ಅಪೂರ್ವ ಕಲಾವಂತಿಕೆಯಿಂದ ಕೂಡಿದ್ದ ದೇವಾಲಯದ ಹೆಬ್ಬಾಗಿಲು. ಒಳಗೆ ಉನ್ನತ ರಂಗಸ್ಥಳ. ಸುತ್ತ ಪಸರಿಸಿದ್ದ ಸಾಂಸ್ಕೃತಿಕ ವಾತಾವರಣ. ನರ್ತಿಸಲು ಉತ್ಸಾಹದಿಂದ ಸಜಾಗಿದ್ದ ಉದಯೋನ್ಮುಖ ಕಲಾವಿದೆ ಸೃಷ್ಟಿ ಜೋಶಿ. ಪಾರ್ಶ್ವದಲ್ಲಿ ಅವಳ ನೃತ್ಯದ ಗುಣಮಟ್ಟವನ್ನು ಉನ್ನತೀಕರಿಸಲು ವಾದ್ಯವೃಂದದೊಂದಿಗೆ ಆಸೀನರಾದ ಸಂಗೀತ ಕೋವಿದರು. ಎದುರಿಗೆ ನೃತ್ಯಾಸ್ವಾದಿಸಲು ಕುಳಿತ ಆಸಕ್ತ ಕಲಾರಸಿಕರು. ಖ್ಯಾತ ನೃತ್ಯಗುರು ಜ್ಯೋತಿ ಪಟ್ಟಾಭಿರಾಮ್ ಅವರ ನುರಿತ ಮಾರ್ಗದರ್ಶನದಲ್ಲಿ ತರಬೇತಿಗೊಂಡ ಸೃಷ್ಟಿ ಜೋಷಿ ಇತ್ತೀಚಿಗೆ ಕೆ.ಇ.ಎ.ಪ್ರಭಾತ್ ರಂಗಮಂದಿರದಲ್ಲಿ ತನ್ನ ಕಲಾಪ್ರಪೂರ್ಣ ನರ್ತನದ ಮೂಲಕ ರಂಗಾರೋಹಣವನ್ನು ಮಾಡಿದ ಸುಂದರ ದೃಶ್ಯವಿದು. ರಂಗದ ಮೇಲೆ ಆಕೆಯ ಪ್ರಥಮ ನೃತ್ಯಾರ್ಪಣೆ ಇದು ಎನಿಸದಷ್ಟು ಪಳಗಿದ ಸುಂದರ ಅಭಿನಯ. ಸುಮಾರು ಎರಡೂವರೆ ಗಂಟೆಗಳ ಕಾಲ ನಿರಾಯಾಸ ಮತ್ತು ಹಸನ್ಮುಖದ ಪ್ರಸ್ತುತಿ ಸೃಷ್ಟಿಯ ವೈಶಿಷ್ಟ್ಯವಾಗಿತ್ತು.
ಸಾಂಪ್ರದಾಯಕ ‘ಪುಷ್ಪಾಂಜಲಿ’ಯೊಂದಿಗೆ ಶುಭಾರಂಭಗೊಂಡ ನೃತ್ಯಪ್ರಸ್ತುತಿಯ ಪದಾರ್ಪಣೆಯಲ್ಲೇ ಕಲಾವಿದೆಯ ಅಂಗಶುದ್ಧಿಯ ಸುಂದರನೋಟ ಅನಾವರಣವಾಯಿತು. ಅದರೊಂದಿಗೆ, ಪುರಂದರದಾಸರ ರಚನೆ(ಹಂಸಧ್ವನಿ ರಾಗ) ‘ಗಜವದನ ಬೇಡುವೆ’ ಎಂಬ ಸುಮುಖನನ್ನು ಕುರಿತ ಪ್ರಾರ್ಥನೆಯನ್ನು ಅಚ್ಚುಕಟ್ಟಾಗಿ, ಸುಂದರ ಆಂಗಿಕಗಳೊಡನೆ ನಿರೂಪಿಸಿದಳು. ಮೋಹನರಾಗ-ಆದಿತಾಳದ ‘ಜತಿಸ್ವರ’ದ ಆರಂಭದ ವಿನ್ಯಾಸವೇ ಆಕರ್ಷಕವಾಗಿತ್ತು. ದೃಷ್ಟಿಭೇದ ಮತ್ತು ಶಿರೋಭೇದಗಳು ಮತ್ತು ನವಿರಾದ ಜತಿಗಳು, ಆರ್ಭಟವಿಲ್ಲದ ಸೌಮ್ಯನೃತ್ತಗಳು ಮುದಬೀರಿದವು. ಸಾಧನಶ್ರೀ ನೃತ್ಯಸಂಯೋಜನೆಯಲ್ಲಿ ನಾವೀನ್ಯತೆ ಮಿಂಚಿತ್ತು.
ಕೃಷ್ಣ ನಾಯಕನಾದ ಕನ್ನಡ ‘ಶಬ್ದಂ’ (ರಚನೆ ಜ್ಯೋತಿ ಪಟ್ಟಾಭಿರಾಮ್ ) ವರ್ಣರಂಜಿತವಾಗಿ ಮೂಡಿಬಂತು. ಆರ್ಭಟವಿಲ್ಲದ ನೃತ್ತಗಳು, ಸಂಚಾರಿಯ ಸುಂದರ ಕಥಾನಕಗಳು ಸಾತ್ವಿಕಾಭಿನಯದಿಂದ, ಸಮತೋಲನದಿಂದ ಶೋಭಿಸಿದವು. ಸಂಕ್ಷಿಪ್ತ ಸಂಚಾರಿಗಳು ಪರಿಣಾಮಕಾರಿಯಾಗಿದ್ದವು. ‘ಗೋವು ಹಿಂಡಿನ ಹಿಂದೆ…’ ಸಾಗುತ್ತ ಕೃಷ್ಣ, ತನ್ನ ವಿವಿಧಲೀಲೆಗಳಿಂದ ಗೋಪಿಕಾ ಸ್ತ್ರೀಯರನ್ನು ರಂಜಿಸುವ ನಾಟಕೀಯ ಸನ್ನಿವೇಶಗಳನ್ನು ಸೃಷ್ಟಿ ಮನೋಜ್ಞವಾಗಿ ಅಭಿನಯಿಸಿ ತೋರಿದಳು. ಕಲಾವಿದೆಯ ಭಾವನಿಮಗ್ನತೆ ಸೊಗಸನ್ನು ಸೃಷ್ಟಿಸಿತು.
ಪ್ರಸ್ತುತಿಯ ಹೃದಯಭಾಗವಾದ ‘ವರ್ಣ’ ಹೃದ್ಯವಾಗಿ (ರಚನೆ-ಜಿ.ಗುರುಮೂರ್ತಿ) ನಿರೂಪಿತವಾಗಿ, ನೃತ್ತಾಭಿನಯದಲ್ಲಿ ಕಲಾವಿದೆ ಸರಿಸಮಾನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು ವಿಶೇಷ. ಶ್ರೀಕೃಷ್ಣನಲ್ಲಿ ಅನುರಕ್ತಳಾದ ನಾಯಕಿ, ತನ್ನ ವಿರಹದ ಬೇಗುದಿಯನ್ನು, ಅನುಭವಿಸುತ್ತಿರುವ ಅಗಲಿಕೆಯ ನೋವನ್ನು ಸಖಿಯಲ್ಲಿ ತೀವ್ರವಾಗಿ ತೋಡಿಕೊಳ್ಳುತ್ತ, ವಿಪ್ರಲಂಭ ಶೃಂಗಾರಭಾವವನ್ನು ಮನೋಜ್ಞವಾಗಿ ಕಂಡರಿಸಿದಳು. ಕೃಷ್ಣನ ತುಂಟಾಟಗಳನ್ನು ಬಹು ರಮ್ಯಚಿತ್ರಣಗಳ ಮೂಲಕ ನಿರೂಪಿಸುತ್ತ ನೋಡುಗರ ಕಣ್ಮನ ತುಂಬಿದಳು. ‘ನೀಲಮೇಘ ಸುಂದರ ಶ್ಯಾಮನ ಕರೆತಾರೆ ಸಖಿ…’ಎಂದು ತನ್ನ ಇನಿಯನ ಸ್ಪುರದ್ರೂಪ ವರ್ಣನೆಯನ್ನು ಎಷ್ಟು ಮಾಡಿದರೂ ತಣಿಯದ ನಾಯಿಕೆಯ ಪ್ರೇಮಾಧಿಕ್ಯವನ್ನು ಸೃಷ್ಟಿ, ತನ್ನ ಸುಂದರ ಆಂಗಿಕಗಳು, ಅನುಪಮ ಭಂಗಿಗಳ ಮೂಲಕ ನಿವೇದಿಸಿದ್ದು ಮನಸೂರೆಗೊಂಡಿತು. ಅಭಿನಯಮಿಶ್ರಿತ ನೃತ್ತಗಳ ಸಿಂಚನ ಮನೋಹರತೆಯನ್ನು ಹರಡಿತು. ಸಂಗೀತ ಸಂಯೋಜಿಸಿ ಹಾಡಿದ ಬಾಲಸುಬ್ರಹ್ಮಣ್ಯ ಶರ್ಮರ ಮಾರ್ದವ ದನಿಯಲ್ಲಿ ಭಾವುಕತೆ ತುಂಬಿ ತುಳುಕುತ್ತಿತ್ತು.
ಖ್ಯಾತ ಸಂಗೀತ ಸಂಯೋಜಕ-ವಾಗ್ಗೇಯಕಾರ ಪದ್ಮಚರಣರ ‘ಪ್ರದೋಷ ಸಮಯದಿ…’ ಎಂಬ ಶಿವನ ‘ಆನಂದತಾಂಡವ’ (ಪೂರ್ವಿ ಕಲ್ಯಾಣಿ ರಾಗ) ಪ್ರಸ್ತುತಿ, ಕೈಲಾಸವನ್ನೇ ಧರೆಗಿಳಿಸಿದಂಥ ದೈವೀಕ ಅನುಭವವನ್ನು ನೀಡಿತು. ಪ್ರಸನ್ನಕುಮಾರರ ಮಿಂಚಿನಗತಿಯ ಜತಿಗಳ ಮಜಲಿಗೆ ತಕ್ಕಂತೆ, ಕಲಾವಿದೆ ತೋರಿದ ತಾಂಡವದ ರಭಸಗತಿಯ ಅಡವುಗಳು, ವೇಗಗತಿಯ ಜತಿಗಳು, ಭಾವಪೂರ್ಣ ಅಭಿನಯ ಮತ್ತು ಕಣ್ಣೆವೆ ಮಿಟುಕಿಸದೆ ವೀಕ್ಷಿಸುವಂಥ ವಿನೂತನ ಭಂಗಿಗಳು ಮೋಡಿಮಾಡಿದವು. ಪುರಂದರದಾಸರ ‘ ಏನು ಹೇಳಲೇ ಗೋಪಿ ನಿನ್ನ ಮಗನ ಜಾಲ’ -ಕೃಷ್ಣನ ಬಗೆಗಿನ ಗೋಪಿಕೆಯರ ದೂರನ್ನು ಸುಳ್ಳುಮಾಡುವಂತೆ, ಕೃಷ್ಣ, ಮುಗ್ಧನಂತೆ ನಟಿಸುತ್ತ ತೊಟ್ಟಿಲಲ್ಲಿ ಮಲಗಿದ ಸನ್ನಿವೇಶವನ್ನು ಸೃಷ್ಟಿ ತನ್ನ ಕಲಾನೈಪುಣ್ಯದ ಅಭಿನಯದ ಮೂಲಕ ಪ್ರತಿಸೃಷ್ಟಿಸಿ ತನ್ನ ಭಾವಪೂರ್ಣ ನರ್ತನದಿಂದ ರಂಜಿಸಿದಳು. ಕನ್ನಡಮಯವಾಗಿದ್ದ ಅಂದಿನ ಸುಂದರ ಕಾರ್ಯಕ್ರಮದಲ್ಲಿ ಎಲ್ಲ ಕೃತಿಗಳೂ ವಿಶಿಷ್ಟವಾಗಿದ್ದು, ನಳಿನಕಾಂತಿ ರಾಗದ ‘ತಿಲ್ಲಾನ’ ದ ಲವಲವಿಕೆಯ ಸಂಭ್ರಮ ಚಿಮ್ಮುವ ಸುಮನೋಹರ ನರ್ತನವನ್ನು ಪ್ರಸ್ತುತಪಡಿಸಿ, ನೋಡುಗರನ್ನು ಮಂತ್ರಮುಗ್ಧಗೊಳಿಸಿದಳು ಕಲಾವಿದೆ ಸೃಷ್ಟಿ .