ನೃತ್ಯಪ್ರಸ್ತುತಿಯ ಆರಂಭದಿಂದ ಅಂತ್ಯದವರೆಗೂ ಒಂದೇ ಚೈತನ್ಯ, ನಗುಮೊಗವನ್ನು ಕಾಪಾಡಿಕೊಂಡು ಬಂದು ಮನವರಳಿಸಿದ ಚೆಂದದ ನರ್ತನ ಅಚಲಳದು. ಖ್ಯಾತ ‘ನಾಟ್ಯಸಂಕುಲ’ ನೃತ್ಯಶಾಲೆಯ ಗುರು ಮತ್ತು ಕಲಾವಿದೆ ವಿದುಷಿ ನಾಗಶ್ರೀ ಶ್ರೀನಿವಾಸ್ ಅವರ ಶಿಷ್ಯೆ ಅಚಲಾ ಆನಂದ್ ಇತ್ತೀಚಿಗೆ, ಎ.ಡಿ.ಎ.ರಂಗಮಂದಿರದಲ್ಲಿ ತನ್ನ ‘ರಂಗಪ್ರವೇಶ’ವನ್ನು ಯಶಸ್ವಿಯಾಗಿ ಪೂರೈಸಿದಳು.
‘ಮಾರ್ಗಂ’ ಸಂಪ್ರದಾಯದ ಶಾಸ್ತ್ರೀಯ ಚೌಕಟ್ಟಿನ ಕೃತಿಗಳು ಖಚಿತ ಅಡವು, ಹಸ್ತಮುದ್ರೆ, ಆಂಗಿಕಗಳ ಶುದ್ಧತೆಯ ಸೊಗಡಿನಿಂದ ಮನವರಳಿಸಿದವು. ಚತುರಶ್ರ ಜಾತಿಯ ‘ಅಲ್ಲರಿಪು’ ಅಂಗಶುದ್ಧವಾದ ನಡೆ, ಆಂಗಿಕಾಭಿನಯ, ಮುದವಾದ ಹಸ್ತಚಲನೆಗಳಿಂದ ಅಚ್ಚುಕಟ್ಟಾಗಿ ಮೂಡಿಬಂತು. ಅರೆಮಂಡಿ-ಗ್ರೀವಭೇದಗಳು ಆಕರ್ಷಕವಾಗಿದ್ದವು. ಕಲ್ಯಾಣಿರಾಗದ ‘ಜತಿಸ್ವರ’-ಸುಂದರ ಅಡವುಗಳ ವಿನ್ಯಾಸ, ಕಲಾವಿದೆಯ ಲವಲವಿಕೆಯ ನರ್ತನ ವೈಖರಿಯಲ್ಲಿ ಸೊಗಯಿಸಿತು. ಮನೋಹರ ಭಂಗಿಗಳೊಡನೆ ನೃತ್ತನೈಪುಣ್ಯವನ್ನು ಪ್ರದರ್ಶಿಸಿದಳು.
‘ಶಬ್ದಂ’ ನಲ್ಲಿ ಪ್ರಥಮಬಾರಿಗೆ ‘ಅಭಿನಯ’ದ ಪಾತ್ರ ಎದ್ದುಕಾಣುತ್ತದೆ. ಭಾರತಿ ವೇಣುಗೋಪಾಲ್ ರಚಿಸಿದ ಮುರುಗನ ಕುರಿತ ‘ಕಾರ್ತಿಕೇಯನೆ ಶಿವಕುಮಾರನೆ’ ಎಂದು ಸ್ತುತಿಸುವ ‘ಶಬ್ದಂ’ ನಲ್ಲಿ ಮುರುಗನ ಜನನದ ಕಥೆಯನ್ನು ಸಂಚಾರಿಯಲ್ಲಿ ಅಳವಡಿಸಲಾಗಿತ್ತು. ಷಣ್ಮುಖನ ವರ್ಣನೆಯನ್ನು ಕಲಾವಿದೆ, ಯಾವುದೇ ಆರ್ಭಟವಿಲ್ಲದ ಸೌಮ್ಯ ನೃತ್ತಗಳ ಬಲೆಯಲ್ಲಿ ಸಾತ್ವಿಕಾಭಿನಯದಿಂದ ಚಿತ್ರವತ್ತಾಗಿ ಕಟ್ಟಿಕೊಟ್ಟಳು. ಬಳ್ಳಿಯಂತೆ ತನುವನ್ನು ಹೇಗೆಂದರೆ ಹಾಗೇ ಬಾಗಿಸುವ ನಿರಾಯಾಸದ ಸುಂದರ ನರ್ತನ ಮನತಣಿಸಿತು. ತನುಮನದಲ್ಲಿ ಭಕ್ತಿತುಂಬಿ ದೈವೀಕತೆಯ ಆಯಾಮದಲ್ಲಿ ಅರ್ಪಿಸಿದ ಅಚಲಳ ನೃತ್ಯನೈವೇದ್ಯ ಆಧ್ಯಾತ್ಮಿಕ ನೆಲೆಯಲ್ಲಿ ಮಿಂಚಿತ್ತು.
ನೃತ್ಯಪ್ರಸ್ತುತಿಯ ಘನವಾದ ಹಂತ ‘ವರ್ಣಂ’- ನೃತ್ತ-ನೃತ್ಯಗಳ ಹದವಾದ ಸಮರಸ ಸಂಗಮ. ನೃತ್ಯದ ಆತ್ಮವನ್ನು ಪ್ರಕಾಶಗೊಳಿಸುವ ಗಾಯನ-ವಾದ್ಯಗಳ ಮೇಳದ ಪಾತ್ರ ನಾಟ್ಯಪ್ರಸ್ತುತಿಯಲ್ಲಿ ಅತ್ಯಂತ ಪ್ರಮುಖವಾದುದು. ‘ವರ್ಣ’- ಕಲಾವಿದೆಯ ನೃತ್ತನೈಪುಣ್ಯ, ಅಭಿನಯದ ಪಾಕ, ದೈಹಿಕ ಚೈತನ್ಯ, ತಾಳ-ಲಯಜ್ಞಾನಗಳ ಸಾಮರ್ಥ್ಯ ಮತ್ತು ನೆನಪಿನ ಶಕ್ತಿಗೆ ಸವಾಲು ನೀಡುತ್ತದೆ. ಈ ಸತ್ವಪರೀಕ್ಷೆಯಲ್ಲಿ ಅಚಲಾ ಪೂರ್ಣಾಂಕ ಪಡೆದು ನೋಡುಗರ ಮೆಚ್ಚುಗೆಯ ಕರತಾಡನ ಪಡೆದಳು. ಹುಸೇನಿರಾಗದ, ರೂಪಕತಾಳದ ತಂಜಾವೂರು ಸಹೋದರರಾದ ಪೊನ್ನಯ್ಯ ರಚಿಸಿದ ‘ ಏ ಮಂದಯಾನರಾ ನಾ ಸಾಮಿ‘ ಎಂದು ವಿರಹದತಾಪದಿಂದ ಪರಿತಪಿಸುವ ನಾಯಕಿಯ ವ್ಯಥೆಯನ್ನು ಕಲಾವಿದೆ ನವಿರಾಗಿ ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದಳು. ಯಾವ ಸ್ಥೂಲಹೆಂಗಸು ಮದ್ದು ಹಾಕಿ ನಿನ್ನನ್ನು ವಶೀಕರಿಸಿಕೊಂಡಿದ್ದಾಳೆ?ನಿನಗಾಗಿ ಹಗಲಿರುಳೂ ಕಾದಿರುವ ನನ್ನ ಬಗ್ಗೆ ಕಳಕಳಿ ತೋರದ ನಿನ್ನ ಪ್ರೇಮದ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಖಂಡಿತಾ ನಾಯಕಿಯಾಗಿ ಪರಿವರ್ತಿತಳಾಗುತ್ತಾಳೆ ವಿರಹತಪ್ತೆ. ನಾಯಕನ ಪರಸ್ತ್ರೀ ಸಂಗದ ಬಗ್ಗೆ ವ್ಯಘ್ರಳಾಗುವ ಆಕೆ, ಶೋಕಿಸುವ ಕರುಣಾರ್ದ್ರ ಭಾವವತೀವ್ರತೆಯನ್ನು ಅಚಲಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದು ಅವಳ ಪಕ್ವಾಭಿನಯಕ್ಕೆ ಕನ್ನಡಿ ಹಿಡಿಯಿತು. ನಾಗಶ್ರೀಯ ಸ್ಫುಟವಾದ ನಟುವಾಂಗದ ತಾಳಕ್ಕೆ ಕಲಾವಿದೆ ಕಣ್ಮನ ತಣಿಸುವ ಸಂಕೀರ್ಣ ಜತಿಗಳನ್ನು ಆಕಾಶಚಾರಿ-ಮಂಡಿ ಅಡವುಗಳನ್ನು,ಲೀಲಾಜಾಲವಾಗಿ ನಿರ್ವಹಿಸಿದ್ದು ಶ್ಲಾಘನೀಯ.
ಕೃಷ್ಣನ ಕುರಿತಾದ ಮಧುರಭಕ್ತಿ ಖಮಾಚ್ ರಾಗದ ‘ಜಾವಳಿ’ಯಲ್ಲಿ ಸುಮನೋಹರವಾಗಿ ಅಭಿವ್ಯಕ್ತವಾಯಿತು. ಅಭಿನಯಪ್ರಧಾನವಾದ ಪುರಂದರದಾಸರ ‘ಯಮನೆಲ್ಲಿ ಕಾಣನೆಂದು ಹೇಳಬೇಡ’-ಜನಪ್ರಿಯ ಪದ, ಹಲವು ಸಂಚಾರಿಗಳಲ್ಲಿ ಹರಿಯ ಕರುಣೆಯನ್ನು ಮನೋಜ್ಞವಾಗಿ ಚಿತ್ರಿಸಿತು. ಕಲಾವಿದೆಯ ಸಾತ್ವಿಕಭಾವ ಗರಿಷ್ಠ ಮಟ್ಟದಲ್ಲಿತ್ತು. ಕೃಷ್ಣನ ವಿಶ್ವರೂಪ ಮತ್ತು ನರಸಿಂಹ ರೂಪವನ್ನು ಅಚಲಾ ಬಹು ಪರಿಣಾಮಕಾರಿಯಾಗಿ ಅಭಿನಯಿಸಿ, ನವಿಲಂತೆ ನಲಿವಿನಿಂದ ನರ್ತಿಸಿ ಮನಗೆದ್ದಳು. ಜಯದೇವನ ‘ಅಷ್ಟಪದಿ’ಯ ಪ್ರಸ್ತುತಿಯಲ್ಲಿ ಕಲಾವಿದೆಯ ಶೃಂಗಾರಭಾವ ರಸಾನುಭವುಂಟು ಮಾಡಿತು. ಅಂತ್ಯದ ‘ತಿಲ್ಲಾನ’ -ಅಚಲಳ ಪುಟಿಯುವ ಚೈತನ್ಯವನ್ನು ಮೊಗೆದು ನೀಡಿದ್ದು ಅವಳ ಜೀವಂತಿಕೆಯ ನೃತ್ತದಲೆಗಳ ಏರಿಳಿತ, ಮೋಹಕ ಆಂಗಿಕಗಳ ಅಭಿವ್ಯಕ್ತಿ, ಭ್ರಮರಿಗಳ ಸೌಂದರ್ಯದ ಮೆರಗಿನಲ್ಲಿ ಹೃದಯಸ್ಪರ್ಶಿಯಾಗಿತ್ತು.
ಮೇಳದಲ್ಲಿ ಭಾವಪೂರ್ಣವಾಗಿ ಹಾಡಿದವರು ಭಾರತಿ ವೇಣುಗೋಪಾಲ್. ಮೃದಂಗ- ನಾರಾಯಣಸ್ವಾಮಿ, ಕೊಳಲು-ಸ್ಕಂಧಕುಮಾರ್ ಮತ್ತು ವಯೊಲಿನ್- ಕೃಷ್ಣ ಕಶ್ಯಪ್, ನಟುವಾಂಗ -ಗುರು ನಾಗಶ್ರೀ ಅವರ ಸಹಕಾರದಿಂದ ನೃತ್ಯ ಪ್ರಪ್ಹುಲ್ಲತೆ ಗಳಿಸಿತ್ತು.