Image default
Dance Reviews

ತೇಜಸ್ವಿನಿಯ ಪ್ರಬುದ್ಧ ನರ್ತನದ ಸೊಗಸಿನ ಸಿರಿ

ರಂಗದ ಮೇಲೆ ಆತ್ಮವಿಶ್ವಾಸದ ಪಕ್ವಾಭಿನಯ ಮೆರೆದ ಭರತನಾಟ್ಯ ಕಲಾವಿದೆ ತೇಜಸ್ವಿನಿ ಬಾಲಾಜಿಯದು ರಂಗಸ್ಥಳದ ಮೊದಲ ಪ್ರವೇಶವಿದು ಎನಿಸಲಿಲ್ಲ. ಲೀಲಾಜಾಲ-ನಿರಾಯಾಸದ ಸುಮನೋಹರ ನೃತ್ಯ ಪ್ರಸ್ತುತಿಪಡಿಸಿದ ತೇಜಸ್ವಿನಿ ಪ್ರಸಿದ್ಧ ‘’ಶಿವಪ್ರಿಯ’’ ನೃತ್ಯಸಂಸ್ಥೆಯ ನಾಟ್ಯಾಚಾರ್ಯ ಅಂತರರಾಷ್ಟ್ರೀಯ ನೃತ್ಯಕಲಾವಿದ ಡಾ. ಸಂಜಯ್ ಶಾಂತಾರಾಂ ಅವರ ಶಿಷ್ಯೆ. ಇತ್ತೀಚಿಗೆ ಆಕೆ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ತನ್ನ ‘’ರಂಗಪ್ರವೇಶ’’ ನೆರವೇರಿಸಿಕೊಂಡಳು.

ದೈವೀಕ ಆಯಾಮದ ಕೃತಿಗಳಿಂದ ನರ್ತನಾರಂಭವಾಯಿತು. ಅಮೃತವರ್ಷಿಣಿ ರಾಗದ ‘’ಪುಷ್ಪಾಂಜಲಿ’’ ಯಲ್ಲಿ ಕಲಾವಿದೆಯ  ಶುದ್ಧ ಆಂಗಿಕಗಳ ಸೌಂದರ್ಯದ ಪರಿಚಯವುಂಟಾಯಿತು. ಲಾಸ್ಯಪೂರಿತ ನೃತ್ತಗಳು ಝೇಂಕರಿಸಿದವು. ಹೊಳಪಿನ ಕಣ್ಣೋಟದ ದೃಷ್ಟಿಭೇದ-ಗ್ರೀವಭೇದಗಳು ಒಂದೆಡೆ ಅವಳ ನೃತ್ಯಕ್ಕೆ ಸುಂದರ ಪ್ರಭಾವಳಿ ನೀಡಿದರೆ, ಮಿಂಚಿನ ಸಂಚಾರದ ಚಲನೆಗಳು, ಖಚಿತ ಹಸ್ತಮುದ್ರೆಗಳು ನೃತ್ಯದ ಅಂದವನ್ನು ಎತ್ತಿಹಿಡಿದವು. ನಂತರ, ಗಣೇಶನಿಗೆ ಶಿರಬಾಗಿ ನಮಿಸಿ, ‘ಆನಂದ ರೂಪಿಣಿ ನಾರಾಯಣಿ’’ ಯಾದ ತ್ರಿಶಕ್ತಿಯ ಮಹಿಮೆಯನ್ನು ಭಕ್ತಿಪೂರ್ವಕವಾಗಿ ತನ್ನ ಸುಮನೋಹರ ಅಭಿನಯದ ಮೂಲಕ ಅರ್ಪಿಸಿದಳು. ಅಂಬಾ ಶಾಂಭವಿಯ ಚೇತೋಹಾರಿ ಭಂಗಿಗಳನ್ನು ಪ್ರದರ್ಶಿಸುತ್ತ ಆಕೆಯ ಸೌಮ್ಯ-ಪ್ರಫುಲ್ಲ ಮೊಗದಕಾಂತಿಯನ್ನು ಸೊಗಸಾಗಿ ಬಿಂಬಿಸಿದಳು. ಕುಪಿತ  ದೇವಿಯ ಮಹಿಷಾಸುರಮರ್ಧಿನಿಯ ಉಗ್ರರೂಪ-ಆವೇಶಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಳು.

ಮೈಸೂರು ವಾಸುದೇವಾಚಾರ್ಯರು ಕಮಾಚ್ ರಾಗದಲ್ಲಿ ರಚಿಸಿದ ಜನಪ್ರಿಯ ಕೀರ್ತನೆ ‘’ ಬ್ರೋಚೇವಾ ರೆವರುರಾ’’. ಹೀಗೆಂಬುದಾಗಿ ಭಕ್ತ, ದೈನ್ಯತೆಯಿಂದ ಶ್ರೀರಾಮನನ್ನು ಪ್ರಶ್ನಿಸುತ್ತ ಅವನಲ್ಲಿ ಅನನ್ಯ ಭಕ್ತಿ-ಶರಣಾಗತಿಯನ್ನು ವ್ಯಕ್ತಪಡಿಸುತ್ತಾನೆ. ಅದೇ ಭಕ್ತಿಭಾವವನ್ನು ಮೈದುಂಬಿಕೊಂಡು ತೇಜಸ್ವಿನಿ, ಕರಿಯನ್ನು ಮಕರದಿಂದ ರಕ್ಷಿಸಿದ, ಹನುಮನ ಹೃದಯದಲ್ಲಿ ನೆಲೆಸಿ ಕಾರುಣ್ಯ ತೋರಿದ ನಿನಗೆ ನನ್ನ ಬಗೆ ಏಕಿಂಥ ನಿರ್ಲಕ್ಷ್ಯವೆಂದು ಅನುನಯವಾಗಿ ಬೇಡಿಕೊಳ್ಳುವ ಆರ್ದ್ರತೆ ಮನಮುಟ್ಟಿತು. ಪ್ರತಿಸಾಲಿನ ಅರ್ಥವನ್ನೂ ಸ್ಫುಟವಾಗಿ ತನ್ನ ಅಮೋಘ ಅಭಿನಯದ ಮೂಲಕ ತಲುಪಿಸಿದ ಕಲಾವಿದೆ, ಸೃಷ್ಟಿಸಿದ ಸೌಮ್ಯರೂಪದ ಶ್ರೀರಾಮನ ಭಂಗಿಗಳು ಮನೋಜ್ಞವಾಗಿದ್ದವು. ನಡುನಡುವೆ ಮೈದಳೆದ ಸ್ವರಲಾಲಿತ್ಯಗಳಲ್ಲಿ ಮಿಂದ ನೃತ್ತಗಳ ಉತ್ಸವ ಕಣ್ಮನ ತುಂಬಿತು.

`ಮಾರ್ಗಂ’-ಸಂಪ್ರದಾಯದ ಪ್ರಧಾನಭಾಗ ‘’ವರ್ಣ’’-ಅತ್ಯಂತ ಸವಾಲಿನ, ಅಷ್ಟೇ ಸೌಂದರ್ಯದ ಪರಾಕಾಷ್ಠತೆಯ ಘಟ್ಟ. ’ಸ್ವಾಮಿಯೇ ವರೈ ತೋಡಿವಾ ಸಖಿಯೇ‘-ನವರಾಗಮಾಲಿಕೆಯ ಈ ಕೃತಿಯಲ್ಲಿ ಒಂಭತ್ತು ರಾಗಗಳ ಹೆಸರುಗಳೂ ಹಾಸುಹೊಕ್ಕಾಗಿರುವುದು ವಿಶೇಷ. ವಿರಹೋತ್ಖಂಠಿತ ನಾಯಕಿ ವಿರಹತಾಪದಿಂದ ಬಳಲುತ್ತ, ತನ್ನ ಮನಸ್ಸಿನ ವಿಪ್ಲವವನ್ನು ಸಖಿಯಲ್ಲಿ ತೋಡಿಕೊಂಡು, ತನ್ನಿನಿಯ ನಟರಾಜ ಸ್ವಾಮಿಯನ್ನು ಬೇಗ ಕರೆತಾರೆ ಎಂದು ಗೋಗರೆಯುತ್ತಾಳೆ. ಉಮ್ಮಳಿಸುತ್ತಿರುವ ಭಾವವನ್ನು ತಾಳಲಾರದ ನಾಯಕಿಯ ಪ್ರತಿಸ್ವರೂಪವಾಗಿ ಕಲಾವಿದೆ, ರಂಗದ ತುಂಬಾ ನೃತ್ತಗಳ ರಂಗವಲ್ಲಿ ಬರೆಯುತ್ತ, ಲೀಲಾಜಾಲವಾಗಿ ಆಕಾಶಚಾರಿಗಳ ಬೀಸುಗಳಲ್ಲಿ ಭ್ರಮರಿಗಳ ಆವೇಶದಲ್ಲಿ ತನ್ನ ತಾ ಮರೆತು ‘ನೃತ್ತ ಸೇವೆ’ ಅರ್ಪಿಸುತ್ತಾಳೆ. ಮೈಮನದುಂಬಿದ ಆ ‘ನಾಗಾಭರಣ’ನ ದೃಶ್ಯವತ್ತಾದ ಅಲಂಕಾರ-ವರ್ಚಸ್ಸನ್ನು ಬಗೆಬಗೆಯ ಭಂಗಿಗಳಲ್ಲಿ ಸೆರೆಹಿಡಿದು ತಾದಾತ್ಮ್ಯತೆ ಪ್ರಕಟಿಸುತ್ತಾಳೆ. ಜೀವಂತಿಕೆ ಚಿಮ್ಮುವ ಹೆಜ್ಜೆಗಳ ಪ್ರಭೇದಗಳು, ಮೈಮರೆತು ಕುಣಿವ ನೃತ್ತಗಳ ನವವಿನ್ಯಾಸಗಳು ಕಲಾವಿದೆಯ ನೃತ್ಯನೈಪುಣ್ಯವನ್ನು ಪ್ರತಿಫಲಿಸಿದವು. ಗುರು ಸಂಜಯರ ನವಚೈತನ್ಯದ ಜತಿಯ ಶೊಲ್ಲುಕಟ್ಟುಗಳ ನುಡಿಗಳು, ಅವರ ಭಾವಪೂರ್ಣ ಗಾಯನದಲ್ಲಿ ರಸೋತ್ಕರ್ಷಕ್ಕೇರಿದ್ದವು.

ಮುಂದೆ ಕ್ಷೇತ್ರಯ್ಯನವರ ’ಪದಂ’ -ಖಂಡಿತಾ ನಾಯಕಿಯ ಕೋಪ-ದುಮ್ಮಾನಗಳನ್ನು ತೀವ್ರವಾಗಿ ಸೆರೆಹಿಡಿವ ಹೃದಯಸ್ಪರ್ಶಿ ಕೃತಿ. ‘ಮುವ್ವ ಗೋಪಾಲ’ನಿಗಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ನಿರೀಕ್ಷಿಸುತ್ತಿರುವ ಅಪ್ಪಟ ಪ್ರೇಮಿಯಾದ ತನಗೆ ದ್ರೋಹಬಗೆದ ಕೃಷ್ಣನ ಬಗ್ಗೆ ವ್ಯಂಗ್ಯವಾಗಿ ದೂರುತ್ತಾಳೆ. ಪರಸ್ತ್ರೀ ಸಂಗದಲ್ಲಿ ಕಾಲ ಕಳೆವ ಅವನು ತನ್ನ ಮನೆಗೆ ಏಕಿಂದು ಬಂದಿದ್ದಾನೆಂದು ಕೋಪಗೊಂಡು ಮನೆಯಿಂದಾಚೆಗಟ್ಟುವ ಒರಟು ನಡವಳಿಕೆ ತೋರಿದರೂ ಅವಳ ತಪ್ತ ಮನಸ್ಸು ಕರಗಿ, ಮತ್ತವನನ್ನು ಪ್ರೀತಿಯಿಂದ ಒಳಗೆ ಕರೆದುಕೊಳ್ಳುವ ನವಿರಾದ ಅಭಿನಯವನ್ನು ತೇಜಸ್ವಿನಿ ಬಹು ಮಾರ್ಮಿಕವಾಗಿ ಅಭಿನಯಿಸಿದಳು.

 ಜಯದೇವ ಕವಿಯ ‘ಗೀತಗೋವಿಂದ’ದ ’ಅಷ್ಟಪದಿ’ಯಲ್ಲಿನ ರಾಧಾ-ಕೃಷ್ಣರ ಸಮಾಗಮದ ಸುಂದರ ಚಿತ್ರಣವನ್ನು ಅಷ್ಟೇ ಸೂಕ್ಷ್ಮಾಭಿನಯದ ಕೋಮಲತೆಯಿಂದ  ಕಣ್ಮುಂದೆ ತಂದಿರಿಸಿದಳು. ಇಲ್ಲಿ ಶೃಂಗಾರ ಪ್ರಧಾನರಸವಾದರೂ ಹುಸಿಗೋಪ, ನಾಚಿಕೆ, ಪುಳಕ ಇತ್ಯಾದಿ ಉಳಿದ ರಸಗಳು ಆನುಷಂಗಿಕವಾಗಿ ಚಿಮ್ಮಿದ್ದು ಸೊಗಸಾಗಿತ್ತು. ಅಂತ್ಯದ ‘’ತಿಲ್ಲಾನ’’ದಲ್ಲಿ ಹೊಮ್ಮಿದ ಪುಂಖಾನುಪುಂಖ ನೃತ್ತಗಳ ಮೆರವಣಿಗೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

Related posts

ರಸಾನುಭವ ನೀಡಿದ ಮಧುಶ್ರೀ ನರ್ತನ

YK Sandhya Sharma

ಆಕರ್ಷಕ- ಅನ್ವೀ ಡಾಗ ಕಥಕ್ ನರ್ತನ

YK Sandhya Sharma

ಮನಕಾನಂದ ನೀಡಿದ ಅಚಲಳ ಮನೋಜ್ಞ ನೃತ್ಯವಲ್ಲರಿ

YK Sandhya Sharma

Leave a Comment

This site uses Akismet to reduce spam. Learn how your comment data is processed.