Image default
Dance Reviews

ವಿದ್ಯಳ ಹೃದಯಸ್ಪರ್ಶೀ ನರ್ತನ ನೈಪುಣ್ಯ

ಖ್ಯಾತ ‘ಅಮೃತ ವರ್ಷಿಣಿ ಫೌಂಡೆಷನ್ ಫಾರ್ ಆರ್ಟ್ಸ್’ ನೃತ್ಯಶಾಲೆಯ ನಾಟ್ಯಗುರು , ನೃತ್ಯ ಸಂಯೋಜಕಿ ಸುಪ್ರಿಯಾ ಕೋಮಂದೂರ್ ಅವರ ಸಮರ್ಥ ಗರಡಿಯಲ್ಲಿ ಹೊರಹೊಮ್ಮಿದ ಪ್ರತಿಭಾವಂತ ಕಲಾವಿದೆ ವಿದ್ಯಾ ವಿಶ್ವನಾಥನ್, ಇತ್ತೀಚಿಗೆ ಸೇವಾಸದನದಲ್ಲಿ ತನ್ನ ‘ರಂಗಪ್ರವೇಶ’ವನ್ನು ನೆರವೇರಿಸಿಕೊಂಡಳು. ನವವಿನ್ಯಾಸದ ನೃತ್ತಗಳ ಸುಲಲಿತ ನಿರ್ವಹಣೆ ಮತ್ತು ರಸಾನುಭವ ಧಾರೆಯ ಪರಿಣತ ಅಭಿನಯದಲ್ಲಿ ಸಮಾನ ಪ್ರತಿಭೆಯನ್ನು ಪ್ರದರ್ಶಿಸಿ ರಸಿಕರ ಮನತಣಿಸಿದಳು.

ಶುಭಾರಂಭದ ‘ನೃತ್ಯಾಂಜಲಿ’ಯ ಪ್ರವೇಶದಲ್ಲಿಯೇ ಕಲಾವಿದೆಯ ವೈಶಿಷ್ಟ್ಯ, ಅವಳ ಖಚಿತ ಹಸ್ತಚಲನೆ, ಸುಂದರ ಗ್ರೀವಭೇದಗಳು, ಆತ್ಮವಿಶ್ವಾಸದ ಹೆಜ್ಜೆಗಳಲ್ಲಿ ಅಭಿವ್ಯಕ್ತಗೊಂಡು, ಭವ್ಯಭಂಗಿಗಳ ಅಂಗಶುದ್ಧಿಯ ನರ್ತನ ಸಂಚಲನವುಂಟು ಮಾಡಿತು. ಖಂಡನಡೆಯ ‘ಅಲ್ಲರಿಪು’ ನವಿರಾಗಿ ಹೂ ಅರಳಿದಂತೆ ಮನವನ್ನು ಅರಳಿಸುತ್ತ, ನಟುವನ್ನಾರ್ ಸುಪ್ರಿಯಾರ ತಾಳನುಡಿಗೆ ತಕ್ಕಂತೆ ಜತಿಗಳ ವೈವಿಧ್ಯ ಸೊಬಗನ್ನು ಕಣ್ತುಂಬಿಸಿದಳು ವಿದ್ಯಾ.

ಅನಂತರ, ಶಂಕರಾಚಾರ್ಯ ವಿರಚಿತ ‘ಶಿವ ಪಂಚಾಕ್ಷರಿ ಸ್ತೋತ್ರಂ’ ನಲ್ಲಿ ಮಹೇಶ್ವರನ ಆರಾಧನೆಯ ಆಕೆಯ ಒಂದೊಂದು ಭಾವ-ಭಂಗಿಗಳೂ ಅನುಪಮವಾಗಿದ್ದು, ಮೋಹಕ ಆಕಾಶಚಾರಿಗಳು , ವಿಶಿಷ್ಟ ಮಂಡಿ ಅಡವುಗಳು, ಹೊಸ ಆಯಾಮದ ನೃತ್ತಗಳಿಂದ ಕಲಾವೃತವಾಗಿದ್ದವು. ಮಹಾದೇವನ ಗುಣಾವಳಿಗಳ ಸ್ತೋತ್ರ ನಮನದಲ್ಲಿ ಭಕ್ತಿ ಸಿಂಚನಗೈದಳು. ಮಹಿಮಾನ್ವಿತೆ ಮೀನಾಕ್ಷಿಯನ್ನು ಕುರಿತ ಕೀರವಾಣಿ ರಾಗದ ‘ಕೃತಿ’ಯ ರಚನೆ-ಪಾಪನಾಶಶಿವಂ. ಈ ಕೃತಿಯನ್ನು ತಮ್ಮ ಕಲಾಪೂರ್ಣ ನೃತ್ಯ ಸಂಯೋಜನೆಯಿಂದ ಶಿಷ್ಯಳ ನೃತ್ಯವೈಭವದ ಮೂಲಕ ಕಣ್ಣಿಗೆ ಹಬ್ಬವಾಗಿಸಿದವರು ಗುರು ಸುಪ್ರಿಯಾ. ಕಲಾವಿದೆ ತನ್ನ ಪ್ರಸನ್ನ ಮುಖಭಾವದಿಂದ ಆನಂದತುಂದಿಲಳಾಗಿ ದೈವೀಕವಾಗಿ ನರ್ತಿಸುತ್ತ, ತಾದಾತ್ಮ್ಯತೆಯಿಂದ ತನ್ನ ನೃತ್ಯನೈವೇದ್ಯವನ್ನು ಸಮರ್ಪಿಸಿದಳು.

ಮುಂದೆ ಕೃಷ್ಣನನ್ನು ಕುರಿತ ಲಾಲ್ಗುಡಿ ಜಯರಾಮ್ ರಚಿತ ಚಾರುಕೇಶಿ ರಾಗದ ‘’ವರ್ಣ’’ವನ್ನು, ಗುರು ಸುಪ್ರಿಯಾ  ಹೊಸಪರಿಕಲ್ಪನೆಯಲ್ಲಿ ವಿಶಿಷ್ಟವಾಗಿ ಸಂಯೋಜಿಸಿ, ವಿದ್ಯಾಳ ಅಮೋಘ ಅಭಿನಯ, ಸರ್ವಾಂಗೀಣ ಆಯಾಮಗಳಲ್ಲಿ ಅನಾವರಣಗೊಳ್ಳುವಂತೆ ಹೆಣೆದಿದ್ದಾರೆ. ಕೃಷ್ಣನನ್ನು ಸೇರಲು ಹಾತೊರೆಯುತ್ತಿರುವ ಪ್ರಣಯಿನಿ ‘ಯಮುನೆ’ ವ್ಯಕ್ತಪಡಿಸುವ ವಿರಹವೇದನೆಯನ್ನು ಅನೇಕ ಬಗೆಗಳಲ್ಲಿ ಚಿತ್ರಿಸಲಾಗಿತ್ತು. ಯಮುನಾ ನದಿಯನ್ನುಇಲ್ಲಿ ಒಬ್ಬ ಹೆಣ್ಣಾಗಿ, ಕೃಷ್ಣನ ಪ್ರೇಯಸಿಯಾಗಿ ವ್ಯಕ್ತೀಕರಣಗೊಳಿಸಿರುವ ನವಕಲ್ಪನೆಯಿದೆ. ಹುಟ್ಟಿದಂದಿನಿಂದ ಅವನನ್ನು ನೋಡಿರುವ ಆಕೆ ಪ್ರೇಮಮೂರ್ತಿ. ವಸುದೇವ ಕೂಸು ಕೃಷ್ಣನನ್ನು ತಲೆಯ ಮೇಲೆ ಬುಟ್ಟಿಯಲ್ಲಿ ಹೊತ್ತು, ಭೋರ್ಗರೆವ  ಯಮುನಾ  ನದಿಯ ಮುಂದೆ ನಿಂತು, ಎದುರಿನ ದಡಕ್ಕೆ ಹೋಗಲಾರದ ಅಸಹಾಯಕತೆಯಲ್ಲಿ  ದಿಕ್ಕೆಟ್ಟು ನಿಂತಾಗ, ಕೃಷ್ಣ ಗೋಕುಲ ಸೇರುವ ಪಯಣಕ್ಕೆ ದಾರಿಗೊಟ್ಟವಳು ಯಮುನೆ. ಅಲ್ಲಿಂದಲೇ ಕೃಷ್ಣನ ಬಗೆಗಿನ ಅವಳ ಅನುರಕ್ತಿ ಆರಂಭ. ಮುಂದೆ ಕೃಷ್ಣನ ಅನೇಕ ಸಾಹಸಗಾಥೆಗಳನ್ನು ಅರುಹುತ್ತ, ಅವನ ಬಗೆಗಿನ ತನ್ನ ಒಲುಮೆಯನ್ನು ನವಿರಾಗಿ ಅಭಿವ್ಯಕ್ತಿಸುವ ಯಮುನೆಯ ಅಂತರಂಗವನ್ನು ವಿದ್ಯಾ, ತನ್ನ ಪಕ್ವಾಭಿನಯದಿಂದ ರಸಿಕರ ಮನಮುಟ್ಟುವಂತೆ ತೆರೆದಿಟ್ಟಳು. ಯಮುನೆಯ ಹರಿಯುವಿಕೆಯನ್ನು ತನ್ನ ದ್ರವೀಕೃತ ಚಲನೆಗಳಿಂದ, ಅವಳ ಕಾತರ-ಕಳವಳಗಳನ್ನು ಜಿಂಕೆಯ ತುದಿಗಾಲ ಜಿಗಿತದ ಹೆಜ್ಜೆಗಳಿಂದ, ಅವಳ ವಿರಹ-ತಲ್ಲಣ, ನೋವುಗಳನ್ನು ತನ್ನ ಮ್ಲಾನವದನದ ಭಾವಪೂರ್ಣ ಅಭಿನಯದಿಂದ ಅಭಿವ್ಯಕ್ತಿಸಿ ರಸಿಕರ ಹೃದಯಗೆದ್ದಳು. ನಡುನಡುವೆ ಬೆಸೆದ ಸಂಕೀರ್ಣ ನೃತ್ತಗಳ ಲಾಸ್ಯ, ಕುಣಿಸುವ ಲಯದ ಜತಿಗಳಿಂದ ತನ್ನ ಶುದ್ಧ ಆಂಗಿಕವನ್ನು ಮೆರೆದಳು. ಕೃಷ್ಣನ ಬಗೆಗಿನ ಅವಳ ತೀವ್ರ ಅನುರಾಗದ ಭಾವನೆಗಳನ್ನು ಸಮ್ಮಿಶ್ರ ಭಾವಾಶ್ರುಗಳಿಂದ ಅಭಿವ್ಯಕ್ತಿಸುತ್ತ, ವಿದ್ಯಾ ತಾನೇ ಯಮುನೆಯಾಗಿ ಪರಿವರ್ತಿತಳಾಗಿದ್ದು ಚೋದ್ಯ!..

Vidya Viswanathan‘ಇದೇನೇ ಸಖಿ ಕಾಂತನು ಮುನಿದಿರ್ಪ..’ ಎಂದು ಕಳವಳ -ಕಾಳಜಿಗಳಿಂದ ಸಖಿಯೊಡನೆ ತನ್ನ ವಿರಹಾರ್ತ ನೋವನ್ನು ತೋಡಿಕೊಳ್ಳುವ ‘ವಾಸಿಕಸಜ್ಜಾ ನಾಯಕಿ’ಯ ಚಿತ್ರಣವನ್ನು ಬೇಹಾಗ್ ರಾಗದ ‘ಜಾವಳಿ’ಯಲ್ಲಿ ಸೊಗಸಾಗಿ ಕಟ್ಟಿಕೊಡಲಾಯಿತು. ಇನಿಯನ ಬರವಿಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡು ನಿರೀಕ್ಷಿಸುತ್ತ ಶಿಲೆಯಂತೆ ಕುಳಿತ ಪ್ರಣಯಿನಿಯ ಅಂತರಂಗದ ತಳಮಳಗಳನ್ನು ವಿದ್ಯಾ ಅನುಭವಿಸಿ ಅಭಿವ್ಯಕ್ತಿಸಿದಳು. ಅನಂತರ ಪುರಂದರದಾಸರ ‘ಕಡೆಗೋಲ ತಾರೆನ್ನ ಚಿನ್ನವೇ…’ ಎಂಬ ದೇವರನಾಮದಲ್ಲಿ, ತಾಯಿ ಯಶೋದೆಯ ಮೊಸರು ಕಡೆಯುವ ಕೋಲನ್ನು ಕಸಿದುಕೊಂಡು ಗೋಳುಹೊಯ್ದುಕೊಳ್ಳುವ ಬಾಲಕೃಷ್ಣನ ತುಂಟಾಟಗಳನ್ನು ಮನಮೋಹಕವಾಗಿ ಸಾಕ್ಷಾತ್ಕರಿಸಿದಳು. ಸಂಚಾರಿಗಳಲ್ಲಿ ತೆರೆದುಕೊಳ್ಳುವ ಪ್ರಕರಣಗಳನ್ನು ಕಲಾವಿದೆ, ಸಮರ್ಥವಾಗಿ ಕಣ್ಣೆದುರಿಗೆ ರೂಪಿಸಿದಳು. ಅಂತ್ಯದ ‘ತಿಲ್ಲಾನ’ ದಲ್ಲಿ ನವವಿನ್ಯಾಸದ ಮೋಹಕ ನೃತ್ತಗಳು ಝೇಂಕರಿಸಿದವು.

ಕಲಾವಿದೆಯ ಮೋಹಕನೃತ್ಯಕ್ಕೆ ಸೌಂದರ್ಯದ ಪ್ರಭಾವಳಿಯನ್ನು ಕಟ್ಟಿ ಸಿಂಗರಿಸಿದ ಸಂಗೀತ ಕಲಾವಿದರ ಪ್ರತಿಭೆ ಸ್ತುತ್ಯಾರ್ಹ . ಭಾವಪೂರ್ಣ ಗಾಯನ- ನಂದಕುಮಾರ್ ಉನ್ನಿಕೃಷ್ಣನ್, ಮನ ಕಲಕುವ ಮುರಳಿಗಾನ ನಿತೀಶ್ ಅಮ್ಮಣ್ಣಯ್ಯ, ಸುಶ್ರಾವ್ಯ ವೀಣಾನಿನಾದ ವಿ.ಗೋಪಾಲ್, ಮೃದಂಗ ಸಾರಥ್ಯ- ತುಮಕೂರು ಶಶಿಶಂಕರ್ ಮತ್ತು ಉತ್ಸಾಹಪೂರ್ಣ ನಟುವಾಂಗ ಗುರು ಸುಪ್ರಿಯಾ ಕೋಮಂದೂರ್.

Related posts

ಶಮಂತ-ಅನನ್ಯರ ಚೈತನ್ಯ ಚಿಲುಮೆಯ ಮನೋಜ್ಞ ನೃತ್ಯ

YK Sandhya Sharma

Kala Sindhu Academy-Samvitha Rangapravesha

YK Sandhya Sharma

ರಸಾನುಭವ ನೀಡಿದ ಮಧುಶ್ರೀ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.