Image default
Drama Reviews

ಬಹುಕಾಲ ಕಾಡುವ ಹೃದಯಸ್ಪರ್ಶಿ ‘ಸುಯೋಧನ’

ಮಹಾಭಾರತದ ಕಥೆ ಮೊದಲೇ ಆಸಕ್ತಿ-ಕುತೂಹಲಗಳನ್ನು ಕೆರಳಿಸುವಂಥದ್ದು. ಮುಖ್ಯ ಕಥಾಪ್ರವಾಹದೊಡನೆ ಅಕ್ಕ ಪಕ್ಕ ಸೇರಿಕೊಳ್ಳುವ ಉಪಕಥೆಗಳಿಂದ ಬಹು ರೋಚಕವಾಗಿ ಸ್ವಾರಸ್ಯಭರಿತವಾಗಿ ಸಾಗುವ ಕಥೆಯ ಒಡಲಲ್ಲಿ ಅದೆಷ್ಟೋ ಬಗೆಯ ವಿಶಿಷ್ಟ -ವಿಭಿನ್ನ ಪಾತ್ರಗಳು ವೈವಿಧ್ಯಮಯವಾಗಿ ಬೆಳೆದು ಬರುವ ವಿಸ್ಮಯ. ಅದರಲ್ಲೂ ಖಳನಾಯಕನಂತೆಯೇ ಕಾಲಾನುಕಾಲದಿಂದ ಚಿತ್ರಿತನಾಗಿರುವ ‘ದುರ್ಯೋಧನ’ನದು ನಿಜಕ್ಕೂ ವರ್ಣರಂಜಿತ ಪಾತ್ರ. ರನ್ನ ಮಹಾಕವಿಯ ಲೇಖನಿಯ ಮೂಸೆಯಲ್ಲಿ ರೂಹುತಳೆದ ‘ಸುಯೋಧನ’ ಹೊಸನೋಟಕ್ಕೆ, ಹೊಸ ಹೊಳಹಿಗೆ  ಸ್ಫೂರ್ತಿಯಾಗುತ್ತಾನೆ. ಅದೇ ಆಶಯದಲ್ಲಿ ಮೈದಾಳಿದ ಹಿರಿಯ ನಾಟಕಕಾರ ಎಸ್.ವಿ.ಕೃಷ್ಣಶರ್ಮರ ರಚನೆಯಲ್ಲಿ  ‘’ಸುಯೋಧನ’’, ನ್ಯಾಯಕ್ಕಾಗಿ ಹೋರಾಡುವ ಸ್ವಾಭಿಮಾನಿ ಕಲಿ. ಕೃಷ್ಣನ ಬಲದಿಂದ ಗೆಲುವನ್ನು ಸಾಧಿಸಿದ ಪಾಂಡವರ ಪ್ರತಿಯೊಂದು ನಡೆ-ನುಡಿಯನ್ನೂ ಜಾಲಾಡಿ, ಪ್ರಶ್ನಿಸಿ, ವಿಮರ್ಶಿಸಿ ಅದು ಧರ್ಮ-ನ್ಯಾಯಸಮ್ಮತವಲ್ಲ  ಎಂಬ ನಿಷ್ಟುರಸತ್ಯವನ್ನು ವಿಮರ್ಶೆಯ ನಿಕಷಕ್ಕೆ ಹಚ್ಚುವ ಶಕ್ತಿಶಾಲಿ ನಾಟಕ ‘’ಸುಯೋಧನ’’. ನಾಟಕ ಮುಗಿದಮೇಲೂ ಬಹುವಾಗಿ ಕಾಡುವ ‘ಸುಯೋಧನ’ ಪಡೆದ ಜನಪ್ರಿಯತೆಗೆ ಸಾಕ್ಷಿ ಬೆಂಗಳೂರಿನ ‘ಸಂಧ್ಯಾ ಕಲಾವಿದರು’ ಮತ್ತೆ ಮತ್ತೆ ಪ್ರದರ್ಶಿಸುತ್ತಿರುವ ಈ ‘ಸುಯೋಧನ’ ನಾಟಕ.

ಇಡೀ ಮಹಾಭಾರತದ ಪ್ರತಿಯೊಂದು ಘಟನೆಗಳನ್ನೂ, ಪಾತ್ರಗಳನ್ನೂ ಸುಯೋಧನನ ಪಾತ್ರದ ಮೂಲಕ ಸಿಂಹಾವಲೋಕನ ಕ್ರಮದಿಂದ ಮನಃಪಟಲದ ಮೇಲೆ ಮರುಕೊಳಿಸುವಂತೆ ಮಾಡುವ ರಂಗತಂತ್ರ ನಿಜಕ್ಕೂ ವಿಶಿಷ್ಟ. ಸುಯೋಧನನ ಪ್ರತಿ ಮಾತು-ವಾದಗಳೂ ಮತ್ತು ಅವನ ಸಮರ್ಥನೆಯ ನುಡಿಗಳು ಒಪ್ಪುವಂತೆ ಮಾಡುತ್ತವೆ. ಇಲ್ಲಿನ ನಾಟಕದವಸ್ತು  ಕುರುಕ್ಷೇತ್ರದ ಕಡೆಯಭಾಗ. `ಸ್ಮಶಾನ ಕುರುಕ್ಷೇತ್ರ‘ ದಲ್ಲಿ ನಡೆಯುವ ಸುಯೋಧನ ಹಾಗೂ ಭೀಮನ ನಡುವಿನ ಗದಾಯುದ್ಧ ಮತ್ತು ಸುಯೋಧನನ ಅವಸಾನದ ಚಿತ್ರಣದ ಮೇಲೆ ನಾಟಕವನ್ನು ಕೇಂದ್ರೀಕರಿಸಲಾಗಿದೆ .

ಇಡೀ ನಾಟಕ ಕಥಾನಾಯಕ ಸುಯೋಧನನ ಸ್ಮೃತಿಪಟಲದ ಮೇಲೆ ಹಾದುಹೋಗುವ ಪಕ್ಷಿನೋಟ ತಂತ್ರದಲ್ಲಿ, ಹಿಂದೆ ನಡೆದುಹೋದ ಘಟನೆಗಳು ಬಿಚ್ಚಿಕೊಳ್ಳುವಂತೆ ನಿರೂಪಿತವಾಗಿದೆ. ಕುರುಕ್ಷೇತ್ರದ ಯುದ್ಧ ಮುಗಿದನಂತರ ಉಳಿಯುವ ಏಕಾಂಗಿ ಸುಯೋಧನ ಎದುರಿಸುವ ತಾಕಲಾಟ-ತುಮುಲಗಳ ಅಭಿವ್ಯಕ್ತಿಯೇ ಈ ನಾಟಕ. ತನ್ನವರನ್ನೆಲ್ಲ ಕಳೆದುಕೊಂಡ ಅವನು ತನ್ನ ನಾಶಕ್ಕೆ ಕಾರಣರಾದವರನ್ನು ನೆನೆಸಿಕೊಳ್ಳುತ್ತಾ ಬಡಬಡಿಸುತ್ತಾನೆ. ವೈಶಂಪಾಯನ ಸರೋವರದಲ್ಲಿ ಅಡಗಿದ್ದವನು ಹೊರಬಂದು, ಕೆಣಕಿದ ಭೀಮನನ್ನು ಮೂದಲಿಸುತ್ತ, ಪಾಂಡವರ ಪರ ಪಕ್ಷಪಾತ ಮಾಡಿ, ಕೌರವರಿಗೆ ಮೋಸಮಾಡಿದ `ಕೃಷ್ಣ’ನನ್ನು ದೂಷಿಸುತ್ತಾನೆ. ಕೌರವರಿಗೆ ವ್ಯತಿರಿಕ್ತರಾದ ವ್ಯಕ್ತಿಗಳು-ಸನ್ನಿವೇಶಗಳನ್ನು ಕುರಿತು ವಿಮರ್ಶಿಸಿ ಜಾಲಾಡುತ್ತಾನೆ. ತನ್ನ ದೃಷ್ಟಿಯಲ್ಲಿ ಸುಯೋಧನ, ಇತರ ಪಾತ್ರಗಳನ್ನು ಕಾಣುತ್ತ ಹೋಗುವುದು ನಾಟಕದ ವಿಶೇಷ. ಅವನ ವಾದ-ವಿವಾದ ಹಾಗೂ  ಸಮರ್ಥನೆ, ಅವನ ಬಗ್ಗೆ ಸಹಾನುಭೂತಿಯನ್ನು ಹುಟ್ಟಿಸುತ್ತವೆ.

ರಾಜಕಾರಣದ ಭದ್ರಬುನಾದಿಯಾದ ಕಪಟ , ಕುತಂತ್ರ ಹಾಗೂ ಛಲ ಇವೇ ಮುಂತಾದ  ಸಾರ್ವಕಾಲಿಕ ಅಂಶಗಳನ್ನು ನಾಟಕದಲ್ಲಿ ಎತ್ತಿ ತೋರಿಸಲಾಗಿದೆ. ಭೀಮನ ಗದಾಪ್ರಹಾರದಿಂದ ಧರಾಶಾಯಿಯಾದ ಅವನು ತನ್ನ ಪತನಕ್ಕೆ ಕಾರಣರಾರು ಎಂದು ಆತ್ಮವಿಶ್ಲೇಷಣೆ ಮಾಡಿಕೊಳ್ಳುತ್ತ ಹೋಗುವ ಘಟ್ಟದಲ್ಲಿ ಅವನ ಶತ್ರುಗಳ ಜೊತೆ,ತಾನು  ನೆಚ್ಚಿ-ನಂಬಿದವರೂ ಅದರಲ್ಲಿ ಸೇರಿದಂತೆ ಭಾಸವಾಗಿ ಭ್ರಮನಿರಸಗೊಳ್ಳುತ್ತಾನೆ . ತನ್ನ ಉಪ್ಪುಂಡ, ತನ್ನನ್ನಾಶ್ರಯಿಸಿದ ಸ್ನೇಹಿತ ಕರ್ಣ, ಮಾವ ಶಕುನಿ ಮತ್ತು ಹಿರಿಯರಾದ ದ್ರೋಣ-ಭೀಷ್ಮ ಮುಂತಾದ ನಂಬಿದ ವ್ಯಕ್ತಿಗಳೇ ದ್ರೋಹ ಬಗೆದಿರುವ ಸಂಗತಿಗಳು  ಒಂದೊಂದೇ ಅರಿವಾಗುತ್ತ, ತಾನವರನ್ನು ವ್ಯರ್ಥ ಮೆರೆಸಿದ್ದಕ್ಕಾಗಿ  ಪಶ್ಚಾತ್ತಾಪಪಡುವಂಥ ಹಲವು ಹೃದಯಸ್ಪರ್ಶೀ ದೃಶ್ಯಗಳಿವೆ. ನಾಟಕ ನೋಡುತ್ತಿರುವಷ್ಟು ಹೊತ್ತು, ಸುಯೋಧನನ ಅಂತರಂಗದ ಮಾತುಗಳು ಮನಸ್ಸನ್ನು ಅಲ್ಲಾಡಿಸುತ್ತವೆ.

`ಯುದ್ಧದಲ್ಲಿ ಸತ್ತವರೆಲ್ಲ ವೀರಸ್ವರ್ಗ ಸೇರುತ್ತಾರಂತಲ್ಲ ನೀವೇಕೆ ಭೂತ ಪ್ರೇತ-ಪಿಶಾಚಿಗಳಾಗಿ ಅಲೆಯುತ್ತಿರುವಿರಿ’ – ಎಂದು ಸುಯೋಧನ, ತನ್ನನ್ನು ಸುತ್ತುವರಿದ, ಕಲಿಗಳೆನಿಸಿಕೊಂಡು ಯುದ್ಧದಲ್ಲಿ ಮಡಿದವರ ಪ್ರೇತಗಳನ್ನು ಪ್ರಶ್ನಿಸುವ ಸಂದರ್ಭ ನಾಟಕದಲ್ಲಿ ಅತ್ಯಂತ ಮಾರ್ಮಿಕವಾಗಿದೆ. ನಾಟಕಕಾರರ ಈ ಹೊಸಪರಿಕಲ್ಪನೆ ಕುತೂಹಲಕರವಾಗಿರುವಷ್ಟೇ, ನಿರ್ದೇಶಕರಾಗಿ  ಕೃಷ್ಣಶರ್ಮರು ರಂಗದಮೇಲೆ ರೂಪಿಸುವ `ಪ್ರೇತ ದೃಶ್ಯ’ದ ನಿರ್ಮಾಣವೂ ಅಷ್ಟೇ ಪರಿಣಾಮಕಾರಿ.

ಹೊಸ ಆವಿಷ್ಕಾರದೊಂದಿಗೆ ರಂಗದಮೇಲೆ ಪ್ರಯೋಗಗೊಳ್ಳುವ ಈ ನಾಟಕದಲ್ಲಿ ಹಾಸುಹೊಕ್ಕಾಗಿರುವ ಪ್ರತಿ ಘಟನೆಗಳು-ತರ್ಕ ವಿತರ್ಕದ ಹರಿತಮಾತುಗಳು ಪ್ರಸ್ತುತ ರಾಜಕೀಯದ ಸಂದರ್ಭ ಮತ್ತು ಸಾರ್ವಕಾಲಿಕ ಮನೋಧರ್ಮವನ್ನು ನಾಟಕ ಧ್ವನಿಸುತ್ತದೆ. ನಾಟಕಕಾರ ಕೃಷ್ಣಶರ್ಮರ ಆಲೋಚನಾ ಧಾಟಿ, ಪಾತ್ರಸೃಷ್ಟಿ, ವಿಶ್ಲೇಷಣೆಯ ಬಗೆ ಹೊಸಕಾಣ್ಕೆ ನೀಡುತ್ತದೆ. ಕಡೆಯಲ್ಲಿ ವೈಶಂಪಾಯನ ಸರೋವರದಿಂದ ಎದ್ದು ಬಂದು ಭೀಮನೊಡನೆ ಗದಾಯುದ್ಧ ಮಾಡಿ ಸಾವನ್ನಪ್ಪುವ ಸುಯೋಧನ, ನೋಡುಗರ ಮನದಲ್ಲಿ ಮಾತ್ರ ಸಾಯುವುದಿಲ್ಲ. ಅವನ ವಿಶಿಷ್ಟ ಗಟ್ಟಿ ಪಾತ್ರಚಿತ್ರಣ ಮನದಲ್ಲುಳಿದು, ಮರಳಿ ಮಹಾಭಾರತದ ಕಥೆಯನ್ನು ವಿಮರ್ಶೆಗೆ ಒಳಪಡಿಸುವಂತೆ ಪ್ರೇರೇಪಿಸುತ್ತದೆ.

Related posts

ತಿಳಿಹಾಸ್ಯದ ಹೊನಲು ಹರಿಸಿದ – ಸತ್ಯಂ ವಧ

YK Sandhya Sharma

ಅತ್ಯದ್ಭುತವಾಗಿ ಮೂಡಿಬಂದ `ಸುಯೋಧನ’

YK Sandhya Sharma

ಹೊಸಬೆಳಕಿನಲ್ಲಿ ರಾವಣನ ಕಥೋಪಾಖ್ಯಾನ

YK Sandhya Sharma

Leave a Comment

This site uses Akismet to reduce spam. Learn how your comment data is processed.