮೋಹಕನಗು ಗೆಜ್ಜೆಯುಲಿಯಂತೆ ಬೆರೆತು ನಾದ ತುಂತುರಾಯಿತು. ವಿವೇಕನ ಹೃದಯದಲ್ಲಿ ಅದರ ಪ್ರತಿಧ್ವನಿ ಮೊರೆತ. ಗಟ್ಟಿಯಾಗಿ ತನ್ನೆದೆಯನ್ನು ನೀವಿಕೊಂಡ.

                ಕೆಲವೇ ಕ್ಷಣಗಳಲ್ಲಿ ಹತ್ತಿರ ಹತ್ತಿರವಾದ ಹೆಜ್ಜೆಯ ಸದ್ದು……ಇಬ್ಬರ ಎದೆಯಬಡಿತವೂ ಜೋರಾಗತೊಡಗಿತು. ದೃಷ್ಟಿ ಬಾಗಿಲತ್ತ ನೆಟ್ಟಿತು.

                ಆ..ದ..ರೆ….ಎದುರಿಗೆ ಬಾಗಿಲಲ್ಲಿ ಅನಾಮತ್ತು ಕಂಡ ಆ ದೃಶ್ಯ ಇಬ್ಬರನ್ನೂ ತಬ್ಬಿಬ್ಬುಗೊಳಿಸಿತು!…..ಸುದೀಪನ ಆಗಮನಕ್ಕೆ ಸಂಭ್ರಮಿಸಿ ಮೇಲೇಳ ಹೊರಟ ವಿಭಳ ಹೆಜ್ಜೆಗಳು ಅಲ್ಲೇ ತಟಸ್ಥವಾದವು!!.

                ಆರಡಿ ಎತ್ತರದ ಸುಂದರಾಂಗ ಡಾ.ಸುದೀಪ್ ಅದು ಆಸ್ಪತ್ರೆ ಎಂಬುದನ್ನು ಮರೆತು ಪಕ್ಕದಲ್ಲಿ ನಿಂತಿದ್ದ ಕೋಮಲಾಂಗಿಯ ತೆಳುಸೊಂಟವನ್ನು ಬಳಸಿ, ಅವಳ ಕಿವಿಯಲ್ಲಿ ಏನೋ ಉಸುರಿ ಜೋರಾಗಿ ನಗುತ್ತಿದ್ದ. ಅವನತ್ತ ಮಾದಕನೋಟ ನೆಟ್ಟು ಸುತ್ತಲ ಜಗತ್ತನ್ನು ಮರೆತು ತುಂಟನಗೆ ಬೀರುತ್ತಿದ್ದ ಸಿಸ್ಟರ್ ಲಿಲ್ಲಿ, ಅವನ ತೋಳಿನ ಮೇಲೊಂದು ಹುಸಿಗುದ್ದು ಕೊಡುತ್ತ `ಯೂ ನಾಟಿ…’ ಎಂದುಲಿದಳು ನಾಚಿ ಬಳುಕುತ್ತ.

  ಎದುರಿಗೆ ಬಿಟ್ಟ ಕಣ್ಣು ಬಿಟ್ಟ ಹಾಗೆ ದಿಟ್ಟಿಸುತ್ತಿದ್ದ ದಂಪತಿಗಳಿಗೆ, ಅವರ ಪ್ರಣಯದಾಟವನ್ನು ಕಂಡು ಗರಬಡಿದಂತಾಯಿತು. ಹೃದಯಸ್ತಬ್ಧವಾದಂತೆ… ಛಿಟಿಲ್ಲನೆ ಎಲ್ಲೋ ಬರಸಿಡಿಲು ಬಡಿದಂತೆ ಭಾಸವಾಗತೊಡಗಿತು.

                ಧಬಧಬನೆ ಜೋರಾಗಿ ಹೊಯ್ದುಕೊಳ್ಳುತ್ತಿದ್ದ ತನ್ನೆದೆಯನ್ನು ಜೋರಾಗಿ ಒತ್ತಿಕೊಂಡ ವಿಭಾಳ ಕಣ್ಣಾಲಿಗಳು ಜಲಾಶಯದೊಳಗೆ ಮುಳುಗಿಹೋದವು. ಉಗುಳು ನುಂಗಿಕೊಳ್ಳುತ್ತ, ಮೆಲ್ಲನವಳು ಪಕ್ಕಕ್ಕೆ ಕಣ್ಣು ಹೊರಳಿಸಿ ನೋಡಿದಳು. ವಿವೇಕನ ಅರಳುಮುಖ ಬಾಡಿಹೋಗಿತ್ತು!!

                 ತನಗಾದ ಆಘಾತವನ್ನು ಮರೆತು ಅವಳರಿವಿಲ್ಲದೆ ಅವಳ ಮೊಗದಲ್ಲಿ ಕಿರುನಗೆಯೊಂದು ಹಾದುಹೋಯಿತು.

                 ಎದುರಿಗೆ ಚಿತ್ರವತ್ತಾಗಿ ನಿಂತಿದ್ದ ಆ ಪ್ರೇಮಿಗಳನ್ನು ದಿಟ್ಟಿಸುತ್ತ, ನಿರಾಳದ ನಿಟ್ಟುಸಿರು ಚೆಲ್ಲಿದವಳ ಮನಸ್ಸು ಕೊಂಚ ಹಗುರಾಗಿತ್ತು. ತನಗಾದ ನಿರಾಶೆಗಿಂತಲೂ ಹೆಚ್ಚಾಗಿ, ವಿವೇಕನ ಕನಸಿನಗುಳ್ಳೆ ಒಡೆದುಹೋದುದಕ್ಕೆ ವಿಭಳಿಗೆ ಪರಮ ಸಮಾಧಾನವುಂಟಾಗಿತ್ತು. ಗಂಡನತ್ತ ತಿರುಗಿ ಭರವಸೆಯ ಸಾಂತ್ವನದ ನೋಟ ಬೀರಿದಳು.

Related posts

ಯಾವುದೀ ಮಾಯೆ?!

YK Sandhya Sharma

ಗಂಡ-ಹೆಂಡಿರ ಜಗಳ……….

YK Sandhya Sharma

ಕಮಲು ಯೋಗ ಕಲಿತದ್ದು

YK Sandhya Sharma

2 comments

Vasu August 3, 2020 at 10:22 pm

ಚಿತ್ರವಿಲ್ಲದ ಚೌಕಟ್ಟು, Tumba Olle kathe Madam, Inchinchu saha ishta agi – aa ibbaru dampathi galu avarisikondru, Konege kottiro Twist antu adhbutha vagide.

VIkasam Ashok avru suggest madidru nimma patrike na!!

Reply
YK Sandhya Sharma August 3, 2020 at 11:10 pm

ನಿಮಗೆ ಕಥೆ ಇಷ್ಟವಾದುದಕ್ಕೆ ಧನ್ಯವಾದಗಳು.

Reply

Leave a Comment

This site uses Akismet to reduce spam. Learn how your comment data is processed.