‘ಶಿವಪ್ರಿಯ’ ನೃತ್ಯಶಾಲೆಯ ಕಲಾನಿರ್ದೇಶಕ ಅಂತರರಾಷ್ಟ್ರೀಯ ನೃತ್ಯ ಕಲಾವಿದ, ನಾಟ್ಯಗುರು, ನಟುವನ್ನಾರ್, ಗಾಯಕ, ನೃತ್ಯಸಂಯೋಜಕ ಮತ್ತು ವಾಗ್ಗೇಯಕಾರ ಡಾ. ಸಂಜಯ ಶಾಂತಾರಾಂ ಅವರಿಂದ ಶಿಕ್ಷಣಧಾರೆ ಪಡೆದುಕೊಂಡ ಕಲಾವಿದೆ ಸವಿತಾ ಕಾರ್ತೀಕ್. ಸದಾ ಸಕ್ರಿಯರಾಗಿರುವ ಸಂಜಯ್ ತಮ್ಮ ಶಿಷ್ಯರ ಪ್ರತಿ ರಂಗಪ್ರವೇಶದಲ್ಲೂ ಏನಾದರೊಂದು ಹೊಸತನ ರೂಢಿಸುವುದು ಅವರ ವೈಶಿಷ್ಟ್ಯ. ಅದರಂತೆ ಸವಿತಾ ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ನಡೆದ ಸವಿತಾ ರಂಗಪ್ರವೇಶದ ದಿನ ಪ್ರಸ್ತುತಪಡಿಸಿದ ಎಲ್ಲ ನೃತ್ಯ ಸಂಯೋಜನೆಗಳೂ ಸೃಜನಾತ್ಮಕವಾಗಿದ್ದವು.
ಸಾಂಪ್ರದಾಯಕ ‘ಪುಷ್ಪಾಂಜಲಿ’ಯೊಂದಿಗೆ ಸವಿತಾ, ಪ್ರಸ್ತುತಿಯನ್ನು ಶುಭಾರಂಭಗೊಳಿಸಿ, ಕಲಾರಸಿಕರಿಗೆ ತನ್ನ ಕಲಾನೈಪುಣ್ಯದ ಬನಿಯನ್ನು ಪರಿಚಯಿಸಿದಳು. ಹೊಸಮಿನುಗಿನ ನೃತ್ತಾವಳಿಗಳು ಚೈತನ್ಯಪೂರ್ಣವಾಗಿದ್ದವು. ಹಂಸಧ್ವನಿ ರಾಗದ ‘ ಗಣಪತಿ ಸ್ತುತಿ’ ಯಲ್ಲಿ (ರಚನೆ-ವೀಣಾಮೂರ್ತಿ ವಿಜಯ್) ಸವಿತಾ, ಸಿದ್ಧಿ ಗಣೇಶನ ಅನೇಕ ರೂಪಗಳನ್ನು ತ್ತನ್ನ ಮನೋಜ್ಞ ಅಭಿನಯ-ಆಂಗಿಕಗಳಿಂದ ಪ್ರದರ್ಶಿಸಿದಳು. ನಿರಾಯಾಸ ಹಸನ್ಮುಖದ ಪ್ರಸ್ತುತಿ ಮೆಚ್ಚುಗೆ ತಂದಿತು. ಗಣಪನಿಗೆ ಆನೆ ಮೊಗವೇಕೆ ಎಂಬ ಹಿನ್ನಲೆಯನ್ನು ಕಥಾರೂಪದಲ್ಲಿ ಸೊಗಸಾದ ಅಭಿನಯದಲ್ಲಿ ಕಟ್ಟಿಕೊಟ್ಟಳು. ಪ್ರತಿಯೊಂದು ವಿವರಗಳನ್ನೂ ಸ್ಪಷ್ಟ ಆಂಗಿಕಾಭಿನಯದಲ್ಲಿ ಸಂವೇದಿಸಿದಳು. ಪ್ರದರ್ಶಿಸಿದ ಸುಂದರ ಭಂಗಿಗಳಲ್ಲಿ ಆಕೆಯ ದೇಹದ ಮೇಲಿನ ನಿಯಂತ್ರಣ ಸುವ್ಯಕ್ತವಾಗಿತ್ತು.
ಅನಂತರ ಲಯಬದ್ಧವಾದ ನೃತ್ತಗಳಿಂದ ಕೂಡಿದ, ಚೊಕ್ಕವಾದ ನೃತ್ತಬಂಧ ಅಮೃತವರ್ಷಿಣಿ ರಾಗದ ಸಂಜಯ್ ವಿರಚಿತ ‘ಜತಿಸ್ವರ’ ಲವಲವಿಕೆಯ ನೃತ್ತವಲ್ಲರಿಯಿಂದ ರಂಜಿಸಿತು. ನವವಿನ್ಯಾಸದ ವೇಗದ ಜತಿಗಳ ನಿರೂಪಣೆ ವಿಶಿಷ್ಟವಾಗಿತ್ತು. ಸೆಳೆಮಿಂಚು ತುಂಬಿದ್ದ ಆ ನೃತ್ತಗಳಲ್ಲಿ ಬೆಡಗಿತ್ತು, ಚೆಲುವಿತ್ತು, ಮುದವಿತ್ತು. ಜತಿಗಳು ಯಾಂತ್ರಿಕವೆನಿಸದಂತೆ ಹೊಸವಿನ್ಯಾಸದ ರಂಗು ನೀಡುವುದು ಸಂಜಯ್ ವೈಶಿಷ್ಟ್ಯ. ಕರ್ಣಾನಂದಕರ ವಾದ್ಯಗಳ ನಿನಾದ ತಟ್ಟನೆ ನಿಂತು, ನಿಶಬ್ದ ಸೃಷ್ಟಿಸಿದ ಸೌಂದರ್ಯವೂ ಈ ನವಪ್ರಯೋಗಗಳಲ್ಲಿ ಒಂದು. ವಯ್ಯಾರದಿಂದ ಮಿನುಗಿದ ಸ್ವರಗಳಲ್ಲಿ ದೈವೀಕತೆ ಮಿನುಗಿತ್ತು.
ಇದು ಸಂಜಯ್ ಶಿಷ್ಯಸಂಕುಲದ 56 ನೆಯ ರಂಗಪ್ರವೇಶವಾಗಿದ್ದು, ಪ್ರತಿಬಾರಿಯೂ ‘’ಮಾರ್ಗಂ’’ ಸಂಪ್ರದಾಯದ ಬಹು ಮುಖ್ಯಘಟ್ಟವಾದ ‘’ವರ್ಣ’’ದ ಸಂಯೋಜನೆಯಲ್ಲಿ ವಿನೂತನತೆ ಕಾಪಾಡಿಕೊಳ್ಳುವುದು ಇವರ ವಿಶೇಷ. ಆಯಾ ಶಿಷ್ಯರ ವಯೋಧರ್ಮ, ನೃತ್ಯಸಾಮರ್ಥ್ಯ, ಲಯ-ತಾಳಗಳ ಪ್ರಜ್ಞೆ ಮತ್ತು ಗ್ರಹಣಶಕ್ತಿಯನ್ನು ಆಧರಿಸಿ ಇವರು, ಕೃತಿಗಳ ಆಯ್ಕೆ ಮತ್ತು ಪ್ರಸ್ತುತಿಯ ತಾಂತ್ರಿಕ ಕೌಶಲ್ಯದ ಹರಹು-ವಿಸ್ತಾರಗಳನ್ನು ನಿರ್ಮಿಸುತ್ತಾರೆ. ನಿಜಕ್ಕೂ ಕಲಾವಿದರಿಗೆ ಇದೊಂದು ಸವಾಲೇ ಸರಿ. ಅದನ್ನು ನಿಭಾಯಿಸುವ ತರಬೇತಿ ಅದಾಗಲೇ ದೊರೆತಿರುತ್ತದೆಯಾದ್ದರಿಂದ, ಕಲಾವಿದರು ಬಹು ಆತ್ಮವಿಶ್ವಾಸದಿಂದ ‘’ವರ್ಣ’’ವನ್ನು ನಿಭಾಯಿಸುವರು.
ಚೆನ್ನೈನ ಲಲಿತಾ, ಕಮಾಚ್ ರಾಗದಲ್ಲಿ, ಭಕ್ತಿಮಿಶ್ರಿತ ವಿರಹೋತ್ಖಂಠಿತ ನಾಯಕಿಯ ಪ್ರಣಯದ ಭಾವನೆಗಳ ಸಿಂಚನವನ್ನು, ಚಿತ್ರಿಸಿ, ‘ಷಣ್ಮುಖ’ ನ ರೂಪ-ಮಹಿಮೆ, ವೃತ್ತಾಂತಗಳ ಹಿರಿಮೆಗಳನ್ನು ಕೊಂಡಾಡಲು ಅಣಿಗೊಳಿಸಿರುವ ‘ವರ್ಣ’ ಇದಾಗಿತ್ತು. ವೇಲಾಯುಧನನ್ನು ಕಾಣಲು ಪರಿತಪಿಸುವ ದೇವಯಾನಿ, ಅವನು ವೃದ್ಧವೇಷ ತಳೆದು ವಲ್ಲಿಯನ್ನು ಪ್ರೇಮಿಸಿ ಮದುವೆಯಾಗಲು ಹೊರಟಿದ್ದರೂ, ಅವನಲ್ಲಿನ ಪ್ರೀತಿ ಇನಿತೂ ಕಮ್ಮಿಯಾಗದೆ, ಅವನನ್ನು ಒಪ್ಪಿಕೊಳ್ಳುವ ಔದಾರ್ಯ ತೋರುವ ಉನ್ನತ ಪ್ರೇಮಿ. ಅವನಿಗಾಗಿ ತಾನು ಕಾವಡಿ ಹೊರಲೂ ಸಿದ್ಧ ಎನ್ನುತ್ತ, ಪ್ರಣಯದ ಉತ್ಖಂಠತೆಯನ್ನು ಸವಿತಾ, ಹಲವಾರು ಸಂಚಾರಿಗಳಲ್ಲಿ ತನ್ನ ಮನೋಜ್ಞ ಅಭಿನಯ-ನೃತ್ಯಗಳ ಸಮ್ಮೇಳದಲ್ಲಿ ನಿರೂಪಿಸಿದಳು. ಆರ್ಮುಗನಿಗೆ ಸಂಬಂಧಿಸಿದ ವೇಷ-ಭೂಷಣ, ಅಲಂಕಾರಗಳನ್ನೇ ಬಳಸಿ ಹೆಣೆದ ನೃತ್ತಗಳು ಈ ಸಂದರ್ಭದ ಮಹತ್ವವನ್ನು ಎತ್ತಿ ಹಿಡಿದವು. ಕರಾರುವಾಕ್ಕಾದ ಭ್ರಮರಿಗಳು ಅಂಗಿಕಶುದ್ಧತೆಯಿಂದ ಸೊಗಯಿಸಿದವು. ಸ್ಥಾಯೀಭಾವವನ್ನು ಕಡೆಯವರೆಗೂ ಕಾಯ್ದುಕೊಂಡುಬಂದ ಅವಳು, ಪ್ರಣಯಾರಾಧಕನಿಗೆ ಸಲ್ಲಿಸಿದ ಹರ್ಷದ ನೃತ್ಯಾರ್ಚನೆ, ಇಡೀ ಕಥಾನಕವನ್ನು ಕಣ್ಮುಂದೆ ತಂದುನಿಲ್ಲಿಸಿತು. ಮಿಂಚಿನಬಳ್ಳಿಯಂತೆ, ತನ್ನ ಪಾದರಸದ ನಡೆ, ಭಾವಪೂರ್ಣ ನಿರೂಪಣೆಯಿಂದ ಸವಿತಾ ಹೃದಯವನ್ನು ಗೆದ್ದುಕೊಂಡಳು. ಸಶಕ್ತ ನಟುವಾಂಗ, ಜತಿಯ ಕೊನ್ನಕೋಲಿಗೂ ಭಾವನೆಗಳು ಒಸರಿದವು.
ಮುಂದೆ ಪುರಂದರದಾಸರ ‘ಯಮನೆಲ್ಲೂ ಕಾಣನೆಂದು ಹೇಳಬೇಡ’ ಕೃತಿ ರಸಾನುಭವದ ಗಣಿಯಾಯಿತು. ಶ್ರೀಹರಿಯ ಗುಣಾತಿಶಯವನ್ನು ಕೊಂಡಾಡುವ ಕೃತಿ, ದಶಾವತಾರದ ಬೆಸುಗೆಯಲ್ಲಿ ಕಲಾವಿದೆಯ ಕಲಾನೈಪುಣ್ಯವನ್ನು ಉನ್ನತೀಕರಿಸಿತು. ಪಂಚರತ್ನ ಮಾಲಿಕೆಯ ‘ತಿಲ್ಲಾನ’ದಲ್ಲಿ ನಟರಾಜನ ಬಣ್ಣನೆ, ಮನೋಹರ ನೃತ್ತಸಾಂಗತ್ಯಗಳೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.