ಆಹ್ಲಾದಕಾರೀ ನೃತ್ತಗಳ ಝೇಂಕಾರ, ವರ್ಚಸ್ವೀ ಮುಖಾಭಿವ್ಯಕ್ತಿ, ಪ್ರಬುದ್ಧಾಭಿನಯದಿಂದ ಶೋಭಿಸಿದ ಅಂಕಿಷಾ ಗಣಪತಿಯ ರಂಗಪ್ರವೇಶ ಇತ್ತೀಚೆಗೆ ನಗರದ ಎ.ಡಿ.ಎ.ರಂಗಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು. ಅಂತರರಾಷ್ಟ್ರೀಯ ಖ್ಯಾತಿಯ ನಾಟ್ಯಗುರು, ನೃತ್ಯ ಸಂಯೋಜಕಿ ಶುಭಾ ಧನಂಜಯ ಅವರ ಶಿಸ್ತುಬದ್ಧ ತರಬೇತಿಯಿಂದ ಉತ್ತಮ ಕಲಾವಿದೆಯಾಗಿ ರೂಹುಗೊಂಡ ಕಲಾಪ್ರತಿಭೆ ಅಂಕಿಷಾ, ಗುರುವಿಗೆ ತಕ್ಕ ಶಿಷ್ಯೆಯಾಗಿ ತನ್ನ ಅಪೂರ್ವ ನೃತ್ಯ ಸಾಮರ್ಥ್ಯವನ್ನು ಸಾಬೀತುಪಡಿಸಿದಳು. ಅಂದಿನ ನೃತ್ಯಗಳ ಆಯ್ಕೆ ವೈವಿಧ್ಯಪೂರ್ಣವಾಗಿ ಮನನೀಯವಾಗಿತ್ತು.
ಕೇದಾರ ರಾಗದ ‘ತೋಡಯ ಮಂಗಳಂ’ನಿಂದ ರಂಗದಲ್ಲಿ ಹೆಜ್ಜೆ-ಗೆಜ್ಜೆಗಳ ಸುನಾದ ಮೊಳಗಿತು. ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ಅಂಕಿಷಾ ತನ್ನ ಮನೋಹರ ನೃತ್ತಗಳ ಮೂಲಕ ವಿನಮ್ರ ನಮನವನ್ನು ಸಲ್ಲಿಸಿದಳು. ಪ್ರಥಮ ಪೂಜಿತ ಗಣಪನನ್ನು `ಶ್ರೀಮಹಾಗಣಪತಿಂ ಭಜೆ ಹಂ ‘- ಎಂದು ಭಕ್ತಿಭಾವದಿಂದ ಆತನ ವಿಶಿಷ್ಟ ಸ್ವರೂಪವನ್ನು ಅನೇಕ ಬಗೆಯ ಸುಂದರ ಆಂಗಿಕಗಳಿಂದ ಕಂಡರಿಸಿದಳು. ಕಾಮನಬಿಲ್ಲಿನಂತೆ ಬಾಗುವ ತನು, ಲೀಲಾಜಾಲ ನಡೆ, ಬೆಡಗು ತುಂಬಿದ ಅರೆಮಂಡಿ, ಆಕಾಶಚಾರಿಗಳ ಪ್ರದರ್ಶನ ಅಂಕಿಷಾಳ ವೈಶಿಷ್ಟ್ಯವಾಗಿತ್ತು. ಕಡೆಯ ಅಪೂರ್ವಭಂಗಿಯಂತೂ ನಿಜಕ್ಕೂ ಕಣ್ಮನ ಸೆಳೆಯಿತು.
ರಾಗಮಾಲಿಕೆ-ತಾಳಮಾಲಿಕೆಗಳ ‘ಅಲ್ಲರಿಪು’-ಶಾಸ್ತ್ರಬದ್ಧ ಸೊಗಡಿನಲ್ಲಿ ಸಾಗಿ ಅಂಗಶುದ್ಧಿಯನ್ನು ಮೆರೆಯಿತು. ನಿಖರ ಅಡವುಗಳ ಗುಚ್ಛ, ರಮ್ಯ ಹಸ್ತಚಲನೆಯ ಸೌಂದರ್ಯ, ಖಾಚಿತ್ಯದಿಂದ ಸೊಗಸು ಬೀರಿತ್ತು. ಅನಂತರದ -‘ತಿರುವಂಪ್ಪಾವೈ’ – ಶಿವನ ವರ್ಣನೆಗೆ ಮೀಸಲಾದ ಪ್ರಸ್ತುತಿ ಸಾರವತ್ತಾಗಿತ್ತು. ಮಾರ್ಗಶಿರ ಮಾಸದಲ್ಲಿ ವಿವಾಹಕ್ಕೆ ಸಿದ್ಧವಾದ ಕನ್ಯೆಯರು ‘ತಿರುವಂಪ್ಪಾವೈ’ ಸ್ತೋತ್ರವನ್ನು ಹತ್ತುದಿನಗಳ ಕಾಲ ಪಠಿಸುವುದು ರೂಢಿ. ಪ್ರಸ್ತುತಿಗೆ ಏಳು ಮತ್ತು ಎಂಟನೆಯ ಅಧ್ಯಾಯವನ್ನು ಆರಿಸಿಕೊಳ್ಳಲಾಗಿತ್ತು. ರಮಾ ವೈದ್ಯನಾಥನ್ ಅವರ ನೃತ್ಯಸಂಯೋಜನೆ ಮನೋಹರವಾಗಿತ್ತು. ಗುರುಪುತ್ರಿ ಮಾಯಾ ಧನಂಜಯ ಸುಶ್ರಾವ್ಯವಾಗಿ ಸ್ತೋತ್ರ ಪಠಿಸುತ್ತಿದ್ದರೆ, ಗಾಯಕಿ ರಮ್ಯಾ ಸೂರಜ್ ಅದನ್ನೇ ರಾಗವಾಗಿ ಹಾಡುತ್ತಿದ್ದರು. ಶುಭಾ ಧನಂಜಯ್ ಶಿವತಾಂಡವದ ರೌದ್ರ ಅಡವುಗಳಿಗೆ ಸ್ಪುಟವಾಗಿ ನಟುವಾಂಗ ಮಾಡುತ್ತಿದ್ದರೆ, ಅಂಕಿಷಾ, ಎನ್.ಜಿ.ರವಿ ಅವರ ಮೃದಂಗದ ಅಸ್ಖಲಿತ ನುಡಿಸಾಣಿಕೆಗೆ ರಭಸದ ನೃತ್ತಗಳನ್ನು ನಿರೂಪಿಸಿ ಸಂಚಲನವುಂಟು ಮಾಡಿದಳು. ಕಲಾವಿದೆಯ ಆತ್ಮವಿಶ್ವಾಸದ ನೃತ್ಯ ಚೈತನ್ಯಪೂರ್ಣ ವಾಗಿತ್ತು.
ಮಾಯಾ ಧನಂಜಯ್ ನೃತ್ಯ ಸಂಯೋಜಿಸಿದ ಷಣ್ಮುಖಪ್ರಿಯ ರಾಗದ `ವರ್ಣ’-(ರಚನೆ: ಲಾಲ್ ಗುಡಿ ಜಯರಾಂ) ಪ್ರಸ್ತುತಿಯ ಅತ್ಯಂತ ಹೃದಯಸ್ಪರ್ಶೀ ಭಾಗ. ಅತ್ಯಂತ ಸಮರ್ಪಣಾ ಭಾವದಿಂದ ಸರ್ವಶಕ್ತ ಶ್ರೀನಿವಾಸನನ್ನು ಕುರಿತು ಭಕ್ತೆ, ಅನನ್ಯ ಭಕ್ತಿಯಿಂದ ಆಪಾದಮಸ್ತಕ ವರ್ಣಿಸುತ್ತ ಮೈಮರೆತಿದ್ದಾಳೆ. ‘ದೇವರ ಮುನಿವರ್ ತೊಡುಂ ಪಾದಂ ಜಗನ್ನಾಥನ್ ‘ ಎಂದು ಸಪ್ತಗಿರಿವಾಸನ ಪದಚರಣಗಳಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾಳೆ. ಭಕ್ತಿಪ್ರಧಾನವಾದ ಈ ವರ್ಣದಲ್ಲಿ ಕಲಾವಿದೆ ತನ್ನ ನೃತ್ಯಸಾಮರ್ಥ್ಯವನ್ನು ಹಾಗೂ ತನ್ನ ಪಕ್ವಾಭಿನಯ ಕೌಶಲ್ಯವನ್ನು ನಿಚ್ಚಳವಾಗಿ ಅನಾವರಣಗೊಳಿಸಿದಳು. ಕಣ್ಣೋಟದಲ್ಲೇ ಭಕ್ತಿಯ ತಾದಾತ್ಮ್ಯತೆ, ಹಸ್ತಚಲನೆಯಲ್ಲಿ ವಿನಮ್ರತೆ ಮತ್ತು ದೈನ್ಯತೆಯನ್ನು ಸೂಸಿದ ಅಂಕಿಷಳ ಅಭಿನಯ ಹೃದಯಂಗಮವಾಗಿತ್ತು. ಬೆಡಗು ತುಂಬಿದ ನೃತ್ತಗಳಲ್ಲೇ ಆಕರ್ಷಕ ಭಂಗಿಗಳನ್ನು ಕಟ್ಟಿಕೊಟ್ಟದ್ದು ಅವಳ ವಿಶೇಷ. ಹೊಸತನ ಸೂಸಿದ ಜತಿಗಳೊಡನೆ ಸಾಗಿದ ‘ ಬಲಿ ಮತ್ತು ವಾಮನ’ನ ಪ್ರಸಂಗ ಮತ್ತು ‘ಅರ್ಜುನ-ಕೃಷ್ಣ’ ರ ರಣಾಂಗಣದ ‘ಗೀತೋಪದೇಶ’ದ ದೃಶ್ಯಾವಳಿಗಳ ಸಂಚಾರಿಯ ಸನ್ನಿವೇಶಗಳು ಪರಿಣಾಮಕಾರಿಯಾಗಿದ್ದವು.
ಅನಂತರ ಸಂತ ತುಕಾರಾಂ ರಚನೆಯ ‘ ಅಭಂಗ’- ದೈವೀಕತೆಯೇ ಮೈವೆತ್ತಂತಿತ್ತು. ದೇವಾಲಯದ ರಂಗಸಜ್ಜಿಕೆ, ಬೆಳಕು-ವಾದ್ಯಗಳ ಪರಿಣಾಮದಿಂದ ಕಲಾವಿದೆಯ ರಮ್ಯನರ್ತನ ಗಂಧರ್ವಲೋಕದಲ್ಲಿರುವ ಅನುಭವ ನೀಡಿತು. ಕವಿ ಕೆ.ಎಸ್.ನ. ಅವರ ‘ಆಡಾಡು ಬಾ ನವಿಲೆ’-ಮಯೂರ ನರ್ತನದಲ್ಲಿ ಅಂಕಿಷಾ ನಾಟ್ಯಮಯೂರಿಯಾಗಿ ಮುದನೀಡಿದಳು. ಭಾವಗೀತೆಗಳನ್ನು ನಾಟ್ಯಕ್ಕೆ ಬಳಸಿಕೊಳ್ಳುವ ಪ್ರಯೋಗ ಶುಭಾ ಅವರ ಮುಕ್ತಮನಸ್ಸಿಗೆ ಸಾಕ್ಷಿಯಾಯಿತು. ಹರ್ಷಸಿಂಚನಗೈದ ‘ತಿಲ್ಲಾನ’ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.