Image default
Short Stories

ಪುನರಪಿ ಮರಣಂ…..

ಸುಂದರಮೂರ್ತಿಗಳು ಸಂಭ್ರಮದಿಂದ ಓಡಾಡುತ್ತಿದ್ದರು. ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಇಡೀ ಮನೆಯನ್ನು ಅವರಿಗೆ ಪರಿಚಯಿಸುತ್ತ ಅದೆಷ್ಟು ಬಾರಿ ಅವರು ವರಾಂಡ, ನಡುಮನೆ,ಅಡುಗೆಮನೆ,ಕೋಣೆಗಳ ಉದ್ದಗಲಕ್ಕೂ ಸುತ್ತಾಡಿದ್ದರೋ ಅವರಿಗೇ ಗೊತ್ತಿಲ್ಲ. ಅಪರಿಮಿತ ಉತ್ಸಾಹ ಅವರ ಮೈಯಲ್ಲಿ ಆವಾಹನೆಯಾಗಿತ್ತು. ಚಿಕ್ಕ ಚೊಕ್ಕದಾದ ಮನೆ ಅದಾಗಿದ್ದರೂ ಅವರಿಗದು ಅರಮನೆಯೇನೋ ಎಂಬ ಭಾಸ. ಬಂದವರು ಹೊಸ ಮನೆಯ ರೂಪು ರೇಷೆ ಗಮನಿಸುತ್ತ ಸುತ್ತ ನೋಡುತ್ತಿದ್ದರೆ,

 ” ನೆಲಕ್ಕೆ ವಿಟ್ರಿಫೈಡ್ ಟೈಲ್ಸನ್ನ್ಸೇ ಹಾಕಿಸಿಬಿಟ್ಟೆ…ಮಾರ್ಬಲ್ ತುಂಬ ಥಂಡಿಯಂತೆ, ಗ್ರಾನೈಟ್ ತುಂಬ ಕಾಸ್ಟ್ಲೀ, ಅದೂ ಲೇಯಿಂಗ್ ಛಾರ್ಜಸ್ಸೂ ಜಾಸ್ತಿ…ಸಾಲ ಮಾಡಿ ಸುಖಪಡೋ ಜಾಯಮಾನ    ನನ್ನದಲ್ಲ…ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಲ್ವಾ?” –ಎನ್ನುತ್ತ ಅವರು ತರಾತುರಿಯಿಂದ ರೂಮಿನೊಳಗೆ ನುಗ್ಗಿ, “ಈ ವಾರ್ಡ್‍ರೋಬುಗಳೂ ಅಷ್ಟೇ, ತೀರಾ ದುಬಾರಿ ತಂಟೆಗೆ ನಾ ಹೋಗಲಿಲ್ಲ…ಮುಂಬಾಗಿಲು ಮಾತ್ರ ತೇಗದ್ದು, ಉಳಿದವೆಲ್ಲ ಪ್ರೆಸ್ ಡೋರ್ಸು…ಕಿಟಕಿಗಳೂ ಸ್ಲೈಡಿಂಗ್ ವಿತ್ ಸೊಳ್ಳೆ ಪರದೆ…ಬಾತ್ ರೂಮ್ಸ್‍ಗೂ ದುಂದು ಮಾಡಿಲ್ಲ…ಮಾಡ್ಯೂಲರ್  ಕಿಚನ್ನೇ ಬೇಕೂಂತ ಇವಳ ವರಾತ…ಮುಂದಿನ ತಿಂಗಳು ರಿಟೈರ್ ಆಗೋನು ನಾನೆಲ್ಲಿಂದ ತರಲಿ, ಅಷ್ಟೊಂದು ದುಡ್ಡನ್ನಾ?…ನೋ ನೋ…ನನಗೆ ತೋಚಿದ ಹಾಗೆ ಡಿಸೈನ್ ಮಾಡಿ ಅಡುಗೆ ಮನೆ ತಯಾರು ಮಾಡಿಸಿದೆ…ಚೆನ್ನಾಗಿಲ್ವೇ?’- ಅರಳು ಹುರಿದಂತೆ, ಹದಿಹರೆಯದವರನ್ನು ನಾಚಿಸುವ ಉತ್ಸಾಹದಿಂದ ಮನೆ ಒಳಗೆ ಹೊರಗೆ ಓಡಾಡುತ್ತ ಬಣ್ಣಿಸುತ್ತಿದ್ದ ಸುಂದರಮೂರ್ತಿ ಚೈತನ್ಯದ ಚಿಲುಮೆಯಾಗಿದ್ದರು.

            ಗೃಹಪ್ರವೇಶಕ್ಕೆ ಬಂದವರೆಲ್ಲ ಶುಭಾಶಯ ಕೋರಿ ಅವರ ಕೈಕುಲುಕಿ-` ಮನೆ ಅಚ್ಚುಕಟ್ಟಾಗಿದೆ ಮೂರ್ತಿಗಳೇ….ದೂರದ ದೆಹಲಿಯಲ್ಲಿದ್ದುಕೊಂಡು ತಿಂಗಳು ಪೂರ್ತಿ ಕಷ್ಟಪಟ್ಟು ದುಡಿದ ನ್ಯಾಯವಾದ ಸಂಪಾದನೆಯಲ್ಲಿ ಪ್ರೀತಿಯಿಂದ ಮನೆ ಕಟ್ಟಿಸಿದ್ದೀರಲ್ಲಾ, ಅದು ಮೆಚ್ಚಿಕೊಳ್ಳತಕ್ಕದ್ದು….ಈ ಮನೆಯಲ್ಲಿ ನೀವು ಸುಖವಾಗಿ ನಿವೃತ್ತಿ ಜೀವನ ಕಳೀಬೇಕೂ      ಅನ್ನೋದೇ ನಮ್ಮ ಹಾರೈಕೆ ಎಂದು ಮನಃಪೂರ್ವಕ ನುಡಿದಾಗ ಅವರ ಮೊಗ ಹಿಗ್ಗಿನಿಂದ ತುಂಬಿತ್ತು.

            ಅವರ ಸಹಧರ್ಮಿಣಿ ಕಮಲಮ್ಮನೂ ಈ ಸಂತಸದಲ್ಲಿ ಭಾಗಿಯಾಗಿ ಆ ಕಿವಿಯಿಂದ ಈ ಕಿವಿಯವರೆಗೆ ನಕ್ಕರು.

            ಮೂರ್ತಿಗಳಿಗೆ ರಜ ಧಂಡಿಯಾಗಿದ್ದರೂ ಆಫೀಸಿನಲ್ಲಿ ಹೊರೆಯಷ್ಟು ಕೆಲಸ ಬಾಕಿ ಉಳಿದಿತ್ತು. ದೆಹಲಿಯ ಕಛೇರಿಯಿಂದ ವಿದಾಯ ಹೇಳಿ ಹೊರ ನಡೆಯುವಾಗ ಯಾರಿಂದಲೂ ಒಂದು ಮಾತು ಕೇಳಲು ಅವರು ತಯಾರಿರಲಿಲ್ಲ. ನಾಲ್ಕು ಅಂದರೆ ನಾಲ್ಕೇ ದಿನಗಳ ರಜೆ ಮುಗಿಸಿ ಅವರೊಬ್ಬರೇ ದೆಹಲಿಗೆ ಹೊರಟರು. ಅಲ್ಲಿಯ ಮನೆಯ ಸರ್ವ ಸಾಮಾನು-ಸರಂಜಾಮುಗಳೂ ಪ್ಯಾಕ್ ಆಗಿ ಟ್ರಕ್ಕಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರಿಂದ ಅವುಗಳನ್ನು ಹೊಸ ಮನೆಯಲ್ಲಿ ಜೋಡಿಸಿಡುವ ದೊಡ್ಡ ಜವಾಬ್ದಾರಿ ಕಮಲಮ್ಮನವರ ಹೆಗಲೇರಿದ್ದರಿಂದ ಆಕೆ ಇಲ್ಲೇ ಉಳಿದುಕೊಂಡರು.

            `ಅಯ್ಯೋ, ಇದೇನೇ ಮಾರಾಯ್ತಿ, ಇಷ್ಟೊಂದು ತಿಂಡಿ ಪ್ಯಾಕ್ ಮಾಡ್ತಿದ್ದೀಯಾ….. ಮತ್ತೆ ಹದಿನೈದು ದಿನಗಳಲ್ಲಿ ನನ್ನ ಠಿಕಾಣಿ ಇಲ್ಲೇ ಅಲ್ವೇ?…ಈ ಪಾಟಿ ನನ್ನ ಕೈಲಿ ತಿಂದು ಅರಗಿಸಿಕೊಳ್ಳಕ್ಕಾಗಲ್ವೇ…ಅದೂ ಅಲ್ದೆ, ನನಗೆಲ್ಲಿದೆ ಟೈಮು…ಬೆಳಗ್ಗೆ ಆಫೀಸಿಗೆ ಹೋದ್ರೆ ರಾತ್ರಿಯಾಗತ್ತೆ ಮನೆ ಸೇರಕ್ಕೆ….ನೋ ನೋ…ಇದರಲ್ಲಿ ಅರ್ಧ ತೆಗೆದುಬಿಡು

            ಗಂಡನ ಧಾವಂತ ಕಂಡಾಕೆ ನಗುತ್ತಾ-` ಇವೆಲ್ಲ ನಿಮಗಲ್ರೀ, ಅಂಥಾ ಚೆನ್ನಾಗಿ ಗೃಹಪ್ರವೇಶ ಮಾಡಿದ್ದೀವಿ, ಊರಿಗ್ಹೋಗ್ತಾ..ಬರೀ ಕೈಯಲ್ಲಿ ಹೋಗ್ತೀರಾ…ಇವೆಲ್ಲ ನಿಮ್ಮ  ಕೊಲೀಗ್ಸ್‍ಗೆ, ಇದು ನಮ್ಮ ಪಕ್ಕದ ಮನೆ ಶಾಲಿನೀಗೆ, ಇದು ನಮ್ಮ ಲೇಡಿಸ್ ಕ್ಲಬ್ ಪ್ರೆಸಿಡೆಂಟ್ ಮಾಯಾಸಿಂಗ್ ಅವರ ಕೈಗೆ ಕೊಟ್ಟು ಎಲ್ಲರಿಗೂ ಕೊಡಲು ಹೇಳಿ…ಜೋಪಾನ ಮರ್ತುಗಿರ್ತುಬಿಟ್ಟೀರಾ…ತಿನ್ನೋ ಪದಾರ್ಥ ಹೀಗೇ ಡಬ್ಬಿಯಲ್ಲಿ ಉಳಿದುಬಿಟ್ರೆ, ಆಮೇಲೇನಿಲ್ಲ ಮುಗ್ಗೆದ್ದು ಹೋಗತ್ತೆ ಅಷ್ಟೇ…‘-ಎಂದು ಮೂರು ದೊಡ್ಡ ದೊಡ್ಡ ಡಬ್ಬಿಗಳನ್ನು ಗಂಡನ ಮುಂದೆ ತಂದಿರಿಸಿದರು.

            ` ಅಮ್ಮಾ, ನಮ್ಮ ಫ್ರೆಂಡ್ಸೂಗೂ ಸ್ವಲ್ಪ ಕಳಿಸಮ್ಮ‘- ಎಂದ ಹಿರಿ ಮಗ ಶರತ್‍ನ ಮಾತಿಗೆ ಮಗಳು ಶಾಂಭವಿಯೂ ದನಿಗೂಡಿಸಿದಳು.

            ` ನಾವ್ಯಾರೂ ಇರಲ್ಲ ಮನೇಲಿ, ರಾತ್ರಿ ಹೊತ್ತು ಹೇಗೂ  ಫ್ರೀಯಾಗಿರ್ತೀರ, ಮಗಳ ಮದುವೆಗೆ ಸರಿಯಾಗಿ ತಿಂಗಳಿದೆ ನೆನಪಿರಲಿ, ಮದುವೆಗೆ ಕರೆಯಬೇಕಾದವರ ಲಿಸ್ಟ್ ಎಲ್ಲ  ರೆಡಿ ಮಾಡಿಟ್ಟಿರಿ, ನೀವು ಊರಿಗೆ ಬಂದ ತತ್‍ಕ್ಷಣ ಕರೆಯೋಕ್ಕೆ ಹೊರಡೋದೇ…‘. ಹೆಂಡತಿಯ ಮಾತು ಇನ್ನು ಮುಗಿಯೋ ಲಕ್ಷಣ ಕಾಣದೆ ಸುಂದರಮೂರ್ತಿ ಕೈ ಬೀಸಿ ಆಟೋ ಏರಿದರು.

            ಮೊದಲೇ ರೈಲು ಟಿಕೇಟು ರಿಸರ್ವ್ ಆಗಿದ್ದರಿಂದ ಅವರ ಪ್ರಯಾಣ ಸುಖಕರವಾಗಿತ್ತು. ಆದರೆ ಹಿಂತಿರುಗಿ ಬರುವ ಅವರ ಟಿಕೇಟ್ ಇನ್ನೂ ಕನ್‍ಫರ್ಮ್ ಆಗಿರಲಿಲ್ಲ.

            ದೆಹಲಿಯಲ್ಲಿಳಿಯುತ್ತಿದ್ದಂತೆ ಅವರು ಮಾಡಿದ ಮೊದಲ ಕೆಲಸವೆಂದರೆ,ಹೆಂಡತಿ ತರಾಟೆಗೆ ತೆಗೆದುಕೊಂಡಾಳೆಂಬ ಭಯದಿಂದ ಅವಳಿತ್ತ ತಿಂಡಿಗಳನ್ನು ಅವರವರಿಗೆ ಬಟವಾಡೆ ಮಾಡಿದ್ದು. ಮುಂದಿನ ಹದಿನೈದು ದಿನಗಳು ಹೇಗೆ ಕಳೆಯಿತೋ ಅವರಿಗೇ ಗೊತ್ತಿಲ್ಲ, ಸಂಪೂರ್ಣ ಆಫೀಸಿನ ಕೆಲಸ-ಕಾರ್ಯಗಳಲ್ಲಿ ಅವರು ಮುಳುಗಿಹೋಗಿದ್ದರು. ಎಲ್ಲವನ್ನೂ ಶಿಸ್ತಿನಿಂದ, ದಕ್ಷತೆಯಿಂದ ಅಷ್ಟೇ ಜವಾಬ್ದಾರಿಯಿಂದ ನಿರ್ವಹಿಸುವ ಸ್ವಭಾವದ ಅವರು ಕಡೇ ಗಳಿಗೆಯವರೆಗೂ ಎಲ್ಲ ಫೈಲು,ಕೆಲಸಗಳನ್ನೂ ಅಟೆಂಡ್ ಮಾಡಿ, ಕೈ ಕೆಳಗಿನವರಿಗೆ ಸೂಕ್ತ ಸಲಹೆ-ಸೂಚನೆಗಳನ್ನಿತ್ತು ಅಂದು ನಿವೃತ್ತಿಯ ಕಡೆಯ ದಿನ ಭಾರವಾದ ಹೃದಯದಿಂದ ಕಛೇರಿಯ ಸಹೋದ್ಯೋಗಿಗಳು, ಇತರ ಸಿಬ್ಬಂದಿಗಳಿಂದ ಬೀಳ್ಕೊಂಡಿದ್ದರು.

            ಇನ್ನೂ ಬೆಂಗಳೂರಿನ ಟಿಕೇಟ್ ನಿಗದಿಯಾಗಿರಲಿಲ್ಲ. ಅವರು ಒಬ್ಬಂಟಿ, ಇಡೀ ಮನೆಗೆಲ್ಲ,ಕೆಲಸವಿಲ್ಲದೆ ಕೂತದ್ದು ಇದೇ ಮೊದಲ ಬಾರಿ. ರೈಲ್ವೇನಿಲ್ದಾಣಕ್ಕೆ ಎರಡೆರಡು ಬಾರಿ ಹೋಗಿಬಂದಿದ್ದರು. ಇನ್ನೂ ವೇಯಿಟಿಂಗ್ ಲಿಸ್ಟ್ ನಲ್ಲಿತ್ತು. ಆದರೂ  ತತ್‍ಕ್ಷಣ ಫಸ್ಟ್‍ಕ್ಲಾಸಿನಲ್ಲಿ ಹೇಗೋ ಒಂದು ಸೀಟು ಸಿಕ್ಕಾಗ `ಓಹ್, ನನ್ನ ಅದೃಷ್ಟಎಂದು ನಿಟ್ಟುಸಿರುಗರೆದು, ಮೊದಲ ಬಾರಿಗೆ ತವರಿಗೆ ಹೊರಟ ನವವಿವಾಹಿತಳಂತೆ ಸಂಭ್ರಮದಿಂದ ಸಿದ್ಧವಾದರು. ಅದೆಷ್ಟು ಬಾರಿ ಅವರು ಬೆಂಗಳೂರಿಗೆ ಪಯಣಿಸಿರಲಿಲ್ಲ…ಆದರೆ ಈ ಸಲದ ಮನಸ್ಥಿತಿಯೇ ಬೇರೆ…ರಜೆಯ ಚಿಂತೆಯಿಲ್ಲದೆ ಸ್ವಚ್ಛಂದ ಬಾನಾಡಿಯಾದ ತನು-ಮನ. ಯಾವ ಪೆಂಡಿಂಗ್ ವರ್ಕ್‍ಗಳ ತಲೆನೋವೂ ಇಲ್ಲ…ಕಾಡಿಸುವ ಮೇಲಧಿಕಾರಿಗಳ ಫೋನ್‍ಗಳ ಕಿರಿಕಿರಿಯೂ ಇಲ್ಲ. ಬಿಡುಗಡೆಯ ನಿಶ್ಚಿಂತ, ಹಗುರ ಮನ.

            ಅದೇ ತಾನೆ ಶರತ್, ಪ್ರೆಸ್ಸಿನಿಂದ ತಂದಿದ್ದ ಪ್ರಿಂಟಾದ  ಮದುವೆಯ ಕರೆಯೋಲೆಗಳನ್ನು ಕೈಯಲ್ಲಿ ಹಿಡಿದು, ಹಿಂದೆ ಮುಂದೆ ತಿರುಗಿಸಿ ನೋಡಿದ ಕಮಲಮ್ಮನ ಮನಸ್ಸು ಸಂತಸದ ಕಡಲಾಗಿತ್ತು. ಒಡನೆಯೇ ಮೇಲೆದ್ದು ಹೋಗಿ ಅರಿಷಿಣ-ಕುಂಕುಮದ ಭರಣಿಯನ್ನು ತಂದು ಕರೆಯೋಲೆಯ ಅಂಚಿಗೆ ಹಳದಿ ಸವರಿ, ದೇವರ ಮುಂದಿಟ್ಟು ಅರಿಷಿಣ-ಕುಂಕುಮವೇರಿಸಿ, ಮಂತ್ರಾಕ್ಷತೆಯಿಟ್ಟು, ತುಪ್ಪದ ದೀಪವನ್ನು ಬೆಳಗಿಸಿದರು. ಅವರ ಕಣ್ಮನಗಳು ತುಂಬಿ ಬಂದಿದ್ದವು. ಭಕ್ತಿ ಪರವಶತೆಯಿಂದ ದೇವರಿಗೆ ನಮಸ್ಕರಿಸಿ ಮೇಲೇಳುತ್ತಿರುವಷ್ಟರಲ್ಲಿಯೇ-ಶರತ್ ಜೋರಾಗಿ ಕೂಗಿಕೊಂಡ.

            `ಅಮ್ಮಾ, ಬೇಗ ಬಾಮ್ಮ ಇಲ್ಲಿ….ನೋಡಿಲ್ಲಿ ಟಿವಿ ನ್ಯೂಸು….ಡೆಲ್ಲಿಯಿಂದ ಬೆಂಗಳೂರಿಗೆ ಬರ್ತಿದ್ದ ಕರ್ನಾಟಕ ಎಕ್ಸ್‍ಪ್ರೆಸ್ ರೈಲು ಅಪಘಾತವಾಗಿದೆಯಂತೆ..!

            ಆಕೆ ಮುಗ್ಗರಿಸೆದ್ದು ಓಡಿಬಂದರು, ಕೈಲಿದ್ದ  ವಿವಾಹದ ಕರೆಯೋಲೆಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದರೂ ಪರಿವೆಯಿಲ್ಲದೆ.

            `ಶಾಂಭವಿ…ಎಲ್ಲಿದ್ದೀಯೇ?’-ಶರತ್ ಕಂಗಾಲಾಗಿ ಅರಚಿದ. ಹೊರಗಡೆ ಮಲ್ಲಿಗೆ ಹೂ ಬಿಡಿಸುತ್ತಿದ್ದ ಶಾಂಭವಿ ಅಣ್ಣನ ಗಾಬರಿಯ ದನಿ ಕೇಳಿ ದಡಬಡಿಸಿ ಹೊಸಿಲು ದಾಟಿ ಬಂದವಳು ಎದುರಿಗೆ ಟಿ.ವಿ ಪರದೆಯ ಮೇಲೆ ತೆರೆದುಕೊಂಡಿದ್ದ ಭಯಾನಕ ದೃಶ್ಯ ಕಂಡು ಅವಾಕ್ಕಾಗಿದ್ದಳು. ಎದೆಯೊಡೆದು ಒಂದೇ ಸಮನೆ ಬಿಕ್ಕಳಿಸಿ ಅಳುತ್ತಿದ್ದ ತಾಯಿಯನ್ನು ಕಂಡು ಶರತ್,  ` ಅಮ್ಮಾ, ಪ್ಲೀಸ್ ಅಮ್ಮಾ…ಸ್ವಲ್ಪ ಕಂಟ್ರೋಲ್ ಮಾಡ್ಕೋ….ವಿಚಾರಿಸೋಣ ತಡಿ, ಏನೇನೋ ಕಲ್ಪಿಸಿಕೊಂಡು ಗೋಳಾಡಬೇಡಎಂದು ತಾಯಿಗೆ ಸಮಾಧಾನ ಹೇಳಿದವನು, ತೆರೆಯ ಮೇಲೆ ಬರುತ್ತಿದ್ದ ಫೋನ್ ನಂಬರ್‍ಗಳಿಗೆ ಕರೆ ಮಾಡತೊಡಗಿದ. ಎಲ್ಲ ನಂಬರ್‍ಗಳಲ್ಲೂ ಎಂಗೇಜ್ ಸೌಂಡ್….ಮತ್ತೆ ಮತ್ತೆ ಟ್ರೈ ಮಾಡಿ `ಛೇಎಂದು ಪರಿತಪಿಸುತ್ತ,` ಶಾಂಭವಿ, ನೀನೂ ಟ್ರೈ  ಮಾಡೇಎಂದವನ ದನಿಯಲ್ಲಿ ಬಿರುಕು ಕಾಣಿಸಿಕೊಂಡಿತು. ಕಮಲಮ್ಮನ ಮೊಗದಲ್ಲಿ ಗಾಬರಿ ತುಂಬಿಕೊಂಡು, ಎದೆ ಬಡಿತ ವೇಗವಾಗಿಕೆನ್ನೆಯ ಮೇಲೆ ಸದ್ದಿಲ್ಲದೆ ನೀರಿಳಿಯುತ್ತಿತ್ತು,ಬಿಕ್ಕನ್ನು ತಡೆದು. ಆದರೂ ದೂರದ ಆಸೆ…ಅವರು ಕ್ಷೇಮವಾಗಿರಲೆಂದು.

            ಮಕ್ಕಳಿಬ್ಬರಿಗೂ ಹುಚ್ಚು ಹಿಡಿದಂತಾಗಿತ್ತು. ಕೈ, ಮನಸ್ಸು ಸೋತರೂ, ಬಿಡದೆ ಪ್ರಯತ್ನಿಸುತ್ತಲೇ ಇದ್ದರು. ಲೈನ್ ಸಿಗಲೇ ಇಲ್ಲ. ಎದುರಿಗಿನ ಭೀಕರ ದೃಶ್ಯ ನೋಡುತ್ತ ಮೂವರೂ ಕಂಗಾಲಾಗಿ ಹೋಗಿದ್ದರು. ಅಫಘಾತದಲ್ಲಿ ಮೊದಲ ಮೂರು ಬೋಗಿಗಳ ಜನರಿಗೆ ತೀವ್ರ ಗಾಯ, ಸಾವು-ನೋವು ಸಂಭವಿಸಿತ್ತು. ಜನರ ಚೀರಾಟ ಮುಗಿಲು ಮುಟ್ಟಿತ್ತು. ಸಾಲುಗಟ್ಟಿದ ಆಂಬ್ಯುಲೆನ್ಸ್‍ಗಳು, ಗಾಯಾಳುಗಳನ್ನು ರಕ್ಷಿಸಲು ಬಂದಿದ್ದ ರಕ್ಷಣಾ ಪಡೆಯ ಫೈರ್ ಬ್ರಿಗೇಡ್ ಸಿಬ್ಬಂದಿಗಳ ಓಡಾಟ, ಹೆದರಿದ ಜನಗಳ ಪರದಾಟ ಕಂಡು ಅವರಿಗೆ ಉಸಿರುಗಟ್ಟಿದಂತಾಗಿ ರಿವ್ವನೆ ಬಡಿದುಕೊಳ್ಳುತ್ತಿದ್ದ ಎದೆಯನ್ನು ಅದುಮಿಕೊಂಡು-`ರಾಯರೇ ನಿನ್ನನ್ನೇ ನಂಬಿದ್ದೀನಪ್ಪಾ, ನನ್ನ ಕೈ ಬಿಡಬೇಡ ಸ್ವಾಮಿಎಂದು ಕಮಲಮ್ಮ ದಡಬಡಿಸೆದ್ದು ದೇವರ ಮನೆಗೆ ನುಗ್ಗಿ ಮುಡಿಪು ಕಟ್ಟಿಟ್ಟು ಬಂದರು. ಅವರು ಹಚ್ಚಿಟ್ಟ ತುಪ್ಪದ ದೀಪ ಢಾಳಾಗಿ ಉರಿಯುತ್ತಿತ್ತು. ಅವರೆದೆಯಲ್ಲೂ ಉರಿ!!…

            ಶರತ್,ಫೋನಿನಲ್ಲಿ ರೈಲ್ವೇ ಅಥಾರಿಟಿಯವರನ್ನು ಸಂಪರ್ಕಿಸಲಾಗದೇ, ಹೊರಧಾವಿಸಿ, ಬೈಕ್ ಹತ್ತಿ ಜೋರಾಗಿ ಆಕ್ಸಿಲೇಟರ್ ಒತ್ತಿದ. ಅವನ ಹಿಂದೆಯೇ ಓಡಿಬಂದ ತಾಯಿ `ಜೋಪಾನ ಕಣೋ ಮರಿಎಂದು ಕೂಗಿಕೊಂಡರು. ಅವನು ಹಿಂತಿರುಗಿ ಬರುವವರೆಗೂ ಅವರ ಜೀವದಲ್ಲಿ ಜೀವವಿರಲಿಲ್ಲ. ಒಂದೇ ಸಮನೆ ಅರಚುತ್ತಿದ್ದ ಟಿವಿಯತ್ತ ದಿಟ್ಟಿಸಲಾರದೆ ಆಕೆ ದೇವರಮನೆಯ ಮಂದಾಸನದೊಳಗಿನ ಮೂರ್ತಿಗೆ ಕೈ ಮುಗಿಯುತ್ತ ವಿಗ್ರಹದಂತೆ ಕಲ್ಲಾಗಿ ಕುಳಿತುಬಿಟ್ಟರು.

            ಸಂಜೆ ಹೊತ್ತಿಗೆ ಶರತ್ ಸೋತು ಸುಣ್ಣವಾಗಿ ಬಂದಿದ್ದ.ಅವನ ದನಿ ಅಡಗಿಹೋಗಿತ್ತು. ಕೈಕಾಲುಗಳಲ್ಲಿ ನಡುಕ….ಅವನ ಅವತಾರ ಕಂಡೇ ಕಮಲಮ್ಮನವರಿಗೆ ವಿಷಯ ವೇದ್ಯವಾದಂತಾಯ್ತು. ` ಅಪ್ಪಾ ಫಸ್ಟ್ ಕ್ಲಾಸ್ ನಲ್ಲಿ ತಾನೇ ಹೊರಟಿದ್ದು…ಆ ಬೋಗಿಗಳಲ್ಲಿದ್ದವರೆಲ್ಲಾ…..ಗಕ್ಕನೆ ಅವನ ಗಂಟಲು ಸೀಳಿಕೊಂಡು ಜೋರು ಬಿಕ್ಕು ಹೊರಗುಮ್ಮಳಿಸಿತು. ಮೂವರ ಆಕ್ರಂದನವೂ ಮುಗಿಲು ಮುಟ್ಟುತ್ತಿದ್ದಂತೆ ಕಮಲಮ್ಮ ಪ್ರಜ್ಞೆ ತಪ್ಪಿ ನೆಲಕ್ಕುರುಳಿದರು. ಅಷ್ಟರಲ್ಲಿ ಫೋನ್, ಅಪಶಕುನವೆಂಬಂತೆ ಜೋರಾಗಿ ಟ್ರಿಣ್ ಗುಟ್ಟತೊಡಗಿತು. ರಿಸೀವರ್ ಎತ್ತಿದ ಶರತ್‍ನ ಕೈ ನಡುಗುತ್ತಿತ್ತು. ಅತ್ತಲಿನ ದನಿ ಏನೇನೋ ಕೇಳುತ್ತಿತ್ತು,ಹೇಳುತ್ತಿತ್ತು…ಕಡೆಯಲ್ಲಿ ಅವನ ಕೈಯ ರಿಸೀವರ್ ಕೆಳಜಾರಿತು….`ಅಯ್ಯೋಎಂಬ ಸ್ವರ ಅವನ ಗಂಟಲಿನಿಂದ ಹೊರಬಿತ್ತು.

            `ಶಾಂಭವಿ, ಅಮ್ಮನ್ನ ನೋಡ್ಕೋ,ಬರ್ತೀನಿ… ಆಕ್ಸಿಡೆಂಟ್ ಆದ ಜಾಗಕ್ಕೆ ಹೋಗಿಬರ್ತೀನಿ…ಒಂದೆರಡು ದಿನಗಳಾಗಬಹ್ದು….ಐಡೆಂಟಿಫೈ ಮಾಡ್ಬೇಕಂತೆ ಎಂದವನೆ ಶರತ್, ಅವಸರವಸರವಾಗಿ ಮನೆಯಿಂದ ಹೊರಬಿದ್ದ.

            ಮೂರು ಹಗಲು,ಮೂರು ರಾತ್ರಿ ತಾಯಿಯನ್ನು ಸುಧಾರಿಸುವುದು ಅವಳಿಗಂತೂ ತುಂಬಾ ಪ್ರಯಾಸವಾಯಿತು. ಶರತ್ ಕೆಟ್ಟ ಸುದ್ದಿಯನ್ನೇ ಹೊತ್ತು ತಂದಿದ್ದ. ` ಹೆಣಗಳ ರಾಶಿ…ಕೈಯಿ-ಕಾಲುಗಳೆಲ್ಲ ತುಂಡು ತುಂಡು…ಮುಖದ ಗುರುತೇ ಗೊತ್ತಾಗವಲ್ದು…ಆಸ್ಪತ್ರೆಗಳಲ್ಲೂ ಹುಡುಕಿದ್ದಾಯ್ತು….ಏನೂ ಪ್ರಯೋಜನವಾಗಲಿಲ್ಲ…ರೆಕಾಡ್ರ್ಸ್ ಪ್ರಕಾರ ಬದುಕುಳಿದಿಲ್ಲ ಅಂತ ಅಥಾರಿಟಿಯವರು ಹೇಳ್ತಾರೆ…ಬಾಡಿ ಸಿಕ್ಕಿಲ್ಲ…ಏನ್ಮಾಡೋದೇ?…’ ಅವನು ಕಂಗಾಲಾಗಿದ್ದ. ಏನೂ ಮಾಡೋ ಹಾಗಿರಲಿಲ್ಲ…ಇನ್ನೂ ಎರಡು ಸಲ ವಿಚಾರಿಸಿಕೊಂಡು ಬಂದ. ಅದೇ ಫಲಿತಾಂಶ….ರಾಜ್ಯ, ಕೇಂದ್ರ ಸರ್ಕಾರಗಳೆರಡೂ ಪರಿಹಾರ ಘೋಷಿಸಿಬಿಟ್ಟಿದ್ದವು.

            ಮನೆಯಲ್ಲಿ ನೆಂಟರೆಲ್ಲಾ ಸೇರಿದ್ದರು. ಎಲ್ಲರೂ ದುಃಖ ತಪ್ತರಾಗಿದ್ದರು. ಹದಿನೈದು ದಿನಗಳ ಕೆಳಗೆ ಸಂತಸ-ಸಂಭ್ರಮಗಳಿಂದ ಗಿಜುಗುಡುತ್ತಿದ್ದ ಮನೆ ಈಗ ಸೂತಕದ ಛಾಯೆ ಹೊದ್ದು ವಿರಹ ತಪ್ತವಾಗಿತ್ತು. ಯಜಮಾನನಿಲ್ಲದೆ ಮನೆ ಶೂನ್ಯವಾಗಿತ್ತು. ಹಸಿರು ಚಿಗುರಿನ ಮುಂಬಾಗಿಲ ತೋರಣ ಒಣಗಿಹೋಗಿದ್ದರೂ ಇನ್ನೂ ಅದರ ಅವಶೇಷ ಅಲ್ಲೇ ನೇತಾಡುತ್ತಿತ್ತು. ಗೋಡೆಗಳ ಮೇಲಿನ ಹಸ್ತದ ಅರಿಷಿಣದ ಚಟ್ಟುಗಳ ಗುರುತು ಮಾಸಿರಲಿಲ್ಲ. ಆದರೂ ಸುಂದರಮೂರ್ತಿಗಳು ನಿಧನರಾಗಿದ್ದಾರೆಂಬುದನ್ನು ಸಾಕ್ಷೀಕರಿಸಲು ನಡು   ಮನೆಯ ಗೋಡೆಯನ್ನಲಂಕರಿಸಿದ್ದ ದೊಡ್ಡ ಪಟ.

            `ಅಷ್ಟು ಆಸೆಯಿಂದ ಕಟ್ಟಿದ ಮನೆಯಲ್ಲಿ ಒಂದು ದಿನವೂ ನೆಟ್ಟಗೆ ಬಾಳಲಿಲ್ಲವೇ?’ ಎಂಬ ಕೊರಗು ಕಮಲಮ್ಮನವರನ್ನು ಬಾಧಿಸುತ್ತಿತ್ತು. `ಸ್ವಂತ ಮನೆಯಲ್ಲಿ ಅವರೊಂದಿಗೆ ಬಾಳುವ ನನ್ನ ಕನಸು ಕನಸಾಗಿಯೇ ಉಳಿದುಹೋಯಿತೇ ?!’ ಎಂದು ಆಕೆ ಕಣ್ಣೀರುಗರೆದರು.

            ಪುರೋಹಿತರ ಸೂಚನೆಯಂತೆ ಏಳನೇ ದಿನದಿಂದ ಕಾರ್ಯಗಳು ಆರಂಭವಾದವು. ಶರತ್ ತಂದೆಯ ಶ್ರಾದ್ಧವನ್ನು ದುಃಖಿಸುತ್ತಲೇ ಮಾಡಿದ. ಹದಿಮೂರನೇ ದಿನ ವೈಕುಂಠ ಸಮಾರಾಧನೆ. ಬಂದವರೆಲ್ಲ ಊಟಕ್ಕೆ ಕುಳಿತಿದ್ದಾರೆ.

            ಒಮ್ಮೆಲೆ ಫೋನ್ ಜೋರಾಗಿ ಹೊಡೆದುಕೊಳ್ಳತೊಡಗಿತು. ಶಾಂಭವಿ ಓಡಿಹೋಗಿ ಫೋನೆತ್ತಿಕೊಂಡು `ಹಲೋಎಂದಳು. ` ಹ್ಞಾ…!..ಎಂದವಳೇ ಮೂಕವಿಸ್ಮಿತಳಾಗಿ ಅಣ್ಣನ ಕೈಗೆ  ಫೋನ್ ಕೊಟ್ಟಳು. `ನಿಜವಾಗಿ…!!ಎಂದವನ ಕಣ್ಣು ಮಿನುಗಿತ್ತು. `ಏನಂತೆ?’ ಹಿರಿಯರ್ಯಾರೋ ವಿಚಾರಿಸಿದರು. ಅವನು ಹೇಳಿದ ಸಂಗತಿ ಕೇಳಿ ಎಲ್ಲರೂ ನಿಬ್ಬೆರಗಾದರು.

            `ಸುಂದರಮೂರ್ತಿ ಸತ್ತಿಲ್ವಂತೆ….ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿರೋ ವ್ಯಕ್ತಿಯನ್ನು ಗುರುತು ಹಿಡಿಯಲು ಕರೆಬಂದಿದೆ ಎಲ್ಲರಲ್ಲೂ ಸಂಚಲನ ಮೂಡಿಸಿದ ಸುದ್ದಿ ಅದಾಗಿತ್ತು. ಕಮಲಮ್ಮನ ಕಣ್ಣಲ್ಲಿ ಬಳಬಳನೆ ನೀರು ಸುರಿಯಿತು. ` ಸದ್ಯ ದೇವರು ದೊಡ್ಡವನು…ನಾನು ನಂಬಿದ ರಾಯರು ನನ್ನ ಕೈ ಬಿಡಲಿಲ್ಲಎಂದು ಕಣ್ಣೀರೊರೆಸಿಕೊಂಡರು. ಅಳುವಿನ  ಮನೆ ಕ್ಷಣಾರ್ಧದಲ್ಲಿ ಗೆಲುವಿಂದ ತುಂಬಿತು. ಬಂದವರೆಲ್ಲ ಖುಷಿಯಿಂದ ಒಂದು ತುತ್ತು ಹೆಚ್ಚೇ ತಿಂದರು. ತತ್‍ಕ್ಷಣ ಮೂರ್ತಿಗಳ ಫೋಟೋಗೆ ಹಾಕಿದ್ದ ಹೂವಿನ          ಹಾರವನ್ನು ಯಾರೋ ಕಿತ್ತು ಹಾಕಿದರು. ಮುಂದಿನ ಕಾರ್ಯಗಳನ್ನು ಹಟಾತ್ ರದ್ದು ಮಾಡಿ, ಶರತ್ ಕೂಡಲೇ ಪ್ರಯಾಣ ಬೆಳೆಸಿದ.

            ಅವನು ಬರುವವರೆಗೂ ತಾಯಿ-ಮಗಳಿಗೆ ಒಂದೇ ಆತಂಕ…ಅವಸರ.

            ಹಿಂತಿರುಗಿ ಬಂದ ಶರತನ ಮುಖ ಕಾಣುತ್ತಲೇ ಸುಂದರಮೂರ್ತಿಗಳನ್ನೇ ಕಂಡಷ್ಟು ಮೇರೆ ಮೀರಿದ ಸಂತೋಷ….ಉದ್ವೇಗ…..ಒಳಬಂದವನೇ ಅವನು `ಅಮ್ಮಾ…ಎಂದು ತಾಯಿಯ ಹೆಗಲಿಗೆ ಜೋತು ಬಿದ್ದು ಒಂದೇಸಮನೆ ರೋಧಿಸತೊಡಗಿದ. ಸಮಾಧಾನ ಪದರುಗೊಳ್ಳುತ್ತಿದ್ದ  ಮನೆಯಲ್ಲಿ ಒಮ್ಮೆಲೆ ಸೂತಕದ ವಾತಾವರಣ ಬಿಮ್ಮನೆ ಕವಿಯಿತು.

              ಸುಂದರಮೂರ್ತಿಗಳ ಎರಡನೇ ಬಾರಿಯ ಸಾವಿನ ಸುದ್ದಿಗೆ ತತ್ತರಿಸಿದ ಮನೆಯಲ್ಲಿ ದುಃಖದ ಸಮುದ್ರವೇ ಭೋರ್ಗರೆದು, ಆಗಸದೆತ್ತರ ಅಲೆಗಳು ಚಿಮ್ಮಿ, ಮೊರೆಯಿತು.

Related posts

ಅನಾವರಣ

YK Sandhya Sharma

ಎಣಿಕೆ

YK Sandhya Sharma

ಚಿತ್ರವಿಲ್ಲದ ಚೌಕಟ್ಟು

YK Sandhya Sharma

4 comments

Ramesh Megaravalli April 27, 2020 at 5:46 pm

Heart touching story. I have read many of your stories in MJayura Siudha etc. Very nice. Can i also send my writings to your e-magazine madamj? If so how?

Reply
YK Sandhya Sharma April 27, 2020 at 7:39 pm

thank you. ykss77@yahoo.com 9448094949

Reply
Ramesh Megaravalli April 27, 2020 at 5:49 pm

Heart touching story. I have read many of your stories in Mayura, Sudhaetc. Can I also subscribe my writing to the magazine madam?

Reply
YK Sandhya Sharma April 27, 2020 at 7:38 pm

Thank you very much. subscribe freely to the magazine and tell all your friends to subscribe. You can send stories.

Reply

Leave a Comment

This site uses Akismet to reduce spam. Learn how your comment data is processed.