ಹೊಸವರ್ಷದ ಆಗಮನದ ಸಂತಸ-ಸಂಭ್ರಮವನ್ನು ಬೆಂಗಳೂರಿನ ಪ್ರಖ್ಯಾತ `ಶಿವಪ್ರಿಯ’ ನಾಟ್ಯಸಂಸ್ಥೆ ಬಹು ವಿಶಿಷ್ಟವಾಗಿ ಅಷ್ಟೇ ವೈವಿಧ್ಯಪೂರ್ಣವಾದ ನೃತ್ಯ ಕಾರ್ಯಕ್ರಮಗಳಿಂದ ಕಲಾರಸಿಕರ ಕಣ್ಮನಗಳಿಗೆ ರಸದೌತಣ ನೀಡಿತು. ಇತ್ತೀಚೆಗೆ ಸೇವಾಸದನದಲ್ಲಿ ನಡೆದ ಈ ಕಾರ್ಯಕ್ರಮ ನೂತನ ವರ್ಷಾರಂಭಕ್ಕೆ ಕಲಾವಲ್ಲರಿಯ ಸ್ವಾಗತವಾಯಿತು. ಸೊಗಸಾದ ಅಭಿನಯ, ಮನೋಹರ ನೃತ್ಯ ಪ್ರಸ್ತುತಿಗೆ ಹೆಸರಾದ ನುರಿತ ನೃತ್ಯ ಕಲಾವಿದ-ಗುರು, ಡಾ.ಸಂಜಯ್ ಶಾಂತಾರಾಂ ತಮ್ಮ ನವಪರಿಕಲ್ಪನೆಯನ್ನು ಹೊಸವರುಷದ ಸವಿಸಂಜೆಯಲ್ಲಿ ಅನಾವರಣಗೊಳಿಸಿದರು. ಅಂದು ಪ್ರಸ್ತುತಗೊಂಡ ಎಲ್ಲ ನೃತ್ಯಗಳೂ ಉಲಾಸಕಾರಿಯಾಗಿದ್ದವು. ಹಿರಿ-ಕಿರಿಯ ಕಲಾವಿದರ ಹದವಾದ ಮಿಶ್ರಣದಲ್ಲಿ ಸಮರಸಗೊಂಡಿದ್ದವು.
ಚೇತೋಹಾರಿ ದೇವಸ್ತುತಿಯಾಗಿ ಮೊದಲಿಗೆ `ಓಂ ಗಣಪತೆಯೇ ನಮಃ’ ಎಂಬ ಗಣೇಶಸ್ತುತಿಯೊಂದಿಗೆ ರಂಗವನ್ನು ಪ್ರವೇಶಿಸಿದ ತರಳೆಯರು (ನಿಖಿಲಾ ಮತ್ತು ಶಿವಾನಿ -ಸಂಜಯ್ ಶಿಷ್ಯೆಯರು) ಗಣಪನ ರೂಪ ವರ್ಣನೆಯ ಆಂಗಿಕದೊಂದಿಗೆ, ದೇವನ ಮಹಿಮೆಯನ್ನು ಸುಂದರ ಅಭಿನಯದೊಂದಿಗೆ, ಲವಲವಿಕೆಯ ಹೆಜ್ಜೆ-ಗೆಜ್ಜೆಗಳ ಅಡವುಗಳನ್ನು ತೋರುತ್ತ ಆಕರ್ಷಕವಾಗಿ ನೃತ್ಯ ಮಾಡಿದರು. ಚಿಕ್ಕ ಚೊಕ್ಕದಾದ ಕೃತಿ ಒಪ್ಪವಾಗಿತ್ತು. ಮುಂದೆ `ಶಿವ ಶಂಭೋ ‘- ಶಿವನ ಕುರಿತ ಭಕ್ತಿಭಾವದ ಅಭಿವ್ಯಕ್ತಿಯಲ್ಲಿ ಪಾದರಸದ ಚಿಲುಮೆಗಳಾಗಿ ನರ್ತಿಸಿದರು. ನರ್ತಕಿಯರು ಪ್ರದರ್ಶಿಸಿದ ಅರೆಮಂಡಿ, ಜತಿಗಳ ವೈವಿಧ್ಯ , ಸಂಚಾರಿಯಲ್ಲಿನ ಅಭಿನಯ ಮೆಚ್ಚುಗೆ ತಂದಿತು. ಅವರ ಪ್ರಫುಲ್ಲ ಮುಖಾರವಿಂದದಲ್ಲಿ ಆನಂದದ ಅಭಿನಯ ತುಳುಕಿಸಿದರೆ, ಜತಿಗಳ ವೇಗಗತಿಯಲ್ಲಿ ಓಘ ತುಂಬಿತ್ತು.

ನಾಟ್ಯಾಧಿಪತಿ ನಟರಾಜ,ಶಿವ ಎಂದ ಮೇಲೆ ಕಣ್ಮನ ತುಂಬುವ ತಾಂಡವ ನೃತ್ಯ ಇರಲೇಬೇಕು. ಅಂಥದೊಂದು ಪರಿಣಾಮಕಾರಿ ನೃತ್ಯದಲೆಯ ರಸ ವಾತಾವರಣ ನಿರ್ಮಾಣ ಮಾಡಿದವರು ಸಂಜಯ್ ಶಾಂತಾರಾಂ ಹಾಗೂ ಅವರ ಹಿರಿಯ ಶಿಷ್ಯ ಶೇಖರ್ ರಾಜೇಂದ್ರನ್.ರೋಮಾಂಚ ತಂದ `ಸಂಧ್ಯಾ ತಾಂಡವ’ವನ್ನು ಕುಚುಪುಡಿ ನೃತ್ಯಶೈಲಿಯಲ್ಲಿ ಅಮೋಘವಾಗಿ ಸಾದರಪಡಿಸಿದ ಇವರು ಸಮಜೋಡಿಯಾಗಿ ಅಭಿವ್ಯಕ್ತಿಸಿದ ಭಾವ-ಬಂಧುರಗಳು, ಹೊಸದೊಂದು ಅನುಭವವನ್ನು ಕಟ್ಟಿಕೊಟ್ಟು ರಸರೋಮಾಂಚವನ್ನು ಸ್ಫುರಿಸಿತು. ಶಿವನ ರುದ್ರತಾಂಡವದಲ್ಲಿ ತೋರಿದ ಪೌರುಷ ಝೇಂಕಾರದ ಧೃಢವಾದ ಅಡವುಗಳು ಮತ್ತು ಖಚಿತ ಹಸ್ತಮುದ್ರಿಕೆಗಳು ಬಹು ಆಕರ್ಷಕವಾಗಿದ್ದವು. ಗಂಗೆಯ ಬಾಗು-ಬಳುಕುಗಳ ಹರಿವನ್ನು ತೋರುವ ನವಿರಾದ ಹಸ್ತಚಲನೆ, ಶಿವನ ಢಮರುಗದ ನುಡಿಸಾಣಿಕೆಯ ಗಾಂಭೀರ್ಯದ ವೈಖರಿ, ರೂಪ ವರ್ಣನೆಯ ಅಭಿವ್ಯಕ್ತಿಯಲ್ಲಿ ತೋರಿದ ಅಂಗಾಂಗದ ಖಾಚಿತ್ಯ ನಿಲುವು, ಸುಂದರ-ಸುಪುಷ್ಟ ಅಂಗಸೌಷ್ಟವದ ಚೆಲುವು, ನೃತ್ಯವನ್ನು ಪರಿಣಾಮಕಾರಿಯಾಗಿಸುವಲ್ಲಿ ಜೋಡಿ ಸಫಲವಾಯಿತು.
ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಅಭಿನಯ ಪ್ರಾವೀಣ್ಯ ಕೆನೆಗಟ್ಟಿತ್ತು. ತರಂಗ ಶೈಲಿಯ ಆಕರ್ಷಣೆಯಾಗಿ ಮೂಡಿಬಂದದ್ದು, ಕನಕದಾಸರ ಖ್ಯಾತ ದೇವರನಾಮ `ಬಾರೋ ಕೃಷ್ಣಯ್ಯ’ – ಬಾಲಕೃಷ್ಣನ ಲೀಲೆಗಳನ್ನು ದೃಶ್ಯವತ್ತಾಗಿ ಒಂದೊಂದಾಗಿ ಕಣ್ಣಿಗೆ ಕಟ್ಟುವಂತೆ ಪರಿಣಾಮಕಾರಿ ಅಭಿನಯದಿಂದ ಕಲಾವಿದರಾದ ಸಂಜಯ್ ಮತ್ತು ಗೋಪಾಲಕೃಷ್ಣ ಕಥಾ ಪ್ರಸಂಗಗಳ ಸಂಚಾರಿಯಲ್ಲಿ ಸಮರ್ಥವಾಗಿ ರೂಪಿಸಿದ್ದು, ಅತ್ಯಂತ ಸಹಜಲೇಪದಿಂದ ಮುದ ನೀಡಿತ್ತು. ಇಬ್ಬರೂ ಒಂದೇ ಲಯದಲ್ಲಿ ನರ್ತಿಸುತ್ತಾ, ಹಿತ್ತಾಳೆಯ ತಟ್ಟೆಯ ಮೇಲೆ ನಿಂತು ಜತಿಗಳನ್ನು ನಿರ್ವಹಿಸಿದ ಪರಿ ಮೋಡಿ ಮಾಡಿದರೆ, ತೋರಿದ ಹೊಂದಾಣಿಕೆ ಸಮಂಜಸವಾಗಿದ್ದು ಖುಷಿತಂದಿತ್ತು. ಹೆಬ್ಬೆಟ್ಟುಗಳ ಹೆಣೆದು ನಿರ್ವಹಿಸಿದ ಕ್ಲಿಷ್ಟಕರ ಜತಿಗಳು ಸೊಗಸೆನಿಸಿದವು. ಮುಂದಿನ ಪ್ರಸ್ತುತಿಯಲ್ಲಿ `ನಾದ ತನುಮನಿಶಂ ಶಂಕರಂ’ ನಾಟಕೀಯ ಸನ್ನಿವೇಶಗಳಲ್ಲಿ ಕಲಾವಿದರಾದ ಸಂಜಯ್ ಮತ್ತು ಅನಿರುದ್ಧ ಗೋಪಿನಾಥ್ ಅವರ ಸಂಪೂರ್ಣ ಪ್ರತಿಭೆ ಅನಾವರಣಗೊಂಡಿತು.
ರಾವಣನ ಪಾತ್ರವನ್ನು ಅತ್ಯಮೋಘವಾಗಿ ಅಭಿನಯಿಸಿದ ಸಂಜಯ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಹೆಜ್ಜೆಗಳ ಮಿನುಗು, ವಯ್ಯಾರದಿಂದ ಹೆಜ್ಜೆ ಜಾರಿಸುವ ಸೊಬಗು, ವಿರೋಚಿತ ನಡೆ ವಿನೂತನವಾಗಿತ್ತು, ಸಂಚಾರಿಯಲ್ಲಿ ಕೈಲಾಸವನ್ನು ಎತ್ತೊಯ್ಯುವ ವೈಶಿಷ್ಟ್ಯ ,ರಾವಣನ ಕಠಿಣತಪಸ್ಸು, ಕರುಳನ್ನೇ ಬಗೆದು ರುದ್ರವೀಣೆ ಮಾಡಿಕೊಂಡು ತಂತಿಗಳನ್ನು ಮೀಟುವ ಪರಿ, ಆತ್ಮಲಿಂಗ ಪಡೆಯುವಾಗಿನ ಭಾವಸ್ಥಿತಿಯನ್ನು ಅನನ್ಯವಾಗಿ ಪ್ರದರ್ಶಿಸಿದರು. ಗುರುಗಳಾಗಿ ಸಂಜಯ್ ನೈಪುಣ್ಯದಿಂದ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದಂತೆ ತಮ್ಮ ಶಿಷ್ಯರಿಗೂ ನಿರ್ವಂಚನೆಯಿಂದ ವಿದ್ಯಾಧಾರೆ ಮಾಡಿರುವುದಕ್ಕೆ ಅಂದು ನಡೆದ ನೃತ್ಯಗಳು ಸಾಕ್ಷಿಯಾದವು.