Image default
Drama Reviews

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

ಎಪ್ಪತ್ತರ ದಶಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ `ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡದಿಂದ ಮೂಡಿಬಂದ ಅನೇಕ ಉತ್ತಮ ಪೌರಾಣಿಕ ನಾಟಕಗಳಲ್ಲಿ `ಸುಯೋಧನ’ ಕೂಡ ಒಂದು. ಮಹಾಭಾರತದ  ಕಥೆಯ ಬಗ್ಗೆ, ಅಲ್ಲಿನ ಪಾತ್ರಗಳ ಚಿತ್ರಣಗಳ ಬಗ್ಗೆ ಒಳನೋಟ ಬೀರುವ ಈ ನಾಟಕವನ್ನು ಅನೇಕ ವರ್ಷಗಳ ಬಳಿಕ ನೋಡುವ ಅವಕಾಶ ಇತ್ತೀಚೆಗೆ ಒದಗಿ ಬಂದಿತ್ತು. `ಸುಯೋಧನ’ದ ೧೦೧ ನೇ ಪ್ರದರ್ಶನ ಇದಾಗಿತ್ತು. ಎಲ್ಲ ಯುವ ನಟರೇ ಅಭಿನಯಿಸಿದ ನಾಟಕದ ನಿರ್ದೇಶಕರು ಮಾತ್ರ ನಾಟಕರಂಗದಲ್ಲಿ ಪಳಗಿದವರು, ಸ್ವತಃ ಅತ್ಯುತ್ತಮ ಕಲಾವಿದರಾಗಿದ್ದವರು.ನಾಟಕ ರಚನೆಯೂ ಅವರದೇ. ಎಸ್.ವಿ.ಕೃಷ್ಣಶರ್ಮ ಅವರ ಈ ನಾಟಕ ಸಶಕ್ತ ಸಂಭಾಷಣೆಗಳಿಂದ ಪ್ರೇಕ್ಷಕರನ್ನು ಬಿಗಿಯಾಗಿ ಹಿಡಿದು ಕೂರಿಸಿತ್ತು. ಮಾತ್ರವಲ್ಲದೆ ನಾಟಕ ಮುಗಿದ ಕೂಡಲೇ ತುಂಬಿದ ರಂಗಮಂದಿರದ ಎಲ್ಲ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ಸೂಚಿಸಿದ ವಿಶಿಷ್ಟ ನಾಟಕ ಇದಾಗಿತ್ತು.

         ಇತ್ತೀಚಿಗೆ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಂಡ ಸುಯೋಧನ, ರನ್ನ ಕವಿಯ ವೀರ ಸುಯೋಧನನನ್ನು ಕಣ್ಮುಂದೆ ತಂದು ನಿಲ್ಲಿಸಿತ್ತು. ಮಹಾಭಾರತದ  ಕಥೆಗೊಂದು  ಹೊಸ ಆಯಾಮ ನೀಡಿದ ನಾಟಕದಲ್ಲಿ ಇಡೀ  ಮಹಾಭಾರತದ ಎಲ್ಲ ಪಾತ್ರಗಳು ,ಘಟನೆಗಳು , ಸೂಕ್ಷ್ಮ ವಿವರಗಳೆಲ್ಲ ಹಾದುಹೋಗುತ್ತವೆ. ಸಮಗ್ರ ಭಾರತದ ಕಥೆಯನ್ನು ಓದಿದಂತಾಗುತ್ತದೆ. ಇಲ್ಲಿಯ ರಾಜಕಾರಣದಲ್ಲಿ  ಕಂಡು ಬರುವ `ಕೃಷ್ಣನ ಕಪಟ, ಶಕುನಿಯ ಕುತಂತ್ರ , ಸುಯೋಧನನ ಛಲ’ ಇವು ಮುಂದಿನ ರಾಜಕೀಯಕ್ಕೆ ಭದ್ರ ಬುನಾದಿಯೆನ್ನುವ ನಾಟಕದ ಮಾತು, ಅವರುಗಳ ನಡೆ ಇವತ್ತಿನ ರಾಜಕೀಯ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ಯಾವುದೇ ರಾಜಕಾರಣದಲ್ಲಾಗಲಿ ಪ್ರತಿಯೊಬ್ಬರಿಗೂ ಅವರವರದೇ  ಆದ ದೃಷ್ಟಿಕೋನವಿದ್ದು ಅದನ್ನವರು ಸಮರ್ಥಿಸಿಕೊಳ್ಳುವುದು ಸಹಜ. ಹಾಗೆ ಇಲ್ಲಿ ಸುಯೋಧನ ಕೂಡ ತನ್ನ ದೃಷ್ಟಿಯಿಂದಲೇ ಎಲ್ಲವನ್ನೂ ವಿಶ್ಲೇಷಿಸುತ್ತಾನೆ. ಇಲ್ಲಿ ನಾಟಕದ ಕಥಾನಾಯಕ ದುರ್ಯೋಧನ. ಅವನು ಕಂಡಂತೆ ಉಳಿದ ಪಾತ್ರಗಳ ಗುಣ-ಸ್ವಭಾವಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಪ್ರಸಂಗಗಳು ಅವನ ವಿಮರ್ಶೆಗೆ ಒಳಪಡುತ್ತವೆ. ಕೃಷ್ಣ-ಪಾಂಡವರ ಪ್ರಶ್ನೆಗಳಿಗೆಲ್ಲ ಅವನು ಹರಿತವಾಗಿ ಉತ್ತರಿಸುತ್ತ ಅವರ ನಿಜಬಣ್ಣ ಬಯಲು ಮಾಡುತ್ತಾನೆ. ಹಾಗೆಯೇ ಅವನು ತನ್ನ ಪಾತ್ರ ಹಾಗೂ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳುತ್ತಾ ಹೋಗುವುದನ್ನು ನೋಡುಗರು ಒಪ್ಪಿಕೊಂಡಂತೆ, ಸಂತೋಷದಿಂದ ಪ್ರತಿಕ್ರಿಯಿಸುವುದು ಇಡೀ ರಂಗಮಂದಿರದಲ್ಲಿ ಮೆಚ್ಚುಗೆಯ ಅಲೆ ಹರಿಯುತ್ತದೆ.

         ಮಹಾಭಾರತದ ಕಥೆ ಮೊದಲೇ ಆಸಕ್ತಿ-ಕುತೂಹಲಗಳನ್ನು ಕೆರಳಿಸುವಂಥದ್ದು. ಹಾಗಾಗಿ ಸುಯೋಧನನ ವಾದ-ವಿವಾದ, ತರ್ಕಗಳನ್ನು ಕೇಳುತ್ತ ಚುರುಕಾಗಿ ಸಾಗುವ ನಾಟಕ ಮುಗಿದದ್ದೇ ಗೊತಾಗುವುದಿಲ್ಲ. ಕಥೆ ಆರಂಭವಾಗುವುದೇ ಸ್ಮಶಾನ  ಕುರುಕ್ಷೇತ್ರದಿಂದ. ತನ್ನ ಪತನಕ್ಕೆ ಕಾರಣವನ್ನು ಹುಡುಕುತ್ತ, ತನ್ನ ಕಡೆಯ ಜನಗಳ ಪಕ್ಷಪಾತ ನಡೆಯನ್ನು, ಮೊದಲಿಂದ ಕಡೆಯವರೆಗೂ ಕೃಷ್ಣ, ಪಾಂಡವ ಪಕ್ಷಪಾತಿಯಾಗಿ ಮಾಡಿದ ಕಾರ್ಯಗಳನ್ನು ಬಹು ಮಾರ್ಮಿಕವಾಗಿ, ಅರ್ಥಪೂರ್ಣ ಚುಚ್ಚುಮಾತುಗಳಲ್ಲಿ ಹೇಳುತ್ತಾ ಹೋಗುತ್ತಾನೆ. ಕಡೆಯವರೆಗೂ ತನ್ನ ಶೌರ್ಯ-ಸ್ವಾಭಿಮಾನಿ ಗುಣವನ್ನು ಘಂಟಾಘೋಷವಾಗಿ ಸಾರುತ್ತಾ, ವೈಶಂಪಾಯನ ಸರೋವರದಿಂದ ಎದ್ದು ಬಂದು ಭೀಮನೊಡನೆ ಗದಾಯುದ್ಧ ಮಾಡಿ ಸಾವನ್ನಪ್ಪುತ್ತಾನೆ. ಆದರೆ ನೋಡುಗರ ಮನದಲ್ಲಿ ಮಾತ್ರ ಅವನು ಸಾಯುವುದಿಲ್ಲ. ಅವನ ದೃಢವಾದ ಮಾತುಗಳು ಕಿವಿಯಲ್ಲಿ ಮೊರೆಯುತ್ತಲೇ ಹೋಗುತ್ತವೆ. ಅವನ ವಿಶಿಷ್ಟವಾದ ಗಟ್ಟಿ ಪಾತ್ರಚಿತ್ರಣ ಮನದಲ್ಲುಳಿದು, ಮರಳಿ ಮಹಾಭಾರತದ ಕಥೆಯನ್ನು ನಾವು ವಿಮರ್ಶೆಗೆ ಒಳಪಡಿಸುವಂತೆ ಪ್ರೇರೇಪಿಸುತ್ತವೆ. ಅವನ ಅವನತಿಯ ಬಗ್ಗೆ ಸಹಾನುಭೂತಿ ಮೂಡುತ್ತದೆ.

         ಇಡೀ ಮಹಾಭಾರತದ ಪ್ರಕರಣಗಳನ್ನೆಲ್ಲ ಮೆಲುಕು ಹಾಕುವಂತೆ ಮಾಡುವ `ಸುಯೋಧನ’ ನಾಟಕ ನಿಂತಿರುವುದೇ ಬಲವಾದ ಸಂಭಾಷಣೆಗಳ ಮೂಲಕ. ಅಲ್ಲಲ್ಲಿ ಕಾವ್ಯಮಯವಾಗಿ ಸಾಗುವ ಶೈಲಿಯ ಸೊಗಸಿಗೆ ತಲೆದೂಗುವಂತಾಗುತ್ತದೆ. ಸುಯೋಧನ ತನಗೆ ಕೈಕೊಟ್ಟ ಸ್ವಜನರನ್ನು ತರಾಟೆಗೆ ತೆಗೆದುಕೊಳ್ಳುವ `ಪ್ರೇತಗಳ ದೃಶ್ಯ’ ದ  ಪರಿಕಲ್ಪನೆ ವಿನೂತನವಾಗಿದೆ.ಅವುಗಳು ಅವನನ್ನು ಕಾಡುವ ಪರಿ ಪರಿಣಾಮಕಾರಿಯಾಗಿದೆ. ಕೃಷ್ಣ ತನ್ನ ಕುಟಿಲತನದಿಂದ ಕರ್ಣನನ್ನು ನಿರ್ವೀರ್ಯನನ್ನಾಗಿಸುವ ಪ್ರಸಂಗ ಹಾಗೂ ಕೃಷ್ಣ-ಶಕುನಿಯರ ಮಾತಿನ ತಿಕ್ಕಾಟದ ಸನ್ನಿವೇಶವನ್ನು ನಿರ್ದೇಶಕ ಕೃಷ್ಣಶರ್ಮ ಬಹು ಮನೋಜ್ಞವಾಗಿ ವಿನ್ಯಾಸ ಮಾಡಿದ್ದಾರೆ. ಹಾಗೆಯೇ, ಹಿಮ್ಮುಖ ತಂತ್ರದಿಂದ ಸಾಗುವ ಕಥೆ ಪರಿಮಕಾರಿಯಾಗುವಲ್ಲಿ ಯಶಸ್ವಿಯಾಗಿದೆ. ಸುಯೋಧನ ಎಷ್ಟೇ ಛೇಡಿಸಿದರೂ ಸ್ಥಿತಪ್ರಜ್ಞನಾಗಿರುವ ನಗುಮುಖದ ಕೃಷ್ಣ ( ಪ್ರದೀಪ್ ಕುಮಾರ್) `ಕರ್ಮಣ್ಯೇ ವಾಧಿಕಾರಸ್ತೆ …’ ಎಂದು ತನ್ನ ಕೆಲಸವನ್ನು ಮಾಡುತ್ತಲೇ ಹೋಗುವ `ದೈವದಾಟ’ ವನ್ನು ಪ್ರದರ್ಶಿಸುವ ಅಂತ್ಯ ತುಂಬ ಸೊಗಸಾಗಿತ್ತು. ಹಿಂಬದಿಯ ಸೈಕಿನಲ್ಲಿ ಮೂಡಿಬರುತ್ತಿದ್ದ ಆಗಸದ ಚಲಿಸುವ ಮೋಡಗಳು, ಸಮುದ್ರದಲೆಯ ನೋಟ ಅಗಾಧತೆ ನೀಡಿತ್ತು. ತಮ್ಮ ಬಿಗಿಯಾದ ನಿರ್ದೇಶನದಲ್ಲಿ ಕೃಷ್ಣ ಶರ್ಮ ನಾಟಕವನ್ನು ಆಸಕ್ತಿಕರವಾಗಿ ಹೆಣೆದಿದ್ದರು.          ಮೊದಲಬಾರಿಗೆ ರಂಗವೇರಿದ್ದ ಯುವಕ ಕುಶಲ ಭಟ್ ಸುಯೋಧನನಂಥ ಘನವಾದ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೂ ಚುರುಕಿನ ಅಭಿನಯದಿಂದ ಯಾಂತ್ರಿಕತೆಯನ್ನು ಮುರಿಯಬೇಕಿತ್ತು. ಕೃಷ್ಣನಾಗಿ ಪ್ರದೀಪಕುಮಾರ್, ಶಕುನಿಯಾಗಿ ರಂಗನಾಥರಾವ್ ಪಾತ್ರಗಳನ್ನು ಅರ್ಥ ಮಾಡಿಕೊಂಡು ನಟಿಸಿದ್ದು ಇಷ್ಟವಾಗುತ್ತದೆ. ಕರ್ಣನಾಗಿ ಅಶ್ವಥ್ ಕುಮಾರ್ ಉತ್ತಮ ನಟನೆ ನೀಡಿದ್ದರೂ, ಇನ್ನಷ್ಟು ಭಾವನಾತ್ಮಕತೆ ಸೇರಿಸಬೇಕಿತ್ತು. ಭೀಮನ ಪಾತ್ರದ ಶ್ಯಾಮ್ ಸುಂದರ್ ಸ್ಪಷ್ಟ ಮಾತುಗಳನ್ನು ಆಡುವುದರೊಂದಿಗೆ ದೇಹಭಾಷೆಯನ್ನು ಸುಧಾರಿಸಿಕೊಳ್ಳುವುದು ಒಳಿತು. ಯುಧಿಷ್ಠಿರ- ಬಿ.ಅಶೋಕ್, ದ್ರೋಣ- ಎಸ್.ಎನ್. ಪ್ರಕಾಶ್ ಮತ್ತು ಭೀಷ್ಮ- ಶರತ್ ಇದ್ದ ಅವಕಾಶದಲ್ಲಿ ಚೆನ್ನಾಗಿ ಅಭಿನಯಿಸಿದ್ದರು. ಅವರು ತೊಟ್ಟ ವೇಷ-ಭೂಷಣಗಳು, ಪ್ರಸಾಧನ ಹಿತಮಿತವಾಗಿತ್ತು. ಹಿನ್ನಲೆ ಸಂಗೀತವೂ ಹೊಂದಿಕೊಂಡಿತ್ತು.

Related posts

ಹೊಸಬೆಳಕಿನಲ್ಲಿ ರಾವಣನ ಕಥೋಪಾಖ್ಯಾನ

YK Sandhya Sharma

ಬಹುಕಾಲ ಕಾಡುವ ಹೃದಯಸ್ಪರ್ಶಿ ‘ಸುಯೋಧನ’

YK Sandhya Sharma

ತಿಳಿಹಾಸ್ಯದ ಹೊನಲು ಹರಿಸಿದ – ಸತ್ಯಂ ವಧ

YK Sandhya Sharma

Leave a Comment

This site uses Akismet to reduce spam. Learn how your comment data is processed.