ಮನಸ್ಸಿಗೆ ಮುದನೀಡುವ ಸುಮನೋಹರ ನೃತ್ಯವನ್ನು ಇತ್ತೀಚಿಗೆ ಎ.ಡಿ.ಎ. ರಂಗಮಂದಿರದಲ್ಲಿ ಪ್ರಸ್ತುತಪಡಿಸಿದ ಭರವಸೆಯ ನೃತ್ಯಕಲಾವಿದೆ ಅನನ್ಯ ವೆಂಕಟೇಶ್. ಪಂದನಲ್ಲೂರು ಶೈಲಿಯ ಭರತನಾಟ್ಯ ಗುರು ಭವಾನಿ ರಾಮನಾಥ್ ಅವರ ಶಿಸ್ತುಬದ್ಧ ತಯಾರಿಯಲ್ಲಿ ರೂಪುಗೊಂಡ ಪ್ರತಿಭೆ ಅನನ್ಯ, ಅಂದು ತನ್ನ ಸುಂದರ ಆಂಗಿಕಾಭಿನಯ, ಆಕರ್ಷಕ ಭಂಗಿಗಳಿಂದ ಕಲಾರಸಿಕರ ಮನವನ್ನು ಅಪಹರಿಸಿದಳು.
ರಂಗಪ್ರವೇಶಕ್ಕೆ ಭವಾನಿ, ತಮ್ಮ ಶಿಷ್ಯೆಯ ನೃತ್ಯಸಾಮರ್ಥ್ಯ ಸಂಪೂರ್ಣ ಬೆಳಕಿಗೆ ಬರುವಂಥ ವಿಶಿಷ್ಟ ಕೃತಿಗಳನ್ನು ಪ್ರಸ್ತುತಿಗೆ ಆಯ್ದುಕೊಂಡಿದ್ದರಲ್ಲಿ ವಿಶೇಷತೆ ಇತ್ತು. ಮೊದಲಿಗೆ ಅನನ್ಯ, ನಾಟರಾಗದ ‘ಪುಷ್ಪಾಂಜಲಿ’ಯಲ್ಲಿ ಪ್ರಥಮ ಪೂಜಿತ ಗಣೇಶನಿಗೆ ವಂದನೆ ಸಲ್ಲಿಸಿ, ಆನಂತರ ಸಾವಿತ್ರಿ, ಗಾಯತ್ರಿ ಮತ್ತು ಸರಸ್ವತಿಗೆ ನಮನ ಸಲ್ಲಿಸಿದ ‘ನೃತ್ತಾರತಿ’ ಮನತುಂಬಿತು. ಕಲಾವಿದೆಯ ಸ್ಫುಟವಾದ ಆಂಗಿಕಗಳು ದೇವತಾಸ್ತುತಿಗಳ ಅರ್ಥಗ್ರಹಿಕೆಗೆ ಸುಗಮವಾಯಿತು. ಆಕೆಯ ನಗುಮುಖದ ವರ್ಚಸ್ಸು ನೃತ್ಯದ ಖಳೆಯನ್ನು ವೃದ್ಧಿಸಿತು. ಹಸ್ತ ವಿನಿಯೋಗಗಳು ವೈವಿಧ್ಯಪೂರ್ಣವಾಗಿದ್ದವು. ಮುಂದೆ ಅಚ್ಚುಕಟ್ಟಾದ ‘ಅಲ್ಲರಿಪು’ ಗಮನ ಸೆಳೆಯಿತು.
ವಾಗ್ಗೇಯಕಾರ ಶಾಮಾಶಾಸ್ತ್ರಿಗಳು ರಚಿಸಿದ ‘ ಕಾಮಾಕ್ಷಿ ಅಂಬಾ..’ ಎಂಬ ‘’ಸ್ವರ ಜತಿ’’ ಭೈರವಿ ರಾಗದ ಘನವಾದ ಕೃತಿ. ‘ಸಲಹು ತಾಯೆ’ ಎಂದು ಭಕ್ತ, ದೇವಿಯನ್ನು ಬೇಡುವ ವಿನಮ್ರತೆಯ ಸರಳತೆಯಲ್ಲಿ ಸೌಂದರ್ಯ ಮೆರೆದು ದೈವೀಕವಾಗಿ ಸಾಕ್ಷಾತ್ಕಾರವಾಯಿತು. ಕಲಾವಿದೆಯ ಖಚಿತ ಹಸ್ತ, ಅಡವುಗಳು, ಭಕ್ತಿಯ ಪಾರಮ್ಯ ಒಂದೆಡೆ ಗಮನೀಯವೆನಿಸಿದರೆ, ಭವಾನಿಯವರ ನೃತ್ಯಸಂಯೋಜನೆಯಲ್ಲಿ ಸೋಪಜ್ಞತೆ ಮೆರೆಯಿತು. ದೇವಿಯ ದಿವ್ಯರೂಪಗಳು ಮನೋಜ್ಞವಾಗಿ ಅನಾವರಣಗೊಂಡವು.
ಕಲಾವಿದೆಯ ಅಭಿನಯ ಪ್ರೌಢಿಮೆಗೆ ಸವಾಲು ನೀಡುವಂತಿದ್ದ ರೀತಿಗೌಳದ ‘’ ಪದವರ್ಣ’’ ಶ್ರೀ ಕೃಷ್ಣನ ಜೀವನದ ಕೆಲ ಘಟನೆಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿತು.’ ಶ್ರೀ ಕೃಷ್ಣ ಕಮಲನಾಥೋ ವಾಸುದೇವ…’ ಎಂದು ತನ್ನ ಸುಮನೋಹರ ಅಭಿನಯದಿಂದ ಭಾವಪೂರ್ಣವಾಗಿ ನರ್ತಿಸಿ, ಕ್ಲಿಷ್ಟವಾದ ಜತಿಗಳನ್ನೂ ಅಷ್ಟೇ ಸರಾಗವಾಗಿ ನಿರ್ವಹಿಸಿದ ಅನನ್ಯ, ಉತ್ತಮ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನೂ ಬಿಂಬಿಸಿದಳು. ಲಯದ ಮೇಲಿನ ಅವಳ ಹಿಡಿತ, ತಾಳಜ್ಞಾನ ಸುವ್ಯಕ್ತವಾಯಿತು. ಬಾಲಕೃಷ್ಣನ ತುಂಟಾಟಗಳ ನಿರೂಪಣೆಯಲ್ಲಿ , ಮಣ್ಣು ತಿಂದು ತಾಯಿಗೆ ಬಾಯಲ್ಲಿ ಮೂಜಗ ತೋರಿದ ಅದ್ಭುತ ಅಭಿನಯದೊಡನೆ, ಅನನ್ಯ, ನವರಸಗಳ ರಸಾನುಭಾವವನ್ನು ಮನಗಾಣಿಸಿದಳು. ಕೃಷ್ಣನ ಜನನ, ವಸುದೇವ ಕಂದನನ್ನು ತಲೆಯ ಮೇಲೆ ಹೊತ್ತು ಸಾಗುವಾಗ ಯಮುನೆ ದಾರಿಗೊಟ್ಟು ಸಹಕರಿಸುವ ಪರಿಣಾಮಕಾರಿ ವಾತಾವರಣದಲ್ಲಿ ನಾಟಕೀಯತೆಯ ಬೆಡಗು ಮಿಂಚಿತ್ತು. ಹಿನ್ನಲೆ ವಾದ್ಯಗೋಷ್ಠಿಯ (ರಿದಂ ಪ್ಯಾಡ್- ಕಾರ್ತಿಕ್ ವೈಧಾತ್ರಿ) ಹಿರಿದಾದ ಪಾತ್ರ ಅನುಭವಕ್ಕೆ ವೇದ್ಯವಾಯಿತು. ‘ಗೋಪಾ-ಗೋಪಿ’ ( ಅದ್ಭುತ ಗಾಯನ ರಘುರಾಮ್ ) ಸಾಲಿನ ವಿಸ್ತಾರಕ್ಕೆ ಕಲಾವಿದೆ ತೋರಿದ ದೃಷ್ಟಿಭೇದ ಮತ್ತು ಶಿರೋಭೇದಗಳು ಮತ್ತು ಪಾದರಸದ ಹೆಜ್ಜೆಗಳ ‘ನೃತ್ಯವೈವಿಧ್ಯ’ ಚೈತನ್ಯಪೂರ್ಣವಾಗಿದ್ದವು. ವಿಶ್ವರೂಪ ದರ್ಶನದ ಭಾಗದ ಅಭಿನಯದಲ್ಲಿ ರಸೋತ್ಕರ್ಷ ಉಂಟಾಯಿತು.
ಅನಂತರ ಮೂಡಿಬಂದ ‘ವರ್ಣಂ ಆಯಿರಂ’ ಮತ್ತು ‘’ಪದಂ’’ ನಲ್ಲಿ ಅನನ್ಯ, ತನ್ನ ಬಾಗು-ಬಳುಕುಗಳ ಲಾಸ್ಯವನ್ನು ತೋರುತ್ತ ಮನಸೂರೆಗೊಂಡಳು. ಗುರು ಭವಾನಿ ವಿರಚಿತ ಮೋಹನ ಮುರಳಿಯ ಮಹತ್ವ-ಮಹಿಮೆಗಳನ್ನು ಸಾರುವ ರಾಗಮಾಲಿಕೆಯ ಕನ್ನಡ ಕೃತಿ ಅಮೋಘವಾಗಿ ಪ್ರಸ್ತುತಿಗೊಂಡಿತು. ವೇಣುಗೋಪಾಲರ ಇನಿದನಿಯ ಕೊಳಲಗಾನ ಗಂಧರ್ವಲೋಕಕ್ಕೆ ಕರೆದೊಯ್ದಿತು.ಪುರುಷೋತ್ತಮರ ಮೃದಂಗದ ನುಡಿಸಾಣಿಕೆ, ಸೋಮಣ್ಣರ ವಯೊಲಿನ್ ನಾದ, ಕೃತಿಗೆ ಜೀವ ತುಂಬಿತು. ಅಂತ್ಯದ ‘’ತಿಲ್ಲಾನ’’ ಅನನ್ಯಳ ಲವಲವಿಕೆಯ ನರ್ತನ, ಪಾದಭೇದಗಳಿಂದ ಆಹ್ಲಾದತೆಯನ್ನು ಪಸರಿಸಿತು.