Image default
Dance Reviews

ವರ್ಚಸ್ವೀ ಅಭಿನಯದ ಅಲಾಫಿಯಾ ನೃತ್ಯ ಬೆಡಗು

ದೈವದತ್ತ ಸೌಂದರ್ಯ, ನಾಟ್ಯಕ್ಕೆ ಹೇಳಿಮಾಡಿಸಿದ ಮಾಟವಾದ ಮೈಕಟ್ಟು, ನೃತ್ಯಕಲಾವಿದೆ ಅಲಾಫಿಯಾ ಜೆ.ಖಾನ್ ಪ್ರದರ್ಶಿಸಿದ ಸೊಗಸಾದ ಅಭಿನಯ ಅಂದಿನ ಪ್ರಸ್ತುತಿಯ ಹಿರಿಮೆಯಾಗಿತ್ತು. ನಗರದ ಎ.ಡಿ.ಎ. ರಂಗಮಂದಿರದಲ್ಲಿ ಭರತನಾಟ್ಯ ಪಾರಂಗತೆ ಗುರು ಗೀತಾಶ್ರೀನಾಥ್ ಅವರ ಸಮರ್ಥ ಗರಡಿಯಲ್ಲಿ ತಯಾರಾದ ಅಲಾಫಿಯಾ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ್ದಳು.

ಸಾಂಪ್ರದಾಯಕ `ಪುಷ್ಪಾಂಜಲಿ’ಯಲ್ಲಿ ಕಲಾವಿದೆ, ಗುರು-ಹಿರಿಯರಿಗೆ, ಭೂಮಾತೆಗೆ ಮತ್ತು ಕಲಾರಸಿಕರಿಗೆ ನಮನ ಸಲ್ಲಿಸುವುದರೊಂದಿಗೆ, ನವರಸಗಳನ್ನು ತನ್ನ ಪರಿಣಾಮಕಾರಿ ಅಭಿನಯದಲ್ಲಿ ಅಭಿವ್ಯಕ್ತಿಸಿದಳು. `ಗಜವದನ ಕರುಣಾ ಸದನ’ (ರಾಗ-ರೀತ್ ಗೌಳ) ಗಣಪತಿಗೆ ಸಲ್ಲಿಸಿದ ವಂದನೆಯಲ್ಲಿ ಪ್ರದರ್ಶಿಸಿದ ದೈಹಿಕವಿನ್ಯಾಸಗಳ ಬೆಡಗು ಆಕರ್ಷಕವಾಗಿತ್ತು. ಜನರಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸ ಮೂಷಿಕಾಸುರನ ಸಂಹಾರ ಮತ್ತು ಅವನು ಗಜಮುಖನಿಗೆ ಶರಣಾಗಿ ಮೂಷಿಕನಾಗಿ ಜೀವನಪರ್ಯಂತ ವಾಹನವಾಗಿ ಸೇವೆ ಸಲ್ಲಿಸುವ ಸಂಚಾರಿ ಕಥಾನಕವನ್ನು ಅಲಾಫಿಯಾ ಕಲಾತ್ಮಕವಾಗಿ ನಿರೂಪಿಸಿದ್ದು ಮೆಚ್ಚುಗೆ ಗಳಿಸಿತು.

ಮಧುರಾಪುರಿಯ ಪಾಂಡ್ಯರಾಜನ ಪುತ್ರಿ ಮೀನಾಕ್ಷಿದೇವಿಯ ಸ್ತುತಿ (ರಚನೆ-ಬಾಲಸುಬ್ರಹ್ಮಣ್ಯಶರ್ಮ, ರಾಗ-ರೇವತಿ ) `ಶಂಕರಿ ಮಹೇಶ್ವರಿ ಅಭಯಂಕರಿ ‘ ಎಂಬ ಸುಶ್ರಾವ್ಯ ಗೀತೆಗೆ ಕಲಾವಿದೆ ತನ್ನ ಸುಂದರ ಹಸ್ತಚಲನೆ, ಅಡವುಗಳ ರಮ್ಯತೆ, ಹುಬ್ಬು-ಕಣ್ಣೋಟಗಳ ಬಳುಕಾಟಗಳಿಂದ ಲಾಸ್ಯಭರಿತವಾಗಿ ನರ್ತಿಸಿದಳು. ಅದೇ ರಕ್ತಬೀಜಾಸುರನ ವಧೆಯ ಸಂದರ್ಭದಲ್ಲಿ ರೌದ್ರಾವೇಶಳಾಗಿ ರಂಗದ ತುಂಬ ವೀರಾವೇಶದಿಂದ ಶಕ್ತಿಶಾಲಿಯಾಗಿ ಹೆಜ್ಜೆಯಿಕ್ಕುತ್ತ ರೌದ್ರರಸದ ಪ್ರವಾಹವನ್ನೇ ಹರಿಸಿದಳು. ಗುರು ಗೀತಾರವರ ಶಕ್ತ ನಟುವಾಂಗ ಅತ್ಯುತ್ಸಾಹದಿಂದ ಕಂಗೊಳಿಸಿ ಪರಾಕಾಷ್ಠೆ ತಲುಪಿದಾಗ ಕರತಾಡನದ ಸುರಿಮಳೆಯಾಯಿತು. ಶಿಷ್ಯಳ ಅಭಿನಯಕ್ಕೆ ಮೆರುಗು ನೀಡುವಂತೆ ಗುರುವಿನ ಶೊಲ್ಲುಕಟ್ಟುಗಳು ಝೇಂಕರಿಸಿದವು.

ಅಲಾಫಿಯಾಗೆ ಅನ್ವರ್ಥಕವಾಗಿದ್ದ `ಬೀಬಿ ನಾಚಿಯಾರ್ ‘ ಕುರಿತ ವಿಶೇಷ ವರ್ಣದ ರಚನೆ ಸುಗ್ಗನಹಳ್ಳಿ ಷಡಕ್ಷರಿ ಅವರದಾಗಿತ್ತು. ತನ್ನ ಆರಾಧ್ಯದೈವ ಚೆಲುವನಾರಾಯಣನ ವಿಗ್ರಹವನ್ನು ಶ್ರೀ ರಾಮಾನುಜಾಚಾರ್ಯ ತನಗೆ ಗೊತ್ತಿಲ್ಲದೇ ಎತ್ತೊಯ್ದಾಗ, ಅವಳು ಹೃದಯವಿದ್ರಾವಕ ವಾಗಿ ವಿಲಪಿಸುವ ಸನ್ನಿವೇಶದಲ್ಲಿ ಅಲಾಫಿಯಳ ಭಾವಪೂರ್ಣ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಕೃಷ್ಣನ ಬಗೆಗಿನ ಅವಳ ಸಾಮೀಪ್ಯ, ಅದಮ್ಯ ಒಲವು ದಟ್ಟವಾಗಿ ಭಾವತೀವ್ರತೆಯ ಅಭಿನಯದಲ್ಲಿ ಅರಳಿತ್ತು. ಅಲಾಫಿಯಾಳ ಅಭಿನಯಸಾಮರ್ಥ್ಯಕ್ಕೆ ಈ ಕೃತಿ ಕನ್ನಡಿ ಹಿಡಿಯಿತು. ಚೆಲುವನಾರಾಯಣನನ್ನು ಆಚಾರ್ಯರು ಪ್ರತಿಷ್ಟಾಪನೆ ಮಾಡಿಬಿಟ್ಟರೆಂದು ತಿಳಿದೊಡನೆ ಅವಳು ಹೃದಯ ಒಡೆದು ಪ್ರಾಣಬಿಡುವ ಘಟ್ಟದಲ್ಲಿ ವ್ಯಕ್ತವಾದ ಕಲಾವಿದೆಯ ಪರಿಣತ ಅಭಿನಯ (ರೋಹಿತ್ ಭಟ್ ಮನಕಲಕುವ ಗಾಯನ, ಶಂಕರರಾಮನ್ ವೀಣೆ ) ನೋಡುಗರ ಹೃದಯವನ್ನು ಕದಲಿಸಿತು. ಕಲಾವಿದೆಯ ನೃತ್ತಗಳ ವಿನ್ಯಾಸದ ಬೆಡಗು, ನೃತ್ಯದ ಸೊಗಸು, ಅಭಿನಯದ ಮೆರುಗು ಅತ್ಯಾಕರ್ಷಕವಾಗಿತ್ತು.

ಅನಂತರ ಅಕ್ಕ ಮಹಾದೇವಿಯ `ಶರಣೆಂಬೆ ನಾ ಶಶಿಭೂಷಣ’ ವಚನವನ್ನು ಅತ್ಯಂತ ಮನೋಹರವಾಗಿ ಸಾಕಾರಗೊಳಿಸಿದಳು. ಅನ್ಯಾದೃಶ ಆವರಣ ನಿರ್ಮಿಸಿದ ಸಂಗೀತ ( ಗಂಧರ್ವ ಲೋಕಕ್ಕೆ ಕರೆದೊಯ್ದ ಜಯರಾಂ ಕೊಳಲು. ಲಿಂಗರಾಜು ಮೃದಂಗ ) ರಸಗಂಗೆಯಾಯಿತು. ಡಿ.ವಿ.ಜಿ. ಅವರ ಮಹೋನ್ನತ ಕೃತಿ `ಅಂತಃಪುರಗೀತೆ’ಯ `ನೃತ್ತದ ರಭಸವಿದೇನೆ?’’ ಎಂದು ಮದನಿಕೆಯೊಡನೆ ಚೆನ್ನಕೇಶವ, ಸರಸದಿಂದ ನಡೆಸುವ ಸಂವಾದ-ಸಲ್ಲಾಪಗಳ ನವಿರುಭಾವನೆಗಳನ್ನು ಅಲಾಫಿಯಾ ಮಧುರಕಾವ್ಯವಾಗಿಸಿದಳು. ತಿಲ್ಲಾನದೊಂದಿಗೆ ಅವಳ ಪ್ರಸ್ತುತಿ ಸಂಪನ್ನಗೊಂಡಿತು.

Related posts

ನಾಟ್ಯ-ಯೋಗ ಚತುರೆ ನವ್ಯಾ ದೇಸಾಯಿ

YK Sandhya Sharma

ಸಂಸ್ಕೃತಿಯ ಮುದ ನೀಡಿದ ನೃತ್ಯ ಸಂಭ್ರಮ

YK Sandhya Sharma

ಶಾಸ್ತ್ರೀಯ ಚೌಕಟ್ಟಿನ ಅಚ್ಚುಕಟ್ಟಾದ ಲೋಹಿತಾ ನರ್ತನ

YK Sandhya Sharma

Leave a Comment

This site uses Akismet to reduce spam. Learn how your comment data is processed.